ಬೆಂಗಳೂರು(ಮೇ.10): ರಾಜ್ಯಾದ್ಯಂತ ಬಿರುಸಿನ ಮತದಾನ ನಡೆಯುತ್ತಿದ್ದು, ಹಿರಿಯರು- ಕಿರಿಯರು ಹೀಗೆ ಎಲ್ಲಾ ಮತದಾರರು ತಮ್ಮ ನೆಚ್ಚಿನ ನಾಯಕ/ನಾಯಕಿಗೆ ಮತ ಹಾಕುತ್ತಿದ್ದಾರೆ. ರಾಜಕೀಯ ಗಣ್ಯರು, ಸಿನಿ ತಾರೆಯರೂ ತಮ್ಮ ಹಕ್ಕು ಚಲಾಯಿಸುವಲ್ಲಿ ಹಿಂದೆ ಬಿದ್ದಿಲ್ಲ. ಬೆಳಗ್ಗೆ ಸರಿಯಾಗಿ ಏಳು ಗಂಟೆಗೆ ಎಲ್ಲಾ ಮತಕೇಂದ್ರಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಇನ್ನು ಮೂರು ತಾಸು ಅಂದರೆ ಸಂಜೆ ಆರು ಗಂಟೆವರೆಗೆ ಮತ ಚಲಾಯಿಸಲು ಅವಕಾಶವಿದೆ. 224 ವಿಧಾನಸಭಾ ಕ್ಷೇತ್ರಗಳಿರುವ ಕರ್ನಾಟಕದಲ್ಲಿ ಅಧಿಕಾರಕ್ಕೇರಬೇಕಾದರೆ 113 ಸ್ಥಾನಗಳ ಸರಳ ಬಹುಮತ ಗಳಿಸುವುದು ಅತ್ಯಗತ್ಯ. ಇನ್ನು ಈ ಮತದಾನದ ಭರಾಟೆ ಮಧ್ಯೆ ಎಲ್ಲರ ಚಿತ್ತ ಮತಗಟ್ಟೆ ಸಮೀಕ್ಷೆ ಮೇಲೆ ನೆಟ್ಟಿದೆ. ಆದರೀಗ ಈ ಎಕ್ಸಿಟ್ ಪೋಲ್ ಬಗ್ಗೆ ಚುನಾವಣಾ ಆಯೋಗ ಮಹತ್ವದ ಸೂಚನೆ ಹೊರಡಿಸಿದೆ.
ಚುನಾವಣಾ ಆಯೋಗ, ಮಹತ್ವದ ಆದೇಶ
ಹೌದು ಈಗಾಗಲೇ ಚುನಾವಣಾ ಪೂರ್ವ ಸಮೀಕ್ಷೆಗಳು ಬಂದಿದ್ದು, ಇವುಗಳು ಕೆಲವೊಂದು ಮಾಹಿತಿಗಳನ್ನು ಆಧಾರವಾಗಿಟ್ಟುಕೊಂಡು ಭವಿಷ್ಯ ನುಡಿದಿದೆ. ಹೀಗಿರುವಾಗ ಸದ್ಯ ಎಲ್ಲರ ಚಿತ್ತ ಮತಗಟ್ಟೆ ಸಮೀಕ್ಷೆಯ ಮೇಲೆ ನೆಟ್ಟಿದೆ. ಆದರೀಗ ಈ ಮತಗಟ್ಟೆ ಸಮೀಕ್ಷೆ ಬಗ್ಗೆ ಚುನಾವಣಾ ಆಯೋಗ ಮಹತ್ವದ ಮಾಹಿತಿಯನ್ನು ಹೊರಡಿಸಿದೆ. ಅದರ ಅನ್ವಯ ಸಂಜೆ ಆರು ಗಂಟೆಯವರೆಗೆ ಚುನಾವಣೆಗೆ ಸಂಬಂಧಿಸಿದಂತೆ ಪ್ಯಾನಲ್ ಡಿಸ್ಕಶನ್, ವಿಶ್ಲೇಷಣೆ, ಅಭಿಪ್ರಾಯ ಹಾಗೂ ಇನ್ನಿತರ ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳದಂತೆ ಮಾಧ್ಯಮಗಳಿಗೆ ಸೂಚನೆ ನೀಡಿದೆ. ಇನ್ನು ಎಕ್ಸಿಲ್ ಪೋಲ್ ಪ್ರಕಟಿಸುವ ಬಗ್ಗೆಯೂ ಸಮಯ ನಿಗದಿಪಡಿಸಿರುವ ಚುನಾವಣಾ ಆಯೋಗ ಸಂಜೆ 6.30ರ ಬಳಿಕವೇ ಮತಗಟ್ಟೆ ಸಮೀಕ್ಷೆ ನಿಡಬೇಕೆಂದು ಸೂಚಿಸಿದೆ.
ಇದನ್ನೂ ಓದಿ: Karnataka Election Voting 2023 LIVE: ಕರ್ನಾಟಕ ವಿಧಾನಸಭಾ ಚುನಾವಣೆ- ರಾಜ್ಯದಲ್ಲಿ ಇದುವರೆಗೆ 37.25% ಮತದಾನ
ಇನ್ನು ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಸದ್ಯ ಬಂದಿರುವ ಸಮೀಕ್ಷೆಗಳನ್ವಯ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನೇರ ಸ್ಪರ್ಧೆ ಏರ್ಪಡಲಿದೆ. ಈ ನಡುವೆ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಕೂಡಾ ತನ್ನದೇ ಆದ ದಾಳ ಬೀಸಿದೆ. ಅತ್ತ ಕೇಜ್ರೀವಾಲ್ ನೇತೃತ್ವದ ಆಮ್ ಆದ್ಮಿ ಕೂಡಾ ಹಲವು ಕ್ಷೇತ್ರಗಳಲ್ಲಿ ತನ್ನ ಸ್ಪರ್ಧಿಗಳನ್ನು ಕಣಕ್ಕಿಳಿಸಿದೆ. ಇನ್ನುಳಿದಂತೆ ಎಸ್ಡಿಪಿಐ, ಎಐಎಂಐಎಂ ಸೇರಿ ಇತರ ಸ್ಥಳೀಯ ಪಕ್ಷಗಳು, ಪಕ್ಷೇತರರು ಕಣದಲ್ಲಿದ್ದಾರೆ.
ಕರ್ನಾಟಕ ಚುನಾವಣೆ: ಮತದಾನ ಕೇಂದ್ರಗಳು ಹಾಗೂ ಮತದಾರರ ಸಂಖ್ಯೆ
ರಾಜ್ಯದಲ್ಲಿ 58,282 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಪ್ರತಿ ಮತಗಟ್ಟೆಗೆ ಸರಾಸರಿ ಮತದಾರರನ್ನು 883 ಎಂದು ನಿಗದಿಪಡಿಸಲಾಗಿದೆ. ಒಟ್ಟು 1,320 ಮತಗಟ್ಟೆಗಳನ್ನು ಮಹಿಳಾ ಅಧಿಕಾರಿಗಳು ನಿರ್ವಹಿಸುತ್ತಾರೆ. ಇವುಗಳನ್ನು 'ಪಿಂಕ್ ಬೂತ್'ಗಳೆಂದು ಗುರುತಿಸಲಾಗಿದೆ. ಇನ್ನು 5.24 ಕೋಟಿಗೂ ಅಧಿಕ ಮತದಾರರಲ್ಲಿ ಸುಮಾರು 5.60 ಲಕ್ಷಕ್ಕೂ ಹೆಚ್ಚಿನ ಮಂದಿ ವಿಶೇಷ ಚೇತನರಿದ್ದಾರೆ.
ಕರ್ನಾಟಕದ ರಾಜಕೀಯ ಹೇಗಿತ್ತು?
1985 ರಿಂದ ರಾಜ್ಯದಲ್ಲಿ ಯಾವುದೇ ರಾಜಕೀಯ ಪಕ್ಷವು ಸತತವಾಗಿ ಗೆದ್ದಿಲ್ಲ. ಹೀಗಿರುವಾಗ ಆಡಳಿತಾರೂಢ ಬಿಜೆಪಿ ಬಹುಮತ ಗಳಿಸಿ ಇತಿಹಾಸ ನಿರ್ಮಿಸುತ್ತಾ ಅಥವಾ ಕೇಸರಿ ಪಾಳಯ ಒಡ್ಡಿರುವ ಸವಾಲನ್ನು ಸಮರ್ಥವಾಗಿ ಎದುರಿಸಿ ಕಾಂಗ್ರೆಸ್ ಮೆಜಾರಿಟಿ ಗಳಿಸುತ್ತಾ ಅಥವಾ ಇವೆಲ್ಲವನ್ನೂ ಮೀರಿ ಜೆಡಿಎಸ್ ಪಕ್ಷ ಕಿಂಗ್ ಮೇಕರ್ ಆಗಿ ಮೈತ್ರಿ ಸರ್ಕಾರ ಅಧಿಕಾರಕ್ಕೇರುತ್ತಾ ಎಂಬುವುದು ಕಾದು ನೋಡಬೇಕಿದೆ. ಇನ್ನು 2024ರ ಲೋಕಸಭೆ ಚುನಾವಣೆಗೂ ಮುನ್ನ ನಡೆಯುತ್ತಿರುವ ಈ ಎಲೆಕ್ಷನ್ ಇಡೀ ದೇಶದ ಗಮನಸೆಳೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ