ಪ್ರವಾಹದಿಂದ ಚಿಕ್ಕೋಡಿ ವಿಭಾಗದಲ್ಲಿ 32 ಸಾವಿರ ಹೆಕ್ಟೇರ್ ಪ್ರದೇಶ ಬೆಳೆ ಹಾನಿ; ಪರಿಹಾರಕ್ಕೆ ರೈತರ ಆಗ್ರಹ

ಘಟಪ್ರಭಾ ಹಾಗೂ ಹಿರಣ್ಯಕೇಶಿ ನದಿ ನೀರಿನಿಂದಾಗಿ ಹುಕ್ಕೇರಿ ತಾಲೂಕಿನಲ್ಲಿ 539 ಹೆಕ್ಟೇರ್, ಮೂಡಲಗಿ ತಾಲೂಕಿನಲ್ಲಿ 5500 ಹೆಕ್ಟೇರ್, ಹಾಗೂ ಗೋಕಾಕ್​ ತಾಲೂಕಿನ 7500 ಹೆಕ್ಟೇರ್ ಭೂ ಪ್ರದೇಶದಲ್ಲಿನ ಬೆಳೆಗಳು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಪ್ರವಾಹದಿಂದ ಬೆಳೆ ಹಾನಿಯಾಗಿರುವ ದೃಶ್ಯ

ಪ್ರವಾಹದಿಂದ ಬೆಳೆ ಹಾನಿಯಾಗಿರುವ ದೃಶ್ಯ

  • Share this:
ಚಿಕ್ಕೋಡಿ(ಸೆ.03): ನೆರೆಯ ಮಹಾರಾಷ್ಟ್ರದ ಕೊಂಕಣ ಭಾಗ ಹಾಗೂ ರಾಜ್ಯದ ಗಡಿ ಭಾಗದಲ್ಲಿ ಸುರಿದ ಧಾರಾಕಾರ ಮಳೆಯಿಂದ ಚಿಕ್ಕೋಡಿ ಭಾಗದಲ್ಲಿ ಸಂಭವನೀಯ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ನದಿ ತೀರದ ಸಾವಿರಾರು ಎಕರೆ ಭೂಪ್ರದೇಶದ ಬೆಳೆಗಳು ಮುಳುಗಡೆಗೊಂಡಿವೆ. ಕೃಷ್ಣಾ, ದೂಧಗಂಗಾ, ವೇಧಗಂಗಾ ಹಾಗೂ ಘಟಪ್ರಭಾ ನದಿಯ ಸಂಭವನೀಯ ಪ್ರವಾಹಕ್ಕೆ  ಚಿಕ್ಕೋಡಿ ವಿಭಾಗದ 6 ತಾಲೂಕುಗಳ ನದಿ ಪಾತ್ರದ ಜಮೀನುಗಳು ಜಲಾವೃತಗೊಂಡಿವೆ . 6 ತಾಲೂಕುಗಳ ಅಂದಾಜು 32  ಸಾವಿರ ಹೆಕ್ಟೇರ ಭೂ ಪ್ರದೇಶದ ಬೆಳೆ ನದಿ ನೀರಿನಲ್ಲಿ ಮುಳುಗಡೆಗೊಂಡಿವೆ ಎಂಬುದು ಅಂದಾಜಿಸಲಾಗಿದೆ.

ಮುಂಗಾರು ಹಂಗಾಮಿನಲ್ಲಿ ರೈತರು ಕಬ್ಬು, ಸೋಯಾಬಿನ್, ಶೇಂಗಾ, ಉದ್ದು, ಹೆಸರು ಮತ್ತು ಗೋವಿನ ಜೋಳ ನಾಟಿ ಮಾಡಿದ್ದರು. ಫಸಲು ಇನ್ನೇನು ಕೈ ತಲುಪುವಷ್ಟರಲ್ಲಿ ನದಿ ನೀರು ರೈತರ ಜಮೀನಿಗೆ ನುಗ್ಗಿದೆ. ಇದರಿಂದ ರೈತರಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ. ಕಳೆದ ವರ್ಷ ಅತಿವೃಷ್ಠಿ ಹಾಗೂ ಅನಾವೃಷ್ಠಿಯಿಂದ ರೈತರು ತೀವ್ರ ಸಂಕಷ್ಟ ಎದುರಿಸಿದ್ದರು. ಪ್ರಸಕ್ತ ವರ್ಷದಲ್ಲಿ ಒಂದು ಬೆಳೆಯನ್ನಾದಾರೂ ತೆಗೆಯಬೇಕು ಎನ್ನುವಷ್ಟರಲ್ಲಿ ಮತ್ತೆ ಅತಿಯಾದ ಮಳೆ ಹಾಗೂ ಸಂಭವನೀಯ ಪ್ರವಾಹಕ್ಕೆ ಬೆಳೆಗಳು ನಡು ನೀರಿನಲ್ಲಿ ನಿಂತು ಕೊಳೆತು ಹೋಗಿವೆ.

ಮೊದಲೇ ರೈತರು ಬ್ಯಾಂಕ್, ಸಹಕಾರ ಸಂಘ, ವೈಯಕ್ತಿಕ ಸಾಲ ಮಾಡಿ ಬೆಳೆ ಬೆಳೆದಿದ್ದು, ಮಳೆ-ಗಾಳಿ ಮತ್ತು ಪ್ರವಾಹಕ್ಕೆ ಬೆಳೆಗಳು ಹಾನಿಯಾಗಿ ದಿಕ್ಕೇ ತೋಚದಂತಾಗಿದೆ. ರೈತರು ಬೆಳೆ ಪರಿಹಾರಕ್ಕಾಗಿ ಆಗ್ರಹಿಸುತ್ತಿದ್ದು, ಅವರ ಗೋಳು ಕೇಳುವವರೇ ಇಲ್ಲದಂತಾಗಿದೆ. ಇನ್ನು, ತಾಲೂಕು ವಾರ ಪ್ರದೇಶ ಬೆಳೆ ಹಾನಿ ನೋಡುವುದಾದರೆ, ವೇಧಗಂಗಾ ದೂದಗಂಗಾ ನದಿ ನೀರಿನಿಂದ ನಿಪ್ಪಾಣಿ ತಾಲೂಕಿನಲ್ಲಿ 4870 ಹೆಕ್ಟೇರ್ ಪ್ರದೇಶ, ಕೃಷ್ಣಾ ನದಿ ಯಿಂದಾಗಿ ಚಿಕ್ಕೋಡಿ ತಾಲೂಕಿನಲ್ಲಿ 11392 ಸಾವಿರ ಹೆಕ್ಟೇರ್, ರಾಯಭಾಗ ತಾಲೂಕಿನ 2200 ಹೆಕ್ಟೇರ್, ಪ್ರದೇಶದ ಬೆಳೆ ಹಾನಿಯಾಗಿದೆ.

ದೇಶದ ಆರ್ಥಿಕತೆ ಹದಗೆಟ್ಟ ಹಿನ್ನೆಲೆ; ಖರ್ಚು ಕಡಿಮೆ ಮಾಡುವಂತೆ ಹಣಕಾಸು ಇಲಾಖೆ ಸೂಚನೆ

ಇನ್ನು ಘಟಪ್ರಭಾ ಹಾಗೂ ಹಿರಣ್ಯಕೇಶಿ ನದಿ ನೀರಿನಿಂದಾಗಿ ಹುಕ್ಕೇರಿ ತಾಲೂಕಿನಲ್ಲಿ 539 ಹೆಕ್ಟೇರ್, ಮೂಡಲಗಿ ತಾಲೂಕಿನಲ್ಲಿ 5500 ಹೆಕ್ಟೇರ್, ಹಾಗೂ ಗೋಕಾಕ್​ ತಾಲೂಕಿನ 7500 ಹೆಕ್ಟೇರ್ ಭೂ ಪ್ರದೇಶದಲ್ಲಿನ ಬೆಳೆಗಳು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಮೇಲಿಂದ ಮೇಲೆ ರೈತರ ಬೆಳೆ ಹಾನಿ ಹೊಡೆತ:

ಕಳೆದ ವರ್ಷದ ಬೇಸಿಗೆಯಲ್ಲಿ ಕೃಷ್ಣಾ ಮತ್ತು ಉಪನದಿಗಳು ಬತ್ತಿ ಹೋಗಿ ರೈತರ ಬೆಳೆ ಹಾಳಾದರೆ ಮುಂಗಾರಿನಲ್ಲಿ ಅತಿಯಾದ ಮಳೆ ಹಾಗೂ ಭೀಕರ ಪ್ರವಾಹಕ್ಕೆ ತುತ್ತಾಗಿ ಬೆಳೆ ಕಳೆದುಕೊಂಡರು. ಈಗ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ. ಗಡಿ ಭಾಗದ ರೈತರು ಮೇಲಿಂದ ಮೇಲೆ ಬೆಳೆ ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೂಡಲೇ ಸರ್ಕಾರ ಸರ್ವೇ ನಡೆಸಿ ಹಾನಿಯಾದ ರೈತರಿಗೆ ಬೆಳೆ ಪರಿಹಾರ ನೀಡಲು ಆಗ್ರಹಿಸಿದ್ದಾರೆ.

ಸರ್ವೇ ನಡೆಸುತ್ತಿರುವ ಇಲಾಖೆ
ಕೃಷಿ ಇಲಾಖೆ ಸಹಾಯಕರು ಹಾಗೂ ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿ ಹಾಗೂ ತಾಲೂಕಾಡಳಿತದ ವತಿಯಿಂದ ಈಗಾಗಲೇ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ಸದ್ಯಕ್ಕೆ ಅಂದಾಜು ಬೆಳೆ ಹಾನಿಯಾದ ಕುರಿತು ಮಾಹಿತಿಯನ್ನು ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ನೀಡಲಾಗಿದೆ. ಅತಿ ಶೀಘ್ರದಲ್ಲೆ ನಮ್ಮ ಸರ್ವೇ ಕಾರ್ಯ ಪೂರ್ಣಗೊಳ್ಳಲಿದ್ದು, ಎಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ನಿಖರವಾದ ಮಾಹಿತಿಯನ್ನು ಸಲ್ಲಿಸಿದ ಬಳಿಕ ಸರ್ಕಾರದಿಂದಲೇ ನೇರವಾಗಿ ರೈತರ ಖಾತೆಗಳಿಗೆ ಬೆಳೆ ಹಾನಿಯ ಹಣ ಜಮಾ ಆಗಲಿದೆ ಎಂದು ಕೃಷಿ ಇಲಾಖೆ ಆಯುಕ್ತ ಡಿ.ರೋಡಗಿ ಮಾಹಿತಿ ನೀಡಿದ್ದಾರೆ.
Published by:Latha CG
First published: