ಬೆಂಗಳೂರು: ಸಿಂಹಾಸನ ಏರಿ ರಾಜ್ಯಭಾರ ಮಾಡುವ ಕುಮಾರಸ್ವಾಮಿಗೆ (HD Kumaraswamy) ಶಕುನಿಗಳ ಕಾಟ ಶುರುವಾಗಿದೆ. ಶಕುನಿಗಳ ಮಾತು ಕೇಳಿ ಕುಟುಂಬದಲ್ಲಿ (Family) ಅಲ್ಲೋಲ ಕಲ್ಲೋಲನೂ ಸೃಷ್ಟಿ ಮಾಡುತ್ತಿದ್ದಾರಂತೆ. ಈ ಬಗ್ಗೆ ಕುಮಾರಸ್ವಾಮಿಯೇ ಬಹಿರಂಗವಾಗಿ ಮಾತನಾಡಿದ್ದಾರೆ. ಹೌದು, ನಾಮಪತ್ರ (Nomination) ಸಲ್ಲಿಕೆ ಶುರುವಾಗಲು ಇನ್ನು ಮೂರೇ ದಿನ ಬಾಕಿ. ಆದರೂ ಕೂಡ ಮೂರೂ ಪಕ್ಷಗಳಲ್ಲಿ (Party) ಅಭ್ಯರ್ಥಿಗಳ ಆಯ್ಕೆ ಗಜಪ್ರಸವದಂತಾಗುತ್ತಿದೆ. ಎಲ್ಲರಿಗೂ ಮೊದಲೇ ಪಟ್ಟಿ ರಿಲೀಸ್ ಮಾಡಿದ್ದ, ಜೆಡಿಎಸ್ (JDS) 2ನೇ ಪಟ್ಟಿ ರಿಲೀಸ್‌ಗೆ ಕಾದು ನೋಡುವ ತಂತ್ರಕ್ಕೆ ಶರಣಾದಂತಿದೆ. ಆದರೆ ಹಾಸನ (Hassan) ಕ್ಷೇತ್ರ ಮಾತ್ರ ದಳಪತಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿಬಿಟ್ಟಿದೆ.
ಬೇರೆಯದ್ದೇ ನಿರ್ಧಾರ ಕೈಗೊಳ್ಳುತ್ತಾರಾ ರೇವಣ್ಣ?
ಯಾವುದೇ ಕಾರಣಕ್ಕೂ ಸ್ವರೂಪ್ ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಮತ್ತೆ ಮತ್ತೆ ಸ್ಪಷ್ಟಪಡಿಸುತ್ತಿದ್ದಾರೆ. ತಮ್ಮ ನಿಲುವಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತಿದ್ದಾರೆ. ಆದರೆ ಇತ್ತ ರೇವಣ್ಣ ಹಾಸನ ಟಿಕೆಟ್ ಕೊಡದಿದ್ದರೆ, ಬೇರೆಯದ್ದೇ ನಿರ್ಧಾರ ಕೈಗೊಳ್ಳಬೇಕಾಗುತ್ತೆ ಎನ್ನುವ ಮಟ್ಟಿಗೆ ಬಿಗಿ ನಿಲುವು ಹೊಂದಿದ್ದಾರೆ.
ಇದಕ್ಕೆ ಪೂರಕ ಎಂಬಂತೆ ನಿನ್ನೆ ಕೂಡ ಕ್ಷೇತ್ರದಲ್ಲಿ ಇಫ್ತಿಯಾರ್ ಕೂಟ ನಡೆಸುವುದರ ಮೂಲಕ ನನ್ನ ನಿಲುವು ಬದಲಾಗಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಈಗ ಎಚ್‌ಡಿಕೆ ಒತ್ತಡಕ್ಕೆ ಸಿಲುಕಿದ್ದು, ಶಕುನಿಗಳ ಕಾಟ ಅಂತ ಮಾತಲ್ಲೇ ತಿವಿದಿದ್ದಾರೆ.
ಶಕುನಿಗಳು ಬೆಳಗಿನಿಂದ ಸಂಜೆಯವರೆಗೆ ಮೈಂಡ್ ವಾಶ್
ಹಾಸನ ಟಿಕೆಟ್ ವಿಚಾರವಾಗಿ ಸ್ಪಷ್ಟನೆ ನೀಡಿದ ಕುಮಾರಸ್ವಾಮಿ ಅವರು, ಶಕುನಿಗಳು ಬೆಳಗಿನಿಂದ ಸಂಜೆಯವರೆಗೆ ಮೈಂಡ್ ವಾಶ್ ಮಾಡುತ್ತಿದ್ದಾರೆ. ಬೇರೆ ಪಕ್ಷದವರು, ಬುದ್ಧಿ ಜೀವಿಗಳು ಮತ್ತು ಹಿತಶತ್ರುಗಳು ತಲೆ ಕೆಡೆಸಿದ್ದಾರೆ. ಹಾಸನದಲ್ಲಿ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕೆಂದು ಹೇಳಿದ್ದೇನೆ, ಇದರಲ್ಲಿ ರಾಜಿ ಪ್ರಶ್ನೆಯೇ ಇಲ್ಲ.
ದೇವೇಗೌಡರಿಗೆ ಸಹ ರೇವಣ್ಣ ಅವರನ್ನು ಮನವೊಲಿಸುವ ಶಕ್ತಿ ಇಲ್ಲ. ಕಳೆದ 15 ವರ್ಷದಿಂದ ಹಲವು ವಿಷಯ ನುಂಗಿಕೊಂಡಿದ್ದೇನೆ, ಕೆಲವು ವಿಷಯಗಳನ್ನು ಹೇಳಿ ಕೊಳ್ಳಲು ಆಗೋದಿಲ್ಲ. ನನಗೆ ಆಗುತ್ತಿರುವ ಅನಾಹುತ ಗೊತ್ತಿದ್ದರೂ ಸಹ, ತಪ್ಪುಗಳು ಮಾಡದಿದ್ದರೂ ತಲೆ ಮೇಲೆ ಹೊತ್ತು ಕೊಳ್ಳಬೇಕಾಯಿತು. ಈಗಲೂ ಅದೇ ರೀತಿ ವಾತಾವರಣ ಸೃಷ್ಟಯಾಗಿದೆ ಎಂದು ಹೇಳಿದ್ದರು.
ಕ್ಷೇತ್ರದಲ್ಲಿ ಸ್ವರೂಪ್ ಪ್ರಚಾರದ ಅಬ್ಬರ
ಇನ್ನೂ ಹಾಸನ ಕ್ಷೇತ್ರದಲ್ಲಿ ಪ್ರಚಾರ ಮುಂದುವರಿಸಿರುವ ಸ್ವರೂಪ್, ಇವತ್ತು ಸ್ನೇಹಿತರು, ಕ್ಷೇತ್ರದ ಜನರ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ವೇಳೆ ಮಾತನಾಡಿದ ಸ್ವರೂಪ್ ಯಾರಿಗೆೇ ಟಿಕೆಟ್ ಘೋಷಣೆ ಮಾಡಿದರೂ ಒಟ್ಟಿಗೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಅಲ್ಲದೆ, ಹಾಸನದಲ್ಲಿ ಈ ಭಾರಿ ಜೆಡಿಎಸ್ ಗೆಲುವು ಸಾಧಿಸುತ್ತೆ. ನೂರಕ್ಕೆ ನೂರು ಭಾಗ ಜೆಡಿಎಸ್ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ. ಎರಡನೇ ಪಟ್ಟಿ ಬಿಡುಗಡೆ ಆಗಬೇಕು, ಇನ್ನೂ ಎರಡನೇ ಪಟ್ಟಿ ಬಿಡುಗಡೆ ಆಗಿಲ್ಲ. ಹಿರಿಯರೆಲ್ಲಾ ಅಂತಿಮವಾಗಿ ಯಾರು ಅಭ್ಯರ್ಥಿ ಅಂಥ ಘೋಷಣೆ ಮಾಡುತ್ತಾರೆ ಅವರಿಗೆ ನಾವೆಲ್ಲ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ವರುಣಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಷ್ಕ್ರೀಯ!
ಕ್ಷೇತ್ರದಲ್ಲಿ ಜಂಜಾಟ ಒಂದು ಕಡೆಯಾದರೆ ಇತ್ತ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಕೋಲಾರದ ಶಿನಿಗೇನಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಬೃಹತ್ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಕೋಲಾರ ಜಿಲ್ಲೆಯ 6 ಕ್ಕೆ 6 ಕ್ಷೇತ್ರ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು, ಹಾಸನ ಕ್ಷೇತ್ರದ ಗೊಂದಲ ಒಂದೆಡೆಯಾದ್ರೆ ಇತ್ತ ಮೈಸೂರಿನ ವರುಣಾ ಕ್ಷೇತ್ರದಲ್ಲಿ ಘೋಷಿತ ಅಭ್ಯರ್ಥಿ ಅಭಿಷೇಕ್ ನಿಷ್ಕ್ರಿಯಗೊಂಡಿದ್ದಾರೆ. ಹೀಗಾಗಿ ಮತ್ತೋರ್ವ ಸ್ಪರ್ಧೆ ಆಕಾಂಕ್ಷಿ ಬಿ.ಆರ್.ಗಿರೀಶ್ ಹೊಣೆ ನೀಡಲು ಚಿಂತನೆ ನಡೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ