ಪುತ್ತೂರು: ರಾಜ್ಯ ವಿಧಾನಸಭಾ ಚುನಾವಣೆಯ (Karnataka Assembly Election Results) ಮತ ಎಣಿಕೆ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷ ಸರಳ ಬಹುಮತ ದಾಟುವತ್ತ ದಾಪುಗಾಲು ಹಾಕುತ್ತಿದೆ. ಇದೆಲ್ಲದರ ಮಧ್ಯೆ ಹಿಂದುತ್ವದ ಭದ್ರಕೋಟೆ ಎನಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ (Puttur Constituency) ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದು ತೀವ್ರ ಮುಖಭಂಗ ಉಂಟಾಗಿದೆ.
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಕೋಡಿಂಬಾಡಿ ಮುನ್ನಡೆ ಕಾಯ್ದುಕೊಂಡಿದ್ದು, ಬಿಜೆಪಿ ವಿರುದ್ಧ ಸಿಡಿದೆದ್ದಿದ್ದ ಅರುಣ್ ಕುಮಾರ್ ಪುತ್ತಿಲ ಎರಡನೇ ಸ್ಥಾನ ಪಡೆದಿದ್ದಾರೆ. ಆದರೆ ಬಿಜೆಪಿ ಪಕ್ಷದ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರಿಗೆ ತೀವ್ರ ಹಿನ್ನಡೆ ಉಂಟಾಗಿದ್ದು ಆ ಮೂಲಕ ಬಿಜೆಪಿ ಪಕ್ಷ ಮೂರನೇ ಸ್ಥಾನಕ್ಕೆ ಕುಸಿದಿದೆ. ವಿಶೇಷ ಅಂದ್ರೆ ಇದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತವರು ಊರಾಗಿದೆ.
ಇದನ್ನೂ ಓದಿ: Karnataka Election Result: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾರು ಹಿನ್ನಡೆ? ಯಾರು ಮುನ್ನಡೆ? ಇಲ್ಲಿದೆ ಡೀಟೇಲ್ಸ್
ಐದನೇ ಸುತ್ತಿನ ಮತ ಎಣಿಕೆ ಪ್ರಕಾರ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು 20094 ಮತಗಳನ್ನು ಪಡೆದಿದ್ದು, ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ 18873 ಮತಗಳನ್ನು ಪಡೆದಿದ್ದಾರೆ. ಆದ್ರೆ ಬಿಜೆಪಿಯ ಆಶಾ ತಿಮ್ಮಪ್ಪ ಗೌಡ ತೀವ್ರ ಹಿನ್ನಡೆ ಅನುಭವಿಸಿದ್ದು ಕೇವಲ 12505 ಮತಗಳನ್ನು ಪಡೆಯಲಷ್ಟೇ ಶಕ್ತರರಾಗಿದ್ದಾರೆ.
ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ ಉಲ್ಟಾ!
ವರುಣಾ ಮತ್ತು ಚಾಮರಾಜನಗರದಲ್ಲಿ ಸ್ಪರ್ಧಿಸಿದ್ದ ವಿ ಸೋಮಣ್ಣ ಅವರಿಗೆ ಎರಡೂ ಕ್ಷೇತ್ರಗಳಲ್ಲಿ ಹಿನ್ನಡೆ ಉಂಟಾಗಿದೆ. ಹೈಕಮಾಂಡ್ ನಿರ್ದೇಶನದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸೋಲಿಸುವ ನಿಟ್ಟಿನಲ್ಲಿ ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ವಿ ಸೋಮಣ್ಣ ಅವರನ್ನು ಕಣಕ್ಕಿಳಿಸಿತ್ತು. ಇದರ ಜೊತೆಗೆ ವರುಣಾ ಕ್ಷೇತ್ರ ಸಿದ್ದರಾಮಯ್ಯ ಅವರ ಭದ್ರಕೋಟೆ ಆಗಿರೋದ್ರಿಂದ ವರುಣಾದಲ್ಲಿ ಸೋಮಣ್ಣ ಸೋಲುವ ಭೀತಿಯಿಂದ ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದಲೂ ಅವರಿಗೆ ಟಿಕೆಟ್ ನೀಡಲಾಗಿತ್ತು.
ಇದೀಗ ಈಗ ಬಂದಿರುವ ಮಾಹಿತಿ ಪ್ರಕಾರ ವಿ ಸೋಮಣ್ಣ ಅವರಿಗೆ ಚಾಮರಾಜನಗರ ಮತ್ತು ವರುಣಾ ವಿಧಾನಸಭಾ ಕ್ಷೇತ್ರ ಎರಡರಲ್ಲೂ ಹಿನ್ನಡೆ ಉಂಟಾಗಿದೆ. ಚಾಮರಾಜನಗರದಲ್ಲಿ ಸೋಮಣ್ಣ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಸಿ.ಪುಟ್ಟರಂಗ ಶೆಟ್ಟಿ ಮುನ್ನಡೆ ಕಾಯ್ದಕೊಂಡಿದ್ದು, ವರುಣಾದಲ್ಲಂತೂ ಸಿದ್ದರಾಮಯ್ಯ ಭಾರೀ ಅಂತರದಿಂದ ಮುನ್ನಡೆಯಲ್ಲಿದ್ದಾರೆ. ಸದ್ಯ ಎರಡೂ ಕ್ಷೇತ್ರಗಳಲ್ಲೂ ಹಿನ್ನಡೆ ಉಂಟಾಗಿರೋದ್ರಿಂದ ವಿ ಸೋಮಣ್ಣ ಕಂಗಾಲಾಗಿದ್ದಾರೆ. ವರುಣಾದಲ್ಲಿ ತೀವ್ರ ಹಿನ್ನಡೆ ಅನುಭವಿಸುತ್ತಿದ್ದಂತೆ ವಿ ಸೋಮಣ್ಣ ಅವರು ಮತಗಟ್ಟೆಯಿಂದ ಏನೂ ಮಾತಾಡದೆ ಹೊರಬಂದಿದ್ದು, ಸಪ್ಪೆ ಮೋರೆ ಹಾಕಿಕೊಂಡು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡದೆಯೂ ಹೊರಟಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಚುನಾವಣಾ ಫಲಿತಾಂಶ 2023 LIVE: ಕಾಂಗ್ರೆಸ್ ‘ಗ್ಯಾರಂಟಿ’ಗೆ ಜನಸಾಮಾನ್ಯರ ಬಹುಪರಾಕ್, ವೋಟ್ ಓಟದಲ್ಲಿ ಕೈ ಮುನ್ನಡೆ
ಎಷ್ಟು ಅಭ್ಯರ್ಥಿಗಳು ಕಣದಲ್ಲಿ?
ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2615 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದು, ಆ ಪೈಕಿ 2430 ಮಂದಿ ಪುರುಷ ಅಭ್ಯರ್ಥಿಗಳಾದ್ರೆ, 184 ಮಂದಿ ಮಹಿಳಾ ಅಭ್ಯರ್ಥಿಗಳು ಇದ್ದಾರೆ. ಜೊತೆಗೆ ಓರ್ವ ಲೈಂಗಿಕ ಅಲ್ಪಸಂಖ್ಯಾತ (ಟ್ರಾನ್ಸ್‌ಜೆಂಡರ್) ಸಮುದಾಯದ ಅಭ್ಯರ್ಥಿ ಇದ್ದಾರೆ. ಅಭ್ಯರ್ಥಿಗಳ ಪೈಕಿ ಬಿಜೆಪಿಯಿಂದ 224, ಕಾಂಗ್ರೆಸ್ನಿಂದ 223, ಜೆಡಿಎಸ್ನಿಂದ 209 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಇನ್ನು 918 ಮಂದಿ ಪಕ್ಷೇತರ ಅಭ್ಯರ್ಥಿಗಳಾದ್ರೆ, ಎಎಪಿ 209, ಸಿಪಿಐಎಂ 4, ಬಿಎಸ್ಪಿ 133 ಹಾಗೂ ಎನ್ಸಿಪಿ ಇಬ್ಬರು ಅಭ್ಯರ್ಥಿಗಳನ್ನು ಕದನಕ್ಕೆ ಇಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ