ಹುಬ್ಬಳ್ಳಿ(ಏ.14): ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ದೆಹಲಿಗೆ (Delhi) ದೌಡಾಯಿಸಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಹುಬ್ಬಳ್ಳಿಗೆ ವಾಪಸ್ಸಾಗಿದ್ದಾರೆ. ದೆಹಲಿಯಲ್ಲಿ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಹೇಳಲಾಗದ್ದು, ಮೂರನೇ ಪಟ್ಟಿಯಲ್ಲಿ ಖಂಡಿತಾ ನನ್ನ ಹೆಸರು ಸೇರಿರುತ್ತೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ ಜೊತೆ ಸುದೀರ್ಘ ಚರ್ಚೆ ನಡೆಸಿದ್ದೇನೆ. ನನ್ನ ಭಾವನೆಗಳನ್ನು ಅವರ ಬಳಿ ಬಿಚ್ಚಿಟ್ಟಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬೇರೆ ನಾಯಕರ ಜೊತೆ ಚರ್ಚಿಸಿದ ನಂತರ ತಿಳಿಸುವುದಾಗಿ ಹೇಳಿದ್ದಾರೆ ಎಂದಿದ್ದಾರೆ.
ಯಾರನ್ನೆಲ್ಲಾ ಬೇಟಿಯಾಗಿದ್ದಾರೆ ಶೆಟ್ಟರ್?
ದೆಹಲಿಯಲ್ಲಿ ಬೇರೆ ಯಾವ ನಾಯಕರನ್ನೂ ಭೇಟಿಯಾಗಿಲ್ಲ. ಬೆಂಗಳೂರಿನಲ್ಲಿ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದೇನೆ. ಅವರೂ ಸಹ ಹೈಕಮಾಂಡ್ ಜೊತೆ ಮಾತನಾಡಿರುವುದಾಗಿ ಹೇಳಿದ್ದಾರೆ. ಜಗದೀಶ್ ಶೆಟ್ಟರ್ ಒಂದೇ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಉತ್ತರ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿಗೆ ನೆರವಾಗಲಿದೆ ಅಂತ ಅವರು ಹೈಕಮಾಂಡ್ ಗೆ ಮನವರಿಕೆ ಮಾಡಿದ್ದಾರೆ. ಇದೇ ವೇಳೆ ಟಿಕೆಟ್ ಕೈತಪ್ಪಲು ಸಿಎಂ ಬೊಮ್ಮಾಯಿ ಜೊತೆಗಿನ ಮುನಿಸು ಕೂಡಾ ಕಾರಣ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾರ ಬಗ್ಗೆಯೂ ನಾನು ಮಾತನಾಡುವುದಿಲ್ಲ. ನನ್ನ ವಿಚಾರಗಳನ್ನು ಹೈಕಮಾಂಡ್ ಗೆ ತಿಳಿಸಿದ್ದೇನೆ ಅಷ್ಟೇ ಎಂದಿದ್ದಾರೆ.
ಇದನ್ನೂ ಓದಿ: HD Kumaraswamy: 'ಎಚ್‌ಡಿಕೆಗೆ 2 ಸಲ ಹಾರ್ಟ್ ಆಪರೇಷನ್ ಆಗಿದೆ’ -ಸಹೋದರ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಎಚ್‌ಡಿ ರೇವಣ್ಣ ಕಾಳಜಿ!
ಮಗನಿಗೆ ಟಿಕೆಟ್ ಕೇಳಿಲ್ಲ
ನನ್ನ ಮಗನಿಗೆ ಟಿಕೆಟ್ ಕೇಳಿಲ್ಲ. ಕುಟುಂಬದ ಸದಸ್ಯರಿಗೆ ಟಿಕೆಟ್ ಬೇಕೆಂದು ಹೇಳಿಲ್ಲ. ನನಗೇ ಟಿಕೆಟ್ ಕೊಡಬೇಕೆಂದು ಕೇಳಿದ್ದೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಎರಡನೆಯ ಪಟ್ಟಿಯಲ್ಲಿಯೂ ಹೆಸರು ಬಾರದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ಮಾತುಕತೆಗೂ ಮುನ್ನವೇ ಆ ಪಟ್ಟಿ ಸಿದ್ಧಗೊಂಡಿತ್ತು. ಹಾಗಾಗಿ ಅದನ್ನೇ ಪ್ರಕಟಿಸಿದ್ದಾರೆ. ನಾನು ಮಾತುಕತೆ ಮಾಡೋ ಸಂದರ್ಭದಲ್ಲಿ ಬಿಡುಗಡೆಯಾಗಿದೆ ಎಂದು ಶೆಟ್ಟರ್ ತಿಳಿಸಿದರು.
ಶೆಟ್ಟರ್ ನಿವಾಸದಲ್ಲಿ ಅಭಿಮಾನಿಗಳ ಸಂಭ್ರಮ
ಮತ್ತೊಂದೆಡೆ ದೆಹಲಿ ಮತ್ತು ಬೆಂಗಳೂರು ವರಿಷ್ಠರ ಭೇಟಿಯ ಬಳಿಕ ತವರಿಗೆ ವಾಪಸಾದ ಮಾಜಿ ಸಿಎಂ ಜಗದೀಶ್ ಶೆಟ್ಟರನ್ನು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಹುಬ್ಬಳ್ಳಿ ನಿವಾಸದಲ್ಲಿ ಜಮಾಯಿಸಿದ್ದ ಬೆಂಬಲಿಗರ ದಂಡು, ಶೆಟ್ಟರ್ ಆಗಮಿಸುತ್ತಿದ್ದಂತೆಯೇ ಜಯಘೋಷ ಹಾಕಿದರು. ತಮ್ಮ ಮನೆ ಮುಂದೆ ನಗು ಮುಖದಿಂದ ಕಾರ್ಯಕರ್ತರತ್ತ ಕೈ ಬೀಸಿದ ಶೆಟ್ಟರ್, ವಿಕ್ಟರಿ ಸಿಂಬಲ್ ತೋರಿಸಿದರು. ಬೆಂಗಲಿಗರು ಕೇಕ ಹಾಕಿ ಸಂಭ್ರಮಿಸಿದರು.
ಇದನ್ನೂ ಓದಿ: Cash Seize: ಕೆಟ್ಟು ನಿಂತ ಆಟೋದಲ್ಲಿತ್ತು ಒಂದು ಕೋಟಿ ರೂಪಾಯಿ ಹಣ! ಚುನಾವಣಾ ಕಣದಲ್ಲಿ ಝಣ ಝಣ ಕಾಂಚಾಣ!
ಟಿಕೆಟ್ ಕೈತಪ್ಪಿದ್ದಕ್ಕೆ ನಿಂಬೆಣ್ಣವರ ಆಕ್ರೋಶ
ಬಿಜೆಪಿ ಹೈಕಮಾಂಡ್ ವಿರುದ್ಧ ಕಲಘಟಗಿ ಶಾಸಕ ಸಿ.ಎಂ.ನಿಂಬಣ್ಣವರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯೂಸ್ 18 ಜೊತೆ ಮಾತನಾಡಿದ ಅವರು, ಪಕ್ಷಕ್ಕಾಗಿ ದುಡಿಯೋರು ಒಬ್ಬರು. ಅಧಿಕಾರ ಅನುಭವಿಸೋರು ಮತ್ತೊಬ್ಬರು. ಸೌಜನ್ಯಕ್ಕಾದ್ರೂ ಒಂದು ಮಾತು ಹೇಳಲಿಲ್ಲ. ಹಾಲಿ ಶಾಸಕ ಆಗಿದ್ದರೂ ನನ್ನ ಅಭಿಪ್ರಾಯ ಕೇಳಿಲ್ಲ. ಧ್ವಜ ಕಟ್ಟೋಕೆ ನಾವು ಬೇಕು. ಟಿಕೆಟ್ ಗಾಗಿ ಬೇರೊಬ್ಬರು ಬೇಕು ಅಂದ್ರೆ ಹೇಗೆ..? ಬಿಜೆಪಿಯಲ್ಲಿ ಪ್ರಜಾಪ್ರಭುತ್ವ ಎಲ್ಲಿದೆ, ಕೊನೆಗೂ ನನಗೆ ಟಿಕೆಟ್ ತಪ್ಪಿಸಿದ್ದಾರೆ. ವಯಸ್ಸಿನ ಕಾರಣ ಹೇಳ್ತಾರೆ. ನನಗಿಂತ ಹಿರಿಯರಾದ ಬಸವರಾಜ ಹೊರಟ್ಟಿಗೆ ಟಿಕೆಟ್ ಕೊಟ್ರು. ನಂತ್ರ ಪರಿಷತ್ ಸಭಾಪತಿಯನ್ನಾಗಿ ಮಾಡಿದ್ರು. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯವೇ? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ ಪಕ್ಷ ನಿಮ್ಮ ಸ್ವಂತ ಆಸ್ತಿಯೇನು..? ಎಲ್ಲ ಹಳ್ಳಿಗಳಲ್ಲಿಯೂ ನನಗೆ ಬಲವಿದೆ. ಆದ್ರೆ ನಾನು ಚುನಾವಣೆ ಎದುರಿಸಲು ಸಿದ್ಧನಿಲ್ಲ. ನಾನು, ನನ್ನ ಮಗ ಚುನಾವಣಾ ಅಖಾಡಕ್ಕಿಳಿಯೋ ವಿಚಾರವಿಲ್ಲ. ಕಾರ್ಯಕರ್ತರ ಅಭಿಪ್ರಾಯ ಕೇಳಿ ಮುಂದಿನ ನಡೆ ಅನುಸರಿಸ್ತೇನೆ. ಬಿಜೆಪಿ ನಾಯಕರ ನಡೆಯಿಂದ ಘಾಸಿಯಾಗಿದೆ. ಪಕ್ಷಾಂತರಿಗೇ ಟಿಕೆಟ್ ನೀಡಬೇಕೆಂದು ಮೊದಲೇ ನಿರ್ಧರಿಸಿದ್ದರು. ಮೊದಲು ಸಂತೋಷ್ ಲಾಡ್ ಬಿಜೆಪಿಗೆ ಕರೆತರೋ ಯತ್ನ ನಡೆದಿತ್ತು. ಈಗ ಲಾಡ್ ಬದಲಿಗೆ ನಾಗರಾಜ ಛಬ್ಬಿಯನ್ನು ಕರೆತಂದಿದ್ದಾರೆ. ಇಪ್ಪತ್ತು ವರ್ಷ ಕಟ್ಟಿದ ನಾನೆಲ್ಲಿ ಹೋಗಬೇಕು ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು. ಅಂತಿಮವಾಗಿ ಚುನಾವಣೆಯೊ, ರಾಜಕೀಯ ನಿವೃತ್ತಿಯೋ ಶೀಘ್ರವೇ ತೀರ್ಮಾನಿಸ್ತೇನೆ ಎಂದೂ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ