ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹಿನ್ನೆಲೆ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಮಧ್ಯಾಹ್ನ ವೇಳೆ ಎಲೆಕ್ಷನ್ ರಿಸಲ್ಟ್‌ನ ಬಹುತೇಕ ಚಿತ್ರಣ ಸ್ಪಷ್ಟವಾಗಿ ಹೊರಬೀಳಲಿದೆ. ಈಗಾಗಲೇ ಇವಿಎಂ ಮತ ಎಣಿಕೆ ಆರಂಭಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (Dakshina Kannada) ಕೂಡ ಮತ ಎಣಿಕೆ ಪ್ರಕ್ರಿಯೆ ಕ್ಷಣ ಕ್ಷಣಕ್ಕೆ ಕುತೂಹಲ ಕೆರಳಿಸುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಮತ ಎಣಿಕೆಯ ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ಎದುರಾದರೂ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.
ಯಾರ್ಯಾರು ಮುನ್ನಡೆ-ಹಿನ್ನಡೆ?
ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಯು.ಟಿ.ಖಾದರ್ ಆರಂಭಿಕ ಮುನ್ನಡೆ ಕಾಯ್ದುಕೊಂಡರೆ, ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯ ವೇದವ್ಯಾಸ ಕಾಮತ್ ಲೀಡ್‌ನಲ್ಲಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿಯ ಭರತ್ ಶೆಟ್ಟಿ ಆರಂಭಿಕ ಮುನ್ನಡೆಯಲ್ಲಿದ್ದಾರೆ, ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಿ ರಮಾನಾಥ ರೈ ಮುನ್ನಡೆಯಲ್ಲಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಚುನಾವಣಾ ಫಲಿತಾಂಶ 2023 LIVE
ಪುತ್ತೂರು ಕ್ಷೇತ್ರದಲ್ಲಿ ಆರಂಭಿಕ ಮುನ್ನಡೆ ಕಾಯ್ದಕೊಂಡಿದ್ದ ಕಾಂಗ್ರೆಸ್‌ನ ಅಶೋಕ್ ರೈ ಅವರನ್ನು ಹಿಂದಿಕ್ಕಿ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮುನ್ನಡೆ ಕಾಯ್ದಕೊಂಡರು. ಇದೀಗ ಮತ್ತೆ ಅಶೋಕ್ ರೈ ಮುನ್ನಡೆಯಲ್ಲಿದ್ದಾರೆ. ಇನ್ನು ಬೆಳ್ತಂಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಕ್ಷಿತ್ ಶಿವರಾಂ ಅವರನ್ನು ಹಿಂದಿಕ್ಕಿ ಬಿಜೆಪಿಯ ಹರೀಶ್ ಪೂಂಜಾ ಮುನ್ನಡೆಯಲ್ಲಿದ್ದಾರರೆ. ಮೂಡಬಿದ್ರೆ ಕ್ಷೇತ್ರದಲ್ಲಿ ಬಿಜೆಪಿಯ ಉಮಾನಾಥ್ ಕೋಟ್ಯಾನ್ ಹಿಂದಿಕ್ಕಿ ಕಾಂಗ್ರೆಸ್‌ನ ಮಿಥುನ್ ರೈ ಮುನ್ನಡೆಯಲ್ಲಿದ್ದಾರೆ. ಸುಳ್ಯ ಕ್ಷೇತ್ರದಲ್ಲಿ ಬಿಜೆಪಿಯ ಭಾಗೀರಥಿ ಮುರುಳ್ಯ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಮತಯಂತ್ರಗಳು ಭದ್ರ
ಮೇ 10ರಂದು ನಡೆದ ಮತದಾನದ ದಿನ ರಾಜ್ಯದ 37,777 ಪ್ರದೇಶದಲ್ಲಿ ಹಾಕಲಾಗಿದ್ದ 58,545 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು. ರಾಜ್ಯದ 224 ಕ್ಷೇತ್ರಗಳ ಮತ ಯಂತ್ರಗಳನ್ನು ಚುನಾವಣಾ ಸಿಬ್ಬಂದಿ ಭದ್ರವಾಗಿ ಇಟ್ಟಿದ್ದು, ಸ್ಟ್ರಾಂಗ್ ರೂಂಗಳಲ್ಲಿ ಮೂರನೇ ಹಂತದ ಭದ್ರತೆಯನ್ನು ಮಂತ ಯಂತ್ರಗಳಿಗೆ ಒದಗಿಸಲಾಗಿದೆ. 224 ಕ್ಷೇತ್ರಗಳ ಮತ ಎಣಿಕೆ ಕಾರ್ಯ 36 ಕೇಂದ್ರಗಳಲ್ಲಿ ಏಕಕಾಲದಲ್ಲಿ ನಡೆಯಲಿದ್ದು, ಸಾವಿರಾರು ಸಿಬ್ಬಂದಿ ಚುನಾವಣಾ ಎಣಿಕೆ ವೇಳೆ ಕಾರ್ಯ ನಿರ್ವಹಿಸಲಿದ್ದಾರೆ.
ಎಷ್ಟು ಅಭ್ಯರ್ಥಿಗಳು ಕಣದಲ್ಲಿ?
ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2615 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದು, ಆ ಪೈಕಿ 2430 ಮಂದಿ ಪುರುಷ ಅಭ್ಯರ್ಥಿಗಳಾದ್ರೆ, 184 ಮಂದಿ ಮಹಿಳಾ ಅಭ್ಯರ್ಥಿಗಳು ಇದ್ದಾರೆ. ಜೊತೆಗೆ ಓರ್ವ ಲೈಂಗಿಕ ಅಲ್ಪಸಂಖ್ಯಾತ (ಟ್ರಾನ್ಸ್‌ಜೆಂಡರ್) ಸಮುದಾಯದ ಅಭ್ಯರ್ಥಿ ಇದ್ದಾರೆ. ಅಭ್ಯರ್ಥಿಗಳ ಪೈಕಿ ಬಿಜೆಪಿಯಿಂದ 224, ಕಾಂಗ್ರೆಸ್ನಿಂದ 223, ಜೆಡಿಎಸ್ನಿಂದ 209 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಇನ್ನು 918 ಮಂದಿ ಪಕ್ಷೇತರ ಅಭ್ಯರ್ಥಿಗಳಾದ್ರೆ, ಎಎಪಿ 209, ಸಿಪಿಐಎಂ 4, ಬಿಎಸ್ಪಿ 133 ಹಾಗೂ ಎನ್ಸಿಪಿ ಇಬ್ಬರು ಅಭ್ಯರ್ಥಿಗಳನ್ನು ಕದನಕ್ಕೆ ಇಳಿಸಿದೆ.
ಇದನ್ನೂ ಓದಿ: KM Shivalingegowda: ಮತ ಎಣಿಕೆಗೂ ಮುನ್ನವೇ ಕಾಂಗ್ರೆಸ್ ಅಭ್ಯರ್ಥಿ ಶಿವಲಿಂಗೇಗೌಡ ಹಿಂಗಂದ್ರು!
ಖಾಕಿ ಸರ್ಪಗಾವಲು
ಇನ್ನು ರಾಜ್ಯಾದ್ಯಂತ ನಡೆಯುತ್ತಿರುವ ಚುನಾವಣಾ ಫಲಿತಾಂಶ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯಬಾರದು ಎನ್ನುವ ದೃಷ್ಟಿಯಿಂದ ಎಲ್ಲಾ ಮತ ಎಣಿಕೆ ಕೇಂದ್ರಗಳಲ್ಲಿ ಭಾರೀ ಪೊಲೀಸ್ ಭದ್ರತೆ ಏರ್ಪಡಿಸಲಾಗಿದ್ದು, ಪ್ರತಿಯೊಂದು ಮತ ಎಣಿಕೆ ಕೇಂದ್ರಗಳಲ್ಲೂ ಅಸಂಖ್ಯ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ನಿನ್ನೆ ರಾತ್ರಿ 10ರಿಂದ ಇಂದು ರಾತ್ರಿ 12ರ ತನಕ ಮದ್ಯ ಮಾರಾಟವನ್ನು ನಿಷೇಧಿಲಾಗಿದ್ದು, ಮುಖ್ಯವಾಗಿ ಮತ ಎಣಿಕೆ ಕೇಂದ್ರದ 200 ಮೀಟರ್ ಸುತ್ತಮುತ್ತ ನಿಷೇಧಾಜ್ಞೆ ಹಾಕಲಾಗಿದ್ದು, ಮತ ಎಣಿಕೆ ಕೇಂದ್ರದ ಬಳಿ 5ಕ್ಕಿಂತ ಹೆಚ್ಚು ಜನ ಸೇರೋದು, ವಿಜಯೋತ್ಸವ, ಮೆರವಣಿಗೆ ಇನ್ನಿತರ ಸಮಾರಂಭಗಳನ್ನು ನಿಷೇಧಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ