ಹೊಸಕೋಟೆ: ಸಚಿವ ಎಂಟಿಬಿ ನಾಗರಾಜ್ (MTB Nagaraj) ಇಂದು ಹೊಸಕೋಟೆ ಬಿಜೆಪಿ (BJP) ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕಾಂಗ್ರೆಸ್ (Congress) ಅಭ್ಯರ್ಥಿ ಶರತ್ ಬಚ್ಚೇಗೌಡ (Sharath Bache Gowda) ಅವರ ಬಳಿಕ ಶಕ್ತಿ ಪ್ರದರ್ಶನ ಮಾಡಿದ ಎಂಟಿಬಿ ನಾಗರಾಜ್ ಅವರು ಅಪಾರ ಸಂಖ್ಯೆಯ ಬಿಜೆಪಿ ಕಾರ್ಯಕರ್ತರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಹೊಸಕೋಟೆ (Hoskote) ಪಟ್ಟಣ ಕೇಸರಿಮಯವಾದಂತೆ ಕಂಡು ಬಂತು. ಮೆರವಣಿಗೆ ಮೂಲಕ ತೆರಳಿದ ಎಂಟಿಬಿ ನಾಗರಾಜ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ. ಇದರೊಂದಿಗೆ ಶರತ್ ಬಚ್ಚೇಗೌಡ ಅವರಿಗೆ ಸೆಡ್ಡು ಹೊಡೆಯುವ ಮುನ್ಸೂಚನೆಯನ್ನು ನೀಡಿದ್ದಾರೆ.
ರಾಜ್ಯದ ಸಿರಿವಂತ ರಾಜಕಾರಣಿಗಳಲ್ಲಿ ಎಂಟಿಬಿ ನಾಗರಾಜ್ ಒಬ್ಬರು
ನಾಮಪತ್ರ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಎಂಟಿಬಿ ನಾಗರಾಜ್ ಅವರ ತಮ್ಮ ಹಾಗೂ ಕುಟುಂಬ ಆಸ್ತಿಯ ವಿವರಗಳನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದು, ಕಳೆದ ನಾಲ್ಕು ವರ್ಷದಲ್ಲಿ 495 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೆಚ್ಚಳವಾಗಿದೆ. ರಾಜ್ಯದ ರಾಜಕಾರಣಿಗಳಲ್ಲಿ ಅತ್ಯಂತ ಸಿರಿವಂತ ರಾಜಕಾರಣಿಗಳಲ್ಲಿ ಎಂಟಿಬಿ ನಾಗರಾಜ್ ಅವರು ಒಬ್ಬರಾಗಿದ್ದಾರೆ. ಒಟ್ಟಾರೆ ಈ ಬಾರಿ ಅವರು 1,510 ಕೋಟಿ ರೂಪಾಯಿ ಆಸ್ತಿ ಹೊಂದಿರುವುದಾಗಿ ಘೋಷಣೆ ಮಾಡಿದ್ದಾರೆ.
ಕಳೆದ ಬಾರಿಯ ಚುನಾವಣೆಯ ವೇಳೆ ಎಂಟಿಬಿ ಅವರು 1,015 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಣೆ ಮಾಡಿದ್ದರು. ಇದರಂತೆ ಕಳೆದ ನಾಲ್ಕು ವರ್ಷದಲ್ಲಿ ಎಂಟಿಬಿ ಅವರ ಆಸ್ತಿಯಲ್ಲಿ 495 ಕೋಟಿ ರೂಪಾಯಿ ಹೆಚ್ಚಳವಾಗಿದೆ.
ಇನ್ನು, ಈ ಬಾರಿಯ ಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಅವರು ತಮ್ಮ ಪುತ್ರನಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್ಗೆ ಮನವಿ ಮಾಡಿದ್ದರು. ಆದರೆ ಬಿಜೆಪಿ ನಾಯಕರು ಮಗನಿಗೆ ಟಿಕೆಟ್ ನೀಡಲು ನಿರಾಕರಿಸಿ ಎಂಟಿಬಿ ಅವರಿಗೆ ಟಿಕೆಟ್ ನೀಡಿದ್ದರು. ಇದರೊಂದಿಗೆ ಎಂಟಿಬಿ ಅವರೇ ಚುನಾವಣಾ ಅಖಾಡಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ.
ಇತ್ತ ಇಂದು ಬೆಳಗ್ಗೆ ಶಾಸಕ ಶರತ್ ಬಚ್ಚೇಗೌಡ ಅವರು ಪತ್ನಿಯೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಭಾರೀ ಸಂಖ್ಯೆಯಲ್ಲಿ ಬೆಂಬಲಿಗರೊಂದಿಗೆ ಆಗಮಿಸಿದ್ದ ಶರತ್ ಬಚ್ಚೇಗೌಡ ಅವರು ಹರಸಾಹಸಪಟ್ಟು ನಾಮಪತ್ರ ಸಲ್ಲಿಕೆ ಮಾಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಆಗಮಿಸಿದ ಹಿನ್ನೆಲೆಯಲ್ಲಿ ಪೊಲೀಸರು ಬೆಂಬಲಿಗರು ಕಚೇರಿಗೆ ಒಳಗದಂತೆ ಬ್ಯಾರಿಕೇಡ್ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಕಚೇರಿ ಒಳಗೆ ಹೋಗಲು ಶರತ್ ಕಷ್ಟಪಟ್ಟ ಘಟನೆ ನಡೆಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ