News18 India World Cup 2019

ಟಿಬಿ ಡ್ಯಾಂ ನೀರು ಆಂಧ್ರಕ್ಕೆ ಒಯ್ಯಲು ಮತ್ತೊಂದು ಕುತಂತ್ರ?; ಎಲ್ಎಲ್​ಸಿ ಕಾಲುವೆ ನವೀಕರಣದಿಂದ ರಾಜ್ಯ ರೈತರಿಗೆ ಅನ್ಯಾಯ

ಕೆಳಹಂತದ ಕಾಲುವೆ(ಎಲ್ಎಲ್​ಸಿ)ಯ ನವೀಕರಣದಿಂದ ಹೆಚ್ಚೆಚ್ಚು ನೀರು ಹೆಚ್ಚೆಚ್ಚು ವೇಗದಲ್ಲಿ ಆಂಧ್ರವನ್ನು ತಲುಪುತ್ತದೆ. ಸಿಮೆಂಟ್ ಬೆಡ್ಡಿಂಗ್​ನಿಂದಾಗಿ ತೂಬಿನ ಮೇಲೆ ನೀರು ಹರಿಯದೇ ಹೋಗುವುದರಿಂದ ರಾಜ್ಯದ ರೈತರಿಗೆ ಅನ್ಯಾಯವಾಗುತ್ತದೆ ಎಂಬುದು ರೈತ ಮುಖಂಡರ ಆಕ್ರೋಶ.

news18
Updated:June 14, 2019, 10:49 PM IST
ಟಿಬಿ ಡ್ಯಾಂ ನೀರು ಆಂಧ್ರಕ್ಕೆ ಒಯ್ಯಲು ಮತ್ತೊಂದು ಕುತಂತ್ರ?; ಎಲ್ಎಲ್​ಸಿ ಕಾಲುವೆ ನವೀಕರಣದಿಂದ ರಾಜ್ಯ ರೈತರಿಗೆ ಅನ್ಯಾಯ
ತುಂಗಭದ್ರಾ ಎಲ್​ಎಲ್​ಸಿ ಕಾಲುವೆಯ ನವೀಕರಣ ಕಾಮಗಾರಿ
news18
Updated: June 14, 2019, 10:49 PM IST
ಬಳ್ಳಾರಿ(ಜೂನ್ 14): ತುಂಗಭದ್ರ ಜಲಾಶಯದ ನೀರಿನ ವಿಚಾರದಲ್ಲಿ ಟಿಬಿ ಬೋರ್ಡ್ ನೆರೆಯ ಆಂಧ್ರಪ್ರದೇಶದ ಲಾಬಿಗೆ ಮಣಿಯುತ್ತಿದೆಯೇ? ಇದಕ್ಕೆ ರಾಜ್ಯದ ರೈತರು ಬಲಿಯಾಗುತ್ತಿದ್ದಾರೆಯೇ ಎಂಬ ಅನುಮಾನ ದಟ್ಟವಾಗುತ್ತಿದೆ. ಯಾಕೆಂದರೆ ಜಲಾಶಯದ ಎಲ್​ಎಲ್​ಸಿ (ಕೆಳಮಟ್ಟ) ಕಾಲುವೆ ನವೀಕರಣದ ಹೆಸರಿನಲ್ಲಿ ಅಗಲೀಕರಣ ಜರುಗುತ್ತಿದೆ. ಇದು ರಾಜ್ಯದ ರೈತರಿಗೆ ಸಂಕಷ್ಟಕ್ಕೆ ತಂದರೆ, ಆಂಧ್ರಕ್ಕೆ ಭರಪೂರ ಲಾಭ ತಂದುಕೊಡಲಿದೆ.

ತುಂಗಭದ್ರ ಜಲಾಶಯ ಕೇವಲ ಹೈದ್ರಾಬಾದ್-ಕರ್ನಾಟಕದ ಭಾಗದ ಜಿಲ್ಲೆಗಳಿಗೆ ಮಾತ್ರ ಜೀವನಾಡಿಯಲ್ಲ. ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದ ಹಲವು ಜಿಲ್ಲೆಗಳಿಗೂ ನೀರುಣಿಸುತ್ತದೆ. ಜಲಾಶಯದ ಕಾಲುವೆಗಳ ಕಾಮಗಾರಿಗಳು ಪ್ರತಿವರುಷ ನಡೆಯುತ್ತಲೇ ಇರುತ್ತವೆ. ಮಳೆಗಾಲಕ್ಕೆ ಸರಿಯಾಗಿ ಆರಂಭವಾಗುವ ಕಾಮಗಾರಿ ಮಳೆ ನೀರು ಬಂದಕೂಡಲೇ ಕೊಚ್ಚಿಕೊಂಡು ಕೋಟಿ ಕೋಟಿ ಲೂಟಿಯಾಗುತ್ತದೆ ಎಂಬ ಗಂಭೀರ ಆರೋಪಗಳಿವೆ. ಇಂಥ ಸಂದರ್ಭದಲ್ಲಿಯೇ ಈ ವರುಷವೂ ಮಳೆಗಾಲ ಆರಂಭದಲ್ಲಿಯೇ ತುಂಗಭದ್ರ ಜಲಾಶಯದ ಎಲ್​ಎಲ್​ಸಿ ಕಾಲುವೆಯ 1ನೇ ಕಿಲೋಮೀಟರ್​ನಿಂದ 72ನೇ ಕಿಲೋಮಿಟರ್​ವರೆಗೆ ನವೀಕರಣ ಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ: ಹಳ್ಳಿ ಜನರು ತೆರಿಗೆ ಕಟ್ಟಲ್ಲ, ಉದ್ಯಮಿಗಳು ಮಾತ್ರ ಕಟ್ಟುತ್ತಾರೆ ಎಂದು ಕೃಷಿಕರ ಬಗ್ಗೆ ಹಗುರವಾಗಿ ಮಾತನಾಡಿದ ಸಚಿವ ಡಿಕೆಶಿ

ಆರಂಭದಲ್ಲಿ ರೈತರು ಪ್ರತಿವರುಷ ಕಾಮಗಾರಿ ಇದು ಎಂದುಕೊಂಡಿದ್ದರು. ಆದರೆ ಯಾವಾಗ ಕಾಲುವೆ ಅಕ್ಕಪಕ್ಕ ಟಿಬಿ ಡ್ಯಾಂ ಬೋರ್ಡ್ 45 ಅಡಿಯಿದ್ದ ಕಾಲುವೆಯನ್ನು 60 ಅಡಿಗೆ ಅಗಲೀಕರಣ ಮಾಡಿ ಕಾಮಗಾರಿ ಆರಂಭಿಸಿದರೋ ಆಗ ರೈತರು ಅನುಮಾನಗೊಂಡರು.

ಅಗಲೀಕರಣದಿಂದ ರಾಜ್ಯ ರೈತರಿಗೆ ಸಂಕಷ್ಟ ಅನುಭವಿಸಿದರೆ, ಆಂಧ್ರಕ್ಕೆ ಇದು ಲಾಭ ಮಾಡಿಕೊಟ್ಟಂತಾಗುತ್ತದೆ. ಸಮರ್ಪಕವಾಗಿ ಮಾಹಿತಿ, ದಾಖಲೆ ನೀಡದೆ ಕಾಮಗಾರಿ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿ ರೈತರು ಕಳೆದೊಂದು ವಾರದಿಂದ ಸಿರಿಗೇರಿ ಕ್ರಾಸ್ ಸಮೀಪದ ಎಲ್​ಎಲ್​ಸಿ ಕಾಲುವೆ ಬಳಿಯೇ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಇದನ್ನೂ ಓದಿ: Cabinet Expansion; ರಾಜ್ಯ ಸಂಪುಟ ಸೇರಿದ ಆರ್. ಶಂಕರ್, ಹೆಚ್​. ನಾಗೇಶ್; ಪ್ರಮಾಣ ವಚನ ನೀಡಿದ ರಾಜ್ಯಪಾಲ ವಿ.ಆರ್. ವಾಲಾ!
Loading...

ಬಳ್ಳಾರಿ ಹೊಸಪೇಟೆ ತಾಲೂಕಿನ ಕಮಲಾಪುರದಿಂದ ಸಿರುಗುಪ್ಪ ಗಡಿಭಾಗದವರೆಗೆ ಅಂದಾಜು 350 ಕೋಟಿ ವೆಚ್ಚದಲ್ಲಿ ಆರಂಭವಾಗಿದ್ದ ಎಲ್​ಎಲ್​ಸಿ ಕಾಲುವೆ ಅಗಲೀಕರಣ ಕಾಮಗಾರಿ ಸದ್ಯ ಸ್ಥಗಿತಗೊಂಡಿದೆ. ಕಾಮಗಾರಿ ಅಗಲೀಕರಣದ ವಿರುದ್ಧ ರೈತರು ತರ್ಕಬದ್ದವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 45 ಅಡಿ ಅಗಲವಿರುವ ಕಾಲುವೆಯನ್ನು 60 ಅಡಿಗೆ ಅಗಲೀಕರಣ ಮಾಡುತ್ತಿರುವುದೇಕೆ? ಹಾಗೇ ಮಾಡೋದಾದ್ರೆ ಉಪ ಕಾಲುವೆಗಳ ಅಗಲೀಕರಣ ಕೂಡ ಮಾಡಬೇಕಲ್ಲವೇ? ಅದನ್ನು ಬಿಟ್ಟು ಕಾಲುವೆ ಅಗಲೀಕರಣ ಹೆಸರಿನಲ್ಲಿ ಬೆಡ್ಡಿಂಗ್​ಗೆ ಮೂರು ಅಡಿ ಆಳ ತೆಗೆಯುವುದರಿಂದ ರಾಜ್ಯ ರೈತರಿಗೆ ಅನ್ಯಾಯವಾಗುತ್ತದೆ. ರಾಜ್ಯ ಕೋಟಾದಂತೆ ಪ್ರತಿದಿನ 600 ಕ್ಯೂಸೆಕ್ಸ್ ನೀರು ಪಡೆಯುವ ಸಂದರ್ಭದಲ್ಲಿ ಸಮರ್ಪಕವಾಗಿ ನೀರು ತೂಬಿನ ಮೂಲಕ ಹರಿಯುವುದಿಲ್ಲ. ಆಂಧ್ರ ಹಾಗೂ ರಾಜ್ಯ ರೈತರು ಒಂದೇ ವೇಳೆಯಲ್ಲಿ ಕಾಲುವೆ ನೀರು ಪಡೆದರೆ ಮಾತ್ರ ಅನುಕೂಲ. ಆಂಧ್ರ ತನ್ನ ಕೋಟಾದಡಿ ನೀರು ಪ್ರತ್ಯೇಕವಾಗಿ ಪಡೆದರೆ ಕರ್ನಾಟಕದ ರೈತರು ಸಂಕಷ್ಟಕ್ಕೀಡಾಗುತ್ತಾರೆ. ಟಿಬಿ ಬೋರ್ಡ್ ಇದಕ್ಕೆ ಸಂಬಂಧಿಸಿದ ಮಾಹಿತಿ, ದಾಖಲೆಗಳನ್ನು ನೀಡಿ ರೈತರ ಹಿತ ಕಾಪಾಡುವ ಕೆಲಸ ಮಾಡಲಿ ಎಂದು ರಾಜ್ಯ ರೈತ ಸಂಘಟನೆ ಒತ್ತಾಯ ಮಾಡುತ್ತದೆ.

ಇದನ್ನೂ ಓದಿ: ವಿಶ್ವವಿಖ್ಯಾತ ಬೇಲೂರಿನ ಚನ್ನಕೇಶವ ದೇವಾಲಯದಲ್ಲಿ ಬಿರುಕು..!

ಎಲ್​ಎಲ್​ಸಿ ಕಾಲುವೆಯಲ್ಲಿ ಸಾಮಾನ್ಯವಾಗಿ 1,620 ಕ್ಯೂಸೆಕ್ಸ್ ನೀರು ಹರಿಯುತ್ತದೆ. ಈಗ ಅಗಲೀಕರಣ ಹಾಗೂ ಬೆಡ್ಡಿಂಗ್ ಕಾರ್ಯ ಪೂರ್ಣಗೊಂಡರೆ 2,500 ಕ್ಯೂಸೆಕ್ಸ್​ಗಿಂತ ಹೆಚ್ಚು ನೀರು ಹರಿದುಹೋಗಬಹುದು. ಜೊತೆಗೆ ನೀರು ಕೂಡ ಬಹಳ ಬೇಗ ನೆರೆಯ ರಾಜ್ಯದತ್ತ ಹರಿದುಹೋಗುತ್ತದೆ. ತೂಬಿನಲ್ಲಿ ನೀರು ಹರಿಯದೇ ಇರುವುದರಿಂದ ರಾಜ್ಯದ ರೈತರಿಗೆ ಅನ್ಯಾಯವಾಗುತ್ತದೆ ಎಂಬುದು ಸ್ಥಳೀಯ ರೈತ ಮುಖಂಡರ ಆಕ್ರೋಶವಾಗಿದೆ.

ಆದರೆ ಈ ಬಗ್ಗೆ ಟಿಬಿ ಡ್ಯಾಂ ಮುಖ್ಯ ಅಭಿಯಂತರರಾದ ಮಂಜಪ್ಪ ಅವರು ನ್ಯೂಸ್18ಗೆ ಸ್ಪಷ್ಟನೆ ನೀಡಿದ್ದಾರೆ. ಎಲ್​ಎಲ್​ಸಿ ಕಾಲುವೆಯಲ್ಲಿ ಕೇವಲ ನವೀಕರಣ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಮಾಡುವ ಸಂದರ್ಭದಲ್ಲಿ ನೋಡಲು ದೊಡ್ಡದಾಗಿ ಕಾಣಿಸಿರಬಹುದು. ಮೊದಲಿದ್ದ ಕಾಲುವೆ ಗಾತ್ರದಷ್ಟೇ ನೂತನ ಕಾಲುವೆ ಇರುತ್ತದೆ, ಇದರಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದವರು ಸ್ಪಷ್ಟಪಡಿಸುತ್ತಾರೆ.

ಕಾಲುವೆ ಅಗಲೀಕರಣ ಸಂಬಂಧಿಸಿದಂತೆ ಈಗಾಗಲೇ ಟಿಬಿ ಬೋರ್ಡ್ ಅಧಿಕಾರಿಗಳು, ಹೊಸಪೇಟೆ ಉಪ ವಿಭಾಗಾಧಿಕಾರಿ ಸಮಕ್ಷಮದಲ್ಲಿ ಸಭೆ ಜರುಗಿದೆ. ಸಭೆಯಲ್ಲಿ ಅಗಲೀಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ನೀಡದೆ ಕಾಮಗಾರಿ ಆರಂಭಿಸಿರುವುದು ರೈತರಿಗೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಕಾರಣಕ್ಕೆ ಮುಂದಿನ ಸಭೆಯಲ್ಲಿ ಸಂಬಂಧಿಸಿದ ದಾಖಲೆಗಳನ್ನು ಟಿಬಿ ಬೋರ್ಡ್ ರೈತರ ಸಮಕ್ಷಮದಲ್ಲಿ ಜಿಲ್ಲಾಡಳಿತಕ್ಕೆ ನೀಡಬೇಕು. ಈ ಮೊದಲು ರೈತರಿಗೆ ಬರುತ್ತಿದ್ದ ರೀತಿ ನೀರು ಸರಬರಾಜು ಆಗಬೇಕು ಎಂದು ಬರೆದುಕೊಡಿ ಎಂದು ರೈತರು ಒತ್ತಾಯಿಸುತ್ತಿದ್ದಾರೆ. ಸದ್ಯ ಕಾಮಗಾರಿ ಸ್ಥಗಿತಗೊಂಡಿದ್ದರೂ ಮುಂದೇನಾಗುತ್ತದೋ ಕಾದುನೋಡಬೇಕು!

(ವರದಿ: ಶರಣು ಹಂಪಿ)
First published:June 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...