ಕೋಲಾರ: ದೇಶದೆಲ್ಲೆಡೆ ಭಾರೀ ಕುತೂಹಲ ಮೂಡಿಸಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Election Result) ಫಲಿತಾಂಶ ಪ್ರಕ್ರಿಯೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಹೊರ ಬೀಳಲಿದೆ. ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಿರುವ ಎಲ್ಲಾ ಅಭ್ಯರ್ಥಿಗಳ ಎದೆಬಡಿತ ಜೋರಾಗಿದ್ದು, ಫಲಿತಾಂಶ ಏನಾಗಲಿದ್ಯೋ ಏನೋ ಎಂಬ ಕುತೂಹಲ ಮೂಡಿಸಿದೆ.
10ನೇ ಬಾರಿ ಫೈಟಿಂಗ್!
ಈ ಮಧ್ಯೆ ಕೋಲಾರ ಜಿಲ್ಲೆಯ ಚುನಾವಣಾ ಫಲಿತಾಂಶ ಕೂಡ ಭಾರೀ ಕುತೂಹಲ ಕೆರಳಿಸಿದ್ದು, ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಜೆಡಿಎಸ್ ಅಭ್ಯರ್ಥಿ ವೆಂಕಟಶಿವಾ ರೆಡ್ಡಿ ಮಧ್ಯೆ ಭಾರೀ ಜಿದ್ದಾಜಿದ್ದಿನ ಫೈಟ್ ಉಂಟಾಗಿದೆ. ಸತತ 10 ನೇ ಬಾರಿಗೆ ಈ ಇಬ್ಬರು ಘಟಾನುಘಟಿ ಸ್ಪರ್ಧಿಗಳು ಪರಸ್ಪರ ನೇರ ಮುಖಾಮುಖಿಯಲ್ಲಿದ್ದು, ಈ ಬಾರಿ ಯಾರು ಗೆಲ್ಲಲಿದ್ದಾರೆ ಅನ್ನೋದು ಭಾರೀ ಕುತೂಹಲ ಕೆರಳಿಸಿದೆ.
ಇಬ್ಬರ ಜಗಳದಿಂದ ಮೂರನೆಯವರಿಗೆ ಲಾಭ?
ಇತ್ತ ಕೋಲಾರದಲ್ಲಿ ಕೂಡ ವರ್ತೂರು ಪ್ರಕಾಶ್, ಕೊತ್ತೂರು ಮಂಜುನಾಥ್ ಮತ್ತು ಶ್ರೀನಾಥ್ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಮಾಲೂರಿನಲ್ಲಿ ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯ್ ಕುಮಾರ್ ಅವರು ಮೂರು ಪಕ್ಷಗಳಿಗೂ ಸೆಡ್ಡು ಹೊಡೆಯುವ ಮಟ್ಟಕ್ಕೆ ಪ್ರಚಾರ ನಡೆಸಿ ಗೆಲ್ಲುವ ನಿರೀಕ್ಷೆ ಹುಟ್ಟಿಸಿದ್ದಾರೆ. ಅತ್ತ ಕೆಜಿಎಫ್ ನಲ್ಲಿ ಕೆಎಚ್ ಮುನಿಯಪ್ಪ ಪುತ್ರಿ ರೂಪಾ ಶಶಿಧರ್ ಹಾಗು ವೈ ಸಂಪಂಗಿ ಪುತ್ರಿ ಅಶ್ವಿನಿ ಕಣದಲ್ಲಿದ್ದಾರೆ. ಇಬ್ಬರ ನಡುವೆಯೂ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು, ಅಚ್ಚರಿಯ ವಿಷಯ ಅಂದ್ರರೆ ಇವರಿಬ್ಬರಿಗೂ ಟಕ್ಕರ್ ಕೊಡುವ ಮಟ್ಟಿಗೆ ಭರ್ಜರಿಯಾಗಿ ಪ್ರಚಾರ ನಡೆಸಿದ್ದ RPI ಪಕ್ಷದ ಅಭ್ಯರ್ಥಿ ಎಸ್.ಆರ್ ರಾಜೇಂದ್ರನ್ ಕೂಡ ರೇಸ್‌ನಲ್ಲಿದ್ದಾರೆ.
ಇದನ್ನೂ ಓದಿ: Karnataka Election Results 2023: ಕೌಂಟಿಂಗ್ ಯಾವಾಗ ಆರಂಭ? ಎಲ್ಲೆಲ್ಲಿ ಸಿಗುತ್ತೆ ಚುನಾವಣಾ ಫಲಿತಾಂಶದ ಲೈವ್ ಅಪ್‌ಡೇಟ್ಸ್
ಇನ್ನು ಬಂಗಾರಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ ಅವರು ಹ್ಯಾಟ್ರಿಕ್ ಗೆಲುವು ಬಾರಿಸುವ ನಿರೀಕ್ಷೆಯಲ್ಲಿದ್ದು, ಕಡೇ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ಎಂ ನಾರಾಯಣ ಸ್ವಾಮಿ ಶಸ್ತ್ರ ತ್ಯಾಗದಿಂದ ಜೆಡಿಎಸ್‌ಗೆ ವರದಾನ ಆಗುವ ನಿರೀಕ್ಷೆ ಇದೆ ಎಂಬ ಲೆಕ್ಕಾಚಾರವನ್ನೂ ಹಾಕಲಾಗಿದೆ. ಇತ್ತ ಹಿರಿಯ ಐಎಎಸ್ ಅಧಿಕಾರಿ ಮಂಜುನಾಥ್ ಪ್ರಸಾದ್ ಸಂಬಂಧಿಯಾಗಿರುವ ಬಂಗಾರಪೇಟೆ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಕಾಂಗ್ರೆಸ್ ಲೆಕ್ಕಾಚಾರವನ್ನು ತಲೆಕೆಳಗೆ ಮಾಡುವ ನಿರೀಕ್ಷೆಯಲ್ಲಿದ್ದಾರೆ.
ಮತ ಎಣಿಕೆ ಕೇಂದ್ರದಲ್ಲಿ ನಿಷೇಧಾಜ್ಞೆ
ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಕೋಲಾರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದ್ದು, ಚುನಾವಣಾ ಫಲಿತಾಂಶ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯಬಾರದು ಎನ್ನುವ ದೃಷ್ಟಿಯಿಂದ ಮತ ಎಣಿಕೆ ಕೇಂದ್ರದಲ್ಲಿ ಭಾರೀ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ನಿನ್ನೆ ರಾತ್ರಿ 10ರಿಂದ ಇಂದು ರಾತ್ರಿ 12ರ ತನಕ ಮದ್ಯ ಮಾರಾಟವನ್ನು ನಿಷೇಧಿಸಲಾಗಿದ್ದು, ಮುಖ್ಯವಾಗಿ ಮತ ಎಣಿಕೆ ಕೇಂದ್ರದ 200 ಮೀಟರ್ ಸುತ್ತಮುತ್ತ ನಿಷೇಧಾಜ್ಞೆ ಹಾಕಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ