ಬೆಂಗಳೂರು: ವಿಧಾನಸಭಾ ಚುನಾವಣೆಗೆ (Assembly Elections) ಕೆಲವೇ ದಿನಗಳು ಬಾಕಿ ಇದ್ದು, ಈಗಾಗಲೇ ನಾಮಪತ್ರ (Nomination) ಸಲ್ಲಿಕೆ ಆರಂಭವಾಗಿದೆ. ಉಳಿದಂತೆ ಮೇ 10 ರಂದು ಮತದಾನ (Voting) ನಡೆದರೆ ಮೇ 13ಕ್ಕೆ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಈ ಬಾರಿಯ ಚುನಾವಣೆಯಲ್ಲಿ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಲೇಬೇಕು ಎಂದು ಕಾರ್ಯತಂತ್ರ ರೂಪಿಸಿರುವ ಕಾಂಗ್ರೆಸ್ (Congress) ಭಾರೀ ಲೆಕ್ಕಾಚಾರ ನಡೆಸಿ ಎರಡು ಹಂತಗಳಲ್ಲಿ 166 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿತ್ತು. ಇದರೊಂದಿಗೆ ಇಂದು ಕಾಂಗ್ರೆಸ್ 43 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಟಿಕೆಟ್ ಘೋಷಣೆ ಕುರಿತಂತೆ ಕಳೆದ ಎರಡು ದಿನಗಳ ಹಿಂದೆಯೇ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಬಾಕಿ ಇರುವ ಒಟ್ಟು 58 ಕ್ಷೇತ್ರಗಳಲ್ಲಿ 43 ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಮಾಡಲಾಗಿತ್ತು. ಸಭೆಯಲ್ಲಿ ಕೆ.ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲಾ ಸೇರಿದಂತೆ ರಾಜ್ಯದ ನಾಯಕರು ಭಾಗಿಯಾಗಿದ್ದರು. ಕಾಂಗ್ರೆಸ್ ತನ್ನ ಎರಡನೇ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ ಬಂಡಾಯ ಸ್ಫೋಟಗೊಂಡಿತ್ತು. ಸದ್ಯ ಮೂರನೇ ಪಟ್ಟಿ ಬಿಡುಗಡೆಯಾಗಿದೆ.
ಕಾಂಗ್ರೆಸ್ ಪಕ್ಷದ 43 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಭಾರೀ ಲೆಕ್ಕಾಚಾರಗಳೊಂದಿಗೆ ಅಳೆದುತೂಗಿ ಟಿಕೆಟ್ ಘೋಷಣೆ ಮಾಡಲಾಗಿದೆ. ಪ್ರಮುಖವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಒಂದೇ ಕ್ಷೇತ್ರಕ್ಕೆ ಸೀಮಿತವಾಗಿದ್ದು, ಕೋಲಾರದಿಂದ ಸಿದ್ದರಾಮಯ್ಯ ಅವರಿಗೆ ನೀಡಿಲ್ಲ. ನಿನ್ನೆಯಷ್ಟೇ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅವರಿಗೆ ಅಥಣಿ ಕ್ಷೇತ್ರದ ಟಿಕೆಟ್ ಘೋಷಣೆ ಮಾಡಲಾಗಿದೆ.
ಇದರೊಂದಿಗೆ ವರುಣಾದಿಂದ ಮಾತ್ರ ಸಿದ್ದರಾಮಯ್ಯ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಇದರ ನಡುವೆ ಸಿದ್ದರಾಮಯ್ಯ ಆಪ್ತೆಯಾಗಿದ್ದ ಹಿರಿಯ ನಟಿ, ಕಾಂಗ್ರೆಸ್ ನಾಯಕಿ ಉಮಾಶ್ರೀ ಅವರಿಗೆ ಟಿಕೆಟ್ ನಿರಾಕರಿಸಲಾಗಿದ್ದು, ಬಿಗ್ಶಾಕ್ ಎದುರಾಗಿದೆ. ಉಳಿದಂತೆ ಶಿಡ್ಲಘಟ್ಟ, ಹರಿಹರ, ಪುಲಕೇಶಿನಗರ,ಲಿಂಗಸುಗೂರು ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಘೋಷಣೆ ಮಾಡಬೇಕಿದೆ.
ಇದನ್ನೂ ಓದಿ: Congress Candidate 3rd list: ಕೊನೆಗೂ ರಿಲೀಸ್ ಕೈ ಪಡೆಯ ಮೂರನೇ ಪಟ್ಟಿ; ಸವದಿಗೆ ಸಿಕ್ತಾ ಟಿಕೆಟ್?
ಉಮಾಶ್ರೀಗೆ ಬಿಟ್ಟು ಸ್ಥಳೀಯ ನಾಯಕರಿಗೆ ಟಿಕೆಟ್ ನೀಡುವಂತೆ ಒತ್ತಡ
ತೇರದಾಳ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ನಟಿ, ಮಾಜಿ ಸಚಿವೆ ಉಮಾಶ್ರೀ ಅವರಿಗೆ ಕಾಂಗ್ರೆಸ್ ಶಾಕ್ ನೀಡಿದೆ. ಈ ಬಾರಿ ಉಮಾಶ್ರೀ ಅವರಿಗೆ ಟಿಕೆಟ್ ನೀಡದೆ ತೇರದಾಳ ವಿಧಾನಸಭಾ ಕ್ಷೇತ್ರದಿಂದ ಸಿದ್ದಪ್ಪ ಕೊಣ್ಣೂರ್ ಅವರಿಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ನಲ್ಲಿ ಮಾಜಿ ಸಚಿವೆ ಉಮಾಶ್ರೀಗೆ ಬಿಟ್ಟು ಸ್ಥಳೀಯ ನಾಯಕರಿಗೆ ಟಿಕೆಟ್ ನೀಡುವಂತೆ ಒತ್ತಡ ಹಾಕಿದ ಹಿನ್ನೆಲೆಯಲ್ಲಿ ಸಿದ್ದಪ್ಪ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
ಇನ್ನು, ಟಿಕೆಟ್ ನೀಡದ ಕುರಿತು ಉಮಾಶ್ರೀ ಅವರಿಗೆ ಸಿದ್ದರಾಮಯ್ಯ ಅವರು ಒಂದು ದಿನದ ಮುನ್ನವೇ ಟಿಕೆಟ್ ಹಂಚಿಕೆಯ ಕುರಿತು ಮಾಹಿತಿಯನ್ನು ನೀಡಿದ್ದಾರಂತೆ. ಇದರಂತೆ ನಿನ್ನೆಯೇ ಸಿದ್ದರಾಮಯ್ಯ ಅವರ ನಿವಾಸಕ್ಕೆ ಆಗಮಿಸಿದ್ದ ಉಮಾಶ್ರೀ ಅವರು ಚರ್ಚೆ ನಡೆಸಿದ್ದರು. ಈ ವೇಳೆ ಪಕ್ಷ ಅಧಿಕಾರಕ್ಕೆ ಬಂದಾಗ ಸೂಕ್ತ ಸ್ಥಾನಮಾನ ನೀಡುವ ಭರವಸೆಯನ್ನು ಸಿದ್ದರಾಮಯ್ಯ ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು. ಇದಕ್ಕೆ ಉಮಾಶ್ರೀ ಸಹ ಒಮ್ಮತ ಸೂಚಿಸಿದ್ದಾರೆ ಎನ್ನಲಾಗಿತ್ತು.
ಉಳಿದಂತೆ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧೆ ಮಾಡಲೇಬೇಕು ಎಂದು ಆ ಭಾಗದ ಶಾಸಕರು ಹೈಕಮಾಂಡ್ಗೆ ಬೇಡಿಕೆ ನೀಡಿದ್ದರು. ಆದರೆ ಹೈಕಮಾಂಡ್ ನೀಡಿದ ಹಿನ್ನೆಲೆಯಲ್ಲಿ ಕೊತ್ತನೂರು ಮಂಜುನಾಥ್ ಅವರಿಗೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದರು. ಇದರಂತೆ ಕೊತ್ತನೂರು ಮಂಜುನಾಥ್ಗೆ ಟಿಕೆಟ್ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ