• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Snake Rescue: ಹಾವುಗಳನ್ನು ಹೇಗೆ ರಕ್ಷಿಸಬೇಕು? ಬಿಡುಗಡೆಯಾಯ್ತು ಅಧಿಕೃತ ಮಾರ್ಗಸೂಚಿ

Snake Rescue: ಹಾವುಗಳನ್ನು ಹೇಗೆ ರಕ್ಷಿಸಬೇಕು? ಬಿಡುಗಡೆಯಾಯ್ತು ಅಧಿಕೃತ ಮಾರ್ಗಸೂಚಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕರ್ನಾಟಕ ಅರಣ್ಯ ಇಲಾಖೆಯು ಹಾವು ಸಂರಕ್ಷಣಾಗಾರರಿಗೆ ಇನ್ನಷ್ಟು ಹೆಚ್ಚಿನ ಅನುಕೂಲವಾಗಲೆಂಬ ದೃಷ್ಟಿಯಿಂದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

 • News18 Kannada
 • 2-MIN READ
 • Last Updated :
 • Karnataka, India
 • Share this:

ಹಾವು ಎಂದಾ ಕ್ಷಣ ಯಾರಿಗೆ ತಾನೇ ಹೆದರಿಕೆ ಆಗುವುದಿಲ್ಲ ಹೇಳಿ. ಹೌದು, ಸರ್ಪಗಳು ಸಾಮಾನ್ಯವಾಗಿ ಮನುಷ್ಯರ ಕಣ್ಣಿಗೆ (Human) ಬೀಳುವುದು ಅಪರೂಪ, ಅಷ್ಟಕ್ಕೂ ಒಂದು ವೇಳೆ ಕಾಣಿಸಿಕೊಂಡರೂ ಮನುಷ್ಯ ಬೆಚ್ಚಿ ಬೀಳುವುದು ಸಹಜ, ಕಾರಣ ಹಾವುಗಳು ವಿಷಕಾರಿ ಜಂತುಗಳು ಹಾಗೂ ಕಚ್ಚಿದರೆ ಮಾರಣಾಂತಿಕವಾಗಬಹುದು. ಹಾಗಾಗಿಯೇ, ಹಲವು ಬಾರಿ ಹಾವುಗಳು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡಾಗ ಹಿಂದೆ-ಮುಂದೆ ನೋಡದ ಜನರು ಅದನ್ನು ಸಾಯಿಸಲು ಮುಂದಾಗುತ್ತಾರೆ ಹಾಗೂ ಮನುಷ್ಯರಿಂದ ಈ ಹಿಂದೆಯೂ ಸಾಕಷ್ಟು ಹಾವುಗಳು (Snakes)  ಕೊಲ್ಲಲ್ಪಟ್ಟಿವೆ. ಆದರೆ, ಹಾವುಗಳು ಸಹ ಈ ಭೂಮಿಯ ಮೇಲೆ ಬದುಕುತ್ತಿರುವ ವಿಶಿಷ್ಟ ಜೀವಿಯಾಗಿದ್ದು ಅವುಗಳಿಗೂ ಜೀವಿಸಲು ಹಕ್ಕಿರುತ್ತದೆ. ಹಾಗಾಗಿಯೇ ಇಂದು ನಾವು ಅನೇಕ ಕಡೆ ಹಾವು ಸಂರಕ್ಷಕರ ತಂಡ ಅಥವಾ ಹಾವು ಸಂರಕ್ಷಕರನ್ನು (Snake Rescue) ಕಾಣಬಹುದು.


ಇದೀಗ ಕರ್ನಾಟಕ ಅರಣ್ಯ ಇಲಾಖೆಯು ಈ ಸರಿಸೃಪಗಳನ್ನು ಸಂರಕ್ಷಿಸಿ ಉಳಿಸುವ ನಿಟ್ಟಿನಲ್ಲಿ ರಾಜ್ಯದ ಮೊದಲ ಎನ್ನಬಹುದಾದ ಹಾವು ಸಂರಕ್ಷಣೆ ಕುರಿತಾದ ಮಾರ್ಗಸೂಚಿಗಳನ್ನು ಸರ್ಪ ಸಂರಕ್ಷಕರಿಗಾಗಿ ಹೊರತಂದಿದೆ. ಈಗಾಗಲೇ ಈ ರೀತಿಯ ಮಾರ್ಗಸೂಚಿಗಳನ್ನು ಭಾರತದಲ್ಲಿ ಕೇರಳ, ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳು ಮಾತ್ರವೇ ಹೊಂದಿದ್ದು ಈಗ ಕರ್ನಾಟಕವೂ ಆ ಸಾಲಿನಲ್ಲಿ ಸೇರಿದಂತಾಗಿದೆ. ಭಾರತವು ವನ್ಯಜೀವಿ ಸಂಪತ್ತಿನಲ್ಲಿ ಸಾಕಷ್ಟು ಶ್ರೀಮಂತವಾಗಿದ್ದು ಇಲ್ಲಿನ ವೈವಿಧ್ಯಮಯ ಕಾಡು ಪ್ರದೇಶಗಳಲ್ಲಿ ವಿವಿಧ ಬಗೆಯ ಹಾವುಗಳು ಕಂಡುಬರುತ್ತವೆ.


ಹಾವು ಕಂಡರೆ ಏನು ಮಾಡಬೇಕು?
ಸಾಮಾನ್ಯವಾಗಿ ಹಾವುಗಳು ಸುಖಾ ಸುಮ್ಮನೆ ಯಾರಿಗೂ ತೊಂದರೆ ಕೊಡುವುದಿಲ್ಲ, ಆದರೆ ಅದಕ್ಕೆ ಅಪಾಯ ಸಂಭವಿಸಲಿದೆ ಎಂದು ಗೊತ್ತಾದಾಗ ಮಾತ್ರವೇ ಅದು ತನ್ನ ಪ್ರಾಣ ರಕ್ಷಣೆಗಾಗಿ ಬುಸುಗುಟ್ಟಿ ಕಚ್ಚಲು ಮುಂದಾಗುತ್ತದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ತಿಳಿಯದ ಹಲವು ಜನರು ಅದು ಕಾಣಿಸಿದ ತಕ್ಷಣ ಅದನ್ನು ಕೊಲ್ಲಲು ಮುಂದಾಗುತ್ತಾರೆ. ಇದನ್ನು ತಡೆಗಟ್ಟುವ ಉದ್ದೇಶದಿಂದಲೇ ಇಂದು ನಮ್ಮ ಅನೇಕ ಪ್ರಮಾಣೀಕೃತ ಹಾವು ಸಂರಕ್ಷಕರಿದ್ದಾರೆ. ಅವರಿಗೆ ಎಲ್ಲಿಯಾದರೂ ಹಾವು ಕಂಡು ಬಂದ ಬಗ್ಗೆ ದೂರು ಬಂದರೆ ಸಾಕು ಅವರು ಅಲ್ಲಿಗೆ ತೆರಳಿ ಹಾವನ್ನು ಸುರಕ್ಷಿತವಾಗಿ ಹಿಡಿದು ಅದನ್ನು ಮತ್ತೆ ಕಾಡಿನಲ್ಲಿ ಬಿಡುತ್ತಾರೆ.


ಮಾರ್ಗಸೂಚಿ ಬಿಡುಗಡೆ
ಈಗ ಈ ವಿಷಯದಲ್ಲಿ ಆಸಕ್ತಿ ತೋರಿರುವ ಕರ್ನಾಟಕ ಅರಣ್ಯ ಇಲಾಖೆಯು ಹಾವು ಸಂರಕ್ಷಣಾಗಾರರಿಗೆ ಇನ್ನಷ್ಟು ಹೆಚ್ಚಿನ ಅನುಕೂಲವಾಗಲೆಂಬ ದೃಷ್ಟಿಯಿಂದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. 'ಪರಿಣಾಮಕಾರಿ ಮಾನವ-ಹಾವು ಸಂಘರ್ಷ ನಿರ್ವಹಣೆ ಮತ್ತು ತಗ್ಗಿಸುವಿಕೆ - ಪ್ರಮಾಣೀಕೃತ ಹಾವು ರಕ್ಷಕರ ಕಾರ್ಯಾಚರಣೆಯ ಕೈಪಿಡಿ' ಎಂಬ ಹೆಸರಿನ ಮಾರ್ಗಸೂಚಿಗಳ ಕೈಪಿಡಿಯನ್ನು ಈಗ ಹೊರತರಲಾಗಿದೆ.


ಈ ಮಾರ್ಗಸೂಚಿ ರಚಿಸಿದ್ಯಾರು?
ಈ ಕೈಪಿಡಿಯನ್ನು ಹೆಸರಾಂತ ಹರ್ಪಿಟಾಲಾಜಿಸ್ಟ್ ರೊಮುಲಸ್ ವಿಟೇಕರ್, ಹರ್ಪಿಟಾಲಾಜಿಸ್ಟ್ ಮತ್ತು ದಿ ಲಿಯಾನಾ ಟ್ರಸ್ಟ್ ಸಂಸ್ಥಾಪಕರಾದ ಟ್ರಸ್ಟಿ ಗೆರಾರ್ಡ್ ಮಾರ್ಟಿನ್ ಹಾಗೂ ಹ್ಯೂಮನ್ ಸೊಸೈಟಿ ಇಂಟರ್ನ್ಯಾಷನಲ್/ಇಂಡಿಯಾ ಹಿರಿಯ ವ್ಯವಸ್ಥಾಪಕ ಸುಮಂತ್ ಬಿಂದು ಅವರು ಜಂಟಿಯಾಗಿ ರಚಿಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಬೆಂಗಳೂರಿನಲ್ಲಿ ಐದು ಪ್ರಮಾಣೀಕೃತ ಹಾವು ರಕ್ಷಕರಿದ್ದರೆ, ರಾಜ್ಯದ ಉಳಿದ ಭಾಗದಲ್ಲಿ ಹೀಗೆ ಪ್ರಮಾಣೀಕೃತ ರಕ್ಷಕರು ಯಾರೂ ಇಲ್ಲವಾದರೂ ಇಂತಹ ಕೆಲಸದಲ್ಲಿ 100 ಕ್ಕೂ ಹೆಚ್ಚು ಹಾವು ರಕ್ಷಕರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.


ಇದನ್ನೂ ಓದಿ: Uttara Kannada: ಅಯ್ಯಪ್ಪನ ದರ್ಶನಕ್ಕೆ ಹೊರಟ ನಾಯಿ! ಪಾದಯಾತ್ರಿಗಳ ಜೊತೆ ಶಬರಿಮಲೆಗೆ ಪಯಣ


ಕೈಪಿಡಿ ಹೊರತರುವ ಸಂದರ್ಭದಲ್ಲಿ ಬಿಂದುಮಾಧವ್ ಅವರು ಮಾತನಾಡುತ್ತ, "ಈಗಲೂ ಅನೇಕ ಕಡೆಗಳಲ್ಲಿ ಸಾಕಷ್ಟು ಹಾವಿನ ರಕ್ಷಣೆಗಳು ನಡೆಯುತ್ತಿದ್ದು ಇಂತಹ ಸಂದರ್ಭದಲ್ಲಿ ಹಾವು ರಕ್ಷಕರು ಹಾವು ಕಡಿತಕ್ಕೆ ಒಳಗಾಗುವ ಸಾಧ್ಯತೆಗಳಿವೆ ಹಾಗೂ ಈ ಹಿಂದೆ ಕಡಿತಕ್ಕೊಳಗಾದ ಅನೇಕ ನಿದರ್ಶನಗಳೂ ಇರುವುದನ್ನು ಗಮನಿಸಲಾಗಿದೆ. ಇದಲ್ಲದೆ ಹೀಗೆ ರಕ್ಷಿಸಲಾದ ಅಥವಾ ಹಿಡಿಯಲಾದ ಹಾವುಗಳನ್ನು ಎಲ್ಲಿ ಮತ್ತು ಹೇಗೆ ಬಿಡಬೇಕು ಎಂಬ ಬಗ್ಗೆ ಅನೇಕ ರಕ್ಷಕರಿಗೆ ಇನ್ನೂ ತಿಳಿದಿಲ್ಲ.


ಹಾವು ರಕ್ಷಕರಿಗೆ ಸಹಾಯ
ಹಾಗಾಗಿ, ಈ "ಮಾರ್ಗಸೂಚಿಗಳು ಈ ವಿಷಯದಲ್ಲಿ ರಕ್ಷಕರಿಗೆ ಸಹಾಯ ಮಾಡುತ್ತವೆ. ಹಾವು ರಕ್ಷಕರಿಗೆ ಅರಣ್ಯ ಇಲಾಖೆಯ ವತಿಯಿಂದ ತರಬೇತಿ ನೀಡಿ ಪ್ರಮಾಣೀಕರಿಸಲಾಗುವುದು. ಪ್ರಮಾಣೀಕೃತ ರಕ್ಷಕರ ಹೆಸರು ಮತ್ತು ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಹುಡುಕಲು ನಾಗರಿಕರಿಗೆ ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು" ಎಂದು ಅವರು ಹೇಳಿದರು.


ಇನ್ನು, ಈ ಸಂದರ್ಭದಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ವಿಜಯಕುಮಾರ್ ಗೋಗಿ ಮಾತನಾಡಿ, ಹಾವು ರಕ್ಷಕರನ್ನು ಗುರುತಿಸುವುದು, ಮೌಲ್ಯೀಕರಿಸುವುದು ಮತ್ತು ಪ್ರಮಾಣೀಕರಿಸುವುದನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲಾಗುವುದು ಎಂದು ಹೇಳಿದರು.


ಇದನ್ನೂ ಓದಿ: Volleyball Tournament: 10 ಜಿಲ್ಲೆಗಳ 150 ಪುರುಷ, 40 ಮಹಿಳಾ ವಾಲಿಬಾಲ್ ಆಟಗಾರರ ಜಿದ್ದಾಜಿದ್ದಿ!


ಒಟ್ಟಿನಲ್ಲಿ ಇದೊಂದು ಕರ್ನಾಟಕ ಅರಣ್ಯ ಇಲಾಖೆಯ ವತಿಯಿಂದ ಇಡಲಾದ ಉತ್ತಮ ಹೆಜ್ಜೆಯಾಗಿದ್ದು ಈ ಮೂಲಕ ಹಾವುಗಳು ವ್ಯರ್ಥವಾಗಿ ಕೊಲ್ಲಲ್ಪಡುವುದು ತಪ್ಪಲಿ ಮತ್ತು ಅವು ಸುರಕ್ಷಿತವಾಗಿ ತಮ್ಮ ಆವಾಸ ಸ್ಥಾನಗಳಿಗೆ ಮರಳಲ್ಪಡಲಿ ಎಂದು ಆಶಿಸಬಹುದು.

Published by:ಗುರುಗಣೇಶ ಡಬ್ಗುಳಿ
First published: