ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಅಧಿಕಾರದ ಗದ್ದುಗೆ ಏರಲೇ ಬೇಕು ಅಂತ ಡಿಸೈಡ್ ಮಾಡಿರೋ ಕಾಂಗ್ರೆಸ್ (Congress) ಕಲಿಗಳು ರಣತಂತ್ರದ ಮೇಲೆ ರಣತಂತ್ರ ಮಾಡುತ್ತಿದ್ದಾರೆ. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ (BJP) ಹೋರಾಟ ನಡೆಸುತ್ತಿದೆ. ಬಿಜೆಪಿಯಿಂದ ಅಧಿಕಾರ ಕಿತ್ತುಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆ. ಈ ಮಧ್ಯೆ ಅಧಿಕಾರಕ್ಕೇರಿಯೇ ತಿರುತ್ತೇವೆ ಅಂತ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ರಾಜ್ಯದಲ್ಲಿ ರೌಂಡ್ಸ್ ಹಾಕುತ್ತಿದ್ದಾರೆ. ಈ ಮಧ್ಯೆ ರಾಜಕೀಯ ಪಕ್ಷಗಳ ಆಪರೇಷನ್ (Karnataka Politics) ಕೂಡ ಶುರುವಾಗಿದೆ. ಇದೀಗ ಕಾಂಗ್ರೆಸ್ ಹಳೇ ಮೈಸೂರು ಭಾಗದಲ್ಲಿ ಆಪರೇಷನ್ (Old Mysore Region) ಕೂಡ ಶುರುಮಾಡಿಕೊಂಡಂತಿದೆ. ಆದರೆ ಈ ಜೋಶ್ನಲ್ಲಿದ್ದವರಿಗೆ ಒಂದು ಶಾಕ್ ಕೂಡ ಎದುರಾಗಿದೆ.
ಕಾಂಗ್ರೆಸ್ನತ್ತ ‘ಹಳ್ಳಿಹಕ್ಕಿ’, MLC ಪುಟ್ಟಣ್ಣ!
ಚುನಾವಣೆ ಸಮೀಪಿಸ್ತಿದ್ದಂತೆ ತಂತ್ರಗಾರಿಕೆ ಚುರುಕು ಮಾಡಿರುವ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಡೆ ಹಳೇ ಮೈಸೂರು ಟಾರ್ಗೆಟ್ ಮಾಡಿದೆ. ಈ ಭಾಗದಲ್ಲಿ ಅಸ್ತಿತ್ವ ಸ್ಥಾಪಿಸಲು ಬಿಜೆಪಿ ನಾನಾ ರಣ ತಂತ್ರ ನಡೆಸುತ್ತಿರುವಾಗಲೇ ಈಗ ಇದೇ ಭಾಗದಿಂದ ಆಪರೇಷನ್ ಶುರುಮಾಡಿದೆ.
ಮೊದಲ ಹಂತದಲ್ಲಿ, ಜೆಡಿಎಸ್ನಿಂದ ರೆಬೆಲ್ ಟೀಂ ಸೇರಿ ಸಮ್ಮಿಶ್ರ ಸರ್ಕಾರ ಉರುಳಲು ಕಾರಣವಾಗಿದ್ದ, ಸದ್ಯ ಬಿಜೆಪಿ ಎಂ.ಎಲ್ಸಿ ಹೆಚ್.ವಿಶ್ವನಾಥ್ ಹಾಗೂ ಕೆಲ ವರ್ಷಗಳ ಹಿಂದಷ್ಟೇ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಎಂಎಲ್ಸಿ ಪುಟ್ಟಣ್ಣ ಕಾಂಗ್ರೆಸ್ ಸೇರ್ಪಡೆ ಫಿಕ್ಸ್ ಆಗಿದೆ. ಹೆಚ್.ವಿಶ್ವನಾಥ್ ಈಗಾಗಲೇ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಭೇಟಿಯಾಗಿ ವೇದಿಕೆ ಕೂಡ ನಿರ್ಮಾಣ ಮಾಡಿಕೊಂಡಿದ್ದಾರೆ. ಇವರ ಜೊತೆಗೆ ಬೆಂಗಳೂರು ಭಾಗದ ಇಬ್ಬರು ಬಿಜೆಪಿಯ ಪ್ರಮುಖ ನಾಯಕರು ಕಾಂಗ್ರೆಸ್ಗೆ ಸೇರುತ್ತಾರೆ ಅನ್ನೋ ಬಾಂಬ್ ಕೂಡ ಡಿಕೆ ಶಿವಕುಮಾರ್ ಸಿಡಿಸಿದ್ದಾರೆ.
ಕಾಂಗ್ರೆಸ್ ನಾಯಕರು ವಿಶ್ವನಾಥ್ ಪಕ್ಷಕ್ಕೆ ಬರುವುದು ಫಿಕ್ಸ್ ಅಂತಿದ್ದಾರೆ. ಆದರೆ ವಿಶ್ವನಾಥ್ ಮಾತ್ರ ನಾನು ಪಕ್ಷಕ್ಕೆ ಹೋಗುತ್ತಿಲ್ಲ. ಕೇವಲ ಬಾಹ್ಯ ಬೆಂಬಲ ಮಾತ್ರ ಕೊಡ್ತಿದ್ದೀನಿ ಅಂತಿದ್ದಾರೆ.
ಹಳೇ ಮೈಸೂರು, ಬೆಂಗಳೂರು ಭಾಗದಲ್ಲಿ ಆಪರೇಷನ್ ಹಸ್ತ ನಡೆಯುತ್ತಿದ್ದರೆ, ಇತ್ತ ನೆರೆ ರಾಜ್ಯ ತೆಲಂಗಾಣದಿಂದ ರಾಜ್ಯ ಕಾಂಗ್ರೆಸ್ಗೆ ಆಘಾತಕಾರಿ ಮಾಹಿತಿಯೊಂದು ಹೊರ ಬಿದ್ದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸೋಲಿಸಿ ಬಿಜೆಪಿಗೆ ಅನುಕೂಲ ಮಾಡಿಕೊಡಲು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್, ರಾಜ್ಯದ ಪ್ರಭಾವಿ ನಾಯಕರೊಬ್ಬರಿಗೆ ಬರೋಬ್ಬರಿ 500 ಕೋಟಿ ರೂಪಾಯಿ ಆಫರ್ ನೀಡಿದ್ದಾರಂತೆ. ಹೀಗಂತ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಸ್ಫೋಟಕ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: Vijayapura: ಚುನಾವಣಾ ಹೊಸ್ತಿಲಲ್ಲಿ ಜೆಡಿಎಸ್ಗೆ ಭಾರೀ ಆಘಾತ; ಪಂಚರತ್ನ ಯಾತ್ರೆಯಲ್ಲಿ ಭಾಗಿಯಾಗಿದ್ದ ಅಭ್ಯರ್ಥಿ ಸಾವು
ಆದ್ರೆ, ಈ ವಿಷಯದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಗೆ ಮಾಹಿತಿಯೇ ಇಲ್ಲ. ಇನ್ನು ಕೆಸಿಆರ್ ಕೆಸಿಆರ್ ಅವರ, BRS ಪಕ್ಷದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ, ಹೆಚ್ಡಿ ಕುಮಾರಸ್ವಾಮಿ ಈ ಆರೋಪವನ್ನು ಅಲ್ಲಗಳೆದಿದ್ದಾರೆ. KCR ಅವರ ಹೋರಾಟ ಇರುವುದು ಬಿಜೆಪಿ ವಿರುದ್ಧವೇ ಹೊರತು ಕಾಂಗ್ರೆಸ್ ವಿರುದ್ಧ ಅಲ್ಲ ಎಂದಿದ್ದಾರೆ. ಚುನಾವಣೆ ಸಮೀಪಿಸ್ತಿದ್ದಂತೆ ಪಕ್ಷಗಳ ತಂತ್ರ, ಪ್ರತಿತಂತ್ರಗಳು ಜೋರಾಗುತ್ತಿದೆ. ಅಂತಿಮವಾಗಿ ಇವರ ಹಣೆ ಬರಹ ನಿರ್ಧರಿಸುವುದು ಮಾತ್ರ ಮತದಾರ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ