ಹುಬ್ಬಳ್ಳಿ: ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ (Shivarajkumar) ಇಂದು ಹುಬ್ಬಳ್ಳಿ (Hubballi) ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಮಾಜಿ ಸಿಎಂ, ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ (Jagadish Shettar) ಪರ ಮತಯಾಚನೆ ಮಾಡಿದರು. ಈ ವೇಳೆ ಮಾತನಾಡಿದ ಶಿವಣ್ಣ, ಇವತ್ತು ಜಗದೀಶ್ ಶೆಟ್ಟರ್ ಪರ ಮತಯಾಚನೆ ಮಾಡಿದ್ದು ಖುಷಿ ತಂದಿದೆ. ರೋಡ್‌ಶೋ (Roadshow) ವೇಳೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ನಾನು ಪ್ರಚಾರಕ್ಕೆ ಬಂದಿರುವ ಬಗ್ಗೆ ಟ್ರೋಲ್ ಮಾಡುವವರ ಬಗ್ಗೆ ನಾ ಏನೂ ಮಾತನಾಡಲ್ಲ, ಯಾತಕ್ಕೆ ಟ್ರೋಲ್ (Troll) ಮಾಡಬೇಕು. ಇದು ಸರಿನಾ ಅಂತ ಟ್ರೋಲ್ ಮಾಡುವವರು ತಮ್ಮ ಮನಸ್ಸಿಗೆ ತಾವೇ ಪ್ರಶ್ನೆ ಮಾಡಿಕೊಳ್ಳಲಿ ಎಂದರು.
ಇಲ್ಲಿ ಬಂದವರೆಲ್ಲ ಕಾಂಗ್ರೆಸ್‌ನವರಲ್ಲ, ಬಿಜೆಪಿಯವರು ಇದ್ದಾರೆ
ಇದೇ ವೇಳೆ ಟ್ರೋಲರ್ಸ್ ವಿರುದ್ಧ ಕೆಂಡಾಮಂಡಲವಾದ ಶಿವಣ್ಣ, ಇವತ್ತು ರೋಡ್‌ಶೋನಲ್ಲಿ ಇಷ್ಟೊಂದು ಜನ ಬಂದಿದ್ದಾರೆ. ಇವರೆಲ್ಲ ಟ್ರೋಲ್ ಮಾಡಲಿಕ್ಕೆ ಬಂದಿದ್ದಾರಾ? ಇಲ್ಲಿ ಬಂದವರೆಲ್ಲ ಕಾಂಗ್ರೆಸ್‌ನವರಲ್ಲ, ಬಿಜೆಪಿಯವರು ಇದ್ದಾರೆ, ಪಕ್ಷೇತರರು ಇದ್ದಾರೆ.
ಇವತ್ತು ನಮ್ಮ ಕರ್ತವ್ಯ ನಾವು ಮಾಡಲಿಕ್ಕೆ ಬಂದಿದ್ದೇವೆ. ಇದಕ್ಕೆ ಜನರು ಉತ್ತಮ ಪ್ರೀತಿ ತೋರಿಸುತ್ತಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ವ್ಯಕ್ತಿತ್ವ ಇರುತ್ತದೆ. ಐಡಿಯಾಲಜಿ ಇರುತ್ತೆ. ಅವರದ್ದೇ ಕೆಲವು ಆಸೆಗಳು ಇರ್ತಾವೆ, ಅದಕ್ಕಾಗಿ ಬಂದಿರುತ್ತೇವೆ. ಅದನ್ನ ಬಿಟ್ಟು ನಾವು ಯಾರನ್ನೋ ದ್ವೇಷಿಸಲು ದೋಷಿಸಲು ಇಲ್ಲಿ ಬಂದಿಲ್ಲ ಎಂದರು.
ಮೊದಲು ನಿಮ್ಮ ಹೃದಯವನ್ನ ಕೇಳಿ ಆಮೇಲೆ ಟ್ರೋಲ್ ಮಾಡಿ
ಅಲ್ಲದೆ, ಯಾವುದೇ ವ್ಯಕ್ತಿಯನ್ನು ಟ್ರೋಲ್ ಮಾಡುವ ಅವಶ್ಯಕತೆ ಇಲ್ಲ, ಯಾತಕ್ಕೆ ಮಾಡಬೇಕು ಅನ್ನೋದನ್ನ ಮನುಷ್ಯ ಅರ್ಥ ಮಾಡಿಕೊಂಡರೆ ಸಾಕು. ಎಷ್ಟು ದಿನ ಟ್ರೋಲ್ ಮಾಡುತ್ತೀರಿ, ಅದು ಸರ್ವ ಕಾಲಕ್ಕೂ ಆಗಲ್ಲ. ಮನುಷ್ಯ ಯಶಸ್ವಿಯಾಗಬೇಕಾದ್ರೆ ಹಾರ್ಟ್ ಮತ್ತು ಮೆದುಳು ಮೊದಲು ಸರಿಯಾಗಿರಬೇಕು. ಮೊದಲು ನಿಮ್ಮ ಹೃದಯವನ್ನ ಕೇಳಿ ಆಮೇಲೆ ಟ್ರೋಲ್ ಮಾಡಿ, ಹುಬ್ಬಳ್ಳಿಗೂ ನಮಗೂ ಒಳ್ಳೆಯ ಸಂಬಂಧಿ ಇದೆ. ಇಷ್ಟು ದಿನ ಸಿನಿಮಾ ಪ್ರಚಾರಕ್ಕಾಗಿ ಬರುತ್ತಿದ್ದೆ, ಇವತ್ತು ಈ ಪ್ರಚಾರಕ್ಕಾಗಿ ಬಂದಿದ್ದೇನೆ ಎಂದರು.
ವ್ಯಾಪಾರಕ್ಕೋಸ್ಕರ ಇಲ್ಲಿ ಬಂದಿಲ್ಲ
ಪ್ರಶಾಂತ್ ಸಂಬರಗಿ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಹೌದಾ ನಮ್ಮಲ್ಲಿ ದುಡ್ಡು ಇಲ್ವಾ? ಅದು ತಪ್ಪು. ನಾನೂ ಹಣ ತೆಗೆದುಕೊಂಡು ಪ್ರಚಾರಕ್ಕೆ ಬಂದಿಲ್ಲ. ನಾನೂ ಹಾರ್ಟ್‌ನಿಂದ, ಒಬ್ಬ ಮನುಷ್ಯನಾಗಿ ಪ್ರಚಾರಕ್ಕೆ ಬಂದಿದ್ದೇನೆ. ವ್ಯಾಪಾರಕ್ಕೋಸ್ಕರ ಇಲ್ಲಿ ಬಂದಿಲ್ಲ, ಪ್ರೀತಿ ವಿಶ್ವಾಸಗೋಸ್ಕರ ಇಲ್ಲಿ ಬಂದಿದ್ದೇನೆ. ಬೇರೆ ಯಾರನ್ನೂ ಟೀಕೆ ಮಾಡಲಿಕ್ಕೆ ನಾ ಬಂದಿಲ್ಲ. ಜಗದೀಶ್ ಶೆಟ್ಟರ್ ಬಗ್ಗೆ ಮಾತನಾಡಬೇಕು, ಆ ಬಗ್ಗೆ ನಾನು ಮಾತನಾಡುತ್ತೇನೆ. ಇಲ್ಲಿ ಬೇರೆ ಯಾರು ಬಗ್ಗೆ ನಾನ್ ಮತಾನಾಡಿದ್ನಾ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆಯಿದೆ
ಇನ್ನು, ಗೀತಾ ಶಿವರಾಜ್ಕುಮಾರ್ ಮಾತನಾಡಿ, ಜಗದೀಶ್ ಶೆಟ್ಟರ್ ಸರಳ ಸಜ್ಜನಿಗೆ ವ್ಯಕ್ತಿ, ಇಷ್ಟೊಂದು ಸರಳತೆ ನಾನು ಯಾರಲ್ಲೂ ನೋಡಿಲ್ಲ. ನಾನು ಮೊದಲಿನಿಂದಲೂ ರಾಜಕೀಯದಲ್ಲಿದ್ದೇನೆ. ಆದರೆ ಇಷ್ಟು ಸರಳ ಸಜ್ಜನಕ್ಕೆ ವ್ಯಕ್ತಿ ನಾನು ನೋಡಿಲ್ಲ. ಜಗದೀಶ್ ಶೆಟ್ಟರ್ ಮತ್ತು ಶಿಲ್ಪಾ ಶೆಟ್ಟರ್ ನಮಗೆ ಬಹಳಷ್ಟು ಅವಿನಾಭಾವ ಸಂಬಂಧವಿದೆ.
ಇಂತಹ ವ್ಯಕ್ತಿಯನ್ನು ಮತ ಕೊಟ್ಟು ನಾವು ಗೆಲ್ಲಿಸಬೇಕು. 35 ರಿಂದ 45 ಸಾವಿರ ಮತದ ಅಂತರ ದಿಂದ ಶೆಟ್ಟರನ್ನು ಗೆಲ್ಲಿಸಬೇಕು, ಕಾಂಗ್ರೆಸ್ ಪಕ್ಷ ದೊಡ್ಡ ವ್ಯಕ್ತಿಗೆ ಟಿಕೇಟ್ ನೀಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆಯಿದೆ, ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ