ಗೋಹತ್ಯೆ ನಿಷೇಧ ಕಾಯ್ದೆ ಸುಗ್ರೀವಾಜ್ಞೆ ಮೂಲಕ ಜಾರಿ; ಟ್ವೀಟ್​ ಮೂಲಕ ಮಾಹಿತಿ ನೀಡಿದ ಬಿಜೆಪಿ ರಾಜ್ಯ ಘಟಕ

ಸನ್ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಗೋಹತ್ಯೆ ನಿಷೇಧ ಕಾಯ್ದೆಯನ್ನು ಸುಗ್ರಿವಾಜ್ಞೆಯ ಮೂಲಕ ಜಾರಿಗೊಳಿಸಿದ್ದಾರೆ. ಮುಂದಿನ ಅಧಿವೇಶನದಲ್ಲಿ ಲವ್ ಜಿಹಾದ್ ವಿರುದ್ಧದ ಕಾನೂನನ್ನೂ ಕೂಡಾ ಜಾರಿಗೆ ತರಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು (ಜನವರಿ 03); "ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020" ರಾಜ್ಯ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷೆಯ ಕಾಯ್ದೆ. ಈ ಕಾಯ್ದೆಯ ಮೂಲಕ ರಾಜ್ಯದಲ್ಲಿ ಗೋಹತ್ಯೆಯನ್ನು ನಿಷೇಧಿಸಬೇಕು ಎಂದು ಬಿಜೆಪಿ ಸರ್ಕಾರ ಮುಂದಾಗಿದೆ. ಇದೇ ಕಾರಣಕ್ಕೆ ವಿರೋಧ ಪಕ್ಷಗಳ ತೀವ್ರ ವಿರೋಧಗಳ ನಡುವೆಯೂ ಈ ಕಾಯ್ದೆಯನ್ನು ವಿಧಾನ ಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆಯಲಾಗಿತ್ತು. ಆದರೆ ಬಿಜೆಪಿ ಸರ್ಕಾರಕ್ಕೆ ವಿಧಾನ ಪರಿಷತ್​ನಲ್ಲಿ ಬಹುಮತ ಇಲ್ಲ. ಇದೇ ಕಾರಣಕ್ಕೆ ಪರಿಷತ್​ನಲ್ಲಿ ಈ ಕಾಯ್ದೆ ಸಂಬಂಧ ಉಂಟಾದ ದೊಡ್ಡ ಮಟ್ಟದ ಗಲಾಟೆ ಮತ್ತು ಆನಂತರದ ಬೆಳವಣಿಗೆಯಲ್ಲಿ ಜೆಡಿಎಸ್​ ಪಕ್ಷದ ಉಪ ಸಭಾಪತಿ ಎಸ್​.ಎಲ್​. ಧರ್ಮೇಗೌಡ ಆತ್ಮಹತ್ಯೆಗೆ ಶರಣಾದದ್ದನ್ನು ಭಾಗಶಃ ಯಾರೂ ಮರೆತಿರಲು ಸಾಧ್ಯವಿಲ್ಲ. ಇಂತಹ ಘಟನೆಗಳಿಗೆ ಸಾಕ್ಷಿಯಾದ "ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020" ಕಾಯ್ದೆಯನ್ನು ಕೊನೆಗೂ ಕರ್ನಾಟಕ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಮುಂದಾಗಿದ್ದು, ಮಸೂದೆಯನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡಲಾಗಿದೆ ಎಂಬ ಮಾಹಿತಿಗಳು ಲಭ್ಯವಾಗಿದೆ. 

  ಈ ಕುರಿತು ರಾಜ್ಯ ಬಿಜೆಪಿ ಘಟಕ ತನ್ನ ಅಧೀಕೃತ ಟ್ವೀಟರ್​ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು, "ಸನ್ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಗೋಹತ್ಯೆ ನಿಷೇಧ ಕಾಯ್ದೆಯನ್ನು ಸುಗ್ರಿವಾಜ್ಞೆಯ ಮೂಲಕ ಜಾರಿಗೊಳಿಸಿದ್ದಾರೆ. ಮುಂದಿನ ಅಧಿವೇಶನದಲ್ಲಿ ಲವ್ ಜಿಹಾದ್ ವಿರುದ್ಧದ ಕಾನೂನನ್ನೂ ಕೂಡಾ ಜಾರಿಗೆ ತರಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ" ಎಂದು ತಿಳಿಸಿದೆ.  ಡಿಸೆಂಬರ್ 28 ರಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದು, "ಮಸೂದೆಯು ಕಾನೂನಾಗಿ ಜಾರಿಯಾದರೂ ಎಮ್ಮೆ, ಕೋಣದ ಮಾಂಸ ಮಾರಾಟಕ್ಕೆ ಯಾವುದೇ ನಿಷೇಧ ಇರುವುದಿಲ್ಲ. ಅಲ್ಲದೆ ಚರ್ಮೋದ್ಯಮಕ್ಕೂ ಈ ಕಾಯ್ದೆಯಿಂದ ಯಾವುದೇ ಸಮಸ್ಯೆ ಆಗುವುದಿಲ್ಲ" ಎಂದು ಅವರು ತಿಳಿಸಿದ್ದರು.

  ಇದನ್ನೂ ಓದಿ : ತುಮಕೂರು: ಕೊರೋನಾ ಕಾರಣಕ್ಕೆ ದ್ವಿತೀಯ ಪಿಯುಸಿ ಕಾಲೇಜು ದಾಖಲಾತಿಯಲ್ಲಿ ಇಳಿಕೆ

  "ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆಗೆ ಸಂಬಂಧಿಸಿದಂತೆ 1964ರ ಕಾಯ್ದೆಯಲ್ಲಿ ಲೋಪಗಳಿದ್ದ ಹಿನ್ನೆಲೆ, ಕೆಲ ತಿದ್ದುಪಡಿ ಮಾಡಲಾಗಿದೆ. 1964 ರ ಕಾಯ್ದೆಯನ್ವಯ 12 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಹಸು, ಎಮ್ಮೆ, ಕೋಣಗಳನ್ನು ಮಾಂಸಕ್ಕಾಗಿ ವಧಿಸಲು ಅವಕಾಶವಿತ್ತು. ಈಗಿನ ತಿದ್ದುಪಡಿ ಮಸೂದೆಯ ಪ್ರಕಾರ, ಹಸು ಮತ್ತು ಎತ್ತುಗಳನ್ನು ಜೀವಿತಾವಧಿಯವರೆಗೂ ವಧಿಸಲು ನಿರ್ಬಂಧ ಹೇರಲಾಗಿದೆ. ಎಮ್ಮೆ ಮತ್ತು ಕೋಣಗಳನ್ನು 13 ವರ್ಷದ ಬಳಿಕ ವಧಿಸಲು ಅವಕಾಶ ನೀಡಲಾಗುತ್ತದೆ. ದನದ ಮಾಂಸ ತಿನ್ನುವುದಕ್ಕೆ ನಾವು ಯಾವುದೇ ನಿಷೇಧವನ್ನು ಹೇರುವುದಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

  "1964 ರ ಕಾಯ್ದೆಯಲ್ಲಿ ಜಾನುವಾರುಗಳ ಹತ್ಯೆ ಮತ್ತು ಸಂರಕ್ಷಣೆಗೆ ಸಂಬಂಧಿಸಿದಂತೆ ಶಿಕ್ಷೆಗೆ ಅವಕಾಶವಿರಲಿಲ್ಲ. ಇದೀಗ ಜಾನುವಾರು ಹತ್ಯೆಗೈದರೆ ಶಿಕ್ಷೆ ಹಾಗೂ ದಂಡ ವಿಧಿಸುವ ಅಧಿಕಾರವನ್ನು ತಹಶೀಲ್ದಾರ್ ಮತ್ತು ಸಂಬಂಧಪಟ್ಟ ಪೊಲೀಸರಿಗೆ ನೀಡಲಾಗಿದೆ. ಹಳೆಯ ಕಾನೂನು ಬಿಗಿಯಾಗಿರಲಿಲ್ಲ. ಈಗಿನ ಕಾಯ್ದೆಯಲ್ಲಿ ಅಕ್ರಮವಾಗಿ ಹಸುಗಳನ್ನು ಸಾಗಾಟ ಮಾಡಿದರೆ ಅದನ್ನು ವಶಕ್ಕೆ ಪಡೆಯಲಾಗುವುದು. ಅಲ್ಲದೆ, ವಾಹನವನ್ನು ಬ್ಯಾಂಕ್ ಗ್ಯಾರಂಟಿ ಮೂಲಕ ಹಿಂಪಡೆಯಬಹುದು" ಎಂದು ಮಾಧುಸ್ವಾಮಿ ತಿಳಿಸಿದ್ದಾರೆ.
  Published by:MAshok Kumar
  First published: