ಬೆಂಗಳೂರು: ನಿನ್ನೆ ರಾಜ್ಯ ಚುನಾವಣಾ (Election) ಅಖಾಡಕ್ಕೆ ಫಸ್ಟ್ ಟೈಂ ಸೋನಿಯಾ ಮೇಡಂ ಎಂಟ್ರಿ ಕೊಟ್ಟಿದ್ದರು. ಗಂಡುಮೆಟ್ಟಿದ ನಾಡಲ್ಲಿ ಸೋನಿಯಾ ಗಾಂಧಿ ಸಮಾವೇಶ (Sonia Gandhi) ನಡೆದಿತ್ತು. ಕರ್ನಾಟಕ (Karnataka) ಚುನಾವಣೆಯಲ್ಲಿ ತಮ್ಮ ಏಕೈಕ ಪ್ರಚಾರ ಸಭೆಯುದ್ಧಕ್ಕೂ ಸೋನಿಯಾ ಬಿಜೆಪಿ (BJP) ವಿರುದ್ಧ ಗುಡುಗಿದ್ದರು. ಸೋನಿಯಾ ಗಾಂಧಿ ಅವರು ಸಮಾವೇಶದಲ್ಲಿ ಮಾತನಾಡಿದ್ದ ಅಂಶಗಳನ್ನು ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿತ್ತು. ಇದರ ಬೆನ್ನಲ್ಲೇ ತಮಿಳುನಾಡು (Tamil Nadu) ಬಿಜೆಪಿ ರಾಜ್ಯಾಧ್ಯಕ್ಷ, ಕರ್ನಾಟಕ ಚುನಾವಣಾ ಉಸ್ತುವಾಗಿ ಅಣ್ಣಾಮಲೈ (Annamalai) ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಸೋನಿಯಾ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಅಲ್ಲದೆ, ನಿಮ್ಮನ್ನು ನೀವೇ ಅಪಹಾಸ್ಯ ಮಾಡಿಕೊಳ್ಳುವುದನ್ನು ನಿಲ್ಲಿಸಿ ಎಂದು ವ್ಯಂಗ್ಯವಾಡಿದ್ದಾರೆ.
ಸೋನಿಯಾ ಹೇಳಿದ್ದೇನು?
ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಸೋನಿಯಾ ಗಾಂಧಿ ಅವರ ಹೇಳಿಕೆಯನ್ನು ಹಂಚಿಕೊಂಡಿದ್ದರು. ಸೋನಿಯಾ ಗಾಂಧಿ ಅವರು 6.5 ಕೋಟಿ ಕನ್ನಡಿಗರಿಗೆ ಬಲವಾದ ಸಂದೇಶವನ್ನು ಕಳುಹಿಸಿದ್ದಾರೆ. ಕರ್ನಾಟಕದ ಪ್ರತಿಷ್ಠೆ, ಸಾರ್ವಭೌಮತೆ ಅಥವಾ ಸಮಗ್ರತೆಗೆ ಧಕ್ಕೆ ತರಲು ಕಾಂಗ್ರೆಸ್ ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ ಎಂದು ಬರೆದುಕೊಂಡಿತ್ತು.
ಹುಬ್ಬಳ್ಳಿ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯೂ ಭಾರತೀಯ ಜನತಾ ಪಕ್ಷವನ್ನು ವಿಚಲಿತಗೊಳಿಸಿದೆ. ದೇಶದಲ್ಲಿ ದ್ವೇಷ ಹರಡುತ್ತಿರುವವರ ವಿರುದ್ಧ ಭಾರತ್ ಜೋಡೋ ಯಾತ್ರೆ ಮಾಡಲಾಗಿದ್ದು, ಇದರಿಂದ ಬಿಜೆಪಿಗೆ ಕಸಿವಿಸಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದರು.
ಕಾಂಗ್ರೆಸ್ ವಿರುದ್ಧ ಅಣ್ಣಾಮಲೈ ಕಿಡಿ
ಸೋನಿಯಾ ಹೇಳಿಕೆ ಕುರಿತಂತೆ ವಾಗ್ದಾಳಿ ನಡೆಸಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು, ನಿಷೇಧಿತ ಪಿಎಫ್‌ಐ ಜೊತೆ ಕೈಜೋಡಿಸಿರುವ ಕಾಂಗ್ರೆಸ್ ಪಕ್ಷವು ಚುನಾವಣಾ ಲಾಭಕ್ಕಾಗಿ ಎಸ್‌ಡಿಪಿಐಯಂತಹ ಪಕ್ಷಗಳೊಂದಿಗೆ ಕೈ ಜೋಡಿಸಿವೆ. ಉಗ್ರರಿಗೆ ಹಣಕಾಸು ನೆರವು ನೀಡುವ ಸಂಬಂಧ ಕೇಂದ್ರ ಏಜೆನ್ಸಿಗಳು ದಾಳಿ ನಡೆಸಿ ಅಭ್ಯರ್ಥಿಗಳಿಗೆ ಬೆಂಬಲ ನೀಡುವವರು ಸಾರ್ವಬೌಮತ್ವದ ಬಗ್ಗೆ ಮಾತನಾಡುತ್ತಿದ್ದಾರೆ. ದಯವಿಟ್ಟು ನಿಮ್ಮನ್ನು ನೀವು ಅಪಹಾಸ್ಯ ಮಾಡಿಕೊಳ್ಳುವುದನ್ನು ನಿಲ್ಲಿಸಿ ಎಂದು ಬರೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ