ರಾಮನಗರ: ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ (HD Kumaraswamy) ಪುತ್ರ, ನಟ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ಇಂದು ರಾಮನಗರದಲ್ಲಿ (Ramanagara) ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಿಖಿಲ್ ಅವರಿಗೆ ಅನಿತಾ ಕುಮಾರಸ್ವಾಮಿ (Anitha Kumaraswamy) ಅವರು ನಾಮಪತ್ರ ಸಲ್ಲಿಕೆ ವೇಳೆ ಸಾಥ್ ನೀಡಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ನಿಖಿಲ್ ತಮ್ಮ ಬಳಿಕ 77 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಇದರಲ್ಲಿ ಲ್ಯಾಂಬೋರ್ಗಿನಿ (Lamborghini) ಸಹಿತ ಐದು ಕಾರುಗಳು ಸೇರಿದೆ.
ನಿಖಿಲ್ 38.94 ಕೋಟಿ ರೂಪಾಯಿ ಸಾಲವನ್ನು ಹೊಂದಿದ್ದಾರೆ
ನಿಖಿಲ್ ಘೋಷಣೆ ಮಾಡಿಕೊಂಡಿರುವ ಆಸ್ತಿ ವಿವರಗಳನ್ನು ನೋಡುವುದಾದರೆ, ಅವರ ಬಳಿ 46.51ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ, 28 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಇದೆ. ಉಳಿದಂತೆ 1.151 ಕೆಜಿ ಚಿನ್ನ, ಲ್ಯಾಂಬೋರ್ಗಿನಿ ಸಹಿತ 5.67 ಕೋಟಿ ರೂಪಾಯಿ ಮೌಲ್ಯದ 5 ಕಾರುಗಳನ್ನು ಹೊಂದಿದ್ದಾರೆ.
ಇದರೊಂದಿಗೆ ನಿಖಿಲ್ ಅವರು 38.94 ಕೋಟಿ ರೂಪಾಯಿ ಸಾಲವನ್ನು ಮಾಡಿದ್ದಾರೆ. ಉಳಿದಂತೆ 2021-22ನೇ ಸಾಲಿನಲ್ಲಿ ವಾರ್ಷಿಕ ಆದಾಯ 4.28 ಕೋಟಿ ರೂಪಾಯಿ ಇದೆ. ನಿಖಿಲ್ ಅವರು ಬಿಬಿಎ ಪದವಿಯನ್ನು ಹೊಂದಿದ್ದಾರೆ.
ನಿಖಿಲ್ ಎದುರಾಳಿ ಇಕ್ಬಾಲ್ ಹುಸೇನ್ ಆಸ್ತಿ ವಿವರ
ಇನ್ನು, ರಾಮನಗರ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದು, ಇಕ್ಬಾಲ್ ಅವರು 5.13 ಕೋಟಿ ರೂಪಾಯಿ ಚರಾಸ್ತಿ, 54.23 ಕೋಟಿ ರೂಪಾಯಿ ಸ್ಥಿರಾಸ್ತಿ, 500 ಗ್ರಾಂ ಚಿನ್ನ ಹಾಗೂ ಫಾರ್ಚುನರ್ ಸೇರಿದಂತೆ ವಿವಿಧ ವಾಹನಗಳನ್ನು ಹೊಂದಿದ್ದಾರೆ. ಉಳಿದಂತೆ ಇಕ್ಬಾಲ್ ಅವರ ಹೆಸರಿನಲ್ಲಿ 8.71 ಕೋಟಿ ರೂಪಾಯಿ ಸಾಲವಿದ್ದು, ವಾರ್ಷಿಕ 66.30 ಲಕ್ಷ ರೂಪಾಯಿ ಆದಾಯ ಹೊಂದಿದ್ದಾರೆ.
ಯಾವುದೇ ಸಂಘರ್ಷ ಆಗದ ರೀತಿಯಲ್ಲಿ ಕುಮಾರಸ್ವಾಮಿ ನೋಡಿಕೊಂಡಿದ್ದಾರೆ
ಇನ್ನು, ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಿಖಿಲ್, ಏಪ್ರಿಲ್ 17ಕ್ಕೆ ನಾನು ಮದುವೆಯಾಗಿ ಮೂರು ವರ್ಷ ಆಯ್ತು. ದೇವೇಗೌಡರು, ಬನಶಂಕರಿ ದೇವಿ, ವೆಂಕಟೇಶ್ವರ ಸ್ವಾಮಿ ಆಶೀರ್ವಾದ ಪಡೆದು ಮುಖಂಡರ ಜೊತೆಗೂಡಿ 2023ರ ಚುನಾವಣೆ ಸ್ಪರ್ಧೆಗೆ ಅರ್ಜಿ ಸಲ್ಲಿಸಿದ್ದೇನೆ.
ರಾಮನಗರ ಕ್ಷೇತ್ರ ಒಂದು ಐತಿಹಾಸಿಕ ಕ್ಷೇತ್ರ, 1952 ರಲ್ಲಿ ಕೆಂಗಲ್ ಹನುಮಂತಯ್ಯ ಸ್ಪರ್ಥಿಸಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. 1994ರಲ್ಲಿ ದೇವೇಗೌಡರು ಶಾಸಕರಾಗಿ ಇಲ್ಲಿಂದಲೇ ಮುಖ್ಯಮಂತ್ರಿಯಾದರು. 2004 ರಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದರು. ಎಲ್ಲಾ ಸಮುದಾಯದ ಜನರು ವಾಸ ಮಾಡುತ್ತಿರುವ ಶಾಂತಿಯುತವಾದ ಕ್ಷೇತ್ರ ಇದು, ಎಲ್ಲರೂ ಅಣ್ಣ ತಮ್ಮಂದಿರಂತೆ ಬದುಕಿದ್ದೇವೆ. ಯಾವುದೇ ಸಂಘರ್ಷ ಆಗದ ರೀತಿಯಲ್ಲಿ ಕುಮಾರಸ್ವಾಮಿ ನೋಡಿಕೊಂಡಿದ್ದಾರೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ