ಬೆಂಗಳೂರು: ನಾಳೆಯಿಂದ ಕಾಂಗ್ರೆಸ್ (Congress) ಪಕ್ಷದ ಪರ ಪ್ರಚಾರ ಆರಂಭ ಮಾಡುತ್ತಿದ್ದೇನೆ. ಮೊದಲು ಸೊರಬ (Soraba) ಕ್ಷೇತ್ರಕ್ಕೆ ಹೋಗುತ್ತಿದ್ದೇನೆ. ಆ ಬಳಿಕ ಶಿರಸಿ (Sirsi) ಹಾಗೂ ಕಾರವಾರ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇನೆ. ಪಕ್ಷ ಯಾವ ಯಾವ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಸೂಚನೆ ನೀಡುತ್ತೆ ಆ ಎಲ್ಲಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇನೆ ಎಂದು ಗೀತಾ ಶಿವರಾಜ್ಕುಮಾರ್ (Geetha Shivarajkumar) ತಿಳಿಸಿದ್ದಾರೆ. ಇಂದು ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷ ಎಲ್ಲಿ ಪ್ರಚಾರ ಮಾಡಬೇಕು ಅಂತ ಸೂಚನೆ ನೀಡಿಲ್ಲ. ಇನ್ನು ಎರಡು ಮೂರು ದಿನದಲ್ಲಿ ಪಕ್ಷದ ಪ್ರಚಾರದ (Election Campaign) ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ ಎಂದರು. ಅಲ್ಲದೆ, ಸೊರಬದಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡುವುದು ಶಿವರಾಜ್ಕುಮಾರ್ ಅವರ ನಿರ್ಧಾರವೇ ಆಗಿದೆ. ಅವರು ಸೊರಬದಲ್ಲಿ ಪ್ರಚಾರ ಮಾಡುತ್ತಾರೆ. ಇನ್ನು ಬೇರೆ ಯಾವ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಾರೆ ಅಂತ ನಾವು ಚರ್ಚೆ ಮಾಡಿಲ್ಲ ಎಂದರು.
ಇದು ನನ್ನ ಸ್ವತಃ ನಿರ್ಧಾರ
ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗುವುದು ನನ್ನ ಸ್ವತಃ ನಿರ್ಧಾರ. ಸಹೋದರ ಮಧು ಬಂಗಾರಪ್ಪ ಅವರು ನಾನು ಇದನ್ನೇ ಮಾಡಬೇಕು ಅಂತ ಯಾವತ್ತು ಒತ್ತಡ ಹಾಕಿಲ್ಲ. ಯಾವಾಗಲೂ ಸಹೋದರ ಜೊತೆಗೆ ನಿಲ್ಲುವಂತೆ ನಮ್ಮ ತಾಯಿ ಅವರು ಮೊದಲೇ ಹೇಳಿದ್ದರು. ಆದ್ದರಿಂದ ನನ್ನ ನಿರ್ಧಾರದ ಮೇಲೆ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದೇನೆ. ನನಗೆ ಇಲ್ಲಿ ಕೆಲಸ ಮಾಡುವುದು ಸಂತೋಷ ತಂದಿದೆ. ಮೊದಲಿನಿಂದ ನಾನು ಮಧು ಬಂಗಾರಪ್ಪ ಜೊತೆಗೆ ನಿಂತಿದ್ದೇನೆ ಅವರೊಂದಿಗೆ ಇರುತ್ತೇನೆ ಎಂದು ತಿಳಿಸಿದರು.
ಯಾವುದೇ ನಿರ್ಧಾರ ಮಾಡಿದರೂ ಒಟ್ಟಿಗೆ ಚರ್ಚಿಸಿ ಮಾಡುತ್ತೇವೆ
ನ್ಯೂಸ್18 ಕನ್ನಡದೊಂದಿಗೆ ಮಾತನಾಡಿದ ಗೀತಾ ಶಿವರಾಜ್ಕುಮಾರ್ ಅವರು, ಶಿವರಾಜ್ಕುಮಾರ್ ಬಳಿ ಚರ್ಚಿಸಿಯೇ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದೇವೆ. ನಾನು ಏನೇ ಮಾಡಿದರೂ ಅವರು ಬೇಡ ಅಂದಿಲ್ಲ. ಮಧು ನಾನು ಇಬ್ಬರೂ ಏನೇ ಇದ್ದರು ಒಟ್ಟಿಗೆ ಕುಳಿತೇ ಚರ್ಚೆ ಮಾಡುತ್ತೇವೆ, ಜಗಳ ಮಾಡುತ್ತೇವೆ.
ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ
2008ರಲ್ಲಿ ರಾಜಕೀಯ ಪ್ರವೇಶ ಮಾಡಿದೆ, ಆ ಬಳಿಕ ಗಟ್ಟಿಯಾಗಿ ಎದುರಾಳಿಗಳನ್ನ ಎದುರಿಸಿದ್ದೇವೆ. ಮಧು ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಬೇಕು. ಕ್ಷೇತ್ರದ ಅಭಿವೃದ್ದಿಗೆ ಗೆಲ್ಲಬೇಕು, ನಾನು ಚುನಾವಣೆಯಲ್ಲಿ ನಿಲ್ಲಲ್ಲ. ಅದರ ಬಗ್ಗೆ ಯೋಚನೆ ಮಾಡಿಲ್ಲ. ಶಿವರಾಜ್ಕುಮಾರ್ ಅವರು ಸೊರಬದಲ್ಲಿ ಪ್ರಚಾರ ಮಾಡುತ್ತಾರೆ. ಬೇರೆ ಕಡೆ ಸಮಯ ಸಿಕ್ಕರೆ ಪ್ರಚಾರ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಮಧು ಬಂಗಾರಪ್ಪ ಅವರು, ಸೊರಬ ಕ್ಷೇತ್ರದ ಅಭಿವೃದ್ದಿಯಾಗಿಲ್ಲ, ಬಗರ್ ಹುಕುಂ ಸಮಸ್ಯೆ ಬಗೆಹರಿದಿಲ್ಲ. ಸಹೋದರರ ಸವಾಲ್ ಎನ್ನಬೇಡಿ, ಅದರಿಂದ ತುಂಬಾ ದೂರ ಬಂದಿದ್ದೇವೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ