ವಿಜಯಪುರ: ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal ) ಅವರು ಇಂದು ವಿಜಯಪುರ (Vijayapura) ನಗರ ಕ್ಷೇತ್ರದಲ್ಲಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಮಾತನಾಡಿರುವ ಯತ್ನಾಳ್ ಅವರು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ರಾಹುಲ್ ಓರ್ವ ಅರೆಹುಚ್ಚ ಎಂದು ವ್ಯಂಗ್ಯವಾಡಿದ್ದಾರೆ. ಬಿಜೆಪಿ (BJP) ಟಿಕೆಟ್ ಹಂಚಿಕೆ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶಕ್ಕೆ ಮೋದಿಯಂತ (PM Modi) ನಾಯಕ ಬೇಕಿದೆ. ಜನರು ರಾಹುಲ್ ಗಾಂಧಿಯಂತ ಅರೆಹುಚ್ಚನನ್ನ ಪ್ರಧಾನಿ ಮಾಡ್ತಾರಾ? ಮೋದಿ ದೇಶದ ಹಿತದೃಷ್ಟಿಯಿಂದ ನಿರ್ಧಾರಗಳನ್ನ ತೆಗೆದುಕೊಂಡಿದ್ದಾರೆ. ಇದನ್ನು ನಾನು ಸ್ವಾಗತಿಸ್ತೇನೆ ಎಂದು ತಿಳಿಸಿದ್ದಾರೆ.
ನಾನು ಮಂತ್ರಿಯಾಗಲು, ಡಿಸಿಎಂ ಅರ್ಹನಾಗಿದ್ದೆ
ಲಕ್ಷ್ಮಣ ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಯತ್ನಾಳ್ ಅವರು, ರಾಜಕಾರಣದಲ್ಲಿ ನನಗು ಸಾಕಷ್ಟು ಅಪಮಾನವಾಗಿದೆ. ನಾವು ಸಹನೆ, ತಾಳ್ಮೆಯಿಂದ ತೀರ್ಮಾನ ತೆಗೆದುಕೊಳ್ಳಬೇಕು.
ಯಡಿಯೂರಪ್ಪ, ಜಗದೀಶ ಶೆಟ್ಟರ್‌ಗೆ ಅವಮಾನ ಆಗಿಲ್ವಾ?
ಅಲ್ಲದೆ, ಪಕ್ಷ ನನ್ನನ್ನು ಅಮಾನತು ಮಾಡಿದಾಗ ಜೆಡಿಎಸ್ ಸೇರ್ಪಡೆಯಾಗಿದ್ದೆ, ನಾನು ಜೆಡಿಎಸ್‌ನಲ್ಲಿ ಇದ್ದಾಗಲು ಸಿದ್ದಾಂತ ಬಿಟ್ಟಿರಲಿಲ್ಲ. ಸವದಿ ಅವರನ್ನು ಪಕ್ಷ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದೆ. ಅಮಿತ್ ಶಾ ಹಾಗೂ ಬಿಎಲ್ ಸಂತೋಷ್ ಸೇರಿದಂತೆ ಎಲ್ಲರೂ ಪ್ರಯತ್ನ ಮಾಡಿದ್ದಾರೆ. ತಾಳ್ಮೆ ಬೇಕು, ನಾನು ಲಕ್ಷ್ಮಣ ಸವದಿ ಬಗ್ಗೆ ಎಲ್ಲಿಯೂ ಟೀಕೆ ಮಾಡಿಲ್ಲ, ಅವರು ನನಗೆ ಟೀಕೆ ಮಾಡಿಲ್ಲ. ಆದರೆ ಬಿಜೆಪಿಯಲ್ಲಿ ಮುಂದೆ ಸವದಿಗೆ ಒಳ್ಳೆಯ ಭವಿಷ್ಯವಿತ್ತು.
ತಾಳ್ಮೆಯಿಂದ ಇದ್ದಿದ್ದರೆ ಒಳ್ಳೆಯ ಭವಿಷ್ಯ ಕಾದಿತ್ತು. ಆದರೆ ಲಕ್ಷ್ಮಣ ಸವದಿ ದುಡುಕಿದ್ದಾರೆ, ಉದ್ವೇಗಕ್ಕೆ ಒಳಗಾಗಿದ್ದಾರೆ. ಅವಮಾನ ಯಡಿಯೂರಪ್ಪ ಆಗಿಲ್ವಾ, ಜಗದೀಶ ಶೆಟ್ಟರ್‌ಗೆ ಆಗಿಲ್ವಾ? ರಾಜ್ಯದ ಹಿತದೃಷ್ಟಿಯಿಂದ ಪಕ್ಷದ ಹಿರಿಯರು ತೀರ್ಮಾನ ತೆಗೆದುಕೊಂಡಿರುತ್ತಾರೆ ಎಂದರು.
ಕೊನೆಯ ಅಧಿವೇಶನದಲ್ಲಿ ಇದನ್ನ ಹೇಳಿದ್ದೆ
ಈಶ್ವರಪ್ಪ ಗೌರವಯುತವಾಗಿ ನಡೆದುಕೊಂಡರು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪಕ್ಷಕ್ಕೆ ದ್ರೋಹ ಮಾಡಲ್ಲ ಅನ್ನೋ ಸಂದೇಶವನ್ನ ಈಶ್ವರಪ್ಪ ನೀಡಿದ್ದಾರೆ. ಎಲ್ಲಾ ಕಾರ್ಯಕರ್ತರಲ್ಲಿ ಈ ಭಾವನೆ ಬರಬೇಕು. ಕೊನೆಯ ಅಧಿವೇಶನದಲ್ಲಿ ಇದನ್ನ ಹೇಳಿದ್ದೆ. 75 ವರ್ಷದ ನಂತರ ಪಕ್ಷದ ಕೆಲಸ ಮಾಡುವುದು ಬಿಜೆಪಿ ಕಡ್ಡಾಯ ಮಾಡಿದೆ. ಸವದಿ ಕಾಂಗ್ರೆಸ್ ಸೇರ್ಪಡೆಯಿಂದ ಚುನಾವಣೆಯಲ್ಲಿ ಯಾವುದೆ ಹಿನ್ನಡೆ ಆಗಲ್ಲ ಎಂದು ಸ್ಪಷ್ಟಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ