ರಾಜ್ಯಕ್ಕೆ ರಾಜ್ಯವೇ ಚುನಾವಣೆ (Election) ಗುಂಗಿನಲ್ಲಿದೆ. ರಾಜ್ಯದಲ್ಲಿ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಪ್ರಬಲ ಪಕ್ಷಗಳ ಮತಬೇಟೆ ಚುರುಕಾಗಿದೆ. ಈ ಬಾರಿ ಶತಾಯಗತಾಯ ಕಮಲ ಪಾಳೆಯಿಂದ ಅಧಿಕಾರವನ್ನು ಪಡೆಯಲು ಕಾಂಗ್ರೆಸ್ (Congress), ಜೆಡಿಎಸ್ (JDS) ಪಕ್ಷಗಳ ರಣಕಲಿಗಳು ಭರ್ಜರಿ ಮತಬೇಟೆಗೆ ಇಳಿದಿದ್ದರೆ. ಆದರೆ ಕರ್ನಾಟಕ ವಿಧಾನಸಭೆಗೆ ಚುನಾವಣೆ (Karnataka Assembly Elections 2023) ದಿನಾಂಕ ಘೋಷಣೆಯಾಗಿ ವಾರ ಕಳೆದರೂ ಬಿಜೆಪಿ (BJP) ಮಾತ್ರ ಇದುವರೆಗೂ ಅಭ್ಯರ್ಥಿಗಳ ಟಿಕೆಟ್ ಪಟ್ಟಿಯನ್ನು ಘೋಷಿಸಿಲ್ಲ.
ಇನ್ನೂ ಟಿಕೆಟ್ ನೀಡಿಲ್ಲ ಬಿಜೆಪಿ
ಹೌದು, ಬಿಜೆಪಿ ಪಾಳಯದಲ್ಲಿ ಟಿಕೆಟ್ ಹಂಚಿಕೆಯದ್ದೇ ದೊಡ್ಡ ಸುದ್ದಿಯಾಗಿದೆ. ಜನಸಾಮಾನ್ಯರು ಕೂಡ ಯಾಕೆ ಇನ್ನೂ ಬಿಜೆಪಿ ಟಿಕೆಟ್ ನೀಡಿಲ್ಲ ಅಂತಾ ಗೊಂದಲದಲ್ಲಿದ್ದಾರೆ. ಬಿಜೆಪಿಯ ಈ ನಡೆ ಹಿಂದೆ ಕೆಲ ಕಾರಣಗಳು ಕೂಡ ಇವೆ ಎನ್ನಬಹುದು.
ಕರ್ನಾಟಕದಲ್ಲಿ ನಡೆಯಬಹುದಾದ ಯಾವುದೇ ತಪ್ಪು ನಡೆಯನ್ನು ತಪ್ಪಿಸಲು ಬಿಜೆಪಿ ಮೇ 10ರ ಚುನಾವಣೆಗೆ ಗೆಲ್ಲಬಹುದಾದ ಅಭ್ಯರ್ಥಿಗಳನ್ನು ಗುರುತಿಸಲು ರಾಜ್ಯಾದ್ಯಂತ ಮಿನಿ ಸಮೀಕ್ಷೆಗಳನ್ನು ಪ್ರಾರಂಭಿಸಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಕಮಲ ಪಡೆ ತನ್ನ ಟಿಕೆಟ್‌ಗಳನ್ನು ಕಾಯ್ದಿರಿಸಿಕೊಂಡಿದ್ದು, ಕಾದು ನೋಡುವ ತಂತ್ರವನ್ನು ಅಳವಡಿಸಿಕೊಂಡಿದೆ.
ಇದನ್ನೂ ಓದಿ: YSV Datta: ಕಡೂರು ಟಿಕೆಟ್ 'ಕೈ' ತಪ್ಪಿದ್ದಕ್ಕೆ ರೆಬೆಲ್ ಆದ ದತ್ತಾ, ಟವೆಲ್ ಗುರುತಿನಡಿ ಸ್ವತಂತ್ರವಾಗಿ ಕಣಕ್ಕೆ!
ಕರ್ನಾಟದಲ್ಲಿ ಸದ್ಯ ಆಡಳಿತಾರೂಢ ಪಕ್ಷ ಬಿಜೆಪಿಯು ತನ್ನ ಕರ್ನಾಟಕದ ಹಾಲಿ ಶಾಸಕರನ್ನು ಇನ್ನೂ ಹೆಸರಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಚುನಾವಣೆಯ ನಿರ್ಧಾರಗಳನ್ನು ಕೈಗೊಳ್ಳುವ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯು ಏಪ್ರಿಲ್ ಎರಡನೇ ವಾರದಲ್ಲಿ ಸಭೆ ಸೇರಲಿದೆ.
ಚುನಾವಣೆಗೆ ನಾಮನಿರ್ದೇಶನ ಪ್ರಕ್ರಿಯೆಯ ಸಮೀಪದಲ್ಲಿ ಪಕ್ಷವು ತನ್ನ ಅಭ್ಯರ್ಥಿಗಳನ್ನು ಘೋಷಿಸುವ ಸಾಧ್ಯತೆಯಿದೆ. ಕಾರಣ ಟಿಕೆಟ್ ಆಕಾಂಕ್ಷಿಗಳಿಗೆ ಟಿಕೆಟ್ ಸಿಗದಿದ್ದಲ್ಲಿ ಅತೃಪ್ತರು ಪಕ್ಷವನ್ನು ಬದಲಾಯಿಸುವ ಅವಕಾಶವನ್ನು ಇದು ತಡೆಯುತ್ತದೆ ಎಂದು ಮೂಲಗಳು ಹೇಳುತ್ತವೆ.
ಕಮಲ ಪಡೆಯ ಕಾದು ನೋಡುವ ತಂತ್ರ
ರಾಜ್ಯಾದ್ಯಂತ ನಡೆಸುತ್ತಿರುವ ಮಿನಿ ಸಮೀಕ್ಷೆಗಳನ್ನು ಟಾರ್ಗೆಟ್ ಮಾಡಿರುವ ಬಿಜೆಪಿ ವೇಟ್ ಆಂಡ್ ವಾಚ್ ತಂತ್ರಕ್ಕೆ ಮುಂದಾಗಿದೆ. ತನ್ನ ಕಾದು ಮತ್ತು ನೋಡುವ ತಂತ್ರದಲ್ಲಿ ಬಿಜೆಪಿ ಕಾಂಗ್ರೆಸ್ ಮತ್ತು ಜನತಾ ದಳ ಅಭ್ಯರ್ಥಿಗಳ ಪಟ್ಟಿಗಳ ಮೇಲೆ ನಿಗಾ ಇಡುತ್ತಿದೆ. ಪಕ್ಷ ಈಗಾಗಲೇ ಕರ್ನಾಟಕದಲ್ಲಿ ಆಡಳಿತದಲ್ಲಿರುವುದರಿಂದ ಬಿಜೆಪಿಗೆ ಈ ಚುನಾವಣೆ ಗೆಲ್ಲಲೇಬೇಕು ಎಂಬ ಅನಿವಾರ್ಯತೆಯನ್ನು ಸೃಷ್ಟಿಸಿದೆ. ಹೀಗಾಗಿ ಸಕಲ ತಂತ್ರಗಳನ್ನು ಕಮಲ ಪಡೆ ಬಳಸಿಕೊಳ್ಳುತ್ತಿದೆ.
ಕರ್ನಾಟಕದಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಬಿಜೆಪಿ ತನ್ನ ಸೂಕ್ಷ್ಮ ಪ್ರಕ್ರಿಯೆಯನ್ನು ನಿಗದಿಪಡಿಸಿದೆ ಎಂದು ಮೂಲಗಳು ಹೇಳುತ್ತವೆ. ಅಂದರೆ ಈ ಹಿಂದೆ ಹಿಮಾಚಲ ಪ್ರದೇಶದ ಎಲೆಕ್ಷನ್‌ನಲ್ಲಿ ಬಳಸಲಾದ ಅದೇ ಮಾದರಿ ಸಮೀಕ್ಷೆಯ ತಂತ್ರಗಳನ್ನು ರಾಜ್ಯದಲ್ಲೂ ಅಳವಡಿಸಿಕೊಳ್ಳಲು ಬಿಜೆಪಿ ನಿರ್ಧರಿಸಿದೆ.
ಮಿನಿ ಸಮೀಕ್ಷೆ
ಎರಡು ವಾರಗಳ ಹಿಂದೆ ಆರಂಭವಾದ ಮಿನಿ ಸಮೀಕ್ಷೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಮುಖಂಡರು ಮೂವರು ಉತ್ತಮ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಕೋರಲಾಗಿತ್ತು. ಅವರಿಗೆ ಮತದಾನದ ಚೀಟಿಗಳನ್ನು ನೀಡಿ ತಮ್ಮ ಆದ್ಯತೆಯನ್ನು ಗುರುತಿಸುವಂತೆ ಸೂಚಿಸಲಾಗಿತ್ತು. ಬಳಿಕ ಮತಪೆಟ್ಟಿಗೆಗಳನ್ನು ಬೆಂಗಳೂರಿಗೆ ತರಲಾಯಿತು ಮತ್ತು ಫಲಿತಾಂಶಗಳ ಆಧಾರದ ಮೇಲೆ ಪ್ರತಿ ಕ್ಷೇತ್ರಕ್ಕೂ ಮೂರು ಪ್ರಮುಖ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ.
ಆಂತರಿಕ ಸಮೀಕ್ಷೆ ಮತ್ತು ಅಭಿಪ್ರಾಯ ಸಂಗ್ರಹದೊಂದಿಗೆ ಈ ಹೆಸರುಗಳನ್ನು ತಾಳೆ ಮಾಡಲಾಗಿದೆ. ರಾಜ್ಯದ ಬಿಜೆಪಿಯ ಕೋರ್ ಗ್ರೂಪ್ ವಾರಾಂತ್ಯದಲ್ಲಿ ಜಿಲ್ಲಾವಾರು ಹೆಸರುಗಳನ್ನು ಚರ್ಚಿಸಲು ಸಭೆ ಸೇರಲು ನಿರ್ಧರಿಸಿದೆ.
ಕ್ಲೀನ್ ಇಮೇಜ್ ಹೊಂದಿರುವ ಅಭ್ಯರ್ಥಿಗಳಿಗೆ ಮಣೆ
ರಾಜ್ಯದಲ್ಲಿ ತನ್ನ ಪ್ರಸ್ತುತ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ಬಿಜೆಪಿ, ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸದ ಕ್ಲೀನ್ ಇಮೇಜ್ ಹೊಂದಿರುವ ಅಭ್ಯರ್ಥಿಗಳಿಗೆ ಒತ್ತು ನೀಡುವುದಾಗಿ ಹೇಳಿದೆ.
ಗೆಲುವಿಗಾಗಿ, ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್ ಮತ್ತು ಜನತಾ ದಳ (ಜಾತ್ಯತೀತ) ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಹಿಂದೆ-ಮುಂದೆ ನೋಡುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ