ಮಂಡ್ಯ: ಭಾಷಣದ ನಡುವೆ ಗಲಾಟೆ ಮಾಡಿ ಅಡ್ಡ ಹಾಕುತ್ತಿದ್ದ ಕಾರ್ಯಕರ್ತನೊಬ್ಬನಿಗೆ ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಕ್ಲಾಸ್ ತೆಗೆದುಕೊಂಡ ಘಟನೆ ಮಂಡ್ಯದಲ್ಲಿ (Mandya) ನಡೆದಿದೆ. ಇಂದು ಮೇಲುಕೋಟೆಯಲ್ಲಿ ರೈತ ಸಂಘದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ (Darshan Puttannaiah) ಪರ ಡಿಕೆ ಶಿವಕುಮಾರ್ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಕಾರ್ಯಕರ್ತ ಭಾಷಣಕ್ಕೆ ಅಡ್ಡಿಪಡಿಸುತ್ತಿದ್ದ ಕಾರಣ ಗರಂ ಆದ ಡಿಕೆಶಿ, ಏ ತರ್ಲೆ ಸುಮ್ನೆ ಇರೋ, ಎರಡು ಕ್ವಾಟರ್ ಹಾಕೊಂಡು ಬಂದು ಹೀಗಾಡುತ್ತಾನೆ. ನಿಮ್ಮಂತವರು ಇದ್ದರೆ ಪಕ್ಷ ಉದ್ಧಾರ ಆದಂತೆ ಅಂತ ಘೋಷಣೆ (Announcement) ಕೂಗುತ್ತಿದ್ದ ಕಾರ್ಯಕರ್ತನಿಗೆ ಮಾತಿನಲ್ಲೇ ಚಾಟಿ ಬೀಸಿದರು.
ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವ ಪಣವನ್ನ ತೊಟ್ಟು ಕೆಲಸ ಮಾಡಿ
ಇದೇ ವೇಳೆ ಕುಮಾರಸ್ವಾಮಿ ಅವರು ವಿರುದ್ಧವೂ ಪರೋಕ್ಷವಾಗಿ ವ್ಯಂಗ್ಯವಾಡಿದ ಡಿಕೆಶಿ, ರೈತ ಸಂಘಕ್ಕೆ ಬೆಂಬಲ ನೀಡಿರುವ ಕಾಂಗ್ರೆಸ್ ಪಕ್ಷ. ಈ ಬಾರಿ ದರ್ಶನ್ ನನ್ನ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿ ನನ್ನ ಕೈ ಬಲಪಡಿಸಿ. ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವ ಪಣವನ್ನ ತೊಟ್ಟು ಕೆಲಸ ಮಾಡಿ. ಕಮಲ ಕೆರೆಯಲ್ಲಿ ಇದ್ದರೆ ಚೆಂದ, ಪುಟ್ಟರಾಜು ತಲೆ ಹೊಲದಲ್ಲಿ ಇದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿ ಇದ್ದರೆ ಚೆಂದ ಎಂದರು.
ದಳದ ಕಾರ್ಯಕರ್ತರಿಗೆ ಕೈ ಮುಗಿದು ಪ್ರಾರ್ಥನೆ ಮಾಡುವೆ
ಅಲ್ಲದೆ, ಕಳೆದ ಬಾರಿ ಜೆಡಿಎಸ್ ಅವರಿಗೆ ಒಂದು ಅವಕಾಶ ಕೊಟ್ಟಿದ್ದೆವು, ಆದರೆ ಅವರು ಏನು ಮಾಡಿದ್ರು? ಸರ್ಕಾರವನ್ನ ಉಳಿಸಿಕೊಳ್ಳಲು ಅವರ ಬಳಿ ಆಗಲೇ ಇಲ್ಲ. ಈ ಬಾರಿ ಯಾವುದೇ ಕಾರಣಕ್ಕೂ ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ. ದಳದ ಕಾರ್ಯಕರ್ತರಿಗೆ ಕೈ ಮುಗಿದು ಪ್ರಾರ್ಥನೆ ಮಾಡುವೆ ಈ ಬಾರಿ ನನ್ನ ಕೈ ಬಲಪಡಿಸಿ ನನಗೂ ಒಂದು ಅವಕಾಶ ಮಾಡಿಕೊಡಿ. ರೈತರ ಗೊಬ್ಬರ, ಹಾಲಿಗೆ ಬೆಂಬಲ ಬೆಲೆ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಮಹಿಳೆಯರ ಖಾತೆಗೆ 2 ಸಾವಿರ, ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ, ಈ ಎಲ್ಲವನ್ನೂ ಮಾಡಬೇಕಾದರೆ ಈ ಬಾರಿ ನನ್ನ ಕೈ ಬಲಪಡಿಸಿ ಎಂದು ಮನವಿ ಮಾಡಿದರು.
ಜೆಡಿಎಸ್ ನಾಯಕರ ವಿರುದ್ಧ ಡಿ.ಕೆ ಸುರೇಶ್ ವಾಗ್ದಾಳಿ
ಇತ್ತ ರಾಮನಗರದ ಕೈಲಾಂಚ ಗ್ರಾಮದಲ್ಲಿ ಮಾತನಾಡಿದ ಸಂಸದ ಡಿ.ಕೆ ಸುರೇಶ್, ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಬಹಳ ಕನಸು ಇಟ್ಟುಕೊಂಡು ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್ ಆಯ್ಕೆ ಮಾಡಿದ್ದೀರಿ, ಸಿಎಂ ಮಾಡಿದ್ದೀರಿ, ಪ್ರಧಾನಮಂತ್ರಿ ಮಾಡಿದ್ದೀರಿ, ಸಂಸದರನ್ನ ಮಾಡಿದ್ದೀರಿ. ಮಗನನ್ನ ಸಿಎಂ ಮಾಡಿದ್ರಿ, ಎಚ್ಡಿಕೆ ಪತ್ನಿಯನ್ನು ಶಾಸಕರನ್ನಾಗಿ ಮಾಡಿ ಎಲ್ಲಾ ರೀತಿಯಲ್ಲೂ ಅಧಿಕಾರ ಕೊಟ್ಟಿದ್ದೀರಿ. ನಾನು ನಿಮ್ಮನ್ನ ಕೇಳ್ತೇನೆ ನಿಮಗೆ ಅಧಿಕಾರ ಕೊಟ್ಟಿದ್ದಾರಾ? ನಿಮ್ಮ ನಿರೀಕ್ಷೆಯಂತೆ ರಾಮನಗರ ಕ್ಷೇತ್ರ ಅಭಿವೃದ್ಧಿ ಮಾಡಿದ್ದಾರಾ? ಇಂಥದನ್ನ ನಾನು ಮಾಡಿದ್ದೀನಿ ಅಂತ ಹೇಳಲಿ ಎಂದು ಸವಾಲು ಹಾಕಿದರು.
ಒಬ್ಬರು ಕಣ್ಣೀರು ಹಾಕಿದ್ರು ಅಂತ ಮತ ನೀಡಿದರೆ ಮುಂದಿನ ಐದು ವರ್ಷಗಳ ನೀವು ಕಣ್ಣೀರು ಹಾಕ್ತೀರಾ. ಮಗನ ಭವಿಷ್ಯ ನಿರ್ಮಾಣ ಮಾಡಲು ಹೈದರಾಬಾದ್ ಹೋಗುತ್ತಾರೆ. ಸಿಎಂ ಆಗಿದ್ದಾಗ ಒಬ್ಬೇ ಒಬ್ಬರನ್ನು ಕರೆದು ನಿರುದ್ಯೋಗ ನಿವಾರಣೆಗೆ ಏನಾದರೂ ಸೂಚನೆ ನೀಡಿದ್ರಾ? ಬಡವರಿಗೆ ಮನೆ ಮಾಡಿದ್ದರಾ? ಈಗ ಪಂಚರತ್ನ ಅಂತ ಬಂದಿದ್ದಾರೆ. ಆಗ ಸಿಎಂ ಆಗಿದ್ದಾಗ ಪಂಚರತ್ನ ಯಾತ್ರೆಗೆ ಡಿ.ಕೆ ಶಿವಕುಮಾರ್ ಅಥವಾ ನಾನು ಅಡ್ಡ ಬಂದಿದ್ನಾ ಅಂತ ಪ್ರಶ್ನಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ