ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಇಂದು ವರುಣಾದಲ್ಲಿಂದು (Varuna) ಮತಬೇಟೆ ಆರಂಭಿಸಿದ್ದಾರೆ. ನಾಮಪತ್ರ ಸಲ್ಲಿಕೆ ಮಾಡಿದ ಕ್ಷೇತ್ರಕ್ಕೆ ಒಮ್ಮೆ ಮಾತ್ರ ಭೇಟಿ ನೀಡಿ ಪ್ರಚಾರ ನಡೆಸುತ್ತೇನೆ ಎಂದು ಹೇಳಿದ್ದ ಸಿದ್ದರಾಮಯ್ಯ ಅವರು, ವರುಣಾದಲ್ಲೇ ಹೆಚ್ಚು ಪ್ರಚಾರಕ್ಕಿಳಿದಿದ್ದಾರೆ. ಇದರ ನಡುವೆಯೇ ಸಿದ್ದರಾಮಯ್ಯ ಅವರ ಪ್ರಚಾರದ ಕುರಿತಂತೆ ಬಿಜೆಪಿ (BJP) ಸಂಸದ ಪ್ರತಾಪ್ ಸಿಂಹ (Pratap Simha) ವ್ಯಂಗ್ಯವಾಡಿದ್ದು, ವರುಣಾದಲ್ಲಿ ಪ್ರಚಾರಕ್ಕೆ ಇಳಿದ ಸಿದ್ದರಾಮಯ್ಯ ಅವರಿಗೆ ಸೋಲಿನ (Defeat) ಭಯ ಶುರುವಾಗಿದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಪ್ರತಾಪ್ ಸಿಂಹ ಹೇಳಿದ್ದೇನು?
ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯ ಅವರು ವರುಣಾ ಪ್ರವಾಸ ಕಾರ್ಯಕ್ರಮದ ವಿವರ ಪ್ರತಿಯನ್ನು ಪೋಸ್ಟ್ ಮಾಡಿರುವ ಪ್ರತಾಪ್ ಸಿಂಹ ಅವರು, ವರುಣಾದಲ್ಲೇ ಚುನಾವಣೆ ನಿಲ್ಲುವುದಾಗಿಯೂ ಹಾಗೂ ನಾಮಪತ್ರ ಸಲ್ಲಿಸಲಷ್ಟೇ ಬರುತ್ತೇನೆ ಎಂದು ಹೇಳಿಹೋಗಿದ್ದ ಸಿದ್ದರಾಮಯ್ಯನವರು ಸೋಮಣ್ಣನವರ ಹೆಸರು ಘೋಷಣೆಯಾಗುತ್ತಿದ್ದಂತೆಯೇ ನಾಮಪತ್ರ ಸಲ್ಲಿಸಲು 2 ದಿನ ಮೊದಲೇ ಓಡಿ ಬಂದರು, ಇವತ್ತು ಮತ್ತೆ ಬಂದಿದ್ದಾರೆ. ಮುಂದಿನ ವಾರ ಇಲ್ಲೇ ಇರುತ್ತಾರಂತೆ! ಭಯ! ಆ ಭಯ ಇರಬೇಕು ಸಿದ್ದರಾಮಯ್ಯನವರೇ! ಎಂದು ಬರೆದು ಕಾಲೆಳೆದಿದ್ದಾರೆ.
ವರುಣಾದಲ್ಲಿ ಸಿದ್ದರಾಮಯ್ಯ ಅಬ್ಬರದ ಪ್ರಚಾರ
ಇನ್ನು, ಸಿದ್ದರಾಮಯ್ಯ ಅವರು ವರುಣಾ ಅಖಾಡದಲ್ಲಿ ಮತ ಬೇಟೆ ಶುರು ಮಾಡಿದ್ದು, ಲಿಂಗಾಯತ ಹಾಗೂ ಹಿಂದುಳಿದ ವರ್ಗದ ಮತ ಬ್ಯಾಂಕ್ ಮಾಜಿ ಸಿಎಂ ಕೈ ಹಾಕಿದ್ದಾರೆ. ಅತಿ ಹೆಚ್ಚು ಲಿಂಗಾಯತ ಸಮುದಾಯ ಇರುವ ಗ್ರಾಮಗಳಲ್ಲಿ ಸಿದ್ದರಾಮಯ್ಯ ಮತ ಬೇಟೆ ಮಾಡಿದ್ದು, ನಾಮಪತ್ರ ಸಲ್ಲಿಸಿದ ಮೂರನೇ ದಿನಕ್ಕೆ ವರುಣ ಪ್ರಚಾರ ಆರಂಭಿಸಿದ್ದಾರೆ. ಇಂದು ಬೆಳಗ್ಗೆಯಿಂದ ಸಂಜೆವರೆಗೂ ಸುಮಾರು 16 ಗ್ರಾಮಗಳಲ್ಲಿ ಇಂದು ಸಿದ್ದರಾಮಯ್ಯ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ಪ್ರಚಾರದ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು, ಯಾರು ಎಷ್ಟು ದ್ವೇಷ ಮಾಡಿದರೂ ನಿಮ್ಮ ಅಭಿಮಾನದ ಮುಂದೆ ಯಾರು ಏನು ಮಾಡಲು ಸಾಧ್ಯವಿಲ್ಲ. ನಿಮ್ಮ ಈ ಪ್ರೀತಿ ಹಾಗೂ ಬಲವೇ ನನಗೆ ದೊಡ್ಡ ಶಕ್ತಿಯಾಗಿದೆ. ನಾನು ಹಿಂದೆ ಸಿಎಂ ಆಗೋದಕ್ಕೆ ವರುಣ ಕ್ಷೇತ್ರದ ಜನರೇ ಕಾರಣ, ಈ ಸಾರಿ ನಾನೇ ಸ್ಪರ್ಧೆ ಮಾಡಿದ್ದೇನೆ. ನಿಮ್ಮ ಪ್ರೀತಿ ವಿಶ್ವಾಸ ನೋಡುತ್ತಿದ್ದರೆ ನೂರಕ್ಕೆ ನೂರು ಗೆಲ್ಲುವ ವಿಶ್ವಾಸ ಇದೆ. ಮತ್ತೆ ಕಾಂಗ್ರೆಸ್ ಸರ್ಕಾರವೇ ಬರುತ್ತದೆ ಎಂದರು. ಈ ವೇಳೆ ಗ್ರಾಮಸ್ಥರು ನೀವೇ ಮುಂದಿನ ಸಿಎಂ ಎಂದು ಸಿದ್ದರಾಮಯ್ಯ ಪರ ಘೋಷಣೆ ಕೂಗಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ