• Home
  • »
  • News
  • »
  • state
  • »
  • ತಲಕಾವೇರಿ ಮಾದರಿಯಲ್ಲಿಅಂಬುತೀರ್ಥ ಅಭಿವೃದ್ಧಿ; ಶರಾವತಿ ನದಿಯ ಉಗಮಸ್ಥಾನಕ್ಕೆ ಕೋಟ್ಯಂತರ ರೂ. ಅನುದಾನ

ತಲಕಾವೇರಿ ಮಾದರಿಯಲ್ಲಿಅಂಬುತೀರ್ಥ ಅಭಿವೃದ್ಧಿ; ಶರಾವತಿ ನದಿಯ ಉಗಮಸ್ಥಾನಕ್ಕೆ ಕೋಟ್ಯಂತರ ರೂ. ಅನುದಾನ

ಅಂಬುತೀರ್ಥ

ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥದಲ್ಲಿ ಶರಾವತಿ ನದಿ ಉಗಮವಾಗಿದ್ದು, ಕೊಡಗಿನ ತಲಕಾವೇರಿ ಮಾದರಿಯಲ್ಲಿ ಈ ಸ್ಥಳವನ್ನು ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ.

  • Share this:

ಶಿವಮೊಗ್ಗ (ಜೂ. 29): ಶರಾವತಿ ರಾಜ್ಯಕ್ಕೆ ಬೆಳಕು ನೀಡಿರುವ ಪ್ರಮುಖ ನದಿ. ಮಲೆನಾಡಿನ‌ ಸುಂದರ ಪ್ರಕೃತಿಯಲ್ಲಿ ಜನಿಸಿ, ಲಿಂಗನಮಕ್ಕಿ ಡ್ಯಾಂ ಮೂಲಕ ವಿಶ್ವವಿಖ್ಯಾತ ಜೋಗ ಜಲಪಾತವಾಗಿ ಧುಮ್ಮಿಕ್ಕುವ ಶರಾವತಿ ನದಿಯ ಸೊಬಗು ನೋಡುವುದೇ ಒಂದು ಅದ್ಭುತ. ಆದರೆ, ಇಲ್ಲಿಯವರೆಗೆ ಶರಾವತಿ ನದಿಯ ಉಗಮ‌ಸ್ಥಾನ ಅಭಿವೃದ್ಧಿ ಕಂಡಿರಲಿಲ್ಲ. ಈಗ ಸರ್ಕಾರ ಶರಾವತಿ ಉಗಮಸ್ಥಾನದ ಅಭಿವೃದ್ದಿಗೆ ಮುಂದಾಗಿದೆ. ಈ ಬಗ್ಗೆ ಯೋಜನೆ ರೂಪಿಸಿ, ಹಣ ಬಿಡುಗಡೆ ಮಾಡಿದೆ. 


'ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ, ಸಾಯೋದ್ರೊಳಗೆ ಒಮ್ಮೆ ನೋಡು ಜೋಗದ ಗುಂಡಿ' ಎಂಬ ಹಾಡು ವಿಶ್ವವಿಖ್ಯಾತ ಜೋಗ ಜಲಪಾತದ ವೈಭವವನ್ನು ತಿಳಿಸುತ್ತದೆ. ಜೋಗ ಜಲಪಾತದ ರುದ್ರ ರಮಣೀಯ ದೃಶ್ಯ ಸೌಂದರ್ಯ ಎಂತಹವರನ್ನೂ ಬೆರಗುಗೊಳಿಸುತ್ತದೆ. ಜೋಗ ಜಲಪಾತದಲ್ಲಿ ಧುಮ್ಮಿಕ್ಕುವ ನದಿ ಶರಾವತಿ. ನಾಡಿಗೆ ಬೆಳಕು ನೀಡಿರುವ ಜೀವನದಿ. ಇಷ್ಟು ದಿನಗಳ ಕಾಲ ಶರಾವತಿ ನದಿ ಉಗಮಸ್ಥಾನ ಅಭಿವೃದ್ಧಿ ಕಂಡಿರಲಿಲ್ಲ. ಆದರೆ, ಈಗ ಸರ್ಕಾರ ಶರಾವತಿ ನದಿಯ ಉಗಮ‌ ಸ್ಥಾನವನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿಸಲು ಯೋಜನೆ ರೂಪಿಸಿದೆ.


ಇದನ್ನೂ ಓದಿ: ಮಳೆಯಿಂದ ಮಲೆನಾಡು, ಕರಾವಳಿಯಲ್ಲಿ ಆರೆಂಜ್ ಅಲರ್ಟ್​; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ


ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥದಲ್ಲಿ ಶರಾವತಿ ನದಿ ಉಗಮವಾಗಿದ್ದು, ಈ ಸ್ಥಳದ  ಸಮಗ್ರ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. ಕೊಡಗಿನ ತಲಕಾವೇರಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿ ಪ್ರವಾಸಿಗರನ್ನು ಆಕರ್ಷಿಸುವ ಯೋಜನೆ ಹಾಕಿಕೊಂಡಿದೆ. ಈಗಾಗಲೇ ಸಿಎಂ ನೇತೃತ್ವದಲ್ಲಿ ಸಭೆ ನಡೆಸಿ ಅಂಬುತೀರ್ಥದ ಅಭಿವೃದ್ಧಿಗೆ ಹಣ ಸಹ ನೀಡಲಾಗಿದೆ.  ಪ್ರವಾಸೋದ್ಯಮ, ಮುಜರಾಯಿ, ನೀರಾವರಿ ಇಲಾಖೆಗಳ ಮುಖಾಂತರ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಒದಗಿಸಲಾಗುತ್ತಿದೆ. 1 ಕೋಟಿ 70 ಲಕ್ಷ ರೂ.ನಲ್ಲಿ ರಾಮೇಶ್ವರ ದೇವಸ್ಥಾನದ ಪುನರ್ ನಿರ್ಮಾಣ  ಸೇರಿದಂತೆ ಸುಮಾರು 15 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿ ಅಂಬುತೀರ್ಥದಲ್ಲಿ ನಡೆಯಲಿದೆ.


Karnataka Government decides to Develop Sharavati River Birth Place Ambuthirtha as Tourist Place
ಅಂಬುತೀರ್ಥ


ಪ್ರಥಮ ಹಂತದಲ್ಲಿ ಪುಷ್ಕರಣಿ ನಿರ್ಮಾಣ, ಅಂಬುತೀರ್ಥ ಕೆರೆ ಸುತ್ತಲೂ ಬದಿಗೋಡೆ, ವಾಕಿಂಗ್ ಪಾಥ್, ನದಿಯ ಉಗಮದ ಹಿಂಭಾಗದಲ್ಲಿ ತಡೆಗೋಡೆ ನಿರ್ಮಾಣ, ಸಮುದಾಯ ಭವನ ನಿರ್ಮಾಣ, ನೊಣಬೂರು ವೃತ್ತದಿಂದ ಅಂಬುತೀರ್ಥ- ಆರಗ ರಸ್ತೆ ನಿರ್ಮಾಣ, ದೇವಾಲಯ ಬಹಳ ಪ್ರಾಚೀನವಾಗಿರುವ ಹಿನ್ನೆಲೆಯಲ್ಲಿ ಆಗಮ ಶಾಸ್ತ್ರದ ಪ್ರಕಾರ ಶಿಲಾ ದೇಗುಲ ಪುನರ್ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ತೀರ್ಥಹಳ್ಳಿಯಿಂದ ಹೊಸನಗರಕ್ಕೆ ತೆರಳುವ ಮಾರ್ಗ ಮಧ್ಯೆ ಶರಾವತಿ ನದಿಯ ಉಗಮಸ್ಥಾನ ಅಂಬುತೀರ್ಥವಿದೆ. ಅಂಬುತೀರ್ಥದಲ್ಲಿ ಹುಟ್ಟುವ ಶರಾವತಿ ನದಿ ಸಮುದ್ರ ಸೇರುವ ವೇಳೆಗೆ ಉಪನದಿಗಳು ಸೇರಿಕೊಂಡು ದೊಡ್ಡ  ನದಿಯಾಗಿ ರೂಪ ಪಡೆದಿದೆ.


Karnataka Government decides to Develop Sharavati River Birth Place Ambuthirtha as Tourist Place
ಅಂಬುತೀರ್ಥ


ಇದನ್ನೂ ಓದಿ: ಬೆಂಗಳೂರಿನಲ್ಲಿ ಕೊರೋನಾ ತೀವ್ರಗೊಂಡ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ, ಪೊಲೀಸರು: ಇಂದಿನಿಂದ ಬಿಗಿಕ್ರಮ


ಶರಾವತಿ ನದಿಯ ಉಗಮ ಸ್ಥಾನ ಅಂಬುತೀರ್ಥಕ್ಕೆ ಐತಿಹಾಸಿಕ ಮಹತ್ವವಿದ್ದು. ತ್ರೇತಾಯುಗದಲ್ಲಿ‌ ಅರಣ್ಯ ವಾಸದಲ್ಲಿದ್ದ  ಶ್ರೀರಾಮ ಈ ಪ್ರದೇಶಕ್ಕೆ ಒಮ್ಮೆ ಬಂದು ನೆಲೆಸಿದ್ದ. ಸ್ನಾನಕ್ಕೆ ನೀರು ಬೇಕಾದ್ದರಿಂದ ನೆಲಕ್ಕೆ ಬಾಣ ಬಿಟ್ಟಾಗ ತೀರ್ಥೋದ್ಭವ ಆಯಿತಂತೆ. ಅಂಬು ಎಂದರೆ ಬಾಣ, ಬಾಣ ಬಿಟ್ಟಾಗ ಹುಟ್ಟಿದ ತೀರ್ಥದ ಸ್ಥಳವೇ ಅಂಬುತೀರ್ಥ ಆಗಿದೆ ಎಂದು ಪ್ರತೀತಿ ಇದೆ. ಇನ್ನು ಶ್ರೀರಾಮನ ಶರದಿಂದ ಹುಟ್ಟಿದ ನದಿ ಶರಾವತಿ ಎಂಬ ಹೆಸರು ಪಡೆದಿದೆ ಎಂಬ ಉಲ್ಲೇಖ ಪುರಾಣ ಪುಣ್ಯ ಕಥೆಗಳಲ್ಲಿದೆ. ಇಷ್ಟು ದಿನಗಳ ಕಾಲ ಇತಿಹಾಸ ಪ್ರಸಿದ್ದ ಶ್ರೀ ರಾಮೇಶ್ವರ ದೇವಸ್ಥಾನವನ್ನ ಅಭಿವೃದ್ಧಿ ಪಡಿಸಲು ಸರ್ಕಾರ ಗಮನಹರಿಸಿರಲಿಲ್ಲ. ಪ್ರಸ್ತುತ ದಿನಗಳಲ್ಲಿ ಅಭಿವೃದ್ಧಿ ಪಡಿಸಲು‌ ಮುಂದಾಗಿರುವುದಕ್ಕೆ ಭಕ್ತರಲ್ಲಿ ಸಂತಸ ಮೂಡಿದೆ.


ಅಂಬುತೀರ್ಥದ ಸುತ್ತಮುತ್ತಲು ಇರುವಂತ ಸಹ್ಯಾದ್ರಿ ಪರ್ವತ ಶ್ರೇಣಿಗಳು ಮನಸೂರೆಗೊಳ್ಳುತ್ತವೆ. ಸರ್ಕಾರ ಹಾಗೂ ಸಂಬಂಧಪಟ್ಟವರು ಅದಷ್ಟು ಬೇಗ ಅಂಬುತೀರ್ಥದ ಪುಣ್ಯ ಕ್ಷೇತ್ರವನ್ನು ತಲಕಾವೇರಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡಿದರೆ ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೂ ಹೆಚ್ಚಿನ ಆದ್ಯತೆ ಸಿಗಲಿದೆ. ರಾಜ್ಯದ ಜನತೆಗೆ ಶರಾವತಿ ನದಿಯ ಮಹತ್ವ ತಿಳಿಸಲು ಅನುಕೂಲವಾಗಲಿದೆ.

Published by:Sushma Chakre
First published: