HOME » NEWS » State » KARNATAKA FLOOD SHEEPS STRANDED IN ISLAND OF YADAGIRI DUE TO KRISHNA RIVER FLOOD SCT

ನಡುಗಡ್ಡೆಯಲ್ಲಿ ಕುರಿಗಳು, ನದಿ ತೀರದಲ್ಲಿ ಕುರಿಗಾಹಿ; ಇದು ಕೃಷ್ಣಾ ಪ್ರವಾಹದ ಚಿತ್ರಣ

Krishna River Flood: ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಭಾರಿ ಪ್ರಮಾಣದ ನೀರು ಹರಿಬಿಡುತ್ತಿರುವ ಹಿನ್ನೆಲೆ ಕೃಷ್ಣಾ ತೀರದಲ್ಲಿ ಆತಂಕ ಎದುರಾಗಿದೆ. ಆತಂಕದ ನಡುವೆ  ನಡುಗಡ್ಡೆಯಲ್ಲಿ ಸಿಲುಕಿದ ಕುರಿಗಳನ್ನು ಭಗವಂತ ಹೇಗಾದರೂ ಕಾಪಾಡುತ್ತಾನೆಂದು ದೇವರ ಮೇಲೆ ಭಾರ ಹಾಕಿ ಟೋಪಣ್ಣ ಕುರಿಗಳ ಬಗ್ಗೆ ಚಿಂತಿಸುತ್ತಿದ್ದಾನೆ.

news18-kannada
Updated:August 21, 2020, 8:50 AM IST
ನಡುಗಡ್ಡೆಯಲ್ಲಿ ಕುರಿಗಳು, ನದಿ ತೀರದಲ್ಲಿ ಕುರಿಗಾಹಿ; ಇದು ಕೃಷ್ಣಾ ಪ್ರವಾಹದ ಚಿತ್ರಣ
ಕುರಿ
  • Share this:
ಯಾದಗಿರಿ: ಕೃಷ್ಣಾ ನದಿ ಪ್ರವಾಹದಿಂದ  ಕಳೆದ 15 ದಿನಗಳಿಂದ ಕುರಿಗಳು ಕೂಡ ನಡುಗಡ್ಡೆಯಲ್ಲಿ ಸಿಲುಕಿವೆ. ಆದರೆ, ದಿನೇದಿನೆ ನೀರಿನ ಹರಿವು ಹೆಚ್ಚಳವಾಗುತ್ತಿರುವ ಹಿನ್ನೆಲೆ ‌ಕುರಿಗಳನ್ನು ವಾಪಾಸ್ ಊರಿಗೆ ಹೊಡೆದುಕೊಂಡು ಬರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಕುರಿಗಳು ಕೃಷ್ಣಾ ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದು, ಕುರಿಗಾಹಿ ಟೋಪಣ್ಣ ಮಾತ್ರ ಕೃಷ್ಣಾ ನದಿ  ತೀರದ ದೂರದ ಬೆಟ್ಟದಿಂದಲೇ ನಡುಗಡ್ಡೆಯಲ್ಲಿ ಸಿಲುಕಿರುವ ಕುರಿಗಳನ್ನು ಕಾಯುತ್ತಿದ್ದಾನೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ, ಛಾಯಾಭಗವತಿ ದೇವಸ್ಥಾನ ಸಮೀಪದ ಕೃಷ್ಣಾ ನದಿಯ ನಡುಗಡ್ಡೆಯಲ್ಲಿ ಕುರಿಗಳು ಸಿಲುಕಿವೆ.

ನಾರಾಯಣಪುರ ಪಂಚಾಯತ್ ವ್ಯಾಪ್ತಿಯ ಐಬಿತಾಂಡಾದ ನಿವಾಸಿಗಳಾದ ಡೀಕಪ್ಪ, ಟೋಪಣ್ಣ, ಕೃಷ್ಣಾ ಹಾಗೂ ಸಂತೋಷ ಅವರು ಒಟ್ಟು 230 ಕುರಿಗಳ ಸಮೇತ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಇಲ್ಲದಿದ್ದಾಗ ಅಂದರೆ ಆಗಸ್ಟ್ 2ರಂದು ಕೃಷ್ಣಾ ನದಿಯ ನಡುಗಡ್ಡೆಗೆ ಕುರಿ‌ ಮೇಯಿಸಲು ಹೋಗಿದ್ದರು. ಆದರೆ, ಟೋಪಣ್ಣನನ್ನು ‌ಹೊರತು ಪಡಿಸಿ ಎಲ್ಲರೂ ಕೃಷ್ಣಾ ನದಿ ಪ್ರವಾಹ ಬರುವ ಮುನ್ನ ವಾಪಾಸ್ ಊರಿಗೆ ಬಂದಿದ್ದರು. ಟೋಪಣ್ಣ ಕುರಿಗಳನ್ನು ಬಿಟ್ಟು ಬರಲು ಆಗದೆ ಕೃಷ್ಣಾ ನದಿಯಲ್ಲಿ 230 ಕುರಿಗಳೊಂದಿಗೆ ನಡುಗಡ್ಡೆಯಲ್ಲಿ ‌ಸಿಲುಕಿದ್ದ.

ಇದನ್ನೂ ಓದಿ: ಉಕ್ಕಿ ಹರಿಯುತ್ತಿರುವ ಮಲಪ್ರಭಾ ನದಿ; ನೂರಾರು ಹೆಕ್ಟೇರ್ ಬೆಳೆ ಸಂಪೂರ್ಣ ಜಲಾವೃತ, ನದಿಯ ಅಬ್ಬರಕ್ಕೆ ರೈತರು ಕಂಗಾಲು

ನಡುಗಡ್ಡೆಯಲ್ಲಿ ಕುರಿಗಳ ಸಮೇತ ಕುರಿಗಾಹಿ ಟೋಪಣ್ಣ ಸಿಲುಕಿದ್ದನ್ನು ಅರಿತು‌ ಜಿಲ್ಲಾಡಳಿತ ಹಾಗೂ ಶಾಸಕ ರಾಜು ಗೌಡ ಅವರು ಎನ್ ಡಿಆರ್ ಎಫ್ ತಂಡವನ್ನು ಕರೆಸಿದ್ದರು. ಆಗಸ್ಟ್ 9ರಂದು ಕುರಿಗಳ ಜೊತೆ ಸಿಲುಕಿದ ಕುರಿಗಾಹಿ ಟೋಪಣ್ಣ ಅವರನ್ನು ಬೋಟ್ ಮೂಲಕ ರಕ್ಷಣೆ ಮಾಡಲಾಗಿತ್ತು. ನಡುಗಡ್ಡೆಗೆ ಎನ್ ಡಿ ಆರ್ ಎಫ್ ತಂಡ ಹೋದ ನಂತರ ಕುರಿಗಳನ್ನು ಬಿಟ್ಟು ಬರಲ್ಲ ಎಂದು ಟೋಪಣ್ಣ ಹಿಂದೇಟು ಹಾಕಿದ್ದನು. ನಂತರ ತಂಡದ ಅಧಿಕಾರಿಗಳು ಮನವೊಲಿಕೆ ಮಾಡಿ ರಕ್ಷಣೆ ಮಾಡಿದ್ದರು. ನದಿಯಲ್ಲಿ ಹೆಚ್ಚಿನ ನೀರು ಹರಿವು ಹಿನ್ನೆಲೆ ಬೋಟ್  ಮೂಲಕ ಕುರಿಗಳನ್ನು ತರಲು ಸಾಧ್ಯವಾಗಲಿಲ್ಲ. ಕುರಿಗಳನ್ನು ‌ನಡುಗಡ್ಡೆಯಲ್ಲಿಯೇ ಬಿಡಲಾಗಿತ್ತು.

ನಡುಗಡ್ಡೆಯಲ್ಲಿ ಕುರಿಗಳು ಇದ್ದಷ್ಟು ಮೇವು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿವೆ. ಆದರೆ ಕುರಿಗಾಹಿ ಟೋಪಣ್ಣ ಸದಾ ಕುರಿಗಳ ಬಗ್ಗೆ ಚಿಂತೆ ಮಾಡುತ್ತಿದ್ದಾನೆ. ಕುರಿ ಸಾಕಾಣಿಕೆ ಮಾಡಿ ಬದುಕು ಸಾಗಿಸುವ ಟೋಪಣ್ಣ ಅವರ ಕುಟುಂಬಕ್ಕೆ ಕುರಿಗಳೇ ಆದಾಯದ ಮೂಲ. ಈಗ ನಡುಗಡ್ಡೆಯಲ್ಲಿಯೇ ಸಿಲುಕಿದ ಹಿನ್ನೆಲೆ ಟೋಪಣ್ಣ ಕೃಷ್ಣಾ ನದಿ ತೀರದ ಬೆಟ್ಟದಲ್ಲಿಯೇ ದೂರದಿಂದ ಕುರಿಗಳು ಮೇವು ತಿನ್ನುವುದು, ಚಲನವಲನದ ಬಗ್ಗೆ ನಿಗಾ ವಹಿಸಿದ್ದಾನೆ.

ಇದನ್ನೂ ಓದಿ: Srisailam Fire Accident: ತೆಲಂಗಾಣದ ಶ್ರೀಶೈಲಂ ಪವರ್​ ಸ್ಟೇಷನ್​ನಲ್ಲಿ ಶಾರ್ಟ್​ ಸರ್ಕ್ಯೂಟ್; ಬೆಂಕಿಯಲ್ಲಿ ಸಿಲುಕಿದ 9 ಸಿಬ್ಬಂದಿ

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಕುರಿಗಾಹಿ ಟೋಪಣ್ಣ ಮಾತನಾಡಿ, ನಾವು ಕುರಿಗಳನ್ನೇ ನಂಬಿ‌ ಬದುಕು ಸಾಗಿಸುತ್ತಿದ್ದೇವೆ. ಈಗ ನೀರು ಹೆಚ್ಚು ಬರುತ್ತಿರುವುದರಿಂದ ಕುರಿಗಳನ್ನು ತರಲು ಆಗುತ್ತಿಲ್ಲ. ಪ್ರತಿದಿನ ಹೋಗಿ ಕಾಯುತ್ತಿದ್ದೇವೆ. ನೀರು ಕಡಿಮೆಯಾದರೆ ಅನುಕೂಲವಾಗುತ್ತದೆ ಎಂದಿದ್ದಾರೆ.

ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಭಾರಿ ಪ್ರಮಾಣದ ನೀರು ಹರಿಬಿಡುತ್ತಿರುವ ಹಿನ್ನೆಲೆ ಕೃಷ್ಣಾ ತೀರದಲ್ಲಿ ಆತಂಕ ಎದುರಾಗಿದೆ. ಆತಂಕದ ನಡುವೆ  ನಡುಗಡ್ಡೆಯಲ್ಲಿ ಸಿಲುಕಿದ ಕುರಿಗಳನ್ನು ಭಗವಂತ ಹೇಗಾದರೂ ಕಾಪಾಡುತ್ತಾನೆಂದು ದೇವರ ಮೇಲೆ ಭಾರ ಹಾಕಿ ಟೋಪಣ್ಣ ಕುರಿಗಳ ಬಗ್ಗೆ ಚಿಂತಿಸುತ್ತಿದ್ದಾನೆ. ನೀರಿನ ಹರಿವು ನಿಂತ ಮೇಲೆ ಸುರಕ್ಷಿತವಾಗಿ ಕುರಿಗಳನ್ನು ಊರಿಗೆ ತರುವ ಕನಸು ಕುರಿಗಾಹಿ ಕಟ್ಟಿಕೊಂಡಿದ್ದಾನೆ.
Published by: Sushma Chakre
First published: August 21, 2020, 8:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories