ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Assembly Election) ಜಾತ್ಯಾತೀತ ಜನಾತದಳ (Janatadal Secular) ತನ್ನ 2ನೇ ಲಿಸ್ಟ್ ಬಿಡುಗಡೆ ಮಾಡಿದ್ದು, ಭಾರೀ ಕುತೂಹಲ ಮೂಡಿಸಿದ್ದ ಹಾಸನ ಕ್ಷೇತ್ರ (Hassan Assembly Constituency) ಟಿಕೆಟ್ ಕೊನೆಗೂ ಸ್ಥಳೀಯ ನಾಯಕ ಹೆಚ್ಪಿ ಸ್ವರೂಪ್ (HP Swaroop) ಪಾಲಾಗಿದೆ. ಹಾಸನ ಕ್ಷೇತ್ರದ ಟಿಕೆಟ್ಗಾಗಿ ಕಳೆದ ಮೂರು ತಿಂಗಳಿಂದ ಎಚ್‌ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ಭಾರಿ ಪ್ರಯತ್ನ ಮಾಡಿದ್ದರು. ಆದರೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಮಾತ್ರ ಒಪ್ಪಿರಲಿಲ್ಲ, ಇತ್ತ ಭವಾನಿ ಅವರೂ ಕೂಡ ಪಟ್ಟು ಬಿಟ್ಟಿರಲಿಲ್ಲ. ಈ ಕಗ್ಗಂಟನ್ನು ಕೊನೆಗೊಳಿಸಲು ಜೆಡಿಎಸ್ ವರಿಷ್ಠ ದೇವೇಗೌಡರೇ ಹಾಸನಕ್ಕೆ ತೆರಳಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದರು. ಆದರೂ ಕೂಡ ಹಾಸನ ಟಿಕೆಟ್ ಯಾರಿಗೆ ಸಿಗುತ್ತದೆ ಎಂಬುದು ಪ್ರಶ್ನೆಯಾಗಿಯೇ ಉಳಿದುಕೊಂಡಿತ್ತು. ಇಂದು ದೊಡ್ಡ ಸಮಸ್ಯೆ ಬಗೆಹರಿದಿದ್ದು ಯುವ ನಾಯಕನಿಗೆ ಟಿಕೆಟ್ ಸಿಕ್ಕಿದ್ದು, ಮುಸುಕಿನ ಗುದ್ದಾಟ ಅಂತ್ಯಗೊಂಡಿದೆ.
ತಂದೆ ಇದ್ದಾಗಲೇ ರಾಜಕೀಯಕ್ಕೆ ದುಮುಕಿದ್ದ ಸ್ವರೂಪ್
ಹಾಸನ ಕ್ಷೇತ್ರದಲ್ಲಿ ಟಿಕೆಟ್ ಪಡೆದಿರುವ ಸ್ವರೂಪ್‌ಗೆ ರಾಜಕೀಯ ಹೊಸದೇನಲ್ಲ. ಈಗಾಗಲೇ ಯುವನಾಯಕ ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಸ್ವರೂಪ್ ಅಪ್ಪನ ಹಾದಿಯಲ್ಲೇ ಸಾಗುತ್ತಿದ್ದಾರೆ. 2019ರಲ್ಲೇ ಕಂದಲಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಸ್ವರೂಪ್ ಹಾಸನ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಸ್ವರೂಪ್ 2021 ಜೂನ್ವರೆಗೆ ಕಾರ್ಯ ನಿರ್ವಹಿಸಿದ್ದರು.
ಮಾಜಿ ಶಾಸಕರ ಪುತ್ರ
ಸ್ವರೂಪ್‌ಗೆ ರಾಜಕೀಯ ರಕ್ತಗತವಾಗಿ ಬಂದಿದೆ. ಅವರ ತಂದೆ ಎಚ್‌ಎಸ್ ಪ್ರಕಾಶ್ ನಾಲ್ಕು ಬಾರಿ ಹಾಸನ ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಪ್ರಕಾಶ್ 1994ರಲ್ಲಿ ಮೊದಲ ಬಾರಿಗೆ ಜನತಾ ದಳದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 99ರಲ್ಲಿ ಬಿಜೆಪಿ ಕೆಎಚ್ ಹನುಮೇಗೌಡ ವಿರುದ್ಧ ಸೋಲು ಕಂಡಿದ್ದರು. ಆದರೆ ಜನತಾದಳ ಇಬ್ಭಾಗವಾದ ನಂತರ ಜೆಡಿಎಸ್ನಿಂದ ಸ್ಪರ್ಧಿಸಿದ್ದ ಪ್ರಕಾಶ್ ಸತತ 3 ಬಾರಿ, 2004, 2008, 2013ರಲ್ಲಿ ಗೆಲುವು ಸಾಧಿಸಿದ್ದರು.
2018ರಲ್ಲಿ ಸೋಲು ಕಂಡಿದ್ದ ಪ್ರಕಾಶ್
ಹಾಸನ ವಿಧಾನ ಸಭಾ ಕ್ಷೇತ್ರದಲ್ಲಿ ಸತತ 3 ಬಾರಿ ಗೆದ್ದಿದ್ದ ಎಚ್ ಎಸ್ ಪ್ರಕಾಶ್ 2018ರಲ್ಲಿ ಬಿಜೆಪಿಯ ಯುವ ನಾಯಕ ಪ್ರೀತಂ ಗೌಡ ವಿರುದ್ಧ ಸೋಲು ಕಂಡಿದ್ದರು. ಆ ಬಾರಿ ಪ್ರೀತಂ ಗೌಡ 63,348 ಮತಗಳನ್ನು ಪಡೆದರೆ, ಪ್ರಕಾಶ್ 50342 ಮತ ಪಡೆದುಕೊಂಡು ಸೋಲು ಕಂಡಿದ್ದರು. ಸೋಲಿನಿಂದ ನೊಂದ ಪ್ರಕಾಶ್ ಅವರ ಆರೋಗ್ಯದಲ್ಲಿ ಏರುಪೇರಾಗಿ ಆನಾರೋಗ್ಯಕ್ಕೆ ಒಳಗಾಗಿ ಸಾವನ್ನಪ್ಪಿದ್ದರು.
ರಾಜಕೀಯ ಭವಿಷ್ಯ ರೂಪಿಸುವುದಾಗಿ ಮಾತುಕೊಟ್ಟಿದ್ದ ಗೌಡರ ಕುಟುಂಬ
ಹಾಸನ ಕ್ಷೇತ್ರದ ಮಾಜಿ ಶಾಸಕ ಎಚ್.ಎಸ್.ಪ್ರಕಾಶ್ 2018ರ ಚುನಾವಣೆ ಬಳಿಕ ಅನಾರೋಗ್ಯದಿಂದ ನಿಧನರಾದರು. ಆ ಸಂದರ್ಭದಲ್ಲಿ ಕುಟುಂಬಕ್ಕೆ ಯಾವುದಾದರೂ ಸೂಕ್ತ ಸ್ಥಾನಮಾನ ಕಲ್ಪಿಸಬೇಕು ಎಂಬ ಚರ್ಚೆ, ಒತ್ತಾಯ ಪಕ್ಷದ ವಲಯದಲ್ಲಿ ಕೇಳಿಬರುತ್ತಲೇ ಇತ್ತು. ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್.ಡಿ.ರೇವಣ್ಣ ಅವರೇ ಸ್ವರೂಪ್‌ಗೆ ಜಿಪಂ ಉಪಾಧ್ಯಕ್ಷ ಸ್ಥಾನ ಸಿಗುವಂತೆ ಮಾಡಿ, ಆತನಿಗೆ ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲು ಒಳ್ಳೆಯ ಅವಕಾಶ ನೀಡಿದ್ದರು ಎನ್ನಲಾಗಿತ್ತು.
ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿರಲು ಹೇಳಿದ್ದ ನಾಯಕರು
ಎಚ್‌ಎಸ್ ಪ್ರಕಾಶ್ ಮರಣದ ನಂತರ ಪಕ್ಷದ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿರಲು ಎಚ್‌ಡಿ ದೇವೇಗೌಡ, ಎಚ್‌ಡಿ ರೇವಣ್ಣ ಮತ್ತು ಎಚ್‌ಡಿ ಕುಮಾರಸ್ವಾಮಿ ಹೇಳಿದ್ದರು. ಈ ವಿಚಾರವನ್ನು ಹಲವು ಬಾರಿ ಮಾಧ್ಯಮದ ಮುಂದೆ ಸ್ವರೂಪ್ ಹೇಳಿಕೊಂಡಿದ್ದರು. ಅಲ್ಲದೆ ಪ್ರಕಾಶ್ಗೆ ಆರು ಬಾರಿ ಅವಕಾಶ ನೀಡಿದ್ದ ಜೆಡಿಎಸ್ ಈ ಬಾರಿ ತಮ್ಮನ್ನೇ ಕಣಕ್ಕಿಳಿಸುತ್ತಾರೆ ಎಂಬ ಭರವಸೆಯಲ್ಲಿದ್ದರು. ಆದರೆ ಭವಾನಿ ರೇವಣ್ಣ ಎಂಟ್ರಿಯಿಂದಾಗಿ ಗೊಂದಲ ಏರ್ಪಟ್ಟಿತ್ತಾದರೂ ಕುಮಾರಸ್ವಾಮಿ ಎಲ್ಲವನ್ನು ನಿಭಾಯಿಸಿ ಟಿಕೆಟ್ ಕೊಡಿಸಿದ್ದಾರೆ.
ದಾಸ ಗೌಡ ಸಮೂದಾಯದ ಮತ ನಿರ್ಣಾಯಕ
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಭವಾನಿ ರೇವಣ್ಣರನ್ನು ಕಡೆಗಣಿಸಿ ಸ್ವರೂಪ್‌ಗೆ ಟಿಕೆಟ್ ನೀಡಲೂ ಒಕ್ಕಲಿಗ ಒಳಪಂಗಡವಾದ ದಾಸಗೌಡ ಮತಗಳು ಒಂದು ಕಾರಣವಾಗಿದೆ. ಹಾಸನದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಸ್ವರೂಪ್ ಹಾಗೂ ಹಾಲಿ ಬಿಜೆಪಿ ಶಾಸಕ ಪ್ರೀತಂ ಗೌಡರು ಇಬ್ಬರೂ ದಾಸ ಗೌಡ ಸಮುದಾಯಕ್ಕೆ ಸೇರಿದ್ದಾರೆ. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ದಾಸ ಗೌಡ ಸಮುದಾಯವೇ ನಿರ್ಣಾಯಕ. ಹೀಗಾಗಿ, ಮತದಾರ ಭವಾನಿ ರೇವಣ್ಣ ಅವರಿಗಿಂತಾ ಸ್ವರೂಪ್ ಅವರಿಗೆ ಬೆಂಬಲಿಸುವ ಸಾಧ್ಯತೆಯೇ ಹೆಚ್ಚಿದೆ.
ಪ್ರೀತಂ ಗೌಡಗೆ ಪ್ರಬಲ ಸ್ಪರ್ಧಿ
ಅಲ್ಲದೆ ಹಾಲಿ ಶಾಸಕ ಪ್ರೀತಂ ಗೌಡರಿಗೂ ಕೂಡ ಕ್ಷೇತ್ರದಲ್ಲಿ ಜನಬೆಂಬಲ, ಜಾತಿ ಬೆಂಬಲವಿದೆ. ಹಾಗಾಗಿ ಅವರಿಗೆ ಭವಾನಿ ರೇವಣ್ಣರಿಗಿಂತ ಸ್ವರೂಪ್ ಗೌಡ ಪ್ರಬಲ ಪ್ರತಿಸ್ಪರ್ಧಿ ಎಂದು ಜೆಡಿಎಸ್ ತೀರ್ಮಾನಿಸಿದಂತಿದೆ. ಅಲ್ಲದೆ ದಾಸ ಗೌಡ ಸಮುದಾಯದವರಾರುವ ಸ್ವರೂಪ್ ಸ್ಪರ್ಧಿಸಿದರೆ ಹೆಚ್ಚಿನ ಪೈಪೋಟಿ ಕೊಡಬಹುದು ಎಂಬ ನಿರೀಕ್ಷೆಯಿದೆ. ಎಲ್ಲಕ್ಕಿಂತಾ ಹೆಚ್ಚಾಗಿ, ಭವಾನಿ ರೇವಣ್ಣ ಅವರು ಹಾಸನದಲ್ಲಿ ಇರುವುದಕ್ಕಿಂತ ಹೊಳೆನರಸೀಪುರದಲ್ಲಿ ಇರುತ್ತಾರೆ. ಹೀಗಾಗಿ, ಕ್ಷೇತ್ರದ ಜನರು ಪ್ರತಿ ಕೆಲಸಕ್ಕೂ ಭವಾನಿ ಅವರನ್ನೂ ಸಂಪರ್ಕಿಸುವುದಕ್ಕೆ ಹೊಳೆನರಸೀಪುರಕ್ಕೆ ಹೋಗಬೇಕೇ ಎಂಬ ಪ್ರಶ್ನೆ ಇದೆ. ಹೀಗಾಗಿ, ಸ್ಥಳೀಯರಾದ ಸ್ವರೂಪ್ ಅವರಿಗೇ ಟಿಕೆಟ್ ಕೊಡಬೇಕು ಎಂಬ ಬೇಡಿಕೆ ಕ್ಷೇತ್ರದ ಕಾರ್ಯಕರ್ತರದ್ದಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ