ರಾಯಚೂರು: ಲಿಂಗಸ್ಗೂರು ಕಾಂಗ್ರೆಸ್ (Congress) ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ (Siddaramaiah) ಅವರು, ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ (HD Kumaraswamy) ಏನೂ ಮಾಡಿಲ್ಲ. ಆ ಬಳಿಕ ಬಂದ ಬಿಜೆಪಿ ಸರ್ಕಾರವೂ (BJP Govt) ಏನೂ ಮಾಡಿಲ್ಲ. ನಾವು ಜಾರಿಕೊಟ್ಟಿದ್ದ ಅನೇಕ ಕಾರ್ಯಕ್ರಮಗಳನ್ನ ನಿಲ್ಲಿಸಿದ್ದಾರೆ. ಆ ಕಾರ್ಯಕ್ರಮಗಳು ಜಾರಿಯಾಗದ ಹಾಗೆ ನೋಡಿಕೊಳ್ಳುತ್ತಿದ್ದಾರೆ. ಜನ ಏನೂ ಅವರನ್ನ ಸರ್ಕಾರ ಮಾಡಿ ಎಂದು ಆಶೀರ್ವಾದ ಮಾಡಿರಲಿಲ್ಲ. ಕಳೆದ ಚುನಾವಣೆಯಲ್ಲಿ (Election) ರಾಜ್ಯದ ಜನ ಅತಂತ್ರ ಪರಿಸ್ಥಿತಿ ನಿರ್ಮಾಣ ಮಾಡಿದ್ದರು. ರಾಜ್ಯಪಾಲರು (Governor) ಸಾಮಾನ್ಯವಾಗಿ ಹೆಚ್ಚು ಸ್ಥಾನ ಪಡೆದ ಪಕ್ಷ ನಾಯಕರಿಗೆ ಕರೆದರು, ಆದರೆ ಯಡಿಯೂರಪ್ಪಗೆ ಬಹುಮತ ಸಾಭೀತು ಮಾಡಲಾಗಲಿಲ್ಲ. ಹೀಗಾಗಿ ಬಿಜೆಪಿಯವರು ಹಸಿದ ಹುಲಿ ಥರ ಇದ್ದರು. ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರಲು ಕಾಂಗ್ರೆಸ್ನ 14 ಜನ, ಜೆಡಿಎಸ್ನ 3 ಜನರನ್ನು ಹಣ ಕೊಟ್ಟು ಕೊಂಡುಕೊಂಡರು ಎಂದು ಆರೋಪಿಸಿದ್ದಾರೆ.
ನಾ ಖಾವೂಂಗ, ನಾ ಖಾನೇದೂಂಗಾ ಅಂತ ಹೇಳುವುದು ಏಕೆ?
ನಾನು ಮುಖ್ಯ ಮಂತ್ರಿಯಾಗಿದ್ದಾಗ ಸಾವಿರಾರು ಮನೆ ಕೊಟ್ಟಿದ್ದೆ, ನಾಲ್ಕು ವರ್ಷದಲ್ಲಿ ಬಿಜೆಪಿ ಏನಾದರೂ ಮನೆಗಳನ್ನು ಕೊಟ್ಟಿದ್ದಾರಾ? ಮೋದಿಯವರು ಈ ದೇಶದ ಜನರಿಗೆ ಸುಳ್ಳು ಹೇಳಿ, ಟೋಪಿ ಹಾಕಿದ್ದಾರೆ. ಕಂಟ್ರಾಕ್ಟರ್ ಅಸೋಸಿಯೇಷನ್ ಪತ್ರ ಬರೆದರು ಕ್ರಮತೆಗೆದುಕೊಳ್ಳಲಿಲ್ಲ. ಪತ್ರದಲ್ಲಿ ಪ್ರಧಾನಿ ಮೋದಿಯವರೇ ಕರ್ನಾಟಕದಲ್ಲಿ ಈ ಜನಪ್ರತಿನಿಧಿಗಳು 40% ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ. ಏನಾದರೂ ಕ್ರಮ ತಗೊಳ್ಳಿ ಅಂದರೂ ಏನೂ ಕ್ರಮ ತೆಗೆದುಕೊಳ್ಳಲಿಲ್ಲ. ಹಾಗಾದರೆ ನಾ ಖಾವೂಂಗ, ನಾ ಖಾನೇದೂಂಗಾ ಅಂತ ಹೇಳುವುದು ಏಕೆ ಎಂದು ಸಿದ್ದು ಪ್ರಶ್ನಿಸಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಬರೀ ಲಂಚ, ಪ್ರತಿ ನೌಕರಿಗಳಿಗೂ ಲಂಚ ಲಂಚ ಲಂಚ. ವಿಧಾನಸೌಧದ ಪ್ರತಿ ಗೋಡೆಗಳೂ ಲಂಚ ಲಂಚ ಲಂಚ ಎನ್ನುತ್ತಿವೆ. ಇಂಥ ಭ್ರಷ್ಟ ಸರ್ಕಾರವನ್ನ ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ. ನಾರಾಯಣಪುರ ಬಲದಂಡೆ ನಾಲೆಯ ಬಗ್ಗೆ ಅಸೆಂಬ್ಲಿಯಲ್ಲಿಮಾತನಾಡಿದ್ದೆ. ಅದರ ಎಸ್ಟಿಮೇಟ್ 700 ಕೋಟಿ ರೂಪಾಯಿ ಇತ್ತು. ಪ್ರಭಾವ ಬಳಸಿ 1,400 ಕೋಟಿ ರೂಪಾಯಿ ಮಾಡಿದ್ದರು. ಆದರೆ ಅದನ್ನು ಆದರೂ ಮಾಡಿದರಾ ಎಂದರೆ ಎಲ್ಲಾ ಕಳಪೆ ಕಾಮಗಾರಿ, ಅದನ್ನ ಪ್ರಶ್ನಿಸಿದಾಗ ಎಸ್ಟಿಮೇಟ್ ಕಮಿಟಿ ಬಂತು. ಆಗ ಆ ಕಮಿಟಿಗೆ ಕೆಲಸ ಮಾಡಲು ಮಾನಪ್ಪ ವಜ್ಜಲ್ ಗೂಂಡಾಗಳು ಬಿಡಲಿಲ್ಲ ಎಂದು ಮಾನಪ್ಪ ವಜ್ಜಲ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ನಾನು ಸಿಎಂ ಆಗಬೇಕಾದರೆ ಹುಲಿಗೇರಿ ಗೆಲ್ಲಬೇಕವೋ ಬೇಡವೋ? ಕೆಲವರು ಹೂಲಿಗೇರಿಗೆ ವಿರೋಧ ಮಾಡುತ್ತಾರೆ. ಅಂಥವರಿಗೆ ವಜ್ಜಲ್ ಆ ಪಾಪದ ಹಣ ಕೊಟ್ಟಿದಾನೆ. ಅವರ ಮಾತನ್ನ ಕೇಳಬೇಡಿ. ಹೂಲಿಗೇರಿಯವರನ್ನು ಎಂಎಲ್ಎ ಮಾಡುವುದು ನಮ್ಮ ಕರ್ತವ್ಯ ಎಂದರು. ಇದೇ ವೇಳೆ ಪಕ್ಷೇತರ ಅಭ್ಯರ್ಥಿ ವಿರುದ್ಧವೂ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ ಅವರು, ಚೀಫ್ ಇಂಜಿನೀಯರ್ ಆಗಿದ್ದಾಗ ಒಳ್ಳೆ ದುಡ್ಡು ಹೊಡೆದಿದ್ದಾನೆ. ಚಾಮರಾಜನಗರದಿಂದ ಇಲ್ಲಿಗೆ ಬಂದಿದ್ದಾನೆ. ನೀವೇನಾದರು ರುದ್ರಯ್ಯಗೆ ವೋಟು ಹಾಕಿದರೆ, ಜೆಡಿಎಸ್ ಗೆ ಓಟು ಹಾಕಿದರೆ ಬಿಜೆಪಿಗೆ ಮತ ಹಾಕಿದ್ದಂತೆ ಎಂದು ಎಚ್ಚರಿಕೆ ನೀಡಿದರು.
ಈ ಬಾರಿ ಜನರು ನಮ್ಮ ಪರವಾಗಿದ್ದಾರೆ. ಬಿಜೆಪಿಯವರು ಯಡಿಯೂರಪ್ಪನಿಗೆ ಅನ್ಯಾಯ ಮಾಡಿದ್ದರು. ಅಸೆಂಬ್ಲಿನಲ್ಲಿ ಗೊಳೋ ಅಂತ ಕಣ್ಣೀರು ಹಾಕಿದ್ದರು. ಯಾಕಪ್ಪ ಅಳುತ್ತೀಯಾ ಎಂದರೆ ಆನಂದ ಭಾಷ್ಪ ಎಂದರು. ಆದರೆ ಯಡಿಯೂರಪ್ಪ ಅವರನ್ನು ಹೆದರಿಸಿ ಇಟ್ಟುಕೊಂಡಿದ್ದಾರೆ. ನಾಳೆ ಅವರು ಇಲ್ಲಿಗೆ ಬರ್ತಿದ್ದಾರೆ, ಯಾಕ್ರೀ ಯಡಿಯೂರಪ್ಪನವರೇ ಕಣ್ಣೀರು ಹಾಕಿದ್ರಿ ಅಂತ ನೀವೇ ಕೇಳಿ ಎಂದು ಕಾರ್ಯಕರ್ತರಿಗೆ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ