Sand Mining: ದಕ್ಷಿಣ ಕನ್ನಡದ ಮರಳು ಮಾಫಿಯಾ ಲಾಬಿಗೆ ಮಣಿಯಿತಾ ಯಡಿಯೂರಪ್ಪ ಸರ್ಕಾರ?

Sand Mafia: ದಕ್ಷಿಣ ಕನ್ನಡ ಜಿಲ್ಲೆಯ ಸಿಆರ್‌ಝಡ್‌ ವಲಯದಲ್ಲಿ ಗುರುತಿಸಲಾಗಿರುವ 13 ಬ್ಲಾಕ್​ಗಳಲ್ಲಿ ಮರಳುಗಾರಿಕೆಗೆ ಪರಿಸರ ಇಲಾಖೆಯಿಂದ ಅನುಮತಿ ಲಭಿಸಿದೆ. ಮರಳುಗಾರಿಕೆ ಶೀಘ್ರದಲ್ಲೇ ಆರಂಭಗೊಳ್ಳಲಿದೆ.

news18-kannada
Updated:September 6, 2020, 1:19 PM IST
Sand Mining: ದಕ್ಷಿಣ ಕನ್ನಡದ ಮರಳು ಮಾಫಿಯಾ ಲಾಬಿಗೆ ಮಣಿಯಿತಾ ಯಡಿಯೂರಪ್ಪ ಸರ್ಕಾರ?
ಮಂಗಳೂರಿನಲ್ಲಿ ಮರಳು ಗಣಿಗಾರಿಕೆ
  • Share this:
ಮಂಗಳೂರು (ಸೆ. 6): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಮುಂದುವರೆಯುತ್ತಲೇ ಇದೆ. ಈ ಬೆನ್ನಲ್ಲೆ ಸರ್ಕಾರ ಮಂಗಳೂರಿನ ಸಿಆರ್​ಝಡ್ ವಲಯದಲ್ಲಿ ಮರಳುಗಾರಿಕೆ ಮಾಡಲು ಅನುಮತಿ ನೀಡಿರುವುದರಲ್ಲಿ 50 ಪರ್ಸೆಂಟ್ ಕಡಿತ ಮಾಡಿದೆ. ಇನ್ನು 50 ಪರ್ಸೆಂಟ್ ಜಾಗಗಳನ್ನು ಮರಳು ಮಾಫಿಯಾಗೆ ತನ್ನ ಕಬಂಧಬಾಹುಗಳಲ್ಲಿ ಹಿಡಿದಿಟ್ಟಕೊಳ್ಳಲು ಬಿಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಬಡವರಿಗೆ ಮರಳು ಕೊಳ್ಳುವುದೆಂದರೆ ಚಿನ್ನ ಕೊಂಡ ಹಾಗಾಗಿದೆ. ಈ ನಡುವೆ ಕಾಂಗ್ರೆಸ್ ಪಕ್ಷ, ರಾಜ್ಯ ಸರ್ಕಾರ  ಅಕ್ರಮ ಮರಳುಗಾರಿಕೆಗೆ ಬೆಂಬಲಿಸುತ್ತಿದೆ ಎಂದು ಆರೋಪ ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸಿಆರ್‌ಝಡ್‌ ವಲಯದಲ್ಲಿ ಗುರುತಿಸಲಾಗಿರುವ 13 ಬ್ಲಾಕ್ ‌(ದಿಬ್ಬ)ಗಳಲ್ಲಿ ಮರಳುಗಾರಿಕೆಗೆ ಪರಿಸರ ಇಲಾಖೆಯಿಂದ ಅನುಮತಿ ಲಭಿಸಿದೆ. ಮರಳುಗಾರಿಕೆ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಕರ್ನಾಟಕ ಕರಾವಳಿ ವಲಯ ನಿರ್ವಹಣೆ ಸಮಿತಿ (ಕೆಸಿಝಡ್‌ಎಂ) ಸಭೆಯು ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆಗೆ ಜಿಲ್ಲೆಯಿಂದ ಸಲ್ಲಿಸಲಾಗಿದ್ದ ವರದಿಗೆ ಅನುಮೋದನೆ ನೀಡಿದೆ. ಸಿಆರ್‌ಝಡ್‌ ವ್ಯಾಪ್ತಿಯ ನೇತ್ರಾವತಿ ನದಿಯಲ್ಲಿ 8, ಗುರುಪುರ ನದಿಯಲ್ಲಿ 4 ಹಾಗೂ ಶಾಂಭವಿ ನದಿಯಲ್ಲಿ ಒಂದು ಸೇರಿದಂತೆ ಒಟ್ಟು 13 ಬ್ಲಾಕ್‌ಗಳು ಅನುಮೋದನೆಗೊಂಡಿವೆ. 13 ಬ್ಲಾಕ್‌ಗಳಲ್ಲಿ ಈ ಬಾರಿ ಸುಮಾರು 10 ಲಕ್ಷ ಮೆಟ್ರಿಕ್‌ ಟನ್‌ ಮರಳು ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ.

Karnataka Government Agreed to Sand Mining in Dakshina Kannada Mangalore Sand Mafia
ಮಂಗಳೂರಿನಲ್ಲಿ ಮರಳು ಗಣಿಗಾರಿಕೆ


ಕಳೆದ ಬಾರಿ ನೇತ್ರಾವತಿ ನದಿಯಲ್ಲಿ 13 ಬ್ಲಾಕ್‌ ಹಾಗೂ ಗುರುಪುರ ನದಿಯಲ್ಲಿ 9 ಬ್ಲಾಕ್‌ ಸೇರಿದಂತೆ ಒಟ್ಟು 22 ಬ್ಲಾಕ್‌ಗಳನ್ನು ಗುರುತಿಸಿ ಅದರಿಂದ ಒಟ್ಟು 8.5 ಲಕ್ಷ ಟನ್‌ ಮರಳು ಲಭ್ಯತೆ ಅಂದಾಜಿಸಲಾಗಿತ್ತು. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬ್ಲಾಕ್‌ಗಳ ಸಂಖ್ಯೆ ಕಡಿಮೆಯಿದ್ದರೂ ಒಟ್ಟು ಮರಳು ಲಭ್ಯತೆಯಲ್ಲಿ ಸುಮಾರು 1.5 ಲಕ್ಷ ಟನ್‌ ಹೆಚ್ಚಳ ನಿರೀಕ್ಷಿಸಲಾಗಿದೆ. ಆದರೆ, ಇದು ಈಗ ಮರಳು ಮಾಫಿಯಾಕ್ಕೆ ಹಬ್ಬವಾದಂತಾಗಿದೆ. ಇಲ್ಲಿ ಮರಳಿನ ಕೊರತೆ ಉಂಟಾಗಿ ಮಾಫಿಯ ಅದನ್ನು ಭರ್ತಿ ಮಾಡುವ ಟಾರ್ಗೆಟ್ ಇಟ್ಟುಕೊಂಡಿದೆ. ಇದರಿಂದ ಜನ ಸಾಮಾನ್ಯರಿಗೆ ಮರಳು ಸಿಗೋದು ಇನ್ನು ಕಷ್ಟಕರವಾಗಲಿದೆ.

ಇದನ್ನೂ ಓದಿ: Karnataka Rain: ಕರ್ನಾಟಕದಲ್ಲಿ ಇಂದಿನಿಂದ ನಾಲ್ಕು ದಿನ ಗುಡುಗು ಸಹಿತ ಭಾರೀ ಮಳೆ

ಈ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರವಾನಗಿ ಇಲ್ಲದೆ 9 ತಿಂಗಳಲ್ಲಿ ಸಿ.ಆರ್.ಝೆಡ್ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆಯು ನಡೆಯುತ್ತಿದೆ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ. ಅಕ್ರಮವಾಗಿ ಮರಳಿನ ಮಾರಾಟ ಎಗ್ಗಿಲ್ಲದೆ ಸಾಗುತ್ತಿದೆ. ಇದಕ್ಕೆ ಬಿಜೆಪಿ ಸರ್ಕಾರದ ಶಾಸಕರ ಬೆಂಬಲವಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಮರಳುಗಾರಿಕೆಗೆ ಹೊಸ ನೀತಿ ಬೇಡ. ಹೊಸ ಮರಳು ನೀತಿಯಿಂದ ಸಂಪ್ರದಾಯ ಮರಳುಗಾರಿಕೆಗೆ ಸಮಸ್ಯೆಯಾಗುತ್ತದೆ. ಜೊತೆಗೆ ಬಡವರಿಗೆ ಮನೆ ಕಟ್ಟಲು ಮರಳು ಇಲ್ಲದ ಪರಿಸ್ಥಿತಿ ಉಂಟಾಗುತ್ತದೆ. ಈ ಹಿಂದೆ ಕಾಂಗ್ರೆಸ್ ರೂಪಿಸಿದ್ದ ಮರಳು ನೀತಿಯು ಸಮರ್ಪಕವಾಗಿದ್ದು, ಮರಳುಗಾರಿಕೆಯನ್ನು ನಡೆಸುವವರು ಕೂಡ ಮೆಚ್ಚಿದ್ದರು. ಆದರೆ ಅಂತಹ ನೀತಿಯನ್ನು ಈಗ ಬಿಜೆಪಿ ಸರ್ಕಾರ ಬದಲಾಯಿಸುತ್ತಿದೆ. ಇದರ ಹಿಂದೆ ಬಿಜೆಪಿಯ ಹಿಂಬಾಲಕರಿಗೆ ಹಾಗು ಬಿಜೆಪಿಗರಿಗೆ ಲಾಭ ಇದ್ದೇ ಇದೆ. ಈ ಹೊಸ ಮರಳು ನೀತಿ ಖಾಸಗೀಕರಣದಿಂದ ಲಾಭ ನಡೆಸುವ ಹುನ್ನಾರ ಬಿಜೆಪಿಗರಿಂದ ನಡೆಯುತ್ತಿದೆ. ಜೊತೆಗೆ ಬಿಜೆಪಿಯ ಬೆಂಬಲಿಗರಿಗೆ ಮರಳು ಸುಲಭ ರೀತಿಯಲ್ಲಿ ದೊರೆಯಲು ಹಾಗು ಲಾಭ ಪಡೆಯುವ ಉದ್ದೇಶವಿದೆ ಎಂದು ರಮಾನಾಥ ರೈ ಆರೋಪ ಮಾಡಿದ್ದಾರೆ.
ಮರಳುಗಾರಿಕೆ ಅನುಮತಿ ಆದೇಶ ಇನ್ನೆರಡು ವಾರದೊಳಗೆ ಕೆಸಿಝಡ್‌ಎಂನಿಂದ ಪ್ರಕಟಗೊಂಡು ಬಹುತೇಕ ಸೆಪ್ಟಂಬರ್ 10 ರ ಒಳಗೆ ಜಿಲ್ಲಾಡಳಿತಕ್ಕೆ ಬರುವ ಸಾಧ್ಯತೆಗಳಿವೆ. ಕೂಡಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಸಮಿತಿಯನ್ವಯ ಷರತ್ತುಗಳಿಗೆ ಅನುಗುಣವಾಗಿ ಮರಳುಗಾರಿಕೆಗೆ ಪರವಾನಿಗೆ ನೀಡುವ ಪ್ರಕ್ರಿಯೆ ನಡೆಸಲಿದೆ. ಆದರೆ, ಇದರಲ್ಲಿ ಮರಳು ಮಾಫಿಯ ಕೈಹಾಕದಂತೆ ಜಿಲ್ಲಾಧಿಕಾರಿ ಅದೆಷ್ಟರ ಮಟ್ಟಿಗೆ ತಡೆಯುತ್ತಾರೆ. ಸರ್ಕಾರ, ಇಲ್ಲಿನ ಜನಪ್ರತಿನಿಧಿಗಳು ಮರಳು ಮಾಫಿಯಾದ ಜೊತೆ ಅದ್ಯಾವ ಧೋರಣೆ ತಾಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
Published by: Sushma Chakre
First published: September 6, 2020, 1:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading