ಹಾಸನ: ಕಾಂಗ್ರೆಸ್ (Congress) ಪಕ್ಷ ರಾಜ್ಯ ಜನರಿಗೆ ಘೋಷಣೆ ಮಾಡಿರುವ ಗ್ಯಾರೆಂಟಿ (Promise) ಭರವಸೆಗಳನ್ನು ಸರ್ಕಾರ ರಚನೆಯಾದ ಮೊದಲ ಕ್ಯಾಬಿನೆಟ್‌ನಲ್ಲಿ (Cabinet) ತೀರ್ಮಾನ ಮಾಡಿಲ್ಲ ಎಂದರೆ ಮತ್ತೆ ಜನರ ಬಳಿ ವೋಟ್ (Vote) ಕೇಳುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಶಪಥ ಮಾಡಿದ್ದಾರೆ. ಹಾಸನ (Hassan) ಜಿಲ್ಲೆಯ ಅರಕಲಗೂಡಿನಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಕುಮಾರ್, ಸರ್ಕಾರ ರಚನೆಯಾದ ಮೊದಲನೇ ತಿಂಗಳಿನಿಂದ ಕೊಡಲಿಲ್ಲ ಎಂದರೆ ಮುಂದಕ್ಕೆ ವೋಟ್ ಕೇಳುವುದಿಲ್ಲ. ಇದು ನಮ್ಮ ಗ್ಯಾರೆಂಟಿ, ನಮ್ಮ ಶಪಥ ಎಂದು ಹೇಳಿದ್ದಾರೆ.
ಇತ್ತ, ಕಾಂಗ್ರೆಸ್‌ನವರು 91 ಬಾರಿ ಅವಮಾನ ಮಾಡಿದ್ದಾರೆ ಎಂಬ ಪ್ರಧಾನಮಂತ್ರಿ ನರೇಂದ್ರಮೋದಿ ಹೇಳಿಕೆ ವಿಚಾರವಾಗಿ ಅರಕಲಗೂಡಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮೋದಿ ಎಲ್ಲಾ ಎಣಿಸಿಕೊಂಡು ಇಟ್ಟುಕೊಂಡಿರಬೇಕು. ದಲಿತರಿಗೆ, ಸೋನಿಯಾ ಗಾಂಧಿ ಅವರಿಗೆ, ರಾಹುಲ್‌ಗಾಂಧಿಗೆ, ಗಾಂಧಿ ಫ್ಯಾಮಿಲಿಗೆ, ನೆಹರುಗೆ ಅವರು ಎಷ್ಟು ಸಾರಿ ಬೈದಿದ್ದಾರೆ ಅನ್ನೋದನ್ನ ಬರೆದಿಟ್ಟುಕೊಂಡಿದ್ದರೆ ಅದನ್ನು ಕೂಡ ಕೇಳಿ ಎಂದು ತಿರುಗೇಟು ನೀಡಿದರು.
ಇದೇ ವೇಳೆ ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿ ಅವರ ಹೆಸರಿನಲ್ಲಿ ಮತ ಕೇಳುತ್ತಿದೆ ಎಂಬ ಮೋದಿ ಅವರ ಮಾತಿಗೂ ಟಾಂಗ್ ಕೊಟ್ಟ ಖರ್ಗೆ, ಅವರು ಎಂದು ಅಂಬೇಡ್ಕರ್ ಅವರ ಫೋಟೋವನ್ನು ಇಟ್ಟುಕೊಂಡಿಲ್ಲ. ಆರ್‌ಎಸ್‌ಎಸ್, ಬಿಜೆಪಿ ಆಫೀಸ್‌ನಲ್ಲಿ ಅವರ ಅಪ್ಪನಾಣೆಗೂ 1947 ರಿಂದ ಫೋಟೋ ಇಟ್ಟಿಲ್ಲ.
ಸಂವಿಧಾನ ಬರೆದಿದ್ದನ್ನು ಕೂಡ ಇಟ್ಟಿಲ್ಲ, ಇತ್ತೀಚೆಗೆ ವೋಟಿಗಾಗಿ ಹೇಳುತ್ತಿದ್ದಾರೆ ಅಷ್ಟೇ. ಆದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಈ ಸಂವಿಧಾನ ರಚನೆ ಮಾಡಲು ಯಾವ ಪಕ್ಷ ಅವಕಾಶಕೊಟ್ಟಿತ್ತು. ಇವರು ಹೊಸ ಪೀಳಿಗೆಗೆ ಏನಾದರೂ ಭ್ರಮೆ ಹುಟ್ಟಿಸಬೇಕು ಅಂತ ಮಾಡುತ್ತಿರಬಹುದು. ಇದು ಸತ್ಯಕ್ಕೆ ದೂರವಾದಂತಹ ಮಾತು ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ