ಹಾಸನ: ವಿಧಾನಸಭಾ ಚುನಾವಣೆಗೆ (Assembly Elections) ಕೆಲವೇ ದಿನಗಳು ಬಾಕಿ ಉಳಿದಿದೆ. ಈ ನಡುವೆ ಹಾಸನ (Hassan) ಜಿಲ್ಲಾ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆ ನಡೆದಿದ್ದು, ಜಿಲ್ಲೆಯ ಪ್ರಭಾವಿ ಬಿಜೆಪಿ ಮುಖಂಡ ಜೆಡಿಎಸ್ ಸೇರ್ಪಡೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಹಾಸನ ಹಾಗೂ ಸಕಲೇಶಪುರ (Sakleshpura) ಕ್ಷೇತ್ರದಲ್ಲಿ ಬಿಜೆಪಿಗೆ ಠಕ್ಕರ್ ಕೊಡಲು ಎಚ್‌ಡಿ ರೇವಣ್ಣ (HD Revanna) ಮುಂದಾಗಿದ್ದು, ಜಿಲ್ಲೆಯ ಬಿಜೆಪಿ ಮುಖಂಡ ನಾರ್ವೆ ಸೋಮಶೇಖರ್ ಜೆಡಿಎಸ್ (JDS) ಸೇರ್ಪಡೆ ಬಹುತೇಕ ಖಚಿತ ಎನ್ನಲಾಗಿದೆ. ಸೋಮಶೇಖರ್ ಅವರು ಸಕಲೇಶಪುರ ಹಾಗೂ ಹಾಸನದಲ್ಲಿ ಪ್ರಭಾವ ಹೊಂದಿದ್ದು, ಸಕಲೇಶಪುರ ಕ್ಷೇತ್ರದಿಂದ ಬಿಜೆಪಿ (BJP) ಟಿಕೆಟ್ ಗೆ ಭಾರೀ ಪೈಪೋಟಿ ನಡೆಸಿದ್ದರು. ಆದರೆ ಅವರಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಜೆಡಿಎಸ್ ಸೇರ್ಪಡೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ಪಕ್ಷ ಸೇರಲು ಸೋಮಶೇಖರ್ ನಿರ್ಧಾರ!
ಕಳೆದ ಬಾರಿ ಬಿಜೆಪಿಯಿಂದ ಸಕಲೇಶಪುರದಲ್ಲಿ ಸ್ಪರ್ಧಿಸಿದ್ದ ಸೋಮಶೇಖರ್ ಅವರು ಕಡಿಮೆ ಅಂತರದಲ್ಲಿ ಸೋಲುಂಡಿದ್ದರು. ಆದರೂ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮುಂದುವರಿಸಿದ್ದ ಸೋಮಶೇಖರ್ ಅವರು ಸದ್ಯ ಜೆಡಿಎಸ್ ಸೇರ್ಪಡೆಗೆ ಮುಂದಾಗಿದ್ದಾರಂತೆ.
ಮುಂದಿನ ಚುನಾವಣೆಗೆ ಸಕಲೇಶಪುರ ಜೆಡಿಎಸ್ ಟಿಕೆಟ್ ಸಿಗುವ ಭರವಸೆಯಿಂದ ಜೆಡಿಎಸ್ ಪಕ್ಷ ಸೇರಲು ಸೋಮಶೇಖರ್ ಮುಂದಾಗಿದ್ದು, ಈ ಬಾರಿ ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ನಿರ್ಧರಿಸಿದ್ದಾರಂತೆ. ಹಾಸನದ ಅಶೋಕ ಹೋಟೆಲ್ ನಲ್ಲಿ ಜೆಡಿಎಸ್ ಮುಖಂಡರೊಂದಿಗೆ ಇಂದು ಸೋಮಶೇಖರ್ ಚರ್ಚೆ ನಡೆಸಿದ್ದು, ಹಾಸನ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಅಂತಿಮವಾಗಿ ರೇವಣ್ಣ ಜೊತೆ ಮಾತುಕಥೆ ನಡೆಸಿ ಜೆಡಿಎಸ್ ಸೇರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಜೆಡಿಎಸ್ ಬಿಜೆಪಿ ಎರಡೂ ಒಂದೇ ದೇವೇಗೌಡರು ಮೋದಿಯವರು ಮಾತುಕತೆ ಮಾಡಿದ್ದಾರೆ ಎಂಬ ಹಾಸನ ಶಾಸಕ ಪ್ರೀತಂಗೌಡ ಹೇಳಿಕೆಗೆ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸನ ಶಾಸಕ ಹತಾಶೆ ಹೇಳಿಕೆ ಕೊಟ್ಟಿದ್ದಾರೆ. ಅಲ್ಪಸಂಖ್ಯಾತರ ದಿಕ್ಕು ತಪ್ಪಿಸಲು ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಮೂವತ್ತು ವರ್ಷ ಕೆಲಸ ಮಾಡಿದ್ದೇನೆ. ಎಲ್ಲಾ ಸಮುದಾಯಗಳನ್ನ ಒಟ್ಟಿಗೆ ತೆಗೆದುಕೊಂಡು ಹೋಗುತ್ತೇನೆ. ಅಧಿಕಾರ ತ್ಯಾಗ ಮಾಡಿ ಎಸ್ಟಿ ಸಮುದಾಯಕ್ಕೆ ಅನುಕೂಲ ಮಾಡಿಕೊಟ್ಟಿರುವುದು ದೇವೇಗೌಡರು.
ನಾವು ಹೊಂದಾಣಿಕೆ ಮಾಡಿಕೊಳ್ಳಬೇಕು ಅಂತ ಇದ್ದರೆ ಸೀಟ್ ಹಂಚಿಕೆ ವೇಳೆಯಲ್ಲೇ ಮಾಡಿಕೊಳ್ಳಬಹುದಿತ್ತು. ಆದರೆ ನಾವು 123 ಸ್ಥಾನಗಳನ್ನು ಗುರಿ ಇಟ್ಟುಕೊಂಡು ಹೊರಟಿದ್ದೇವೆ. ಕುಮಾರಸ್ವಾಮಿ ಅವರು ಆರೋಗ್ಯ ಲೆಕ್ಕಿಸದೆ ಎರಡು ವರ್ಷದಿಂದ ಹೋರಾಟ ಮಾಡುತ್ತಿದ್ದಾರೆ. ಎಲ್ಲಾ ಸಮುದಾಯಕ್ಕೂ ನಾವು ಅನುಕೂಲ ಮಾಡಬೇಕು ಎನ್ನುವ ಉದ್ದೇಶ ನಮ್ಮದು ಎಂದು ಸ್ಪಷ್ಟಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ