ಬೆಂಗಳೂರು(ಜು.24): ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಪ್ರಮಾಣ ತಗ್ಗಿದ ಹಿನ್ನೆಲೆ, ನಿರ್ಬಂಧ ಹೇರಿದ್ದ ಹಲವು ಚಟುವಟಿಕೆಗಳಿಗೆ ಹಂತ-ಹಂತವಾಗಿ ಅನುಮತಿ ನೀಡಲಾಗುತ್ತಿದೆ. ಮೊದಲ ಅನ್ಲಾಕ್ನಲ್ಲಿ ಬಸ್, ಮೆಟ್ರೋ ಸಂಚಾರ ಸೇರಿದಂತೆ ಹಲವು ಅಗತ್ಯ ಸೇವೆಗಳಿಗೆ ಅವಕಾಶ ನೀಡಲಾಗಿತ್ತು. ಕಳೆದ ಸೋಮವಾರ ಅಂದರೆ ಜು.19ರಿಂದ ಅನ್ಲಾಕ್ 4.0 ಜಾರಿಯಾಗಿತ್ತು. ನೈಟ್ ಕರ್ಫ್ಯೂವನ್ನು 1 ಗಂಟೆ ಕಡಿತಗೊಳಿಸಲಾಗಿತ್ತು. ಜೊತೆಗೆ ಸಿನಿಮಾ ಥಿಯೇಟರ್ಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು.
ನಾಳೆಯಿಂದ ಅಂದರೆ ಜು.25ರಿಂದ ರಾಜ್ಯದಲ್ಲಿ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಕರ್ನಾಟಕ ಸರ್ಕಾರ ಅನುಮತಿ ನೀಡಿದೆ. ಕೋವಿಡ್ ನಿಯಮಗಳ ಕಡ್ಡಾಯ ಪಾಲನೆ ಜೊತೆಗೆ ದೇವಾಲಯ, ಚರ್ಚ್, ಮಸೀದಿಗಳಿಗೆ ಹೋಗಬೇಕಿದೆ. ಸಂಬಂಧಪಟ್ಟ ಇಲಾಖೆಯಿಂದ ಹೊರಡಿಸಲಾದ ಎಸ್ಒಪಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಇದನ್ನೂ ಓದಿ:Karnataka Weather Today: ಮುಂದಿನ 24 ಗಂಟೆ ರಾಜ್ಯದಲ್ಲಿ ಭಾರೀ ಮಳೆ; 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ
ಆದರೆ ಇನ್ನೂ ಸಹ ಹೆಚ್ಚು ಜನಸಂದಣಿ ಸೇರುವ ಜಾತ್ರೆಗಳು, ದೇವಾಲಯದ ಉತ್ಸವಗಳು, ಮೆರವಣಿಗೆಗಳು, ಸಭೆಗಳಿಗೆ ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ. ಕೊರೋನಾ ಸೋಂಕು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದ ಬಳಿಕ ಈ ಉತ್ಸವಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಈ ಮಧ್ಯೆಯೇ ಮೂರನೇ ಅಲೆ ಭೀತಿ ಶುರುವಾಗಿರುವುದರಿಂದ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ರಾಜ್ಯದಲ್ಲಿ ನಿನ್ನೆ ಅಂದರೆ ಶುಕ್ರವಾರ 1705 ಕೊರೋನಾ ಕೇಸ್ಗಳು ಪತ್ತೆಯಾಗಿದ್ದವು. 30 ಮಂದಿ ಕೊರೋನಾಗೆ ಬಲಿಯಾಗಿದ್ದರು. 2243 ಜನ ಕೊರೋನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ ನಿನ್ನೆ 400 ಕೇಸ್ಗಳು ಪತ್ತೆಯಾಗಿದ್ದು, 3 ಮಂದಿ ಸಾವನ್ನಪ್ಪಿದ್ದಾರೆ. ನಿನ್ನೆ ಪಾಸಿಟಿವಿಟಿ ದರ ಶೇ.1.35ರಷ್ಟಿದ್ದರೆ, ಸಾವಿನ ಪ್ರಮಾಣ ಶೇ. 1.75 ರಷ್ಟಿತ್ತು.
ಇದನ್ನೂ ಓದಿ:ಇಷ್ಟು ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್ ಎಷ್ಟು ಜನ ದಲಿತರನ್ನು ಸಿಎಂ ಮಾಡಿದೆ?; ಸಿದ್ದರಾಮಯ್ಯಗೆ ಸಚಿವ ಈಶ್ವರಪ್ಪ ಪ್ರಶ್ನೆ
ಅನ್ಲಾಕ್ 4.0 ದಲ್ಲಿ ಸಿನಿಮಾ ಥಿಯೇಟರ್ಗಳನ್ನು ಶೇ.50ರಷ್ಟು ಆಸನ ಭರ್ತಿಯೊಂದಿಗೆ ಆಗಸ್ಟ್ 2ರವರೆಗೆ ತೆರೆಯಲು ಅವಕಾಶ ನೀಡಲಾಗಿದೆ. ನೈಟ್ ಕರ್ಫ್ಯೂವನ್ನು ರಾತ್ರಿ 10ರಿಂದ ಬೆಳಗ್ಗೆ 5 ಗಂಟೆವರೆಗೆ ಕಡಿತಗೊಳಿಸಲಾಗಿದೆ. ಜೊತೆಗೆ ಪದವಿ ಕಾಲೇಜುಗಳನ್ನು ಜು.26ರಿಂದ ಪ್ರಾರಂಭಿಸಲು ಅವಕಾಶ ಅವಕಾಶ ನೀಡಲಾಗಿದೆ. ಕೊರೋನಾ ಮೊದಲ ಡೋಸ್ ಪಡೆದ ವಿದ್ಯಾರ್ಥಿಗಳು, ಕಾಲೇಜು ಸಿಬ್ಬಂದಿ ಹಾಗೂ ಅಧ್ಯಾಪಕೇತರ ವರ್ಗ ಮಾತ್ರ ಕಾಲೇಜಿಗೆ ಬರಲು ಅನುಮತಿ ನೀಡಲಾಗಿದೆ. ಆದರೆ ಇನ್ನೂ ಸಹ ಪಬ್ಗಳನ್ನು ತೆರೆಯಲು ಅವಕಾಶ ನೀಡಿಲ್ಲ.
ನಾಳೆಯಿಂದ ಅಮ್ಯೂಸ್ಮೆಂಟ್ ಪಾರ್ಕ್ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಕಡ್ಡಾಯ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಆದರೆ ವಾಟರ್ ಸ್ಪೋರ್ಟ್ಸ್ ಹಾಗೂ ನೀರಿಗೆ ಸಂಬಂಧಿಸಿದ ಅಡ್ವೆಂಚರ್ ಚಟುವಟಿಕೆಗಳಿಗೆ ಅನುಮತಿ ನೀಡಿಲ್ಲ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ