ಮೈಸೂರು: ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಸ್ಯಾಂಟ್ರೋ ರವಿ ಸೇರಿದಂತೆ ಮತ್ತಿಬ್ಬರು ಆರೋಪಿಗಳನ್ನು ಇಂದು ಮೈಸೂರು ಪೊಲೀಸರು (Mysuru Police) ನ್ಯಾಯಾಲಯದ ಎದುರು ಹಾಜರುಪಡಿಸಿದ್ದರು. ಅಲ್ಲದೇ 15 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು. ಆದರೆ ಸ್ಯಾಂಟ್ರೋ ರವಿಯನ್ನು (Santro Ravi) ಪೊಲೀಸ್ ಕಸ್ಟಡಿಗೆ ನೀಡದೆ, ಜನವರಿ 25ರವರೆಗೆ ನ್ಯಾಯಾಂಗ ಬಂಧನದಲ್ಲಿಡಬೇಕು ಎಂದು ಮೈಸೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ. ಇನ್ನೊಂದೆಡೆ ಸ್ಯಾಂಟ್ರೋ ರವಿ ಪ್ರಕರಣವನ್ನು ಸಿಐಡಿಗೆ (CID) ವಹಿಸಲು ರಾಜ್ಯ ಸರ್ಕಾರ (Karnataka Govt) ನಿರ್ಧರಿಸಿದೆ. ಸ್ಯಾಂಟ್ರೋ ರವಿ 2ನೇ ಪತ್ನಿ ದೂರು ಕೇಸ್ನ್ನು ಸಿಐಡಿಗೆ ವಹಿಸಿ, ರಾಜ್ಯ ಸರ್ಕಾರದ ನಿರ್ದೇಶನ ನೀಡಿದೆ.
ಸಿಐಡಿಗೆ ವರ್ಗಾವಣೆ ಮಾಡಿರೋದರಿಂದ ಪೊಲೀಸ್ ಕಸ್ಟಡಿಗೆ ನೀಡಿಲ್ಲ
ಸ್ಯಾಂಟ್ರೋ ರವಿಯನ್ನು ಪೊಲೀಸ್ ಕಸ್ಟಡಿಗೆ ನೀಡದೆ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿರುವ ಬಗ್ಗೆ ನ್ಯೂಸ್18 ಜೊತೆ ಮಾತನಾಡಿರುವ ಸ್ಯಾಂಟ್ರೋ ರವಿ ಪರ ವಕೀಲ ಹರೀಶ್ ಪ್ರಭು ಅವರು, ಬಹುಶಃ ಕೇಸ್ ಸಿಐಡಿಗೆ ದಾಖಲಾಗಿರುವುದರಿಂದ ಪೊಲೀಸ್ ಕಸ್ಟಡಿಗೆ ನೀಡಿಲ್ಲ ಎನಿಸುತ್ತಿದೆ. ಸರ್ಕಾರಿ ಪರ ವಕೀಲರು ಕೇಸ್ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ ಎಂದು ಕೋರ್ಟ್ಗೆ ಮಾಹಿತಿ ನೀಡಿದ್ದರು. ನಾವು ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಲು ಸಿದ್ಧ ಮಾಡಿದ್ದೇವು. ಆದರೆ ನ್ಯಾಯಾಂಗ ಬಂಧನ ಆದೇಶ ನೀಡಿ ತಕಾರಾರು ಇದ್ದರೆ ಫೈಲ್ ಮಾಡಿ ಎಂದಿದ್ದಾರೆ.
ರವಿಗೆ ಹೆಂಡತಿಯೇ ಬೆದರಿಕೆ ಹಾಕಿದ್ದರು
ಸ್ಯಾಂಟ್ರೋ ರವಿ ಮೇಲೆ ಸುಳ್ಳು ಕೇಸ್ ದಾಖಲು ಮಾಡಿದ್ದಾರೆ. ಅವರಿಗೆ ಹೆಂಡತಿ ಕರೆ ಮಾಡಿ ಬೆದರಿಕೆ ಸಹ ಹಾಕಿದ್ದಾರೆ. ಆಕೆ ವಿಜಯನಗರದಲ್ಲಿ ದೂರು ನೀಡಿವ ಮುನ್ನ ನಾವು ದೂರು ಆಕೆಯ ವಿರುದ್ಧ ದೂರು ಕೊಟ್ಟಿದ್ದೇವು. ಬೆಂಗಳೂರಿನ ಆರ್ ಆರ್ ನಗರ ಠಾಣೆಗೆ ದೂರು ನೀಡಿದ್ದೇವೆ. ಈ ಬಗ್ಗೆ ಎನ್ ಸಿಆರ್ ಕೂಡ ದಾಖಲಾಗಿದೆ. ಯಾವ ಉದ್ದೇಶಕ್ಕೆ ಹೀಗೆ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. ಸದ್ಯ ಸಿಐಡಿ ವರ್ಗಾವಣೆ ಬಗ್ಗೆ ಈಗ ನಾನು ಮಾಹಿತಿ ಪಡೆದುಕೊಳ್ಳುತ್ತೇನೆ. ಆ ಬಳಿಕ ರೆಗ್ಯುಲರ್ ಜಾಮೀನು ಪಡೆದುಕೊಳ್ಳಲು ಅಗತ್ಯವಿರುವ ಕ್ರಮಕೈಗೊಳ್ಳುತ್ತೀವಿ ಎಂದು ವಿವರಿಸಿದರು.
ಆಡಿಯೋ ವೈರಲ್ ಕುರಿತಂತೆ ಸುಮೋಟೋ ಪ್ರಕರಣ ಸಾಧ್ಯತೆ
ಇನ್ನು, ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಐಡಿಗೆ ವರ್ಗಾವಣೆ ಮಾಡಿರುವುದರಿಂದ, ಸದ್ಯ ಸಿಐಡಿ ಅಧಿಕಾರಿಗಳು ಪ್ರಕರಣದವನ್ನು ತನಿಖೆ ತೆಗೆದುಕೊಳ್ಳುತ್ತಾರೆ. ಈಗಾಗಲೇ ಮೈಸೂರಿನ ವಿಜಯನಗರ ಪೊಲೀಸರು ಪ್ರಕರಣ ಸಂಬಂಧ ದಾಖಲಿಸಿಕೊಂಡಿರುವ ಹೇಳಿಕೆಗಳು ಹಾಗೂ ತನಿಖೆಯ ಮಾಹಿತಿಯನ್ನು ಸಿಐಡಿ ಅಧಿಕಾರಿಗಳಿಗೆ ನೀಡುತ್ತಿದ್ದಾರೆ. ಒಮ್ಮೆ ಸಿಐಡಿ ಅಂಗಳಕ್ಕೆ ಪ್ರಕರಣ ಹೋಗುತ್ತಿದ್ದಂತೆ ಅಧಿಕಾರಿಗಳು ಕೋರ್ಟ್ ಮೂಲಕ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಿದ್ದಾರೆ.
ಇದನ್ನೂ ಓದಿ: Siddaramaiah: ಕೋಲಾರದಲ್ಲಿ ಸಿದ್ದರಾಮಯ್ಯಗೆ ಮೊದಲ ಶಾಕ್; ಮಾಜಿ ಸಿಎಂ ಕನಸಿನ ಕೋಲಾರ ನನಸಾಗಲ್ವಾ?
ಈಗಾಗಲೇ ಆರೋಪಿ ಪತ್ನಿ ನೀಡಿರುವ ಪ್ರಕರಣದ ವಿಚಾರಣೆ ಜೊತೆಗೆ ಮತ್ತಷ್ಟು ಆರೋಪಿಗಳ ಬಗ್ಗೆಯೂ ತನಿಖೆ ನಡೆಸುವ ಸಾಧ್ಯತೆ ಹೆಚ್ಚಿದೆ. ಇನ್ನು, ಅತ್ಯಾಚಾರ ಆರೋಪ ಮಾಡಿರುವುರಿಂದ ಸ್ಥಳ ಮಹಜರು ಪ್ರಕ್ರಿಯೆಯನ್ನು ಕೂಡ ಸಿಐಡಿ ಅಧಿಕಾರಿಗಳು ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಕಾಟನ್ಪೇಟೆಯಲ್ಲಿ ದಾಖಲಾಗಿರುವ ಪ್ರಕರಣ, ಆಡಿಯೋ ವೈರಲ್ ಕುರಿತಂತೆ ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವ ಸಾಧ್ಯತೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ