ಹುಬ್ಬಳ್ಳಿ(ಜ.03): ಕೊಟ್ಟ ಕುದುರೆ ಏರಲು ಆಗದವನು ವೀರನೂ ಅಲ್ಲ, ಶೂರನೂ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ (KPCC President DK Shivakumar) ವ್ಯಂಗ್ಯವಾಡಿದ್ದಾರೆ. ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಸಿಎಂ ಬೊಮ್ಮಾಯಿ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಅವರೊಬ್ಬ ಅಸಹಾಯಕ ನಾಯಕ ಎಂದು ಲೇವಡಿ ಮಾಡಿದ್ದಾರೆ. ಮೀಸಲಾತಿ ವಿಚಾರದಲ್ಲಿ ತಲೆ ಮೇಲೆ ತುಪ್ಪ ಇಡುವ ಕೆಲಸ ಮಾಡಿದ್ದಾರೆ.
ಹೌದು ಮೀಸಲಾತಿ ವಿಚಾರವಾಗಿ ಮಾತನಾಡಿದ ಡಿಕೆಶಿ ಅದನ್ನು ತಿನ್ನೋಕೂ ಬರಲ್ಲ, ತಲೆ ಮೇಲೆ ಇಟ್ಕೊಳ್ಳೋಕೂ ಬರಲ್ಲ. ಮೂಗಿನ ಮೇಲೆ ತುಪ್ಪ ಸವರಿದ್ದರೆ ಮೂಸಿಯಾದ್ರೂ ನೋಡಬಹುದಿತ್ತು. ನಾಲಿಗೆಯಿಂದ ರುಚಿ ನೋಡಬಹುದಾಗಿತ್ತು. ಆದ್ರೆ ಬೊಮ್ಮಾಯಿ ತಲೆ ಮೇಲೆ ತುಪ್ಪ ಇಟ್ಟಿರೋದ್ರಿಂದ ಯಾರಿಗೂ ಏನೂ ಪ್ರಯೋಜನವಿಲ್ಲ. ಸುಮ್ಮನೇ ಬೊಮ್ಮಾಯಿ ಸುಳ್ಳು ಹೇಳ್ತಿದಾರೆ. ಮೀಸಲಾತಿ ಪ್ರಮಾಣ ಹೆಚ್ಚಳ ಯಾವ ಆಧಾರದ ಮೇಲೆ ಮಾಡ್ತಾರೆ. ಸುಪ್ರೀಂ ಕೋರ್ಟ್ ತೀರ್ಪಿಗೆ ಅನುಗುಣವಾಗಿ ಹೋದ್ರೆ ನಮಗೆ ಏನೂ ಸಿಗಲ್ಲ. ಎಲ್ಲರಿಗೂ ನ್ಯಾಯ ಕೊಡಿ ಅನ್ನೋ ಬೇಡಿಕೆ ನಮ್ಮದು. ಯತ್ನಾಳ್, ಬೆಲ್ಲದ್ ಯಾಕೆ ಮಾತಾಡ್ತಿಲ್ಲ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: BJP Tweet: ಡಿ ಕೆ ಶಿವಕುಮಾರ್ಗೆ ಭಯೋತ್ಪಾದಕರೇ ಬ್ರದರ್ಸ್, ಡಿಕೆಶಿ ವಿರುದ್ಧ ಬಿಜೆಪಿ ಸಾಲು ಸಾಲು ಟ್ವೀಟ್
ಇದೇ ವೇಳೆ ಕೊಟ್ಟ ಕುದುರೆ ಏರಲು ಆಗದವನು ವೀರನೂ ಅಲ್ಲ, ಶೂರನೂ ಅಲ್ಲ ಎಂದು ಸಿಎಂ ಬೊಮ್ಮಾಯಿಗೆ ಡಿಕೆಶಿ ಟಾಂಗ್ ಕೊಟ್ಟಿದ್ದಾರೆ. ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಎಫ್ಐಆರ್ ದಾಖಲಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಅದೆಲ್ಲವನ್ನೂ ಸರ್ಕಾರ ನೋಡಿಕೊಳ್ಳುತ್ತದೆ. ಸರ್ಕಾರ ಆದಷ್ಟೂ ಬೇಗ ಬಿ ರಿಪೋರ್ಟ್ ಕೂಡಾ ಹಾಕ್ತಾರೆ. ಈ ಹಿಂದೆ ಎಷ್ಟು ಪ್ರಕರಣಗಳಲ್ಲಿ ಬಿ ರಿಪೋರ್ಟ್ ಮಾಡಿಲ್ಲ..? ಇದನ್ನೂ ಅಷ್ಟೇ ಬೇಗ ಬಿ ರಿಪೋರ್ಟ್ ಹಾಕ್ತಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ನಲ್ಲಿ ನೋ ಮ್ಯಾಚ್ ಫಿಕ್ಸಿಂಗ್
ಕಾಂಗ್ರೆಸ್ ನಲ್ಲಿ ನೋ ಫಿಕ್ಸಿಂಗ್. ನನ್ನ ಅಧ್ಯಕ್ಷತೆಯಲ್ಲಿ ಒಳ ಒಪ್ಪಂದಕ್ಕೆ ಅವಕಾಶ ನೀಡಲ್ಲ ಎಂದು ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾಂಗ್ರೆಸ್ ನ ಮೊದಲ ಪಟ್ಟಿ ಬಹುತೇಕ ಸಿದ್ದಗೊಂಡಿದೆ. ಟಿಕೆಟ್ಗಾಗಿ ಕಾಂಗ್ರೆಸ್ ನಲ್ಲಿ ಯಾವುದೇ ಕಿತ್ತಾಟ ನಡೆದಿಲ್ಲ. ಜಗದೀಶ್ ಶೆಟ್ಟರ್ ಸೇರಿ ಬಿಜೆಪಿ ನಾಯಕರ ಕ್ಷೇತ್ರಗಳಲ್ಲಿಯೂ ಪೈಪೋಟಿ ನಡೆದಿದೆ. ಬೇರೆ ಪಕ್ಷದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಯಬಹುದು. ಕಾಂಗ್ರೆಸ್ ಪಕ್ಷದಲ್ಲಿ ಮ್ಯಾಚ್ ಫಿಕ್ಸಿಂಗ್ ಗೆ ಅವಕಾಶ ನೀಡಲ್ಲ ಎಂದಿದ್ದಾರೆ.
ಇನ್ನು ಕಾಂಗ್ರೆಸ್ ನಾಯಕರನ್ನು ಸೋಲಿಸಲು ಕಾಂಗ್ರೆಸ್ ನಾಯಕರಿಂದಲೇ ಫಿಕ್ಸಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಅದೆಲ್ಲವೂ ಮಾಧ್ಯಮಗಳ ಸೃಷ್ಟಿ ಎಂದರು.
ಹಾಲಿ ಶಾಸಕರ ಬಗ್ಗೆ ಶೇಕಡಾ 95 ರಷ್ಟು ಜನರಿಗೆ ಟಿಕೆಟ್ ಸಿಗೋದು ಖಚಿತ. ಅಪರೇಷನ್ ಕಮಲಕ್ಕೆ ಗುರಿಯಾಗಿ ಬಿಜೆಪಿಗೆ ಹೋದವರ ಮರು ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜಕೀಯದಲ್ಲಿ ಏನು ಬೇಕಾದರೂ ನಡೆಯಬಹುದು. ಅವರು ಯಾರೂ ಇದುವರೆಗೆ ಅರ್ಜಿ ಸಲ್ಲಿಸಿಲ್ಲ. ಅರ್ಜಿ ಕೊಟ್ಟ ಮೇಲೆ ಹೇಳ್ತೇನೆ. ಕಾಂಗ್ರೆಸ್ ನಲ್ಲಿ ಯಾವುದೇ ಬಣಗಳಿಲ್ಲ. ಮಾಜಿ ಸಚಿವ ಸಂತೋಷ್ ಲಾಡ್ ರಾಷ್ಟ್ರೀಯ ನಾಯಕರಿದ್ದಾರೆ ಎಂದು ಡಿಕೆಸಿ, ಸಂತೋಷ್ ಲಾಡ್ ಗೆ ಟಾಂಗ್ ಕೊಟ್ಟರು. ನನ್ನನ್ನು ಮತ್ತು ಸಿದ್ದರಾಮಯ್ಯ ಅವರನ್ನು ಚುನಾವಣೆಗೆ ಸ್ಪರ್ಧಿಸದೆ ರೆಸ್ಟ್ ಮಾಡುವಂತೆ ಹೇಳಿದ್ದಾರೆ. ಅವರ ಸಲಹೆಯನ್ನು ನಾನು ಗಂಭೀರವಾಗಿ ಪರಿಗಣಿಸುತ್ತೇನೆ ಎಂದರು.
ಬಿಜೆಪಿಯವರದ್ದು ಸುಳ್ಳಿನ ಯೂನಿವರ್ಸಿಟಿ
ಬಿಜೆಪಿಯವರದ್ದು ಸುಳ್ಳಿನ ಯುನಿವರ್ಸಿಟಿ ಎಂದು ಡಿ. ಕೆ. ಶಿವಕುಮಾರ್ ಕಿಡಿಕಾರಿದ್ದಾರೆ. ಮಹದಾಯಿ ವಿಚಾರದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು ಮೂರು ವರ್ಷದಿಂದ ಯೋಜನೆ ಜಾರಿಗೊಳಿಸಲು ಆಗಿಲ್ಲ. ಮೂರು ರಾಜ್ಯದಲ್ಲಿ ಅವರದ್ದೇ ಸರ್ಕಾರ ಇದೆ, ಯೋಜನೆ ಜಾರಿ ಮಾಡಲು ಆಗಿಲ್ಲ. ಈಗ ನಾವು ರೈತರು ಸೇರಿ ಹೋರಾಟ ಮಾಡಿ ಒಂದು ಹಂತಕ್ಕೆ ತಂದಿದ್ದೇವೆ. ಸುಪ್ರೀಂ ಕೋರ್ಟ್ ತೀರ್ಪಿಗೆ ಒಳಪಟ್ಟು ಕಾಮಗಾರಿ ಆರಂಭಿಸಿ ಎಂದು ಪತ್ರ ಸಿದ್ದಪಡಿಸಿದ್ದಾರೆ. ಗೋವಾ ಮಂತ್ರಿಯೊಬ್ಬ ರಾಜೀನಾಮೆ ಕೊಡ್ತಾರಂತೆ, ಕೊಡಲಿ ಬಿಡಿ. ರಾಜ್ಯದಲ್ಲಿ 26 ಸಂಸದರು ಬಿಜಪಿಯವರಿದ್ದಾರೆ.
ಸುಮಲತಾ ಕೂಡ ಬಿಜೆಪಿ ಅಸೋಸಿಯೇಟ್ ಮೆಂಬರ್..!
ಮಹದಾಯಿಗಾಗಿ ಇವರೆಲ್ಲ ಸೇರಿ ಪ್ರಧಾನಮಂತ್ರಿಗಳ ಬಳಿ ಒಮ್ಮೆಯೂ ಮಾತನಾಡಿಲ್ಲ. ನೀರು ಹರಿಸುವ ಮುನ್ನ ಕಾಮಗಾರಿಯಾದ್ರು ಪೂರ್ಣಗೊಳಿಸಬೇಕಿತ್ತು. ಕಾಂಗ್ರೆಸ್ ಔಟ್ ಡೇಟೆಡ್ ಎಂಬ ಜೋಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಹ್ಲಾದ್ ಜೋಶಿ ಎಷ್ಟೊಂದು ಅಪ್ಡೇಟ್ ಇದ್ದಾರೆ ಅನ್ನೊದು, ಪತ್ರ ಓದಲಿ ಗೊತ್ತಾಗುತ್ತೆ. ಕೇಂದ್ರ ಸರ್ಕಾರ ಅನುಮತಿ ನೀಡಿದ ಪತ್ರದಲ್ಲಿ ಕಂಡೀಷನ್ ಹಾಕಿದ್ದಾರೆ. ನಾವೆಲ್ಲ ಸತ್ತ ಮೇಲೆ ಸುಪ್ರೀಂ ಕೋರ್ಟ್ ತೀರ್ಪು ಬರುತ್ತಾ? ಕೊಡ್ರೀ ನಮಗೆ ಅಧಿಕಾರನಾ, ಆರು ತಿಂಗಳಲ್ಲಿ ಆ ಯೋಜನೆಯನ್ನು ಬಡಿದುಹಾಕ್ತಿನಿ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ