ಬೆಂಗಳೂರು: ನಮ್ಮದು ಶಾಂತಿ (Peace) ಪ್ರಿಯ ರಾಜ್ಯ (State). ನಾವುಗಳು ವಿಶಾಲ ಹೃದಯವಂತರೂ ಕೂಡ. ಹಾಗಾಗೆ ಬೇರೆ ಕೆಲ ರಾಜ್ಯಗಳಲ್ಲಿ ಚುನಾವಣೆ (Election) ಸಂದರ್ಭದಲ್ಲಿ ಆಗುವಂತೆ ಹೊಡಿ ಬಡಿ, ಕೊಚ್ಚು ಕೊಲ್ಲು ಸಂಸ್ಕೃತಿ (Culture) ನಮ್ಮಲ್ಲಿ ದೇವರ ದಯೆಯಿಂದ ಅಷ್ಟಾಗಿ ಇಲ್ಲ. ಹಾಗಂತ ಎಲ್ಲೂ ಏನೂ ಗಲಾಟೆನೇ ಆಗಲಿಲ್ಲ ಅಂದರೂ ಅತಿಶಯೋಕ್ತಿಯೇ. ಮತದಾನದ (Voting) ವೇಳೆ ಆದ ಗಲಾಟೆ ಜೊತೆಗೆ ಇವತ್ತೂ ಮತ್ತೊಂದಷ್ಟು ಘಟನೆ ನಡೆದು ಹೋಗಿದೆ.
ಬೆಂಗಳೂರು ಸಿಟಿ ಪೊಲೀಸ್ ಆದರ್ಶ್ ಮೇಲೆ ಹಲ್ಲೆ
ಮತದಾನ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ರಾಮನಗರ ವಿಧಾನಸಭಾ ಕ್ಷೇತ್ರದ ಹಾರೋಹಳ್ಳಿಯ ಬನವಾಸಿ ಗ್ರಾಪಂನ ಗೋದೂರು ಗ್ರಾಮದಲ್ಲಿ ನಡೆದಿದ್ದು, ವಿಜಯ್ (23) ಎಂಬಾತ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ. ನಿನ್ನೆ ಮತದಾನ ದಿನ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಬೆಂಗಳೂರು ಸಿಟಿ ಪೊಲೀಸ್ ಆದರ್ಶ್ ಮೇಲೆ ಹಲ್ಲೆ ನಡೆಸಿದ್ದು, ಆದರ್ಶ್ ಕೆನ್ನೆ ಹಾಗೂ ಕೈ ಬೆರಳುಗಳಿಗೆ ಗಾಯವಾಗಿದೆ. ಹಲ್ಲೆ ಮಾಡಿದ್ದ ಆರೋಪಿ ವಿಜಯ್ ಗಾಗಿ ಪೊಲೀಸರ ಶೋಧ ನಡೆಸಿದ್ದಾರೆ. ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ನಿನ್ನೆ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ ನಡೆದಿತ್ತು. ಜೆಡಿಎಸ್ ಮುಖಂಡ ಸಾಧಿಕ್ ಹಾಗೂ ಕೈ ಮುಖಂಡ ತಜುಮುಲ್ ಮಧ್ಯೆ ಗಲಾಟೆ ನಡೆದಿತ್ತು. ಇಂದು ಕೂಡ ಗಲಾಟೆ ಮುಂದುವರೆದಿದ್ದು, ನಿನ್ನೆ ಹಲ್ಲೆಯಲ್ಲಿ ಗಾಯಗೊಂಡಿದ್ದ ಸಾಧಿಕ್ ಸಹೋದರ ನಿಂದ ತಜುಮುಲ್ಗೆ ಇಂದು ಇರಿದು ಗಾಯಗೊಳಿಸಿದ್ದಾನೆ. ಗಾಯಾಳು ತಜುಮುಲ್ನನ್ನು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸ್ಥಳಕ್ಕೆ ಮಾಜಿ ಸ್ಪೀಕರ್, ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಕುಮಾರ್ ಭೇಟಿ ನೀಡಿ ಗಾಯಳುವಿನ ಆರೋಗ್ಯ ವಿಚಾರಣೆ ನಡೆಸಿದರು.
‘ಯಾರ ಹೆಂಡತಿ ಪತಿವ್ರತೆ’?
ಚುನಾವಣೆ ಮುಗಿದರೂ ಗಲಾಟೆಗಳು ಮಾತ್ರ ನಿಂತಿಲ್ಲ. ನಿನ್ನೆ ಚಿಕ್ಕಮಗಳೂರಿನ ರಂಗೇನಹಳ್ಳಿಯಲ್ಲಿ ಬಜರಂಗದಳ ಕಾರ್ಯಕರ್ತನ ವಾಟ್ಸಾಪ್ ಸ್ಟೇಟಸ್ ಭಾರೀ ಸದ್ದು ಮಾಡಿತ್ತು. ಯಾರ ಹೆಂಡತಿ ಪತಿವ್ರತೆನೋ ಅವರೆಲ್ಲ ಬಿಜೆಪಿಗೆ ವೋಟ್ ಹಾಕಿ ಎಂದು ಕಾರ್ತಿಕ್ ಎಂಬಾತ ಸ್ಟೇಟಸ್ ಹಾಕಿದ್ದ. ರೊಚ್ಚಿಗೆದ್ದ ಕಾಂಗ್ರೆಸ್ಸಿಗರು ಠಾಣೆ ಮುಂದೆ ಪ್ರತಿಭಟನೆ ಮಾಡಿದ್ದರು.
ಗಂಗಾವತಿಯಲ್ಲಿ ರೆಡ್ಡಿ ಆಪ್ತರಿಂದ ಕಿಡ್ನ್ಯಾಪ್!?
ಜನಾರ್ದನ ರೆಡ್ಡಿ ಆಪ್ತರು ಗಂಗಾವತಿಯಲ್ಲಿ ಶೇಕ್ ಬಾಬರ್ ಎಂಬಾತನನ್ನ ಕಿಡ್ನ್ಯಾಪ್ ಮಾಡಿದ್ದಾರಂತೆ. ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕೆ ಕಿಡ್ನ್ಯಾಪ್ ಮಾಡಿ, 5 ದಿನ ಕೂಡಿ ಹಾಕಿದ್ದರಂತೆ. ಇದೀಗ ಬಾಬರ್ಗೆ ಶಾಸಕ ಪರಣ್ಣ ಮುನವಳ್ಳಿ ಬೆಂಬಲ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ