ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ (Assembly Elections) ಕಾವು ರಂಗೇರಿದೆ. ಮತದಾನಕ್ಕೆ (Voting) ಇನ್ನೂ ಐದು ದಿನಗಳಷ್ಟೇ ಬಾಕಿ ಇದ್ದು, ಮತದಾರನ ಮನ ಗೆಲ್ಲಲು ರಾಜಕೀಯ ಪಕ್ಷಗಳು (Political Parties) ಕಸರತ್ತು ನಡೆಸುತ್ತಿವೆ. ಅದರಂತೆ ಇಂದು ಪ್ರಧಾನಿ ಮೋದಿ (PM Modi) ಮೆಗಾ ರೋಡ್ ಶೋ ಹಮ್ಮಿಕೊಂಡಿದ್ದಾರೆ. ಬೆಂಗಳೂರಿನ (Bengaluru) 28 ವಿಧಾನಸಭಾ ಕ್ಷೇತ್ರಗಳ ಚುನಾವಣೆ ಮೇಲೆ ಕಣ್ಣಿಟ್ಟಿರುವ ರಾಜ್ಯ ಬಿಜೆಪಿ (BJP) ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಕರೆತಂದು ಮತ ಸೆಳೆಯುವ ತಂತ್ರಗಾರಿಕೆ ಮಾಡಿದೆ. ಬೆಂಗಳೂರಿಗರ ಮನಸೆಳೆಯುವ ಉದ್ದೇಶದಿಂದ ಪ್ರಧಾನಿ ಮೋದಿ ಬರ್ತಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮನೆ ಮಾಡಿದೆ.
ಪ್ರಧಾನಿ ಮೋದಿ ಪುಟ್ಟೇನಹಳ್ಳಿಯ ಆರ್ಬಿಐ ಲೇಔಟ್ ಸರ್ಕಲ್ ರೋಡ್ ಶೋ ಆರಂಭ ಮಾಡಲಿದ್ದು, ಮಲ್ಲೇಶ್ವರಂನ ಸ್ಯಾಂಕಿ ರಸ್ತೆವರೆಗೂ ಸುಮಾರು 26 ಕಿ.ಮೀ. ರೋಡ್ ಶೋ ನಡೆಸಲಿದ್ದಾರೆ. ರಸ್ತೆಯ ಎರಡೂ ಬದಿಗಳಲ್ಲಿ ಸುಮಾರು ಹತ್ತು ಲಕ್ಷ ಜನರನ್ನ ಸೇರಿಸಲು ಬಿಜೆಪಿ ಯೋಜನೆ ರೂಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಬೆಳಗ್ಗೆ 9.30ಕ್ಕೆ ರಾಜಭವನದಿಂದ ಮೇಖ್ರಿ ಸರ್ಕಲ್ ಬಳಿಯ ಹೆಚ್ಕ್ಯುಟಿಸಿ (HQTC) ಹೆಲಿಪ್ಯಾಡ್ ತಲುಪಲಿದ್ದು, ಹೆಲಿಕಾಪ್ಟರ್ ಮೂಲಕ ಕೋಣನಕುಂಟೆ ಕೋಡೇಸ್ ಹೆಲಿಪ್ಯಾಡ್ಗೆ ಬಂದಿಳಿಯಲಿದ್ದಾರೆ. ಆ ಬಳಿಕ ಆರ್ಬಿಐ ಲೇಔಟ್ ತಲುಪಲಿದ್ದು, ಬೆಳಗ್ಗೆ 10 ಗಂಟೆಗೆ ಬ್ರಿಗೇಡ್ ಮಿಲೆನೀಯಮ್ನಿಂದ ರೋಡ್ ಶೋ ಪ್ರಾರಂಭ ಮಾಡಲಿದ್ದಾರೆ. ರೋಡ್ ಶೋ ಪ್ರಯುಕ್ತ ರಸ್ತೆಯ ಎರಡು ಬದಿ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಪ್ರಧಾನಿ ಮೋದಿ ರೋಡ್ ಶೋ ಸಾಗುವ ಮಾರ್ಗ
ಪುಟ್ಟೇನಹಳ್ಳಿಯ ಆರ್ಬಿಐ ಲೇಔಟ್, ರೋಸ್ ಗಾರ್ಡನ್, ಜೆ ಪಿ ನಗರ, ಜಯನಗರ, ಶಾಲಿನಿ ಮೈದಾನ, ಆರ್ಮುಗಂ ವೃತ್ತ, ಸೌತ್ ಎಂಡ್ ಸರ್ಕಲ್, ಬುಲ್ ಟೆಂಪಲ್ ರಸ್ತೆ, ರಾಮಕೃಷ್ಣ ಆಶ್ರಮ, ಉಮಾ ಥಿಯೇಟರ್, ಟಿ ಆರ್ ಮಿಲ್, ಚಾಮರಾಜಪೇಟೆ ಮುಖ್ಯರಸ್ತೆ, ಬಾಳೆಕಾಯಿ ಮಂಡಿ, ಕೆ.ಪಿ ಅಗ್ರಹಾರ, ಮಾಗಡಿ ರಸ್ತೆ, ಚೋಳರ ಪಾಳ್ಯ, ಎಂ.ಸಿ ವೃತ್ತ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಎಂಸಿ ಲೇಔಟ್, ಬಿಜಿಎಸ್ ಮೈದಾನ, ಹಾವನೂರು ವೃತ್ತ, ಬಸವೇಶ್ವರ ನಗರ, ಶಂಕರಮಠ, ಮೋದಿ ಅಸ್ಪತ್ರೆ, ನವರಂಗ್ ಸರ್ಕಲ್, ಮಹಾಕವಿ ಕುವೆಂಪು ರಸ್ತೆ, ಮಲ್ಲೇಶ್ವರಂ ಸರ್ಕಲ್, ಸಂಪಿಗೆ ರಸ್ತೆ ಮೂಲಕ ಸ್ಯಾಂಕಿ ರಸ್ತೆಗೆ ರೋಡ್ ಶೋ ತಲುಪಲಿದೆ.
ಮೋದಿ ರೋಡ್ ಶೋಗೆ ಬರುವ ಸಾರ್ವಜನಿಕರು ಒಂದು ಗಂಟೆ ಮುಂಚಿತವಾಗಿ ಆಗಮಿಸಿ ನಿಗದಿತ ಸ್ಥಳದಲ್ಲಿ ಇರುವಂತೆ ಪೊಲೀಸರು ಸೂಚಿಸಿದ್ದಾರೆ. ಮೋದಿ ರೋಡ್ ಶೋ ಸಾಗುವ ಮಾರ್ಗ ಸಂಪೂರ್ಣ ಬಂದ್ ಆಗಲಿದ್ದು, ಅಕ್ಕಪಕ್ಕದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಸೂಚಿಸಲಾಗಿದೆ. ವಾಹನ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ.
ಕೆಲವೇ ಗಂಟೆಗಳಲ್ಲಿ ನಗರದಲ್ಲಿ ಮೋದಿ ಮೇನಿಯಾ ಶುರುವಾಗಲಿದ್ದು 26 ಕಿ.ಮೀ. ರೋಡ್ ಶೋ ವೇಳೆ ಸಂಚಾರ ದಟ್ಟಣೆ ಕಟ್ಟಿಟ್ಟ ಬುತ್ತಿ, ವಾಹನ ಸವಾರರು ಪರದಾಡುವನ್ನು ಪೊಲೀಸರು ಹೇಗೆ ತಪ್ಪಿಸುತ್ತಾರೆ ಅನ್ನೋದೇ ಯಕ್ಷ ಪ್ರಶ್ನೆ. (ವರದಿ:ಮುನಿರಾಜು, ಕ್ರೈಮ್ ಬ್ಯೂರೋ, ನ್ಯೂಸ್ 18)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ