ಬೆಂಗಳೂರು: ತಮಿಳುನಾಡು (Tamil Nadu) ಬಿಜೆಪಿ ರಾಜ್ಯಾಧ್ಯಕ್ಷ, ಕರ್ನಾಟಕ ಬಿಜೆಪಿ (BJP) ಚುನಾವಣಾ ಉಸ್ತುವಾರಿ ಅಣ್ಣಾಮಲೈ (Annamalai) ವಿರುದ್ಧ ಕೇಳಿ ಬಂದಿದ್ದ ಹೆಲಿಕಾಪ್ಟರ್ನಲ್ಲಿ ಹಣ ಸಾಗಾಟ ಆರೋಪಕ್ಕೆ ಚುನಾವಣಾ ಆಯೋಗ (Election Commission) ಸ್ಪಷ್ಟನೆ ನೀಡಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗಿಲ್ಲ ಎಂದು ಚುನಾವಣಾ ಆಯೋಗ ಪ್ರತಿಕಾ ಹೇಳಿಕೆಯಲ್ಲಿ ಸ್ಪಷ್ಟನೆ ನೀಡಿದೆ. ಏಪ್ರಿಲ್ 17 ರಂದು ಉಡುಪಿ (Udupi) ಆಗಮಿಸಿದ ವೇಳೆ ಫ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿ ತಪಾಸಣೆ ನಡೆಸಿದ್ದರು, ಅಲ್ಲದೆ ಉಡುಪಿಯಲ್ಲಿ ಅಣ್ಣಾಮಲೈ ತಂಗಿದ್ದ ಹೋಟೆಲ್ ರೂಮ್ (Hotel Room)ಅನ್ನು ತಪಾಸಣೆ ನಡೆಸಿದ್ದರು. ಆದರೆ ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಉಡುಪಿ ಪ್ರವಾಸದ ವೇಳೆ ಹೆಲಿಕಾಪ್ಟರ್ ನಲ್ಲಿ (Helicopter) ಹಣ ಸಾಗಾಟ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಈ ಬಗ್ಗೆ ಪ್ರತಿಕಾ ಹೇಳಿಕೆ ಬಿಡುಗಡೆ ಮಾಡಿರುವ ಚುನಾವಣಾ ಆಯೋಗ, ಭಾರತೀಯ ಜನತಾ ಪಕ್ಷದ ತಮಿಳುನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ತಾವು ಬಳಸಿದ ಹೆಲಿಕಾಪ್ಟರ್ ನಲ್ಲಿ ನಗದು ಹಣವನ್ನು ತೆಗೆದುಕೊಂಡು ಬಂದಿದ್ದಾರೆ ಎಂಬ ಆರೋಪದ ಮಾಧ್ಯಮ ವರದಿಗೆ ಸಂಬಂಧಿಸಿದಂತೆ, ಉಡುಪಿ ಜಿಲ್ಲೆಯ ಜಿಲ್ಲಾ ಚುನಾವಣಾಧಿಕಾರಿಗಳು, ಚುನಾವಣಾ ನೀತಿ ಸಂಹಿತೆಯ ಪ್ರಕಾರ, ತಮಿಳುನಾಡಿನ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಉಡುಪಿ ಜಿಲ್ಲೆಗೆ ಆಗಮಿಸುವ ಮತ್ತು ನಿರ್ಗಮಿಸುವ ಪ್ರತಿ ಹಂತದಲ್ಲಿ ಸೂಕ್ತ ತಪಾಸಣೆಯನ್ನು ನಡೆಸಲಾಗಿದೆ ಎಂದು ವರದಿ ನೀಡಿದ್ದಾರೆ.
ಇದನ್ನೂ ಓದಿ: K Annamalai: ಹೆಲಿಕಾಪ್ಟರ್ನಲ್ಲಿ ಹಣ ತಂದ್ರಾ ಅಣ್ಣಾಮಲೈ? ಏನಿದು ಗಂಭೀರ ಆರೋಪ?
ತಪಾಸಣೆಯ ವಿವರ ಈ ಕೆಳಕಂಡಂತಿದೆ.
1. ಹೆಲಿಕಾಪ್ಟರ್ ಮೂಲಕ 17-04-2023ರ ಬೆಳಿಗ್ಗೆ 9.55 ಕ್ಕೆ ಉಡುಪಿಗೆ ಆಗಮಿಸಿದ್ದನ್ನು ಸಂಚಾರಿ ಪರಿವೀಕ್ಷಣಾ ತಂಡ – III ( ಫ್ಲೈಯಿಂಗ್ ಸ್ಕ್ವಾಡ್ ತಂಡ) ತಪಾಸಣೆ ಹಾಗೂ ಪರಿಶೀಲನೆ ನಡೆಸಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆಗಿಲ್ಲವೆಂದು ವರದಿ ಮಾಡಲಾಗಿದೆ.
2. ಹೆಲಿಪ್ಯಾಡ್ ನಿಂದ ಉಡುಪಿಯ ಓಷನ್ ಪರ್ಲ್ ಹೋಟೆಲ್ ಗೆ ಬಂದ ವಾಹನವನ್ನು ಫ್ಲೈಯಿಂಗ್ ಸ್ಕ್ವಾಡ್ ತಂಡ ಹಾಗೂ ಜಿಎಸ್ ಟಿ ತಂಡ ಜಂಟಿಯಾಗಿ ತಪಾಸಣೆ ಮತ್ತು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ, ಒಂದು ಬ್ಯಾಗ್ ನಲ್ಲಿ ಎರಡು ಜೊತೆ ಬಟ್ಟೆ ಹಾಗೂ ಕುಡಿಯುವ ನೀರಿನ ಬಾಟಲ್ ದೊರೆತಿದ್ದು, ನೀತಿ ಸಂಹಿತೆಯ ಉಲ್ಲಂಘನೆ ಆಗಿಲ್ಲವೆಂದು ತಂಡಗಳು ವರದಿ ಮಾಡಿದೆ.
3. ನಂತರ ಅದೇ ವಾಹನ 121-ಕಾಪು ವಿಧಾನಸಭಾ ಕ್ಷೇತ್ರಕ್ಕೆ ತೆರಳುವ ಮಾರ್ಗ ಮಧ್ಯೆ ಉದ್ಯಾವರ ಚೆಕ್ ಪೋಸ್ಟ್ ಬಳಿ ಸ್ಥಿರ ಕಣ್ಗಾವಲು ತಂಡ, ವಾಹನವನ್ನು ತಪಾಸಣೆ ಮತ್ತು ಪರಿಶೀಲನೆ ನಡೆಸಿ, ನೀತಿ ಸಂಹಿತೆಯ ಯಾವುದೇ ಉಲ್ಲಂಘನೆ ಆಗಿಲ್ಲವೆಂದು ವರದಿಯನ್ನು ಸಲ್ಲಿಸಿದೆ.
4. ನಂತರ ಶ್ರೀ ಅಣ್ಣಾಮಲೈ ಅವರು ಕಾಪು ಕ್ರೀಡಾಂಗಣದಲ್ಲಿ ಭಾಜಪ ಪಕ್ಷದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಹಾಗೂ ಅವರು ಕಾರ್ಯಕ್ರಮಕ್ಕೆ ತೆರಳಲು ಬಳಸಿದ ವಾಹನವನ್ನು ಶ್ರೀ ಅಬ್ದುಲ್ ರಜಾಕ್ ಬಿ.ಎಂ. ನೇತೃತ್ವದ ಫ್ಲೈಯಿಂಗ್ ಸ್ಕ್ವಾಡ್ ತಂಡವು ತಪಾಸಣೆ ನಡೆಸಿ, ನೀತಿ ಸಂಹಿತೆಯ ಉಲ್ಲಂಘನೆಯಾಗಿಲ್ಲವೆಂದು ವರದಿ ನೀಡಿದೆ.
5. ನಂತರ ಮಧ್ಯಾಹ್ನ 2 ಗಂಟೆಗೆ ಅವರು ಉಡುಪಿಯ ಕಡ್ಯಾಳಿಯಲ್ಲಿರುವ ಓಷನ್ ಪರ್ಲ್ ಹೋಟೆಲ್ ಗೆ ಮರಳಿ ಬಂದ ಸಂದರ್ಭದಲ್ಲಿ, ಹೋಟೆಲ್ ನ ಕೊಠಡಿ, ಲಗೇಜ್ ಗಳನ್ನು ತಪಾಸಣಾ ತಂಡವು ತಪಾಸಣೆ ನಡೆಸಿ, ನೀತಿಸಂಹಿತೆಯ ಉಲ್ಲಂಘನೆಯಾಗಿಲ್ಲವೆಂದು ವರದಿ ಮಾಡಿದೆ.
6. ನಂತರ ಅವರು ಹೋಟೆಲ್ ನಿಂದ ನಿರ್ಮಮಿಸಿ, ಅದೇ ವಾಹನದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ತೆರಳಿದರು.
ಮೇಲ್ಕಂಡ ಎಲ್ಲ ಅಂಶಗಳಂತೆ, ಆರೋಪ ಕುರಿತ ಮಾಧ್ಯಮ ವರದಿ ತಪ್ಪು ಎಂದು ಸ್ಪಷ್ಟೀಕರಣ ನೀಡಲಾಗಿದೆ. ಈ ಮಾಧ್ಯಮ ಸ್ಪಷ್ಟೀಕರಣವನ್ನು ಎಲ್ಲಾ ಮಾಧ್ಯಮದವರು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಬೇಕೆಂದು ವಿನಂತಿಸಲಾಗಿದೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ