ಕೋಲಾರ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Karnataka Elections) ಕೋಲಾರದಿಂದ (Kolar) ಸ್ಪರ್ಧೆ ಮಾಡಲು ನಿರ್ಧಾರ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಇಂದು ಮೂರನೇ ಬಾರಿಗೆ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಕೋಲಾರದ ವೇಮಗಲ್ನಲ್ಲಿ (Vemagal) ನಡೆದ ಮಹಿಳಾ ಸಮಾವೇಶದಲ್ಲಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಇದಕ್ಕೂ ಮುನ್ನ ಕೋಲಾರದ ವೇಮಗಲ್ನಲ್ಲಿ ಸಿದ್ದರಾಮಯ್ಯ ಟೆಂಪಲ್ ರನ್ (Temple) ನಡೆಸಿದ್ದರು. ಧರ್ಮರಾಯ ಸ್ವಾಮಿ ದೇವಾಯಲಕ್ಕೆ ಭೇಟಿ ನೀಡಿದ ಸಿದ್ದು, ಬಳಿಕ ಗ್ರಾಮದ ದರ್ಗಾಕ್ಕೆ ತೆರಳಿದ್ದರು. ದರ್ಗಾದಲ್ಲಿ ಟೋಪಿ ಧರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ಸಿದ್ದರಾಮಯ್ಯಗೆ ನಜೀರ್ ಅಹಮದ್, ಕೃಷ್ಣಬೈರೇಗೌಡ, ಕೋಲಾರ ಹಾಲಿ ಶಾಸಕ ಶ್ರೀನಿವಾಸಗೌಡ ಸೇರಿದಂತೆ ಹಲವು ಕೈ ನಾಯಕರು ಸಾಥ್ ನೀಡಿದ್ದರು.
ಬಡ್ಡಿ ರಹಿತ ಸಾಲದ ಮೊತ್ತ 5 ಲಕ್ಷಕ್ಕೆ ಹೆಚ್ಚಳ
ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ನಮ್ಮ ಸರ್ಕಾರ ಬಂದರೆ ಸರಿಯಾಗಿ ಕಂತು ಕಟ್ಟುವ ಮಹಿಳೆಯರ ಸಾಲಮನ್ನಾ ಮಾಡುತ್ತೇವೆ. ಬಡ್ಡಿ ರಹಿತ ಸಾಲವನ್ನು 5 ಲಕ್ಷದವರೆಗೂ ವಿಸ್ತರಣೆ ಮಾಡುತ್ತೇವೆ. 20 ಲಕ್ಷ ರೂಪಾಯಿ ವರೆಗೂ 3 ಪರ್ಸೆಂಟ್ ದರದಲ್ಲಿ ಸಾಲ ನೀಡುವದರ ಬಗ್ಗೆ ಚರ್ಚೆ ಮಾಡುತ್ತೀವಿ ಎಂದು ಹೇಳಿದ್ದಾರೆ. ಈ ಸಮಾವೇಶ ಕೋಲಾರ ಕ್ಷೇತ್ರಕ್ಕೆ ಸೀಮಿತವಾಗಿದೆ. ಕೋಲಾರಕ್ಕೆ ಟೊಮೆಟೊ, ಹೂ, ಮಾವು ಸಂಸ್ಕರಣಾ ಘಟಕ ನಿರ್ಮಾಣ ಮಾಡಲಾಗುತ್ತದೆ. ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ವಾಪಾಸ್ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: Tumakuru: ಗಂಡನ ಕೊಲೆಗೆ ಪತ್ನಿಯಿಂದಲೇ ಸುಪಾರಿ; ಹುಟ್ಟುಹಬ್ಬದಂದೇ ಕೊಲೆಗೈದು ಕೆರೆಗೆ ಎಸೆದ್ರು!
ಅಲ್ಲದೆ, ಹಾಲಿನ ಪ್ರೋತ್ಸಾಹ ದರವನ್ನು 5 ರೂಪಾಯಿಂದ 6 ರೂಪಾಯಿಗೆ ಏರಿಕೆ ಮಾಡುತ್ತೇವೆ. ಪುರುಷರು ಮತ್ತು ಮಹಿಳೆಯರ ಮಧ್ಯೆ ತಾರತಮ್ಯ ಇದ್ದರೆ ಅಂತಹ ಸಮಾಜದಲ್ಲಿ ಶೋಷಣೆ ಆಗುತ್ತೆ. ಸಂವಿಧಾನದಲ್ಲಿ ಪುರುಷರಿಗೆ ಇರುವ ಹಕ್ಕುಗಳು ಮಹಿಳೆಯರಿಗೆ ನೀಡಲಾಗಿದೆ. ಲಿಂಗ ತಾರತಮ್ಯ ಕಾಯ್ದೆ, ವಿಧವಾ ವೇತನ ಕಾಯ್ದೆ, ಉದ್ಯೋಗದಲ್ಲಿ ಮೀಸಲಾತಿ ಕಾಯ್ದೆ, ರಾಜಕೀಯದಲ್ಲಿ ಮೀಸಲಾತಿ ಸೇರಿದಂತೆ ಎಲ್ಲಾ ಮೀಸಲಾತಿಯನ್ನು ತಂದಿದ್ದು ಕಾಂಗ್ರೆಸ್ ಸರ್ಕಾರ. ಬಿಜೆಪಿಯವರು ಮಹಿಳೆಯರ ಹಕ್ಕುಗಳಿಗೆ ಸ್ಥಾನಮಾನ ನೀಡಿಲ್ಲ. ನಮ್ಮ ದೇಶದಲ್ಲಿ ಲಿಂಗ ತಾರತಮ್ಯ ಹೋಗಲಾಡಿಸಲು, ಸಾಮಾಜಿಕವಾಗಿ ಅರ್ಥಿಕವಾಗಿ ಶಕ್ತಿ ತುಂಬಬೇಕು ಎಂದು ಹೇಳಿದರು.
ಕೆಸಿ ವ್ಯಾಲಿ ನೀರಿನ ಮೂರನೇ ಹಂತದ ಶುದ್ಧೀಕರಣ ಮಾಡ್ತೀವಿ
ಕೆಸಿ ವ್ಯಾಲಿ ಯೋಜನೆ ಜಾಡಿ ಮಾಡುವ ಬೇಡಿಕೆ ಬಂದಾಗ ಸಾವಿರಾರು ಕೋಟಿ ರೂಪಾಯಿ ಖರ್ಚುಮಾಡಿ ಯೋಜನೆಯನ್ನು ಪೂರ್ಣಗೊಳಿಸಿದ್ದೇವೆ. ಇದಕ್ಕೆ ಜೆಡಿಎಸ್ ನಾಯಕರು ವಿರೋಧ ಮಾಡಿದ್ದರು. ಈಗ ಕೆ.ಹೆಚ್ ಮುನಿಯಪ್ಪ ಮೂರನೇ ಹಂತದ ಶುದ್ಧೀಕರಣಕ್ಕೆ ಒತ್ತಾಯಿಸಿದ್ದಾರೆ. ಅದನ್ನು ಕೂಡ ಮಾಡುತ್ತೇವೆ. ಎತ್ತಿನ ಹೊಳೆ ಯೋಜನೆ ಪೂರ್ಣಗೊಳಿಸಿ ಜಿಲ್ಲೆಗೆ ಕುಡಿಯುವ ನೀರನ್ನು ಕೊಡುತ್ತೇವೆ ಎಂದರು.
ಆ ಬಳಿಕ ವೇಮಗಲ್ ಗ್ರಾಮದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾತನಾಡಿದ ಸಿದ್ದರಾಮಯ್ಯ ಅವರು, ಕೋಲಾರ ಕ್ಷೇತ್ರದಲ್ಲಿ ಜನ ಗೆಲ್ಲಿಸುತ್ತೇವೆ ಎನ್ನುತ್ತಿದ್ದಾರೆ. ಹೀಗಾಗಿ ಗೆದ್ದೆ ಗೆಲ್ಲುತ್ತೇವೆ. ಅಹಿಂದಾ ರಿಪೋರ್ಟ್ ಯಾರೂ ಸಹ ಕೊಟ್ಟಿಲ್ಲ, ನನಗೆ ಎಲ್ಲರೂ ನಿಮ್ಮ ಪರವಾಗಿ ಕೆಲಸ ಮಾಡುತ್ತೇವೆ ಎಂದಿದ್ದಾರೆ. ಇಲ್ಲಿನ ನಾಯಕರಾದ ನಜೀರ್ ಅಹ್ಮದ್, ಅನಿಲ್ ಕುಮಾರ್, ಸುದರ್ಶನ್, ಶ್ರೀನಿವಾಸಗೌಡ, ಕೃಷ್ಣಬೈರೇಗೌಡ, ಕೊತ್ತೂರು ಮಂಜುನಾಥ್, ಡಾ. ಎಂಸಿ ಸುಧಾಕರ್, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರು ಇವರುಗಳೇ ಕೋಲಾರಕ್ಕೆ ಬಂದು ನಿಂತುಕೊಳ್ಳಿ, ನೀವು ಪ್ರಚಾರಕ್ಕೆ ಬರಬೇಡಿ ಎಂದಿದ್ದಾರೆ. ನಾವೇ ಇಲ್ಲಿ ಕೆಲಸ ಮಾಡಿ ಗೆಲ್ಲಿಸುತ್ತೇವೆ ಎಂದು ಸ್ವಾಗತಿಸಿದ್ದಾರೆ ಎಂದರು.
ಜೆಡಿಎಸ್, ಬಿಜೆಪಿ ಒಳಒಪ್ಪಂದಿಂದ ಸೋಲಬೇಕಾಯಿತು
ಇಲ್ಲಿ ನಾವು ಚಾಮುಂಡೇಶ್ವರಿ ಹಾಗೂ ಕೋಲಾರಕ್ಕೆ ಹೋಲಿಕೆ ಮಾಡುವುದು ಬೇಡ. ಅಲ್ಲಿ ನಮಗೆ ಕೆಲವು ಪ್ರತಿಕೂಲ ವಾತಾವರಣವಿತ್ತು. ಅಲ್ಲದೆ, ಬಿಜೆಪಿ ಅವರು ವೀಕ್ ಕ್ಯಾಂಡಿಡೇಟ್ ಹಾಕಿದ್ದರು. ಇದರಿಂದ ಜೆಡಿಎಸ್ ಅಭ್ಯರ್ಥಿಗೆ ಎಲ್ಲಾ ಮತಗಳು ವರ್ಗಾವಣೆ ಆಯ್ತು. ಜೆಡಿಎಸ್ ಹಾಗೂ ಬಿಜೆಪಿಯ ಒಳ ಒಪ್ಪಂದದಿಂದ ಸೋಲಬೇಕಾಯಿತು. ಇಲ್ಲಿ ಬಿಜೆಪಿ ಜೆಡಿಎಸ್ ಒಪ್ಪಂದ ಮಾಡಿಕೊಂಡರೂ ಏನೂ ಆಗೋಲ್ಲ. ಕೋಲಾರದಲ್ಲಿ ಬಿಜೆಪಿ, ಜೆಡಿಎಸ್ ನಿಂದ ಯಾರು ಅಭ್ಯರ್ಥಿ ಆಗ್ತಾರೆ ಗೊತ್ತಿಲ್ಲ. ಅವರು ಯಾರನ್ನಾದರೂ ಅಭ್ಯರ್ಥಿ ಮಾಡಲಿ, ಎದುರಾಳಿ ಯಾರು ಎನ್ನುವುದು ಮುಖ್ಯ ಅಲ್ಲ. ಜನರ ಒಲವು ಯಾರ ಕಡೆ ಇದೆ ಎನ್ನುವುದು ಮುಖ್ಯ ಎಂದರು.
ಇದನ್ನೂ ಓದಿ: Sudha Murthy: ಮೊನ್ನೆ ಅಪ್ಪು ಫೋಟೋ, ಇಂದು ಸುಧಾ ಮೂರ್ತಿ; ಕನಕಪುರಕ್ಕೆ ಆಸ್ಪತ್ರೆ ಕೊಟ್ಟ ಇನ್ಫೋಸಿಸ್ ಬಿಟ್ಟು ಕಾರ್ಯಕ್ರಮ
ಮೋದಿ ಬಂದರೆ ಏನು ಪರಿಣಾಮ ಆಗೋದಿಲ್ಲ
ಇದೇ ವೇಳೆ ಸಿದ್ದರಾಮಯ್ಯ ವಿರುದ್ದ ದಲಿತ ಮುಖಂಡರು ಕರಪತ್ರ ಹಂಚಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಇದು ಬಿಜೆಪಿ, ಜೆಡಿಎಸ್, ಆರ್.ಎಸ್.ಎಸ್ ಷಡ್ಯಂತರ. ಇದಕ್ಕೆಲ್ಲಾ ಸೊಪ್ಪು ಹಾಕುವ ಅಗತ್ಯವಿಲ್ಲ. ನಾನು ಏನು ಮಾಡಿದ್ದೇನೆಂದು ದಲಿತರಿಗೆ ಗೊತ್ತಿದೆ. ಅವರಿಗೆ ಏನೆಲ್ಲಾ ಅನುದಾನಗಳು ಯೋಜನೆಗಳನ್ನು ಮಾಡಿದ್ದೇನೆ ಎಂದು ಅವರಿಗೆ ಗೊತ್ತಿದೆ. ಪ್ರಧಾನಿ ಮೋದಿ ನೂರು ಬಾರಿ ರಾಜ್ಯಕ್ಕೆ ಬಂದರೂ ಕಾಂಗ್ರೆಸ್ ಪಕ್ಷಕ್ಕೆ ಏನೂ ಆಗೋಲ್ಲ. ನಾವು ನುಡಿದಂತೆ ನಡೆದಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ