ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Assembly Elections) ವರುಣಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah), ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರನ್ನು ಸೋಲಿಸಲು ಬಿಜೆಪಿ ಹಣೆದಿರುವ ತಂತ್ರಕ್ಕೆ ಕಾಂಗ್ರೆಸ್ (Congress) ಪ್ರತಿತಂತ್ರ ರೂಪಿಸುತ್ತಿದೆ. ಈ ಕಾರಣದಿಂದಲೇ ಕನಕಪುರದಲ್ಲಿ ಸ್ಪರ್ಧೆ ಮಾಡಿರುವ ಆರ್ ಅಶೋಕ್ (R Ashok) ಅವರಿಗೆ ತಿರುಗೇಟು ಕೊಡಲು ಬೆಂಗಳೂರಿನ (Bengaluru) ಕ್ಷೇತ್ರದಲ್ಲಿ ಸಂಸದ ಡಿಕೆ ಸುರೇಶ್ (DK Suresh ಅವರನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ ಎಂಬ ಮಾತು ಕೇಳಿ ಬಂದಿತ್ತು. ಇದರ ನಡುವೆಯೇ ಅಚ್ಚರಿಯ ಹೇಳಿಕೆ ನೀಡಿರುವ ಡಿಕೆ ಸುರೇಶ್, ನಾಮಪತ್ರ ಹಾಕಲು ದಾಖಲೆಗಳನ್ನು ಸಿದ್ದತೆ ಮಾಡಿಕೊಳ್ಳಲು ಪಕ್ಷ ಸೂಚನೆ ನೀಡಿದೆ ಎಂದು ಹೇಳಿದ್ದಾರೆ.
ಆನೇಕಲ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಡಿಕೆ ಸುರೇಶ್, ರಾಜ್ಯ ರಾಜಕೀಯಕ್ಕೆ ಪ್ರವೇಶ ಮಾಡುವ ಕುರಿತಂತೆ ಸುಳಿವು ನೀಡಿದರು. ಪಕ್ಷದ ನಾಯಕರು ಚರ್ಚೆ ಮಾಡುತ್ತಿದ್ದಾರೆ, ಚುನಾವಣೆಗೆ ಎಲ್ಲಿಂದ ನಿಲ್ಲಬೇಕು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ನಾಮಪತ್ರ ಹಾಕಲು ದಾಖಲೆಗಳನ್ನ ಸಿದ್ದತೆ ಮಾಡಿಕೊಳ್ಳಲು ಸೂಚನೆ ನೀಡಿದ್ದಾರೆ. ನಾನು ತೀರ್ಮಾನ ಮಾಡಿಕೊಳ್ಳಲು ಮುನ್ನ ಕ್ಷೇತ್ರದ ಮುಖಂಡರ ಹಾಗೂ ಕಾರ್ಯಕರ್ತರ ಅಭಿಪ್ರಾಯ ಕೇಳುತ್ತೇನೆ. ಪಕ್ಷದ ಸೂಚನೆಗೆ ನಾನು ಬದ್ಧನಾಗಿರುತ್ತೇನೆ ಎಂದು ತಿಳಿಸಿದ್ದಾರೆ.
ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು
ಅಲ್ಲದೆ, ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ನನ್ನ ಸ್ಪರ್ಧೆ ಬಗ್ಗೆ ತೀರ್ಮಾನ ಮಾಡುತ್ತಾರೆ. ಪದ್ಮನಾಭನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಘುನಾಥ್ ನಾಯ್ಡು ಅವರು ಈಗಾಗಲೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇನ್ನುಳಿದ ವಿಚಾರವನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ.
ಕನಕಪುರದಲ್ಲಿ ಆರ್.ಅಶೋಕ್ ಅವರನ್ನ ಕಟ್ಟಿ ಹಾಕುವ ತಂತ್ರದ ಕುರಿತ ಪ್ರಶ್ನೆಗೆ ಉತ್ತರಿಸಿದ ಡಿಕೆ ಸುರೇಶ್, ನಾವು ಯಾರನ್ನು ಕಟ್ಟಿ ಹಾಕುವ ಪ್ರಶ್ನೆ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಸ್ಪರ್ಧೆ ಮಾಡುವ ಸಂಧರ್ಭದಲ್ಲಿ ಕೆಲವು ರಾಜಕೀಯ ಲೆಕ್ಕಾಚಾರಗಳು ಇರುತ್ತವೆ. ರಾಜಕೀಯ ಲೆಕ್ಕಚಾರಗಳನ್ನ ಹಾಕಿಕೊಂಡು ಪಕ್ಷದ ನಾಯಕರು ತೀರ್ಮಾನ ಮಾಡುತ್ತಾರೆ. ಪದ್ಮನಾಭನಗರದಿಂದ ಸ್ಪರ್ಧೆ ವಿಚಾರ ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಹಾಗೂ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಇರುವ ಒಂದು ಸಂಸದರ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂಬ ಎದುರಾಳಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಸುರೇಶ್ ಅವರು,
ನನ್ನ ಬಗ್ಗೆ ಅವರಿಗೆ ಚಿಂತೆ ಯಾಕೆ ಅಂತ ಗೊತ್ತಿಲ್ಲ. ಅವರ ಮನೆಯಲ್ಲಿ ಇರುವುದನ್ನ ಸ್ವಲ್ಪ ಚಿಂತನೆ ಮಾಡಿಕೊಳ್ಳಬೇಕು. ಆರ್.ಅಶೋಕ್ ಅವರು ಅನಂತ್ ಕುಮಾರ್ ಅವರ ಅನುಯಾಯಿಯಾಗಿ ಕೆಲಸ ಮಾಡಿದ್ದವರು. ಅವರನ್ನ ಈಗ ಅತಂತ್ರದ ಸ್ಥಿತಿಗೆ ತಂದಿದ್ದಾರೆ.
ಸೋಮಣ್ಣ ಅವರು ಸಾಕಷ್ಟು ಅನಂತ್ ಕುಮಾರ್ ಅವರನ್ನ ನಂಬಿಕೊಂಡಿದ್ದವರು. ಅವರಿಗೂ ಈಗ ಅತಂತ್ರದ ಸ್ಥಿತಿ ತಂದಿದ್ದಾರೆ. ಜಗದೀಶ್ ಶೆಟ್ಟರ್ ಅವರು ಅನಂತ್ ಕುಮಾರ್ ಅವರ ಖಾಸ ವ್ಯಕ್ತಿ. ಅವರಿಗೆ ಪಕ್ಷದಲ್ಲಿ ಅಪಮಾನವಾಗಿ ಪಕ್ಷ ಬಿಡುವ ಪರಿಸ್ಥಿತಿ ಎದುರಾಗಿದೆ. ಪಕ್ಷದ ನಾಯಕತ್ವದ ಹಿರಿಯರು ಹಾಗೂ ಪ್ರಬಲವಾದ ನಾಯಕರಿದ್ದರೂ ಅವರಿಗೆ ಒಂದಿಲ್ಲೊಂದು ಸಂಕಷ್ಟ ಬಂದಿದೆ.
ಮೊದಲು ಬಿಜೆಪಿಯವರು ಇದನ್ನು ಸರಿ ಮಾಡಿಕೊಳ್ಳಬೇಕು. ಎಲ್ಲೋ ಒಂದು ಕಡೆ ಅನಂತ್ ಕುಮಾರ್ ಅವರ ಅಗಲಿಕೆ ಅನೇಕರಿಗೆ ಕಷ್ಟವಾಗಿದೆ. ನಾಮಿನೇಷನ್ ಫೈಲ್ ಮಾಡಬೇಕು ಅಂತ ಹೇಳಿದ್ದಾರೆ. ಆದರೆ ಎಲ್ಲಿಗೆ ಹೋಗಬೇಕು ಗೊತ್ತಿಲ್ಲ. ಪಕ್ಷದ ವರಿಷ್ಠರ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದೆ.
ರಾಜಕಾರಣ ಲೆಕ್ಕಾಚಾರ ಒಂದಿಷ್ಟು ಆಗಿದೆ. ನನಗೆ ಅಶೋಕ್ ಅವರ ಸ್ಥಿತಿ ಬಗ್ಗೆ ಮಾಹಿತಿ ಇಲ್ಲ. ನಮ್ಮ ಪಕ್ಷ ಕಾರ್ಯಕರ್ತ ಆದೇಶ ಬಹಳ ಮುಖ್ಯ ಆಗ್ತಿದೆ. ಈ ಬಾರಿ ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಪ್ರಬಲವಾಗಿ ಸಂಘಟನೆಯಾಗುತ್ತಿದೆ. ರಾಜ್ಯದಲ್ಲಿಯೂ ಕೂಡ ಕಾಂಗ್ರೆಸ್ ಪಕ್ಷ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ