ಬೆಂಗಳೂರು: ಕಾಂಗ್ರೆಸ್ (Congress) ಪಕ್ಷ ಸರ್ಕಾರ ರಚನೆಯತ್ತ ಸಾಗಿದ್ದು, ಜನಾಶೀರ್ವಾದ ಕಂಡು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC DK Shivakumar) ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಗೆಲುವು ಖಚಿತವಾಗ್ತಿದ್ದಂತೆ ಮನೆ ಮುಂಭಾಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆ ಶಿವಕುಮಾರ್, ಅಖಂಡ ಕರ್ನಾಟಕದ ಮಹಾ ಜನತೆಗೆ ಧನ್ಯವಾದ ತಿಳಿಸುತ್ತೇನೆ. ನಮಗೆ ಸ್ಪಷ್ಟ ಬಹುಮತ ನೀಡಿದ್ದಕ್ಕೆ ರಾಜ್ಯದ ಜನರ ಪಾದಗಳಿಗೆ ನನ್ನ ಸಾಷ್ಟಂಗ ನಮಸ್ಕಾರಗಳು. ನಮ್ಮ ಕಾರ್ಯಕರ್ತರು ಆವೇಶದಲ್ಲಿದ್ದಾರೆ. ನಾನೇ ಬಂದು ಗೆಲುವಿನ ಸರ್ಟಿಫಿಕೇಟ್ ಪಡೆದುಕೊಳ್ಳಬೇಕೆಂದು ಹೇಳುತ್ತಿದ್ದಾರೆ. ಹಾಗಾಗಿ ರಾಮನಗರ ಮತ್ತು ಕನಕಪುರಕ್ಕೆ ತೆರಳುತ್ತಿದ್ದೇನೆ. ನಂತರ ಪಕ್ಷದ ಕಚೇರಿಗೆ ತೆರಳಲಿದ್ದೇನೆ ಎಂದು ಹೇಳಿದರು.
ನಮ್ಮ ಎಲ್ಲಾ ನಾಯರಕು ಕಠಿಣ ಪರಿಶ್ರಮದಿಂದ ಕೆಲಸ ಮಾಡಿದ್ದಾರೆ. ಈ ಗೆಲುವಿನ ಹಿಂದೆ ಎಲ್ಲಾ ನಾಯಕರ ಒಗ್ಗಟ್ಟಿನ ಕೆಲಸವಿದೆ. ಜನರು ನಮ್ಮ ಮೇಲೆ ವಿಶ್ವಾಸ ಇರಿಸಿ ಬಹುಮತ ನೀಡಿದ್ದಾರೆ.
ನಾನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊಟ್ಟ ಮಾತಿನಂತೆ ನಾನು ಪಕ್ಷವನ್ನು ಗೆಲುವಿನ ದಡ ಸೇರಿಸಿದ್ದೇನೆ.
ಈ ಬಿಜೆಪಿ ನಾಯಕರು ನನ್ನನ್ನು ಜೈಲಿಗೆ ಹಾಕಿದ್ದರು. ಈ ವೇಳೆ ಸೋನಿಯಾ ಗಾಂಧಿ ಅವರು ಜೈಲಿಗೆ ಬಂದು ನನ್ನನ್ನು ಭೇಟಿಯಾಗಿರೋದನ್ನು ನಾನೂ ಎಂದಿಗೂ ಮರೆಯಲ್ಲ ಎಂದು ಹೇಳುತ್ತಾ ಭಾವುಕರಾಗಿ ಕಣ್ಣೀರಿಟ್ಟರು.
224 ಕ್ಷೇತ್ರಗಳಿಗೆ ಮತದಾನ
ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 10ರಂದು ಚುನಾವಣೆ ನಡೆದಿತ್ತು. ಇಂದು ಫಲಿತಾಂಶ ಪ್ರಕಟವಾಗ್ತಿದೆ. ಮಾರ್ಚ್ 30ರಂದು ಸುದ್ದಿಗೋಷ್ಠಿ ನಡೆಸಿದ್ದ ಚುನಾವಣಾ ಆಯೋಗ ದಿನಾಂಕವನ್ನು ಪ್ರಕಟಿಸಿತ್ತು. ಚುನಾವಣಾ ಕಣದಲ್ಲಿ 2,600ಕ್ಕೂ ಅಧಿಕ ಅಭ್ಯರ್ಥಿಗಳಿದ್ದಾರೆ. ಸಣ್ಣ ಪುಟ್ಟ ಗಲಾಟೆ ಹೊರತುಪಡಿಸಿದ್ರೆ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ ನಡೆದಿದೆ.
ಮನೆಯಲ್ಲಿಯೇ ಮತದಾನ ಮಾಡುವ ಅವಕಾಶ
ಈ ಬಾರಿ ಮೊದಲ ಬಾರಿಗೆ ಕರ್ನಾಟಕ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟವರು, ದಿವ್ಯಾಂಗರಿಗೆ ಮನೆಯಲ್ಲಿಯೇ ಕುಳಿತು ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ನೋಂದಣಿ ಮಾಡಿಕೊಂಡ ಮತದಾರರ ಮನೆಗಳಿಗೆ ಅಧಿಕಾರಿಗಳೇ ತೆರಳಿ ಮತದಾನ ಮಾಡಿಸಿದ್ದು ಈ ಬಾರಿಯ ಚುನಾವಣೆಯ ವಿಶೇಷವಾಗಿತ್ತು.
ಇದನ್ನೂ ಓದಿ: Jagadish Shettar: ಬಿಜೆಪಿ ಜೊತೆಗಿನ 4 ದಶಕಗಳ ಸಂಬಂಧ ಕಡಿದುಕೊಂಡಿದ್ದ ಮಾಜಿ ಸಿಎಂಗೆ ಹೀನಾಯ ಸೋಲು
ಈ ಬಾರಿ ಗರಿಷ್ಠ ಮತದಾನ
ಚುನಾವಣಾ ಆಯೋಗ ಹಂಚಿಕೊಂಡಿರುವ ಮಾಹಿತಿ ಪ್ರಕಾರ ಇಡೀ ರಾಜ್ಯದಲ್ಲಿ ಇರುವ 5,30,85,566 ಮತದಾರರ ಪೈಕಿ ಶೇ.72.67 ರಷ್ಟು ಮತದಾನವಾಗಿದೆ. ಅಂದರೆ ರಾಜ್ಯದ ಮತದಾರರ ಪೈಕಿ ಒಟ್ಟು 3.85 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಬಾರಿ ಮತದಾನದಲ್ಲಿ 66 ವರ್ಷಗಳ ನಂತರ ಗರಿಷ್ಠ ಮತದಾನ ಆಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ