ಚಿಕ್ಕೋಡಿ: ಡಿಸಿಎಂ ಲಕ್ಷಣ ಸವದಿ (Laxman Savadi) ಅವರಿಗೆ ಕಾಂಗ್ರೆಸ್ (Congress) ಪಕ್ಷ ಅಥಣಿ (Athani) ಟಿಕೆಟ್ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಇಂದು ಕ್ಷೇತ್ರಕ್ಕೆ ವಾಪಸ್ ಆದ ಲಕ್ಷ್ಮಣ ಸವದಿ ಅವರಿಗೆ ಕಾರ್ಯಕರ್ತರು ಭರ್ಜರಿ ಸ್ವಾಗತಕೋರಿದ್ದಾರೆ. ನೂತನವಾಗಿ ಕಾಂಗ್ರೆಸ್ ಸೇರಿದ ಸವದಿ ಮೂಲ ಕಾಂಗ್ರೆಸ್ಸಿಗರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ದೌಡಾಯಿಸಿದ್ದಾರೆ. ಅಥಣಿಗೆ ಬರುತ್ತಿದ್ದಂತೆ ಸವದಿ ಅವರು ಮೂಲ ಕಾಂಗ್ರೆಸ್ಸಿಗರ ಮನೆಗೆ ಭೇಟಿ ನೀಡಿದ್ದಾರೆ. ಅಥಣಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಗಜಾನನ್ ಮಂಗಸೂಳಿ (Gajanan Mangasuli) ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಚುನಾವಣೆ ಸಮಯದಲ್ಲಿ (Karnataka Election) ಯಾವುದೇ ಅಸಮಾಧಾನಕ್ಕೆ ಕಾರಣವಾಗಬಾರದು ಎಂಬ ಉದ್ದೇಶದಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇದೇ ವೇಳೆ ಗಜಾನನ ಮಂಗಸೂಳಿ ನಿವಾಸದಲ್ಲಿ ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಅಥಣಿ ಕಾಂಗ್ರೆಸ್ ನ ಹಲವು ಮುಖಂಡರು ಭಾಗಿಯಾಗಿದ್ದರು.
ಬಹಳ ದೊಡ್ಡ ಅಂತರದಲ್ಲಿ ನನ್ನನ್ನು ಗೆಲ್ಲಿಸುತ್ತಾರೆ
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಲಕ್ಷ್ಮಣ ಸವದಿ, ಇಂದು ಮತ್ತು ನಾಳೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ ಜತೆಗೆ ಚರ್ಚೆ ಮಾಡುತ್ತೇನೆ. ಜುಲೈ 17 ಅಥವಾ 18ರಂದು ನಾಮಪತ್ರ ಸಲ್ಲಿಸುತ್ತೇನೆ.
ನಾನು ತೆಗೆದುಕೊಂಡ ತೀರ್ಮಾನ ಸಾಮೂಹಿಕವಾಗಿ ಎಲ್ಲರಿಗೂ ಒಪ್ಪಿಗೆ ಆಗಿದೆ. ಈ ಚುನಾವಣೆಯಲ್ಲಿ ಬಹಳ ದೊಡ್ಡ ಅಂತರದಲ್ಲಿ ನನ್ನನ್ನು ಗೆಲ್ಲಿಸುತ್ತಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಂಪರ್ಕ ಮಾಡಿದ್ದೇನೆ ಎಲ್ಲರೂ ಸಹಕಾರ ಕೊಡುವ ವಿಶ್ವಾಸವಿದೆ. ಮೂಲ ಕಾರ್ಯಕರ್ತರನ್ನ ಗಣನೆಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಆ ಮನೆ ಹಾಳಾಯ್ತು ಈಗ ಬಿಜೆಪಿ
ಅಥಣಿಯಲ್ಲೇ ಇದ್ದುಕೊಂಡು ಪ್ರಚಾರ ಮಾಡಿ ಮಹೇಶ್ ಕುಮಟಳ್ಳಿ ಗೆಲ್ಲಿಸುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸವಾಲು ಎಸೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸವದಿ ಅವರು, ನಮ್ಮ ಮನೆಯಲ್ಲಿ ಅರ್ಧ ಭಾಗ ಖಾಲಿ ಮಾಡಿ ಕೊಡುತ್ತೇನೆ. ಇಲ್ಲೇ ಉಳಿಯಲಿ ಎಂದು ಟಾಂಗ್ ನೀಡಿದರು.
ಅಲ್ಲದೆ, ಪೀಡೆ ತೊಲಗ್ತು ಎಂಬ ಟೀಕೆಗೆ ತಿರುಗೇಟು ನೀಡಿದ ಸವದಿ, 21 ವರ್ಷ ಬಿಜೆಪಿ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿದ್ದೇನೆ. ಇಂತಹ ಮಹಾನುಭಾವನಿಂದ ನಾನು ಪಾರ್ಟಿ ಬಿಡುವಂತೆ ಆಯಿತು. ಬಳು ಹೊಕ್ಕ ಮನೆ ಹಾಳಾಯಿತು ಅಂತಾರೆ, ಆತ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಆ ಮನೆ ಹಾಳಾಯ್ತು. ಈಗ ಬಿಜೆಪಿ ಮನೆಗೆ ಬಂದಿದ್ದು, ಅಲ್ಲಿಯೂ ಹಾಳು ಮಾಡುತ್ತಾರೆ ಎಂದರು.
ಬಿಜೆಪಿ ಮನೆ ಬಿಟ್ಟು ಬಂದಿದ್ದೇನೆ
ಜಗದೀಶ್ ಶೆಟ್ಟರ್ ಅವರ ಮನೆತನ ಬಿಜೆಪಿಗೆ ಮೀಸಲಿಟ್ಟವರು. ಶೆಟ್ಟರ್ ಅವರಿಗೆ ಟಿಕೆಟ್ ಯಾಕೆ ಕೊಟ್ಟಿಲ್ಲಾ ಅನ್ನೋದು ಆಶ್ಚರ್ಯ ತಂದಿದೆ. ಬಿಜೆಪಿ ಮನೆ ಬಿಟ್ಟು ಬಂದಿದ್ದೇನೆ ಅದರ ಬಗ್ಗೆ ಯೋಚನೆ ಮಾಡಲ್ಲ ಎಂದು ಸವದಿ ಹೇಳಿದ್ದಾರೆ.
ಇನ್ನು, ನಿನ್ನೆಯಷ್ಟೇ ಅಥಣಿಯಲ್ಲಿ ಮಾತನಾಡಿದ್ದ ರಮೇಶ್ ಜಾರಕಿಹೊಳಿ, ಲಕ್ಷ್ಮಣ ಸವದಿ ನಿಮ್ಮನ್ನು ಬಿಟ್ಟು ಹೋಗಿದ್ದಾನೆ. ಪೀಡೆ ತೊಲಗಿತು. ಈಗ ನನಗೆ ಬಹಳ ಸಂತೋಷವಾಗುತ್ತಿದೆ. ಅವನಿಗೆ ಪಕ್ಷ ನಿಷ್ಠೆ ಇಲ್ಲ, ಸೋತರೂ ಡಿಸಿಎಂ ಮಾಡಿದ್ದರು. ಆದರೆ ನಮಗೆ ಒಳ್ಳೆದಾಗಿದೆ ಎಂದು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ರಮೇಶ್ ಜಾರಕಿಹೊಳಿ ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ