ಬೆಂಗಳೂರು: ಟಿಕೆಟ್ ಪಟ್ಟಿ ಘೋಷಣೆಯಾದ ಬಳಿಕ ಬಿಜೆಪಿಯಲ್ಲಿ (BJP) ಭುಗಿಲೆದಿದ್ದ ಬಂಡಾಯ ಮುಗಿಯುವಂತೆ ಕಾಣುತ್ತಿಲ್ಲ. ಅಥಣಿ (Athani) ಟಿಕೆಟ್ ಸಿಗದ ಕಾರಣ ಡಿಸಿಎಂ ಲಕ್ಷ್ಮಣ ಸವದಿ (Laxman Savadi) ಅವರು ಕಾಂಗ್ರೆಸ್ (Congress) ಸೇರ್ಪಡೆಯಾಗಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಇದರ ನಡುವೆಯೇ ಜಗದೀಶ್ ಶೆಟ್ಟರ್ ಅವರು ಹೈಕಮಾಂಡ್ಗೆ ಡೆಡ್ಲೈನ್ ನೀಡಿ, ಸ್ಪೀಕರ್ ಬಳಿ ರಾಜೀನಾಮೆ ನೀಡಲು ಸಮಯವನ್ನು ಹೇಳಿದ್ದಾರೆ. ಇದರ ನಡುವೆ ನಾಗಮಂಗಲ (Nagamangala) ಟಿಕೆಟ್ ಆಕಾಂಕ್ಷಿ ಯಾಗಿದ್ದ ಫೈಟರ್ ರವಿ (Fighter Ravi) ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಾಗಮಂಗಲ ಟಿಕೆಟ್ ಸಿಗದ ಕಾರಣಕ್ಕೆ ಅಸಮಾಧಾನ ಗೊಂಡು ರಾಜೀನಾಮೆ ನೀಡಿದ್ದಾರೆ.
ನಾಗಮಂಗಲ ಕ್ಷೇತ್ರದ ಟಿಕೆಟ್ಅನ್ನು ಬಿಜೆಪಿ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಪತ್ನಿ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಗೆ ನಾಯಕರ ಭೇಟಿಗೆ ಆಗಮಿಸಿದ್ದ ಫೈಟರ್ ರವಿ ಅಸಮಾಧಾನಗೊಂಡು ರಾಜೀನಾಮೆ ನೀಡಿದ್ದಾರೆ. ಸದ್ಯ ಫೈಟರ್ ರವಿ ನಾಗಮಂಗಲದಿಂದ ಪಕ್ಷೇತರವಾಗಿ ಸ್ಪರ್ಧೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Jagadish Shettar: ‘ಟಿಕೆಟ್ ಕೊಡ್ತೀರಾ? ಇಲ್ವಾ?’ -ಮತ್ತೆ ರಾತ್ರಿ 8:30ಕ್ಕೆ ಡೆಡ್ಲೈನ್ ಮುಂದೂಡಿದ ಜಗದೀಶ್ ಶೆಟ್ಟರ್!
ಸೈಲೆಂಟ್ ಸುನೀಲ್ ಬಿಜೆಪಿ ಸದಸ್ಯನೇ ಅಲ್ಲ
ಇನ್ನು, ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಸೈಲೆಂಟ್ ಸುನೀಲ್ಗೂ ಕೂಡ ಬಿಜೆಪಿಗೆ ಟಿಕೆಟ್ ಮಿಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ಸುನೀಲ್ ಅಭಿಮಾನಿಗಳು ಪಕ್ಷದ ಕಚೇರಿಯಲ್ಲಿ ಹೈಡ್ರಾಮಾವನ್ನೇ ಸೃಷ್ಟಿ ಮಾಡಿದ್ದರು. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ಸೈಲೆಂಟ್ ಸುನೀಲ್ ಪಕ್ಷದ ಸದಸ್ಯನೇ ಅಲ್ಲ ಎಂದಿದ್ದಾರೆ.
ಕಾಂಗ್ರೆಸ್, ಬಿಜೆಪಿ ವಿರುದ್ಧ ಕಟೀಲ್ ವಾಗ್ದಾಳಿ
ಮಾಧ್ಯಮಗಳೊಂದಿಗೆ ಮಾತನಾಡಿ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿರುವ ನಳಿನ್ ಕುಮಾರ್ ಕಟೀಲ್ ಅವರು, ಜೆಡಿಎಸ್ ಪರಿಸ್ಥಿತಿ ನೋಡಿದ್ದೀರಿ. ಬಹಳ ದಿನಗಳ ಫೈಟ್ ನಂತರ ಹಾಸನದಲ್ಲಿ ಅಭ್ಯರ್ಥಿ ಘೋಷಣೆ ಮಾಡಿದ್ದಾರೆ. ಕುಟುಂಬದ ಹಿಡಿತದ ಪರಿಸ್ಥಿತಿ ಅಂದರೆ ಇದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಟೀಂ ನಂತೆ ಕಾಂಗ್ರೆಸ್ನಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡಿ ಘೋಷಣೆ ಮಾಡಲಾಗಿದೆ.
ಕಾಂಗ್ರೆಸ್ಗೆ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆ. ಬಿಜೆಪಿ ಬಿಟ್ಟು ಹೋಗಿರುವ ಅಭ್ಯರ್ಥಿಗಳ ತೆಗೆದುಕೊಂಡು ಘೋಷಿಸುವ ಪರಿಸ್ಥಿತಿ ಎದುರಾಗಿದೆ. ಕಾಂಗ್ರೆಸ್ ಎಷ್ಟು ಹೀನಾಯ ಪರಿಸ್ಥಿತಿ ಇದೆ ಎಂಬುದು ಇದರಿಂದ ಗೊತ್ತಾಗಿದೆ. ಕನಕಪುರ ಹಾಗೂ ವರುಣಾಗೆ ಬಿಜೆಪಿ ಯಿಂದ ಪ್ರಬಲ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಈಗ ರಾಜ್ಯದ ಬಿಟ್ಟು ತಮ್ಮ ಕ್ಷೇತ್ರದ ಬಗ್ಗೆ ಚಿಂತೆ ಮಾಡುತ್ತಿದ್ದಾರೆ. ಮುಂದೆ ಕಾಂಗ್ರೆಸ್ ನ ಜಗಳ ಬೀದಿಗೆ ಬರುತ್ತದೆ ಎಂದು ಭವಿಷ್ಯ ನುಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ