ಬೆಂಗಳೂರು: ರಾಜ್ಯದಲ್ಲಿ ಈಗ ವಿಧಾನಸಭಾ ಚುನಾವಣಾ ಫಲಿತಾಂಶದ್ದೇ (Karnataka Election Results) ಟೆನ್ಷನ್ ಶುರುವಾಗಿದೆ. ಯಾವ ಅಭ್ಯರ್ಥಿ ಗೆಲ್ಲಬಹುದು? ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ಎಂಬ ಕುರಿತೇ ಪ್ರತಿಯೊಬ್ಬರೂ ಮಾತನಾಡಿಕೊಳ್ತಿದ್ದಾರೆ. ಜನರಿಗೆ ಚುನಾವಣಾ ಫಲಿತಾಂಶದ ಕುರಿತು ಕುತೂಹಲ ಹೆಚ್ಚಿದ್ದರೆ ಇತ್ತ ಅಭ್ಯರ್ಥಿಗಳಿಗೆ ಮಾತ್ರ ಎದೆಬಡಿತವೇ ಜೋರಾಗಿದೆ.
ಈ ಬಾರಿ ಚುನಾವಣೆಗೆ ರಾಜ್ಯಾದ್ಯಂತ ಒಟ್ಟು 2615 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, ಅವರೆಲ್ಲರ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ. ಇಂದು ಮಧ್ಯಾಹ್ನದೊಳಗೆ ಅಭ್ಯರ್ಥಿಗಳ ಸೋಲು-ಗೆಲುವು ನಿರ್ಧಾರವಾಗಲಿದ್ದು, ಈ ಮಧ್ಯೆ ರಾಜ್ಯ ರಾಜಧಾನಿ ಬೆಂಗಳೂರು ನಗರದ ಮತ ಎಣಿಕೆ ಕಾರ್ಯ ಕೂಡ ಭಾರೀ ಕುತೂಹಲ ಕೆರಳಿಸಿದೆ. ಈಗಾಗಲೇ ಮತ ಎಣಿಕೆ ಕಾರ್ಯಕ್ಕೆ ಕೌಂಟ್‌ಡೌನ್ ಶುರುವಾಗಿದ್ದು, ನಗರದ ನಾಲ್ಕು ಕಡೆ ಚುನಾವಣಾ ಮತ ಎಣಿಕೆ ಕಾರ್ಯ ನಡೆಯಲಿದೆ.
ಇದನ್ನೂ ಓದಿ: ಕರ್ನಾಟಕ ಚುನಾವಣಾ ಫಲಿತಾಂಶ 2023 LIVE: ಅಭ್ಯರ್ಥಿಗಳ ಎದೆಯಲ್ಲಿ ಢವಢವ! ಭವಿಷ್ಯ ನಿರ್ಧಾರಕ್ಕೆ ಇನ್ನೊಂದೇ ಗಂಟೆ ಬಾಕಿ
ಬೆಂಗಳೂರಿನಲ್ಲಿ ಜಯನಗರದ SSMRV, ವಸಂತನಗರದ ಮೌಂಟ್ ಕಾರ್ಮೆಲ್, ಬಿಎಂಎಸ್ ಕಾಲೇಜು ಹಾಗೂ ಸೆಂಟ್ ಜೋಸೆಫ್ ಹೈಸ್ಕೂಲ್‌ನಲ್ಲಿ 28 ಕ್ಷೇತ್ರಗಳ ಮತ ಎಣಿಕೆ ನಡೆಯಲಿದ್ದು, ಮತ ಎಣಿಕೆಗೆ ಚುನಾವಣಾ ಆಯೋಗ ಸಕಲ ತಯಾರಿ ನಡೆಸಿದೆ. ಬೆಳಗ್ಗೆ 8 ರಿಂದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಬೆಳಗ್ಗೆ 07-40 ಕ್ಕೆ ಸ್ಟ್ರಾಂಗ್ ರೂಮ್ ಓಪನ್ ಮಾಡಲಿದ್ದಾರೆ. ಮೊದಲ ಹಂತದಲ್ಲಿ ಅಂಚೆ ಮತದಾನ ಎಣಿಕೆ ಪ್ರಕ್ರಿಯೆ ನಡೆಯಲಿದೆ.
3 ವಿಧದಲ್ಲಿ ವಿಂಗಡಣೆ
ಮತ ಎಣಿಕೆಯ ಕಾರ್ಯವನ್ನು ಮೂರು ವಿಧದಲ್ಲಿ ವಿಂಗಡಣೆ ಮಾಡಲಾಗಿದ್ದು, ಪ್ರತಿ ಟೇಬಲ್‌ಗೆ ಮೈಕ್ರೋ ಅಬ್ಸರ್ವರ್, ಮತ ಎಣಿಕೆ ಮೇಲ್ವಿಚಾರಕರು ಮತ್ತು ಮತ ಎಣಿಕೆ ಸಹಾಯಕರನ್ನು ನಿಯೋಜನೆ ಮಾಡಲಾಗಿದೆ. ಪ್ರತಿ ಎಣಿಕಾ ಕೊಠಡಿಗೆ 10 ರಿಂದ 14 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಅದರಲ್ಲಿ 2 ಟೇಬಲ್‌ಗಳನ್ನು ಪೋಸ್ಟಲ್ ಬ್ಯಾಲೆಟ್ ಮತಗಳ ಎಣಿಕೆಗೆ ಮೀಸಲು ಇರಿಸಲಾಗಿದೆ.
ಪ್ರತಿ ಟೇಬಲ್‌ಗೂ ವೆಬ್ ಕಾಸ್ಟಿಂಗ್ ವ್ಯವಸ್ಥೆ
ಇನ್ನು ಮತ ಎಣಿಕಾ ಮೇಲ್ವಿಚಾರಕರು ಹಾಗೂ ಎಣಿಕಾ ಸಹಾಕರಿಗೆ ಈಗಾಗಲೇ ತರಬೇತಿ ನೀಡಲಾಗಿದ್ದು, ಫಲಿತಾಂಶಕ್ಕೂ ಮುನ್ನ ನಿನ್ನೆ ಮತ್ತೊಮ್ಮೆ ಮೈಕ್ರೋ ಅಬ್ಸರ್ವರ್ಸ್, ಎಣಿಕಾ ಮೇಲ್ವಿಚಾರಕರು ಹಾಗೂ ಎಣಿಕಾ ಸಹಾಯಕರಿಗೆ ತರಬೇತಿ ನೀಡಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆ ಮಾಡಲಾಗಿದ್ದು, ಮತ ಎಣಿಕೆ ಕೇಂದ್ರದಲ್ಲಿ 100 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಯಾವ ಕ್ಷೇತ್ರದ ಮತ ಎಣಿಕೆ ಎಲ್ಲಿ ನಡೆಯುತ್ತೆ?
ಬೆಂಗಳೂರು ಕೇಂದ್ರ ಭಾಗದ ಮತ ಎಣಿಕೆ ಕಾರ್ಯ ಬಸವನಗುಡಿಯ ಬಿಎಂಎಸ್ ಕಾಲೇಜಿನಲ್ಲಿ ನಡೆಯಲಿದ್ದು, ಇಲ್ಲಿ ಚಾಮರಾಜಪೇಟೆ, ಚಿಕ್ಕಪೇಟೆ, ಗಾಂಧಿನಗರ, ರಾಜಾಜಿನಗರ, ರಾಜರಾಜೇಶ್ವರಿ ನಗರ, ಶಾಂತಿ ನಗರ, ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ನಡೆಯಲಿದೆ.
ಬೆಂಗಳೂರು ನಗರ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ವಿಠ್ಠಲ್ ಮಲ್ಯ ರಸ್ತೆ ಜೋಸೆಫ್ ಹೈಸ್ಕೂಲ್ ಸಭಾಂಗಣದಲ್ಲಿ ನಡೆಯಲಿದ್ದು, ಇಲ್ಲಿ ಆನೇಕಲ್, ಬೆಂಗಳೂರು ದಕ್ಷಿಣ, ಬ್ಯಾಟರಾಯನ ಪುರ, ದಾಸರಹಳ್ಳಿ, ಮಹಾದೇವ ಪುರ, ಯಲಹಂಕ, ಯಶವಂತಪುರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.
ಇದನ್ನೂ ಓದಿ: Karnataka Result 2023: ಈ ಕಾರಣಗಳಿಂದ ಕುತೂಹಲ ಕೆರಳಿಸಿದೆ ಕೋಲಾರ ಜಿಲ್ಲೆಯ ಫಲಿತಾಂಶ!
ಇನ್ನು ಬೆಂಗಳೂರು ಉತ್ತರ ಕ್ಷೆತ್ರಗಳ ರಿಸಲ್ಟ್ ಮೌಂಟ್ ಕಾರ್ಮಲ್ ಕಾಲೇಜು ವಸಂತನಗರದಲ್ಲಿ ನಡೆಯಲಿದ್ದು, ಇಲ್ಲಿ ಸಿವಿ ರಾಮನ್ ನಗರ, ಹೆಬ್ಬಾಳ, ಕೆಆರ್ ಪುರ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ, ಪುಲಕೇಶಿ ನಗರ ಮತ್ತು ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರ ಕೌಂಟಿಂಗ್ ನಡೆಯಲಿದೆ.
ಇನ್ನು ಬೆಂಗಳೂರು ದಕ್ಷಿಣ ಕ್ಷೇತ್ರಗಳ ಮತ ಎಣಿಕೆ ಜಯನಗರದ ಎಸ್ ಎಸ್ ಎಂ ಆರ್ ವಿ ಪಿಯು ಕಾಲೇಜಿನಲ್ಲಿ ನಡೆಯಲಿದ್ದು, ಇಲ್ಲಿ ಬಿಟಿಎಂ ಲೇಔಟ್, ಬಸವನಗುಡಿ, ಬೊಮ್ಮನಹಳ್ಳಿ, ಗೋವಿಂದರಾಜ ನಗರ, ಜಯನಗರ, ಪದ್ಮನಾಭ ನಗರ ಮತ್ತು ವಿಜಯ ನಗರ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ