ಬೆಂಗಳೂರು: ಶಾಸಕ ಸ್ಥಾನಕ್ಕೆ ಜಗದೀಶ್ ಶೆಟ್ಟರ್ (Jagadish Shettar) ಕೊನೆಗೂ ರಾಜೀನಾಮೆ ನೀಡಿದ್ದಾರೆ. ಶಿರಸಿಯಲ್ಲಿರುವ ಸ್ಪೀಕರ್ ಕಚೇರಿಗೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ. ಸ್ಪೀಕರ್ ಕಚೇರಿಯಲ್ಲೇ ಸುಮಾರು 2 ಗಂಟೆಗಳ ಕಾಲ ಚರ್ಚೆ ನಡೆಸಿದ್ದರು. ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿಯಲ್ಲೇ (BJP) ಉಳಿಸಿಕೊಳ್ಳಲು ಕಡೇ ಪ್ರಯತ್ನ ಕೂಡ ನಡೆಸಿದ್ದರು. ಆದರೂ ಒಪ್ಪದೆ ಜಗದೀಶ್ ಶೆಟ್ಟರ್ ರಾಜೀನಾಮೆ ಪತ್ರ ನೀಡಿದ್ದಾರೆ. ಮತ್ತೊಂದು ಕಡೆ ಶೆಟ್ಟರ್ ಅವರನ್ನು ಕಾಂಗ್ರೆಸ್ಗೆ (Congress) ಕರೆಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇತ್ತ ಜೆಡಿಎಸ್ನಿಂದಲೂ ಕೂಡ ಜಗದೀಶ್ ಶೆಟ್ಟರ್ ಅವರಿಗೆ ಪಕ್ಷಕ್ಕೆ ಮುಕ್ತ ಆಹ್ವಾನ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿದ ಶೆಟ್ಟರ್ ಅವರು, ಬೆಂಗಳೂರಿನಲ್ಲಿ (Bengaluru) ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ. ಸದ್ಯ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ, ಮಾತುಕತೆ ನಡೆಯುತ್ತಿದೆ. ಬೆಂಗಳೂರಿನಲ್ಲಿಯೂ ಕೆಲವರ ಜೊತೆ ಮಾತನಾಡಬೇಕಿದೆ, ಬಳಿಕ ಮುಂದಿನ ನಿರ್ಧಾರ ಕೈಗೊಳ್ತೇನೆ ಎಂದಿದ್ದಾರೆ.
ಜೆಡಿಎಸ್ಗೆ ಬರುವುದಾದರೆ ಸ್ವಾಗತ ಎಂದು ಶೆಟ್ಟರ್ಗೆ ಸಂದೇಶ
ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಜಗದೀಶ್ ಶೆಟ್ಟರ್ ಅವರಿಗೆ ಭಾರೀ ಡಿಮ್ಯಾಂಡ್ ಶುರುವಾಗಿದ್ದು, ಕಾಂಗ್ರೆಸ್ ನಾಯಕರೊಂದಿಗೆ ಜೆಡಿಎಸ್ ನಿಂದಲೂ ಪಕ್ಷ ಸೇರ್ಪಡೆಗೆ ಸಂದೇಶ ರವಾನಿಸಲಾಗಿದೆಯಂತೆ. ಶೆಟ್ಟರ್ ಆಪ್ತರ ಮೂಲಕ ಜೆಡಿಎಸ್ ನಾಯಕರು ಸಂದೇಶ ರವಾನಿಸಿದ್ದು, ಜೆಡಿಎಸ್ ಗೆ ಬರುವುದಾದರೆ ಸ್ವಾಗತ ಎಂದು ಎಚ್ಡಿಕೆ ಮೂಲಕ ಶೆಟ್ಟರ್ ಅವರಿಗೆ ಜೆಡಿಎಸ್ ನಾಯಕ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಬಂದ ಶೆಟ್ಟರ್
ಇತ್ತ, ಜಗದೀಶ್ ಶೆಟ್ಟರ್ ಜೊತೆ ಸಿದ್ದರಾಮಯ್ಯ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಆಗಮಿಸಲು ಶೆಟ್ಟರ್ ಅವರಿಗೆ ಕಾಂಗ್ರೆಸ್ ವಿಶೇಷ ವ್ಯವಸ್ಥೆ ಕಲ್ಪಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಜಗದೀಶ್ ಶೆಟ್ಟರ್, ಅಲ್ಲಿಂದ ನೇರ ಸ್ಕೈ ಗಾರ್ಡನ್ಸ್ ಅಪಾರ್ಟ್ಮೆಂಟ್ ಒಳಗೆ ತೆರಳಿದರು. ಹುಬ್ಬಳ್ಳಿ ಸೆಂಟ್ರಲ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ರಜತ್ ಉಳ್ಳಾಗಡ್ಡಿಮಠ ಶೆಟ್ಟರ್ ಜೊತೆಗಿದ್ದರು.
ನನ್ನ ನೋವಿಗೆ ಪರಿಹಾರ ಸಿಕ್ಕಿಲ್ಲ ಎಂದ ಶೆಟ್ಟರ್
ಈ ವೇಳೆ ಮಾತನಾಡಿದ ಶೆಟ್ಟರ್ ಅವರು, ಈಗ ನಾನು ಶಿರಸಿಯಲ್ಲಿ ಹಲವಾರು ವಿಚಾರಗಳನ್ನು ಹೇಳಿದ್ದೀನಿ. ಎಲ್ಲಾ ಅಂಶಗಳನ್ನು ಪರಿಗಣಿಸಿ ಮುಂದಿನ ತೀರ್ಮಾನ ಮಾಡುತ್ತೇನೆ. ಸದ್ಯ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿಲ್ಲ, ಯಾವುದೇ ರೀತಿಯಲ್ಲೂ ನನ್ನ ನೋವಿಗೆ ಪರಿಹಾರ ಸಿಕ್ಕಿಲ್ಲ. ನನಗೆ ತುಂಬಾ ನೋವಾಗಿದೆ, ನಾಳೆ ಮುಂದಿನ ತೀರ್ಮಾನ ಕೈಗೊಳ್ತೀನಿ ಎಂದು ಸ್ಪಷ್ಟಪಡಿಸಿದ್ದಾರೆ.
ತರಾತುರಿಯಲ್ಲಿ ಎಚ್ಡಿಕೆ ವಾಪಸ್
ಇನ್ನು, ಮೈಸೂರಿನ ಕೆಆರ್ ನಗರದಲ್ಲಿ ಪಂಚರತ್ನ ಯಾತ್ರೆ ನಡೆಸುತ್ತಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಅವರು ತರಾತುರಿಯಲ್ಲಿ ಬೆಂಗಳೂರಿನತ್ತ ತೆರಳಿದ್ದರು. ಕೆ.ಆರ್ ನಗರ ತಾಲೂಕಿನ ಬಂಡಳ್ಳಿ ಗ್ರಾಮಸ್ಥರಿಗೆ ಮನವಿ ಮಾಡಿದ ಎಚ್ಡಿಕೆ, ಬೆಂಗಳೂರಿನಲ್ಲಿ ಅರ್ಜೆಂಟ್ ಕೆಲಸ ಇದೆ. ದಯವಿಟ್ಟು ಅರ್ಥ ಮಾಡಿಕೊಳ್ಳಿ. ತುರ್ತು ಕೆಲಸದ ಮೇಲೆ ಹೊರಡುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿ ತೆರಳಿದ್ದಾರೆ. ಜೆಡಿಎಸ್‌ನತ್ತ ಪಕ್ಷಾಂತರಿಗಳ ದಂಡು ಹರಿದು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಚರ್ಚೆ ನಡೆಸಲು ಬೆಂಗಳೂರಿಗೆ ವಾಪಸ್ ಆದ್ರು ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ