ಬೆಂಗಳೂರು(ಮೇ.11): ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections) ಮುಗಿಯುತ್ತಿದ್ದಂತೆಯೇ, ಇದೀಗ ಎಲ್ಲರ ಚಿತ್ತ ಬಿಡುಗಡೆಯಾದ ಎಕ್ಸಿಟ್ ಪೋಲ್ (Exit Poll) ಫಲಿತಾಂಶಗಳತ್ತ ಮೇಲಿದೆ. ವಿವಿಧ ಪ್ರಮುಖ ಏಜೆನ್ಸಿಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಅಥವಾ ಅತಂತ್ರವಾಗುವ ಸಾಧ್ಯತೆಯ ಭವಿಷ್ಯ ನುಡಿದಿವೆ. ಹೀಗಿರುವಾಗ 2018 ರ ಎಕ್ಸಿಟ್ ಪೋಲ್ನತ್ತ ದೃಷ್ಟಿ ಹರಿಸಿದರೆ ಅಂದು ಕೂಡಾ ಏಜೆನ್ಸಿಗಳು ಬಿಜೆಪಿ (BJP) ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಅಥವಾ ಅತಂತ್ರ ಸ್ಥಿತಿ ಏರ್ಪಡುವ ಭವಿಷ್ಯ ನುಡಿದಿದ್ದವು. ಈ ಸಮೀಕ್ಷೆಗಳು ನೈಜ ಫಲಿತಾಂಶಕ್ಕೆ ಹೋಲಿಕೆಯಾಗುತ್ತಿತ್ತು.
ಇನ್ನು ನಿನ್ನೆ ಸಂಜೆ ಬಿಡುಗಡೆಯಾದ ಕರ್ನಾಟಕ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್ ಅಂಕಿಅಂಶಗಳನ್ನು ಗಮನಿಸುವುದಾದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಅಥವಾ ಹಂಗ್ ಅಸೆಂಬ್ಲಿ ಏರ್ಪಡುವ ಸಾಧ್ಯತೆಗಳನ್ನು ತೋರಿಸಿವೆ. ಹಾಗಾದ್ರೆ ಎಕ್ಸಿಟ್ ಪೋಲ್ ಅನ್ವಯ ಯಾವ ಪಕ್ಷಕ್ಕೆ ಎಷ್ಟು ಸರಾಸರಿ ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು? ಎಂಬ ಲೆಕ್ಕಾಚಾರ ಹೀಗಿದೆ.
ಪ್ರಮುಖ ಸಂಸ್ಥೆಗಳು ಬಿಡುಗಡೆ ಮಾಡಿರುವ ಎಕ್ಸಿಟ್ ಪೋಲ್ ಅಂಕಿಅಂಶಗಳ ವಿಶ್ಲೇಷಣೆಯು ಕಾಂಗ್ರೆಸ್ ಸರಾಸರಿ 109 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ತೋರಿಸಿದೆ, ಆದರೆ ಬಿಜೆಪಿ ಮತ್ತು ಜೆಡಿಎಸ್ ಕ್ರಮವಾಗಿ 90 ಮತ್ತು 24 ಕ್ಷೇತ್ರಗಳಲ್ಲಿ ಗೆಲ್ಲಬಹುದು.
ಇದನ್ನೂ ಓದಿ: Chikkamagaluru: ಇವಿಎಂ ಯಂತ್ರಗಳನ್ನೇ ಮರೆತು ಹೋದ ಅಧಿಕಾರಿಗಳು; ಸಾರ್ವಜನಿಕರಿಂದ ಆಕ್ರೋಶ
ಟ್ರ್ಯಾಕ್ ರೆಕಾರ್ಡ್
2018 ರ ಚುನಾವಣೆಯಲ್ಲಿ, ಹೆಚ್ಚಿನ ಎಕ್ಸಿಟ್ ಪೋಲ್‌ಗಳು ಹಂಗ್ ಅಸೆಂಬ್ಲಿಯ ಭವಿಷ್ಯ ನುಡಿದಿದ್ದವು, ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಹುಮತ ಪಡೆಯುವುದರಿಂದ ವಂಚಿತವಾಗಬಹುದೆನ್ನಲಾಗಿತ್ತು. ವಾಸ್ತವ ಫಲಿತಾಂಶಗಳೂ ಅತಂತ್ರ ಸ್ಥಿತಿ ನಿರ್ಮಿಸಿದ್ದವು. ಬಿಜೆಪಿ 104 ಸ್ಥಾನಗಳಲ್ಲಿ ಗೆದ್ದಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಕ್ರಮವಾಗಿ 80 ಮತ್ತು 38 ಸ್ಥಾನಗಳಲ್ಲಿ ಗೆದ್ದಿದ್ದವು.
ಒಟ್ಟಾರೆಯಾಗಿ ಸಂಸ್ಥೆಗಳು ನಡೆಸಿದ್ದ ಎಕ್ಸಿಟ್ ಪೋಲ್‌ಗಳು ನುಡಿದ ಭವಿಷ್ಯ ವಾಸ್ತವಕ್ಕೆ ಹತ್ತಿರವಾಗಿತ್ತು. ಕೇವಲ ಕಾಂಗ್ರೆಸ್ ಸ್ಥಾನಗಳು ಕುಸಿದು, ಜೆಡಿಎಸ್ ಸ್ಥಾನಗಳು ಹೆಚ್ಚಿದ್ದವು.
ಚುನಾವಣಾ ಪೂರ್ವ ಸಮೀಕ್ಷೆಗಳು vs ಮತಗಟ್ಟೆ ಸಮೀಕ್ಷೆಗಳು
ಈ ಬಾರಿ ಎಕ್ಸಿಟ್ ಪೋಲ್‌ಗಳಂತೆಯೇ, ಹೆಚ್ಚಿನ ಚುನಾವಣಾ ಪೂರ್ವ ಸಮೀಕ್ಷೆಗಳು ಕರ್ನಾಟಕದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುವ ಭವಿಷ್ಯವನ್ನೇ ನುಡಿದಿವೆ. ಆದರೆ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವುದಾಗಿ ಊಹಿಸಿವೆ.
ಇವೆರಡೂ ಸಮೀಕ್ಷೆಗಳನ್ನು ನಡೆಸಿದ ಪೋಲ್ಸ್ಟರ್ ಫಲಿತಾಂಶನ್ನು ಹೋಲಿಕೆ ಮಾಡಿದ್ರೆ ಮಿಶ್ರ ಟ್ರೆಂಡ್ ಸಿಗುತ್ತದೆ. ಆದರೆ ಸಿ ವೋಟರ್ ಮಾತ್ರ ತನ್ನ ಮತದಾನೋತ್ತರ ಸಮೀಕ್ಷೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯುವ ಭವಿಷ್ಯ ನುಡಿದಿತ್ತು. ಆದರೀಗ ಬಿಡುಗಡೆಗೊಳಿಸಿದ ಎಕ್ಸಿಟ್ ಪೋಲ್ನಲ್ಲಿ ಕೂದ್ಲೆಳೆ ಅಂತರದಲ್ಲಿ ಬಹುಮತದಿಂದ ವಂಚಿತವಾಗುವ ಸಾಧ್ಯತೆ ಇದೆ ಎಂದು ಊಹಿಸಿದೆ.
ಏತನ್ಮಧ್ಯೆ, ಸಿಎನ್‌ಎಕ್ಸ್, ಪೀಪಲ್ಸ್ ಪಲ್ಸ್ ಮತ್ತು ಮ್ಯಾಟ್ರಿಜ್ ಬಿಡುಗಡೆ ಮಾಡಿದ ಮತಗಟ್ಟೆ ಸಮೀಕ್ಷೆಯಲ್ಲಿ, ಮತದಾನೋತ್ತರ ಸಮೀಕ್ಷೆಯಲ್ಲಿ ನೀಡಿದ ಸಂಖ್ಯೆಗಿಂತಲೂ ಹೆಚ್ಚಿನ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಅಂದಾಜಿಸಿದೆ.
ಎಕ್ಸಿಟ್ ಪೋಲ್‌ಗಳ ಭವಿಷ್ಯ ವಾಸ್ತವಕ್ಕೆ ಹತ್ತಿರ
ಸಾಮಾನ್ಯ ಚುನಾವಣಾ ಟ್ರೆಂಡ್‌ಗಳನ್ನು ಅಳೆಯಲು ಎಕ್ಸಿಟ್ ಪೋಲ್‌ಗಳನ್ನು ಸಾಮಾನ್ಯವಾಗಿ ಉತ್ತಮ ಸಾಧನವೆಂದು ಪರಿಗಣಿಸಲಾಗುತ್ತದೆ. ಬಹುತೇಕ ಅವುಗಳು ವಾಸ್ತವ ಫಲಿತಾಂಶದ ಆಸುಪಾಸಿನಲ್ಲಿರುತ್ತವೆ. ಒಟ್ಟಾರೆ ಫಲಿತಾಂಶಗಳನ್ನು ಸರಿಯಾಗಿ ಮುನ್ಸೂಚಿಸಿದರೂ 2018 ರ ಚುನಾವಣೆಗಳಲ್ಲಿ ಕಂಡುಬಂದಂತ ಸ್ಥಿತಿಯೂ ಎದುರಿಸಬೇಕಾಗುತ್ತದೆ.
ಹಾಗಾದ್ರೆ ಈ ಬಾರಿ ಮತದಾರರ ಒಲವು ಯಾರೆಡೆ ಇದೆ ಎಂಬುವುದನ್ನು ಅಳೆಯುವಲ್ಲಿ ಸಂಸ್ಥೆಗಳು ಸಫಲವಾಗಿವೆಯೇ ಅಥವಾ ಊಹಿಸುವಲ್ಲಿ ಎಡವಿದ್ದಾರಾ ಎಂಬುದು ಬಹುತೇಕ 48 ಗಂಟೆಗಳಲ್ಲಿ ತಿಳಿಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ