ಬೆಂಗಳೂರು: ರಾಜ್ಯಾದ್ಯಂತ ಮತ ಎಣಿಕೆ ಪ್ರಕ್ರಿಯೆ (Vote Counting Process) ಪ್ರಾರಂಭಗಗೊಂಡಿದೆ. ಮೊದಲಿಗೆ ಅಂಚೆಮತಗಳನ್ನು (Postal Votes) ಎಣಿಕೆ ಮಾಡಲಾಗುತ್ತದೆ. ಮತ ಎಣಿಕೆ ಕೇಂದ್ರಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ನಿಷೇಧಿಸಲಾಗಿದೆ. ಈ ಹಿನ್ನೆಲೆ ಮತಎಣಿಕೆ ಪ್ರವೇಶ ದ್ವಾರದ ಬಳಿಯೇ ಸಿಬ್ಬಂದಿ, ಪೊಲೀಸರು ಮತ್ತು ಚುನಾವಣಾ ಏಜೆಂಟ್ಗಳನ್ನು ಪರಿಶೀಲಿಸಿ ಒಳಗೆ ಬಿಡಲಾಗ್ತಿದೆ. ಇನ್ನು ಮತ ಎಣಿಕೆ ಕೇಂದ್ರಗಳತ್ತ ಜನರು ಆಗಮಿಸುತ್ತಿದ್ದಾರೆ. ಮತ ಎಣಿಕಾ ಕೇಂದ್ರದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಈ ಬಾರಿ ಚುನಾವಣೆಗೆ ರಾಜ್ಯಾದ್ಯಂತ ಒಟ್ಟು 2615 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, ಅವರೆಲ್ಲರ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ.
224 ಕ್ಷೇತ್ರಗಳಿಗೆ ಮತದಾನ
ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 10ರಂದು ಚುನಾವಣೆ ನಡೆದಿತ್ತು. ಇಂದು ಫಲಿತಾಂಶ ಪ್ರಕಟವಾಗ್ತಿದೆ. ಮಾರ್ಚ್ 30ರಂದು ಸುದ್ದಿಗೋಷ್ಠಿ ನಡೆಸಿದ್ದ ಚುನಾವಣಾ ಆಯೋಗ ದಿನಾಂಕವನ್ನು ಪ್ರಕಟಿಸಿತ್ತು. ಚುನಾವಣಾ ಕಣದಲ್ಲಿ 2,600ಕ್ಕೂ ಅಧಿಕ ಅಭ್ಯರ್ಥಿಗಳಿದ್ದಾರೆ. ಸಣ್ಣ ಪುಟ್ಟ ಗಲಾಟೆ ಹೊರತುಪಡಿಸಿದ್ರೆ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ ನಡೆದಿದೆ.
ಮನೆಯಲ್ಲಿಯೇ ಮತದಾನ ಮಾಡುವ ಅವಕಾಶ
ಈ ಬಾರಿ ಮೊದಲ ಬಾರಿಗೆ ಕರ್ನಾಟಕ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟವರು, ದಿವ್ಯಾಂಗರಿಗೆ ಮನೆಯಲ್ಲಿಯೇ ಕುಳಿತು ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ನೋಂದಣಿ ಮಾಡಿಕೊಂಡ ಮತದಾರರ ಮನೆಗಳಿಗೆ ಅಧಿಕಾರಿಗಳೇ ತೆರಳಿ ಮತದಾನ ಮಾಡಿಸಿದ್ದು ಈ ಬಾರಿಯ ಚುನಾವಣೆಯ ವಿಶೇಷವಾಗಿತ್ತು.
ಈ ಬಾರಿ ಗರಿಷ್ಠ ಮತದಾನ
ಚುನಾವಣಾ ಆಯೋಗ ಹಂಚಿಕೊಂಡಿರುವ ಮಾಹಿತಿ ಪ್ರಕಾರ ಇಡೀ ರಾಜ್ಯದಲ್ಲಿ ಇರುವ 5,30,85,566 ಮತದಾರರ ಪೈಕಿ ಶೇ.72.67 ರಷ್ಟು ಮತದಾನವಾಗಿದೆ. ಅಂದರೆ ರಾಜ್ಯದ ಮತದಾರರ ಪೈಕಿ ಒಟ್ಟು 3.85 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಬಾರಿ ಮತದಾನದಲ್ಲಿ 66 ವರ್ಷಗಳ ನಂತರ ಗರಿಷ್ಠ ಮತದಾನ ಆಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಇದನ್ನೂ ಓದಿ: LIVE Coverage of ಕರ್ನಾಟಕ ಚುನಾವಣಾ ಫಲಿತಾಂಶ 2023
ಅತ್ಯಧಿಕ ಮತ್ತು ಕಡಿಮೆ ಮತದಾನ ಎಲ್ಲಿ?
ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ರಾಜ್ಯದ ಅತಿ ಹೆಚ್ಚು ಮತದಾನವಾಗಿದೆ. ಅಲ್ಲಿ ಶೇ.90.93ರಷ್ಟು ಮತದಾನವಾಗಿದ್ದು, ಬೆಂಗಳೂರಿನ ಹೊರವಲಯದಲ್ಲಿರುವ ಹೊಸಕೋಟೆಯಲ್ಲಿ ಶೇ.90.9ರಷ್ಟು ಮತದಾನವಾಗಿದೆ. ಬೆಂಗಳೂರಿನ ಸರ್ ಸಿವಿ ರಾಮನ್ ಕ್ಷೇತ್ರದಲ್ಲಿ ಶೇಕಡಾ 42.1 ರಷ್ಟು ಮತದಾನವಾಗಿದ್ದು, ರಾಜ್ಯದಲ್ಲಿ ಅತ್ಯಂತ ಕಡಿಮೆ ಮತದಾನವಾದ ಕ್ಷೇತ್ರವಾಗಿದೆ.
ಈ ವರ್ಷವೂ ರಾಜಧಾನಿಯಲ್ಲಿ ಕಡಿಮೆ ಮತದಾನ
ಬೆಂಗಳೂರು ಕೇಂದ್ರ- ಶೇ.54.45, ಬೆಂಗಳೂರು ಉತ್ತರ ಶೇ.50.02, ಬೆಂಗಳೂರು ದಕ್ಷಿಣ-ಶೇ.51.15, ಬೆಂಗಳೂರು ನಗರ ಶೇ.53.71ರಷ್ಟು ಮತದಾನದ ಪ್ರಮಾಣ ದಾಖಲಾಗಿದೆ. ಈ ಮೂಲಕ ರಾಜ್ಯ ರಾಜಧಾನಿಯ ಮತದಾರರು ಈ ಚುನಾವಣೆಯಲ್ಲೂ ಕಡಿಮೆ ಮತದಾನ ಮಾಡಿದ್ದಾರೆ.
ಇದನ್ನೂ ಓದಿ: HD Kumaraswamy: ಷರತ್ತುಗಳ ಜೊತೆಯಲ್ಲಿ ಮೈತ್ರಿಗೆ ಸಿದ್ಧ ಎಂದ HDK? ಯಾರತ್ತ ದಳಪತಿಗಳ ಒಲವು?
ಮತಗಟ್ಟೆ ಆವರಣದಲ್ಲೇ ಕುಸಿದು ಬಿದ್ದು ವ್ಯಕ್ತಿ ಸಾವು
ಮತದಾನ ಮಾಡಿದ ಕೆಲವೇ ಕ್ಷಣಗಳ ಬಳಿಕ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹಾಸನ (Hassan) ಜಿಲ್ಲೆಯ ಬೇಲೂರು ತಾಲೂಕಿನ ಚಿಕ್ಕೋಲೆ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು 49 ವರ್ಷದ ಜಯಣ್ಣ ಎಂದು ಗುರುತಿಸಲಾಗಿದೆ. ಮತದಾನ ಮಾಡಲು ಮತಕೇಂದ್ರಕ್ಕೆ (Polling Booth) ಬಂದಿದ್ದ ಜಯಣ್ಣ ಸಾರತಿ ಸಾಲಿನಲ್ಲಿ ನಿಂತುಕೊಂಡು ತಮ್ಮ ಹಕ್ಕು ಚಲಾಯಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ