ಬೆಂಗಳೂರು(ಮೇ.09): ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Elections) ಕೌಂಟ್ಡೌನ್ ಆರಂಭವಾಗಿದೆ. ಇದರ ಮೊದಲ ಹಂತವಾಗಿ ಈಗಾಗಲೇ ಬಹಿರಂಗ ಪ್ರಚಾರ ಕೊನೆಗೊಂಡಿದೆ. ಅತ್ತ ಚುನಾವಣಾ ಪೂರ್ವ ಸಮೀಕ್ಷೆಗಳೂ ಒಂದು ಹಂತದ ಚುನಾವಣಾ ಭವಿಷ್ಯ ನುಡಿದಿದ್ದು, ಸದ್ಯ ಎಲ್ಲರ ಚಿತ್ತ ಮತಗಟ್ಟೆ ಸಮೀಕ್ಷೆಯ ಫಲಿತಾಂಶದ ಮೇಲೆ ನೆಟ್ಟಿದೆ. 224 ವಿಧಾನಸಭಾ ಕ್ಷೇತ್ರಗಳಿರುವ ಕರ್ನಾಟಕದಲ್ಲಿ ಅಧಿಕಾರಕ್ಕೇರಬೇಕಾದರೆ 113 ಸ್ಥಾನಗಳ ಸರಳ ಬಹುಮತ ಗಳಿಸುವುದು ಅತ್ಯಗತ್ಯ. ಹಾಗಾದ್ರೆ ಮತಗಟ್ಟೆ ಸಮೀಕ್ಷೆಗಳು ಯಾವಾಗ ಹೊರ ಬೀಳುತ್ತೆ? ಇಲ್ಲಿದೆ ವಿವರ
ಮತದಾನದ ದಿನ ನಡೆಯುವ ಸಮೀಕ್ಷಾ ವರದಿ (Exit Poll) ಮೇ 10 ರಂದು ಸಂಜೆ 6 ರಿಂದ 7 ಗಂಟೆಯ ಒಳಗೆ ಪ್ರಕಟಗೊಳ್ಳಲಿವೆ. ಚುನಾವಣಾ ಪ್ರಕ್ರಿಯೆ ಮುಕ್ತಾಯವಾದ ಬೆನ್ನಲ್ಲೇ ಎಕ್ಸಿಟ್ ಪೋಲ್ ಫಲಿತಾಂಶ ಸಿಗಲಿದೆ.
ಇದನ್ನೂ ಓದಿ: Bengaluru Traffic: ಮತಗಟ್ಟೆ ಎದುರು ಟ್ರಾಫಿಕ್ ತಪ್ಪಿಸಲು ಹೀಗೆ ಮಾಡಿ
ಇನ್ನು ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಸದ್ಯ ಬಂದಿರುವ ಸಮೀಕ್ಷೆಗಳನ್ವಯ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನೇರ ಸ್ಪರ್ಧೆ ಏರ್ಪಡಲಿದೆ. ಈ ನಡುವೆ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಕೂಡಾ ತನ್ನದೇ ಆದ ದಾಳ ಬೀಸಿದೆ. ಅತ್ತ ಕೇಜ್ರೀವಾಲ್ ನೇತೃತ್ವದ ಆಮ್ ಆದ್ಮಿ ಕೂಡಾ ಹಲವು ಕ್ಷೇತ್ರಗಳಲ್ಲಿ ತನ್ನ ಸ್ಪರ್ಧಿಗಳನ್ನು ಕಣಕ್ಕಿಳಿಸಿದೆ. ಇನ್ನುಳಿದಂತೆ ಎಸ್ಡಿಪಿಐ, ಎಐಎಂಐಎಂ ಸೇರಿ ಇತರ ಸ್ಥಳೀಯ ಪಕ್ಷಗಳು, ಪಕ್ಷೇತರರು ಕಣದಲ್ಲಿದ್ದಾರೆ.
ಕರ್ನಾಟಕ ಚುನಾವಣೆ: ಮತದಾನ ಕೇಂದ್ರಗಳು ಹಾಗೂ ಮತದಾರರ ಸಂಖ್ಯೆ
ರಾಜ್ಯದಲ್ಲಿ 58,282 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಪ್ರತಿ ಮತಗಟ್ಟೆಗೆ ಸರಾಸರಿ ಮತದಾರರನ್ನು 883 ಎಂದು ನಿಗದಿಪಡಿಸಲಾಗಿದೆ. ಒಟ್ಟು 1,320 ಮತಗಟ್ಟೆಗಳನ್ನು ಮಹಿಳಾ ಅಧಿಕಾರಿಗಳು ನಿರ್ವಹಿಸುತ್ತಾರೆ. ಇವುಗಳನ್ನು 'ಪಿಂಕ್ ಬೂತ್'ಗಳೆಂದು ಗುರುತಿಸಲಾಗಿದೆ. ಇನ್ನು 5.24 ಕೋಟಿಗೂ ಅಧಿಕ ಮತದಾರರಲ್ಲಿ ಸುಮಾರು 5.60 ಲಕ್ಷಕ್ಕೂ ಹೆಚ್ಚಿನ ಮಂದಿ ವಿಶೇಷ ಚೇತನರಿದ್ದಾರೆ.
1985 ರಿಂದ ರಾಜ್ಯದಲ್ಲಿ ಯಾವುದೇ ರಾಜಕೀಯ ಪಕ್ಷವು ಸತತವಾಗಿ ಗೆದ್ದಿಲ್ಲ. ಹೀಗಿರುವಾಗ ಆಡಳಿತಾರೂಢ ಬಿಜೆಪಿ ಬಹುಮತ ಗಳಿಸಿ ಇತಿಹಾಸ ನಿರ್ಮಿಸುತ್ತಾ ಅಥವಾ ಕೇಸರಿ ಪಾಳಯ ಒಡ್ಡಿರುವ ಸವಾಲನ್ನು ಸಮರ್ಥವಾಗಿ ಎದುರಿಸಿ ಕಾಂಗ್ರೆಸ್ ಮೆಜಾರಿಟಿ ಗಳಿಸುತ್ತಾ ಅಥವಾ ಇವೆಲ್ಲವನ್ನೂ ಮೀರಿ ಜೆಡಿಎಸ್ ಪಕ್ಷ ಕಿಂಗ್ ಮೇಕರ್ ಆಗಿ ಮೈತ್ರಿ ಸರ್ಕಾರ ಅಧಿಕಾರಕ್ಕೇರುತ್ತಾ ಎಂಬುವುದು ಕಾದು ನೋಡಬೇಕಿದೆ. ಇನ್ನು 2024ರ ಲೋಕಸಭೆ ಚುನಾವಣೆಗೂ ಮುನ್ನ ನಡೆಯುತ್ತಿರುವ ಈ ಎಲೆಕ್ಷನ್ ಇಡೀ ದೇಶದ ಗಮನಸೆಳೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ