Sowmya Reddyಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ (Karnataka Assembly Elections) ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಚುರುಕಾಗಿ ತಯಾರಿ ನಡೆಸುತ್ತಿದ್ದಾರೆ. ಮತದಾರರ (Voters) ಮನಓಲೈಸುವ ತಯಾರಿಯಲ್ಲಿರುವ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಓಟು ಯಾಚಿಸುತ್ತಿದ್ದಾರೆ ಹಾಗೂ ತಮ್ಮ ಪಕ್ಷವನ್ನೇ ಗೆಲ್ಲಿಸಿಕೊಡಿ ಎಂಬ ವಿನಂತಿಯನ್ನು ಮಾಡುತ್ತಿದ್ದಾರೆ.
ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿ ಸೌಮ್ಯಾ ರೆಡ್ಡಿ
ಕ್ಷೇತ್ರ ಸಂಚರಣೆ ನಡೆಸುತ್ತಿರುವ ಚುನಾವಣಾ ಅಭ್ಯರ್ಥಿಗಳು ಶ್ರೀಸಾಮಾನ್ಯರನ್ನು ತಮ್ಮತ್ತ ಸೆಳೆದುಕೊಳ್ಳಲು ವಿಧವಿಧವಾದ ಆಶ್ವಾಸನೆಗಳನ್ನು ಆಮಿಷಗಳನ್ನು ಒಡ್ಡುತ್ತಿದ್ದಾರೆ. ಆದರೆ ಇದೆಲ್ಲದಕ್ಕೂ ಸೊಪ್ಪು ಹಾಕದ ಜನಸಾಮಾನ್ಯರು ತಮಗೆ ಸೂಕ್ತವಾಗಿರುವ ಜನನಾಯಕರನ್ನು ತಾವೇ ಆಯ್ಕೆಮಾಡಿಕೊಳ್ಳುತ್ತೇವೆಂಬ ನಿರ್ಧಾರದಲ್ಲಿದ್ದಾರೆ. ಇಂದಿನ ಲೇಖನದಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದ (Jayanagar Assembly Constituency) ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ (Sowmya Reddy) ಪರಿಚಯ ಹೀಗಿದೆ.
ಇದನ್ನೂ ಓದಿ: Leaders Profile : JDS ಭದ್ರಕೋಟೆಯಲ್ಲಿ ಕಮಾಲ್ ಮಾಡುತ್ತಾ ʻಕೈʼ ಪಡೆ? ಗೆಲುವಿನ ನಿರೀಕ್ಷೆಯಲ್ಲಿ ಚೆಲುವರಾಯ ಸ್ವಾಮಿ!
ಸೌಮ್ಯಾ ರೆಡ್ಡಿ ಬಾಲ್ಯ ಹಾಗೂ ಶಿಕ್ಷಣ
ಮಾಜಿ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡ ರಾಮಲಿಂಗ ರೆಡ್ಡಿ ಅವರ ಪುತ್ರಿಯಾಗಿರುವ ಸೌಮ್ಯ ರೆಡ್ಡಿ, ಮಾರ್ಚ್ 18, 1983ರಲ್ಲಿ ಜನಿಸಿದರು. ತಂದೆ ರಾಮಲಿಂಗ ರೆಡ್ಡಿ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ರಾಜಕೀಯ ವ್ಯಕ್ತಿಯಾಗಿದ್ದರಿಂದ ಸೌಮ್ಯ ಅವರಿಗೆ ನಾಯಕತ್ವದ ಗುಣಗಳು ರಕ್ತಗತವಾಗಿದ್ದವು ಜೊತೆಗೆ ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು.
ಬೆಂಗಳೂರಿನ ಆರ್‌ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಅಧ್ಯಯನ ಪೂರ್ಣಗೊಳಿಸಿರುವ ಸೌಮ್ಯಾ ರೆಡ್ಡಿ, ನ್ಯೂಯಾರ್ಕ್‌ನ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಎಸ್ ಅಧ್ಯಯನ ಪೂರ್ಣಗೊಳಿಸಿದ್ದಾರೆ.
ರಾಜಕೀಯ ಜೀವನದ ಕಿರುಚಿತ್ರಣ ಹೀಗಿದೆ
2018 ವಿಧಾನಸಭಾ ಚುನಾವಣೆಯಲ್ಲಿ ಜಯನಗರ ಅಭ್ಯರ್ಥಿಯಾಗಿ ಕಣಕ್ಕಿಳಿದ ಸೌಮ್ಯರೆಡ್ಡಿ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದರು. ಮೊದಲ ಬಾರಿಗೆ ಚುನಾವಣೆ ಕಣಕ್ಕಿಳಿದ ಪುತ್ರಿಗೆ ಕಾಂಗ್ರೆಸ್‌ನ ಹಿರಿಯ ಮುಖಂಡ ರಾಮಲಿಂಗ ರೆಡ್ಡಿ ಸಾಥ್ ನೀಡಿದ್ದರು.
ಜೊತೆಗೆ ಇತರ ಕಾಂಗ್ರೆಸ್ ನಾಯಕರ ಬೆಂಬಲ ಕೂಡ ಇವರಿಗಿತ್ತು. ಮೊದಲ ಬಾರಿ ಚುನಾವಣಾ ಕಣಕ್ಕಿಳಿದಿದ್ದ ಕಾಂಗ್ರೆಸ್ ಧುರೀಣೆ ಸೌಮ್ಯ ರೆಡ್ಡಿ ಅವರು ಬಿಜೆಪಿಯ ಬಿ.ಎನ್ ಪ್ರಹ್ಲಾದ್ ಬಾಬು ಅವರನ್ನು 2,889 ಮತಗಳ ಅಂತರದಿಂದ ಸೋಲಿಸಿ, ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕಿಯಾದರು.
ಶಾಸಕಿಯಾದ ಬಳಿಕ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಸತತ ಶ್ರಮವಹಿಸಿದ್ದಾರೆ. ಅಲ್ಲದೇ ಬಿಜೆಪಿ ಸರ್ಕಾರದ ವಿರುದ್ಧದ ಹಲವು ಬೃಹತ್ ಹೋರಾಟಗಳಲ್ಲಿ ಸೌಮ್ಯ ರೆಡ್ಡಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿರುವ ಸೌಮ್ಯಾರೆಡ್ಡಿ ಜಯನಗರ ಕ್ಷೇತ್ರದಿಂದಲೇ ಚುನಾವಣಾ ಅಖಾಡಾಕ್ಕಿಳಿದಿದ್ದಾರೆ. ಈ ಬಾರಿಯೂ ಗೆಲುವಿನ ನಿರೀಕ್ಷೆಯಲ್ಲಿರುವ ಶಾಸಕಿ ಭರ್ಜರಿಯಾಗಿಯೇ ಮತಪ್ರಚಾರ ಕೈಗೊಂಡಿದ್ದಾರೆ.
ಸಾಮಾಜಿಕ ತಾಣದಲ್ಲಿಯೂ ಸಕ್ರಿಯರಾಗಿರುವ ಶಾಸಕಿ
ಸಾಮಾಜಿಕ ತಾಣಗಳಲ್ಲಿಯೂ ಸದಾ ಸಕ್ರಿಯರಾಗಿರುವ ಸೌಮ್ಯಾ ರೆಡ್ಡಿ ತಮ್ಮ ಕ್ಷೇತ್ರದ ಪ್ರತಿಯೊಂದು ಚಟುವಟಿಕೆಗಳ ಮಾಹಿತಿ ನೀಡುತ್ತಿರುತ್ತಾರೆ. ಪರಿಸರವಾದಿಯಾಗಿರುವ ಸೌಮ್ಯಾರೆಡ್ಡಿ ಅನೇಕ ಪರಿಸರ ಸಂಬಂಧಿತ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು.
ಇದನ್ನೂ ಓದಿ: Dr K Annadani: ಗೆದ್ದೇ ಗೆಲ್ಲುವ ಛಲದಲ್ಲಿರುವ ಮಳವಳ್ಳಿ ಶಾಸಕ ಡಾ ಕೆ ಅನ್ನದಾನಿಯವರ ಬಗ್ಗೆ ನಿಮಗೆಷ್ಟು ಗೊತ್ತು?
ಸೌಮ್ಯಾ ರೆಡ್ಡಿ ಆಸ್ತಿಪಾಸ್ತಿ ವಿವರ ಹೀಗಿದೆ
ಇವರು ಒಟ್ಟು ರೂ 54 ಲಕ್ಷ ಆಸ್ತಿಪಾಸ್ತಿ ವಿವರಗಳನ್ನು ನೀಡಿದ್ದು, ರೂ 36 ಸಾವಿರ ಆದಾಯ ಹೊಂದಿರುವುದಾಗಿ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಸೂಚಿಸಿದ್ದಾರೆ.
ನಗದು ರೂಪದಲ್ಲಿ ರೂ 10 ಸಾವಿರ ಕ್ಯಾಶ್ ಇರುವುದಾಗಿ ಘೋಷಿಸಿದ್ದು, ಐಡಿಎಫ್‌ಸಿ ಬ್ಯಾಂಕ್‌ನಲ್ಲಿ ರೂ 5 ಲಕ್ಷ ಜಮೆ ಮಾಡಿರುವುದಾಗಿ ಮಾಹಿತಿ ನೀಡಿದ್ದಾರೆ. ಎಲ್‌ಐಸಿ ಹಾಗೂ ಇನ್ನಿತರ ವಿಮೆಯಾಗಿ ರೂ 15 ಲಕ್ಷ ಇವರ ಹೆಸರಿನಲ್ಲಿದೆ.
ವಾಹನ ಚಿನ್ನಾಭರಣ ವಿವರ
ರೂ 6 ಲಕ್ಷದ ವಾಹನಗಳನ್ನು ಹೊಂದಿದ್ದು, ರೂ 28 ಲಕ್ಷ ಮೌಲ್ಯದ ಚಿನ್ನಾಭರಣಗಳಿರುವುದಾಗಿ ಶಾಸಕಿ ಮಾಹಿತಿ ನೀಡಿದ್ದಾರೆ. ಇದೆಲ್ಲಾಆಸ್ತಿ ವಸ್ತುಗಳ ಒಟ್ಟು ಮೌಲ್ಯ ರೂ 54 ಲಕ್ಷ ಎಂದು ಸೌಮ್ಯಾ ರೆಡ್ಡಿ ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ