ಹಾಸನ: ಭಾರೀ ಕುತೂಹಲ ಮೂಡಿಸಿದ್ದ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ (Hassan Constituency) ಬಿಜೆಪಿ ಶಾಸಕ ಪ್ರೀತಂ ಗೌಡಗೆ ಬಿಗ್ ಶಾಕ್ ಉಂಟಾಗಿದೆ. ಎಚ್‌ಡಿ ದೇವೇಗೌಡರ ಕುಟುಂಬಕ್ಕೆ ಸವಾಲು ಹಾಕಿದ್ದ ಬೀಗಿದ್ದ ಪ್ರೀತಂ ಗೌಡ (Preetham Gowda) ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಗೌಡ ವಿರುದ್ಧ ಸೋಲನ್ನಪ್ಪಿದ್ದು, ಆ ಮೂಲಕ ಜೆಡಿಎಸ್ ಪಕ್ಷ ಮತ್ತೆ ಹಾಸನವನ್ನು ತನ್ನ ತೆಕ್ಕೆಗೆ ಎಳೆದುಕೊಂಡಿದೆ.
ಸ್ವರೂಪ್ ಹಿನ್ನೆಲೆ ಏನು?
ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಪಡೆದಿರುವ ಸ್ವರೂಪ್‌ಗೆ ರಾಜಕೀಯ ಹೊಸದೇನಲ್ಲ. ಈಗಾಗಲೇ ಯುವನಾಯಕ ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಸ್ವರೂಪ್ ಅಪ್ಪನ ಹಾದಿಯಲ್ಲೇ ಸಾಗುತ್ತಿದ್ದಾರೆ. 2019ರಲ್ಲೇ ಕಂದಲಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಸ್ವರೂಪ್ ಹಾಸನ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಸ್ವರೂಪ್ 2021 ಜೂನ್ವರೆಗೆ ಕಾರ್ಯ ನಿರ್ವಹಿಸಿದ್ದರು.
ಇದನ್ನೂ ಓದಿ: ಕರ್ನಾಟಕ ಚುನಾವಣಾ ಫಲಿತಾಂಶ 2023 LIVE: ವರ್ಕೌಟ್ ಆಯ್ತಾ ಭಾರತ್ ಜೋಡೋ, ಕರುನಾಡಲ್ಲಿ ಕಾಂಗ್ರೆಸ್ ಅಬ್ಬರ ಜೋರು!
ಮಾಜಿ ಶಾಸಕರ ಪುತ್ರ
ಸ್ವರೂಪ್‌ಗೆ ರಾಜಕೀಯ ರಕ್ತಗತವಾಗಿ ಬಂದಿದೆ. ಅವರ ತಂದೆ ಎಚ್‌ಎಸ್ ಪ್ರಕಾಶ್ ನಾಲ್ಕು ಬಾರಿ ಹಾಸನ ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಪ್ರಕಾಶ್ 1994ರಲ್ಲಿ ಮೊದಲ ಬಾರಿಗೆ ಜನತಾ ದಳದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 99ರಲ್ಲಿ ಬಿಜೆಪಿ ಕೆಎಚ್ ಹನುಮೇಗೌಡ ವಿರುದ್ಧ ಸೋಲು ಕಂಡಿದ್ದರು. ಆದರೆ ಜನತಾದಳ ಇಬ್ಭಾಗವಾದ ನಂತರ ಜೆಡಿಎಸ್ನಿಂದ ಸ್ಪರ್ಧಿಸಿದ್ದ ಪ್ರಕಾಶ್ ಸತತ 3 ಬಾರಿ, 2004, 2008, 2013ರಲ್ಲಿ ಗೆಲುವು ಸಾಧಿಸಿದ್ದರು.
2018ರಲ್ಲಿ ಸೋಲು ಕಂಡಿದ್ದ ಪ್ರಕಾಶ್
ಹಾಸನ ವಿಧಾನ ಸಭಾ ಕ್ಷೇತ್ರದಲ್ಲಿ ಸತತ 3 ಬಾರಿ ಗೆದ್ದಿದ್ದ ಎಚ್ ಎಸ್ ಪ್ರಕಾಶ್ 2018ರಲ್ಲಿ ಬಿಜೆಪಿಯ ಯುವ ನಾಯಕ ಪ್ರೀತಂ ಗೌಡ ವಿರುದ್ಧ ಸೋಲು ಕಂಡಿದ್ದರು. ಆ ಬಾರಿ ಪ್ರೀತಂ ಗೌಡ 63,348 ಮತಗಳನ್ನು ಪಡೆದರೆ, ಪ್ರಕಾಶ್ 50342 ಮತ ಪಡೆದುಕೊಂಡು ಸೋಲು ಕಂಡಿದ್ದರು. ಸೋಲಿನಿಂದ ನೊಂದ ಪ್ರಕಾಶ್ ಅವರ ಆರೋಗ್ಯದಲ್ಲಿ ಏರುಪೇರಾಗಿ ಆನಾರೋಗ್ಯಕ್ಕೆ ಒಳಗಾಗಿ ಸಾವನ್ನಪ್ಪಿದ್ದರು.
ಮಾತುಕೊಟ್ಟಿದ್ದ ಗೌಡರ ಕುಟುಂಬ
ಹಾಸನ ಕ್ಷೇತ್ರದ ಮಾಜಿ ಶಾಸಕ ಎಚ್.ಎಸ್.ಪ್ರಕಾಶ್ 2018ರ ಚುನಾವಣೆ ಬಳಿಕ ಅನಾರೋಗ್ಯದಿಂದ ನಿಧನರಾದರು. ಆ ಸಂದರ್ಭದಲ್ಲಿ ಕುಟುಂಬಕ್ಕೆ ಯಾವುದಾದರೂ ಸೂಕ್ತ ಸ್ಥಾನಮಾನ ಕಲ್ಪಿಸಬೇಕು ಎಂಬ ಚರ್ಚೆ, ಒತ್ತಾಯ ಪಕ್ಷದ ವಲಯದಲ್ಲಿ ಕೇಳಿಬರುತ್ತಲೇ ಇತ್ತು. ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್.ಡಿ.ರೇವಣ್ಣ ಅವರೇ ಸ್ವರೂಪ್‌ಗೆ ಜಿಪಂ ಉಪಾಧ್ಯಕ್ಷ ಸ್ಥಾನ ಸಿಗುವಂತೆ ಮಾಡಿ, ಆತನಿಗೆ ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲು ಒಳ್ಳೆಯ ಅವಕಾಶ ನೀಡಿದ್ದರು ಎನ್ನಲಾಗಿತ್ತು.
ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿರಲು ಹೇಳಿದ್ದ ನಾಯಕರು
ಎಚ್‌ಎಸ್ ಪ್ರಕಾಶ್ ಮರಣದ ನಂತರ ಪಕ್ಷದ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿರಲು ಎಚ್‌ಡಿ ದೇವೇಗೌಡ, ಎಚ್‌ಡಿ ರೇವಣ್ಣ ಮತ್ತು ಎಚ್‌ಡಿ ಕುಮಾರಸ್ವಾಮಿ ಹೇಳಿದ್ದರು. ಈ ವಿಚಾರವನ್ನು ಹಲವು ಬಾರಿ ಮಾಧ್ಯಮದ ಮುಂದೆ ಸ್ವರೂಪ್ ಹೇಳಿಕೊಂಡಿದ್ದರು. ಅಲ್ಲದೆ ಪ್ರಕಾಶ್ಗೆ ಆರು ಬಾರಿ ಅವಕಾಶ ನೀಡಿದ್ದ ಜೆಡಿಎಸ್ ಈ ಬಾರಿ ತಮ್ಮನ್ನೇ ಕಣಕ್ಕಿಳಿಸುತ್ತಾರೆ ಎಂಬ ಭರವಸೆಯಲ್ಲಿದ್ದರು. ಆದರೆ ಭವಾನಿ ರೇವಣ್ಣ ಎಂಟ್ರಿಯಿಂದಾಗಿ ಗೊಂದಲ ಏರ್ಪಟ್ಟಿತ್ತಾದರೂ ಕುಮಾರಸ್ವಾಮಿ ಎಲ್ಲವನ್ನು ನಿಭಾಯಿಸಿ ಟಿಕೆಟ್ ಕೊಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ