ಕೋಲಾರ: ಇಂದು ಕೋಲಾರದ (Kolar) ಟಮಕದಲ್ಲಿ ಕಾಂಗ್ರೆಸ್ (Congress) ಜೈ ಭಾರತ್ ಬೃಹತ್ ಸಮಾವೇಶ (Jai Bharath Conference ) ನಡೆಯಿತು. ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ರಣದೀಪ್ ಸಿಂಗ್ ಸುರ್ಜೇವಾಲಾ, ಕೆ.ಸಿ ವೇಣುಗೋಪಾಲ, ಸಿದ್ದರಾಮಯ್ಯ (Siddaramaiah), ಡಿ.ಕೆ ಶಿವಕುಮಾರ್ (DK Shivakumar) ಹಾಗೂ ಕಾಂಗ್ರೆಸ್ ಹಿರಿಯ ನಾಯಕರು ಭಾಗಿಯಾಗಿದ್ದರು. ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಆದರೆ ರಾಹುಲ್ ಗಾಂಧಿ ಆಗಮಿಸಿ ಸಮಾವೇಶದಲ್ಲಿ ರಾಜ್ಯ ನಾಯಕರಿಗೆ ಒಕ್ಕಟ್ಟಿನ ಕರೆ ನೀಡಿದರು, ರಾಜ್ಯ ನಾಯಕರಲ್ಲಿ ಒಮ್ಮತ ಮೂಡಿದಂತೆ ಕಂಡು ಬರಲಿಲ್ಲ.
ಸಿದ್ದರಾಮಯ್ಯ ಭಾಷಣಕ್ಕೂ ವೇದಿಕೆ ಮೇಲೆ ಇರದ ರಮೇಶ್ ಕುಮಾರ್
ಸಮಾವೇಶವನ್ನು ಉದ್ದೇಶಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಲು ಮುಂದಾಗುತ್ತಿದ್ದಂತೆ ವೇದಿಕೆ ಮೇಲಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ವೇದಿಕೆಯಿಂದ ಕೆಳಗೆ ಇಳಿದು ಹೋದರು. ರಾಹುಲ್ ಗಾಂಧಿ ಭಾಷಣದ ನಂತರ ಡಿಕೆ ಶಿವಕುಮಾರ್ ಮಾತನಾಡಲು ಆರಂಭಿಸಿದ ಸಂದರ್ಭದಲ್ಲಿ ಈ ಘಟನೆ ನಡೆಯಿತು.
ಇದರೊಂದಿಗೆ ಜೈ ಭಾರತ್ ಸಮಾವೇಶದಲ್ಲೂ ಕಾಂಗ್ರೆಸ್ ನಾಯಕರ ಅಸಮಾಧಾನ ಸ್ಫೋಟಗೊಂಡಿದ್ದು, ಸಿದ್ದರಾಮಯ್ಯ ಅವರ ಭಾಷಣಕ್ಕೂ ವೇದಿಕೆ ಮೇಲೆ ಇರದೇ ರಮೇಶ್ ಕುಮಾರ್ ನಿರ್ಗಮಿಸಿದ್ದರು. ಕೋಲಾರ ಟಿಕೆಟ್ ವಿಚಾರದಲ್ಲಿ ಅಸಮಾಧಾನಗೊಂಡಿರುವ ರಮೇಶ್ ಕುಮಾರ್ ಅವರು, ಜೈ ಭಾರತ್ ಕಾಂಗ್ರೆಸ್ ಸಮಾವೇಶದ ಬಗ್ಗೆಯೂ ಹೆಚ್ಚು ಆಸಕ್ತಿ ತೋರಿಲಿಲ್ಲ ಎಂಬ ಮಾತು ಕೇಳಿ ಬಂದಿದೆ.
ರಾಹುಲ್ ಗಾಂಧಿ ಆಗಮಿಸಿದರೂ ಕೋಲಾರ ಕಾಂಗ್ರೆಸ್ ನಾಯಕರಲ್ಲಿ ಮೂಡದ ಒಗ್ಗಟ್ಟು ಕಾಣಿಸಲಿಲ್ಲ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಒಂದು ಕಡೆ ಇದ್ದರೆ, ಕೆಎಚ್ ಮುನಿಯಪ್ಪ ಮತ್ತೊಂದು ಕಡೆ ಇದ್ದರು. ಸಮಾವೇಶದ ಆರಂಭದಿಂದ ಅಂತ್ಯದವರೆಗೆ ಎಲ್ಲಿಯೂ ಇಬ್ಬರು ನಾಯಕರು ಒಟ್ಟಾಗಿ ಕಾಣಿಸಿಕೊಳ್ಳಲಿಲ್ಲ.
ರಾಹುಲ್ ಗಾಂಧಿ ಒಗ್ಗಟ್ಟಿನ ಸಂದೇಶ ಕೊಟ್ಟರು ಅದಕ್ಕೆ ಸ್ಥಳೀಯ ಕಾಂಗ್ರೆಸ್ ನಾಯಕರು ಕ್ಯಾರೆ ಎನ್ನಲಿಲ್ಲ. ರಮೇಶ್ ಕುಮಾರ್ ಕಾರ್ಯಕ್ರಮದ ಮುಗಿಯುವ ಮೊದಲೇ ವೇದಿಕೆಯಿಂದ ನಿರ್ಗಮಿಸಿದರೆ, ಕೆಎಚ್ ಮುನಿಯಪ್ಪ ಕಾರ್ಯಕ್ರಮ ಮುಗಿಸಿ ಎಲ್ಲರ ಜೊತೆ ತೆರಳಿದರು.
ಸಿದ್ದರಾಮಯ್ಯರಿಂದಲೂ ಅಂತರ ಕಾಯ್ದುಕೊಂಡ ರಮೇಶ್ ಕುಮಾರ್
ಜೈ ಭಾರತ್ ಸಮಾವೇಶದಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಾತಾಡಿಸದೆ ರಮೇಶ್ ಕುಮಾರ್ ತೆರಳಿದರು ಎನ್ನಲಾಗಿದೆ. ಇನ್ನು ಸಮಾವೇಶ ಆರಂಭದಿಂದಲೂ ಸಿದ್ದರಾಮಯ್ಯ ಅವರಿಂದ ರಮೇಶ್ ಕುಮಾರ್ ಅಂತರ ಕಾಯ್ದುಕೊಂಡಿದ್ದರು.
ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸ್ಪರ್ಧೆಗೆ ಇಳಿಸುವಂತೆ ರಮೇಶ್ ಕುಮಾರ್ ಸಾಕಷ್ಟು ಒತ್ತಡ ತಂದಿದ್ದರು. ಆದರೆ ಹೈಕಮಾಂಡ್ ಕೊತ್ತೂರು ಮಂಜುನಾಥ್ ಅವರಿಗೆ ಟಿಕೆಟ್ ನೀಡಿತ್ತು. ಇತ್ತ ಕೊತ್ತೂರು ಮಂಜುನಾಥ್ ಕೂಡ ಯಾವುದೇ ಮುನ್ಸೂಚನೆ ಇಲ್ಲದೆ ಟಿಕೆಟ್ ಘೋಷಣೆ ಮಾಡಿದ್ದಕ್ಕೆ ಅಸಮಾಧಾನ ಹೊರಹಾಕಿದ್ದು, ಸ್ಪರ್ಧೆ ಬಗ್ಗೆ ನಾಳೆ ಅಂತಿಮ ತೀರ್ಮಾನ ಮಾಡುವುದಾಗಿ ತಿಳಿಸಿದ್ದಾರೆ. ಆದರೆ ಸಿದ್ದರಾಮಯ್ಯ ಅವರಿಗೆ ಕೋಲಾರದಿಂದ ಸ್ಪರ್ಧೆ ಮಾಡಲು ಟಿಕೆಟ್ ನೀಡದ ಕಾರಣ ಅಸಮಾಧಾನಗೊಂಡಿರುವ ರಮೇಶ್ ಕುಮಾರ್ ಅವರು ವೇದಿಕೆ ಮೇಲೆ ಮೂರನೇ ಸಾಲಿನಲ್ಲಿ ಕುಳಿತುಕೊಂಡು ಅಂತರ ಕಾಯ್ದುಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ