ಮೇಲುಕೋಟೆ(ಮೇ 2): ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ (Assembly Election) ಯುವ ರಾಜಕಾರಣಿಗಳ ದರ್ಬಾರು ಜೋರಾಗಿದೆ. ಧ್ರುವ ನಾರಾಯಣ್ (Dhruva Narayan) ಪುತ್ರ ದರ್ಶನ್, ಪ್ರೀತಂ ಗೌಡ, ನಿಖಿಲ್ ಕುಮಾರಸ್ವಾಮಿ, ದರ್ಶನ್ ಪುಟ್ಟಣ್ಣಯ್ಯ (Darshan Puttannaiah) ಸೇರಿ ಹಲವು ಯುವ ನಾಯಕರು ಚುನಾವಣಾ ಕಣದಲ್ಲಿ ಧುಮುಕಿದ್ದಾರೆ.
ದರ್ಶನ್ ಪುಟ್ಟಣ್ಣಯ್ಯ ರೈತ ಹೋರಾಟಗಾರ ದಿ. ಕೆ. ಎಸ್. ಪುಟ್ಟಣ್ಣಯ್ಯ ಪುತ್ರ. ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಕೂಡ ಇವರಿಗೆ ಬೆಂಬಲ ನೀಡಿದೆ.
2018ರ ಚುನಾವಣೆಯಲ್ಲಿಯೂ ಕಾಂಗ್ರೆಸ್ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಬೆಂಬಲಿಸಿತ್ತು. ಈ ಬಾರಿ ಚುನಾವಣೆಯಲ್ಲಿ ಸಕ್ರಿಯರಾಗಿರುವ ಇವರು ಶಾಲು ಹೊದ್ದು ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ. ಟೆಕ್ಕಿಯಾಗಿದ್ದ ದರ್ಶನ್ ಇಂದು ತಂದೆಯ ಪರಂಪರೆಯನ್ನು ಮುಂದುವರೆಸುತ್ತಿದ್ದಾರೆ.
ಯುವ ರಾಜಕಾರಣಿ ದರ್ಶನ್ ಪುಟ್ಟಣ್ಣಯ್ಯ
ಮೇಲುಕೋಟೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ದರ್ಶನ್ ಕೂಡ ರಾಜಕಾರಣದಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿರುವ ಯುವ ರಾಜಕಾರಣಿ.
ಇದನ್ನೂ ಓದಿ: IT Raid ವೇಳೆ ಮರದಲ್ಲಿ ನೇತಾಡುತ್ತಿತ್ತು ₹1 ಕೋಟಿ ಕ್ಯಾಶ್! ಕಾಂಗ್ರೆಸ್ ಅಭ್ಯರ್ಥಿ ಸಹೋದರನಿಗೆ ಶಾಕ್
ಮೂಲತಃ ಇಂಜಿನಿಯರ್ ಪದವಿ ಪಡೆದ ದರ್ಶನ್, ತಂದೆಯಿಂದ ರಾಜಕೀಯ ವಿದ್ಯೆ ಕಲಿತಿದ್ದಾರೆ. 2018ರಲ್ಲಿ ರೈತ ನಾಯಕ ಮತ್ತು ರಾಜಕಾರಣಿಯಾಗಿದ್ದ ಕೆ.ಎಸ್.ಪುಟ್ಟಣ್ಣಯ್ಯ ಅವರ ನಿಧನದ ನಂತರ ದರ್ಶನ್ ರಾಜಕೀಯಕ್ಕೆ ಧುಮುಕಿದರು. ತಂದೆ ಕಟ್ಟಿದ ಪಕ್ಷದಲ್ಲಿ ದರ್ಶನ್ 2018ರ ಚುನಾವಣೆಯಲ್ಲಿ ಸ್ಪರ್ಧಿಸಿ ಜೆಡಿಎಸ್‌ನ ಸಿ.ಎಸ್.ಪುಟ್ಟರಾಜು ವಿರುದ್ಧ 22,224 ಮತಗಳಿಂದ ಸೋತಿದ್ದರು.
ಯುಎಸ್‌ನಲ್ಲಿ ಕಂಪನಿ ಹೊಂದಿದ್ದ ದರ್ಶನ್
ಉಪಕರಣ ತಂತ್ರಜ್ಞಾನ ಎಂಜಿನಿಯರ್ ಪದವಿ ಪಡೆದ ನಂತರ ಯುಎಸ್‌ನಲ್ಲಿ ತಮ್ಮ ಜೀವನ ಮತ್ತು ವ್ಯವಹಾರವನ್ನು ಆರಂಭಿಸಿದ್ದರು. ಆದರೆ ತಂದೆಯ ಅಕಾಲಿಕ ಮರಣದ ನಂತರ ಭಾರತಕ್ಕೆ ಬಂದ ಇವರು ಇಲ್ಲೇ ರಾಜಕೀಯ ಅಖಾಡಕ್ಕೆ ಧುಮುಕಿದರು.
ಸಂದರ್ಶನದಲ್ಲಿ ಒಮ್ಮೆ ಮಾತನಾಡಿದ ಇವರು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ನನಗೆ ಆಲೋಚನೆ ಕೂಡ ಇರಲಿಲ್ಲ. ಆದರೆ ತಂದೆಯ ಮರಣದ ನಂತರ ಯುಎಸ್‌ಗೆ ಹೋಗುವ ಮನಸ್ಸು ಆಗಲಿಲ್ಲ. ಇಲ್ಲೇ ಜನರ ಸೇವೆಗೆ ಮನಸ್ಸು ಮಾಡಿದೆ ಎಂದು ಹೇಳಿದ್ದರು. ಆದರೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ವಿರುದ್ಧ ಸೋತ ನಂತರ ಮತ್ತೆ ದರ್ಶನ್ ಅಮೆರಿಕಾಕ್ಕೆ ಮರಳಿದರು.
ಚುನಾವಣೆಯಲ್ಲಿ ಸೋತ ಬಳಿಕ ಅಮೆರಿಕಾಕ್ಕೆ ಹಿಂದರುಗಿದ್ದ ದರ್ಶನ್
ಈ ಬಗ್ಗೆ ಕೂಡ ಪ್ರತಿಕ್ರಿಯಿಸಿದ ಅವರು ಅಮೆರಿಕಾದಲ್ಲಿ ನಾನು ಸ್ವಂತ ಕಂಪನಿ ಮತ್ತು ವ್ಯವಹಾರ ಹೊಂದಿದ್ದೆ. ಅದನ್ನು ಮಾರಾಟ ಮಾಡುವ ಸಲುವಾಗಿ ಅಮೆರಿಕಾಕ್ಕೆ ಹೋಗಿದ್ದಾಗಿ ತಿಳಿಸಿದ್ದರು.
ಕೋವಿಡ್-19 ಕಾರಣ ಖರೀದಿದಾರರನ್ನು ಹುಡುಕಾಡುವುದು ಕಷ್ಟವಾಗಿತ್ತು. ಆದರೆ ಅಂತಿಮವಾಗಿ ಮೇ 21, 2021 ರಂದು ಕಂಪನಿಯನ್ನು ಮಾರಾಟ ಮಾಡಿ ಒಪ್ಪಂದ ಮುಗಿಸಿ ಬಂದಿರುವುದಾಗಿ ಹೇಳಿದರು.
ಒಪ್ಪಂದ ಎರಡು ವರ್ಷಗಳ ಕಾಲ ಇದ್ದಿದ್ದರಿಂದ ಹೊಸ ಮಾಲೀಕರ ಜೊತೆ ಕೆಲಸ ಮಾಡಬೇಕಿತ್ತು. ಮಾಲೀಕರ ಜೊತೆ ಮಾತನಾಡಿ ಒಪ್ಪಂದವನ್ನು ಸ್ವಲ್ಪ ದಿನ ಕಡಿಮೆ ಮಾಡಿಸಿದೆ. ಹೀಗಾಗಿಯೇ ಅಲ್ಲಿ ಚುನಾವಣೆ ನಂತರ ಸ್ವಲ್ಪ ಸಮಯ ಉಳಿಯಬೇಕಾಯಿತು ಎಂದರು.
ಇದನ್ನೂ ಓದಿ: Shivamogga News: ಮತ ಹಾಕಲ್ಲ ಎಂದ 20ಕ್ಕೂ ಹೆಚ್ಚು ಗ್ರಾಮದ ಜನರು!
"ಭಾರತದಲ್ಲಿ ನನ್ನ ಅನುಪಸ್ಥಿತಿಯ ಬಗ್ಗೆ ಅಪಪ್ರಚಾರ ಮಾಡಿದ್ದರು"
ಕೋವಿಡ್ ನಂತರ ಪ್ರತಿ ತಿಂಗಳು ಭಾರತಕ್ಕೆ ಬರುತ್ತಿದ್ದೆ. ನನ್ನ ಅನುಪಸ್ಥಿತಿಯನ್ನು ಬಳಸಿಕೊಂಡು ವಿರೋಧ ಪಕ್ಷದವರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪವನ್ನು ಮಾಡುತ್ತಾ ಬಂದಿದ್ದಾರೆ ಎಂದು ಬೇಸರ ಮಾಡಿಕೊಂಡರು.
ಆದರೆ ಯುಎಸ್‌ನಲ್ಲಿ ಮಾರಾಟ ಮಾಡುವ ಒಪ್ಪಂದ ಸಮಯ ಹಿಡಿಯುತ್ತದೆ. ಇದನ್ನು ಹಳ್ಳಿಗರಿಗೆ ಅರ್ಥ ಮಾಡಿಸುವುದು ಕಷ್ಟವಾಗುತ್ತದೆ ಎಂದು ಹೇಳಿದರು.
"ಈ ಚುನಾವಣೆಯಲ್ಲಿ ಗೆದ್ದರೂ, ಸೋತರೂ ಇಲ್ಲೇ ಇರುತ್ತೇನೆ"
ಈ ಎಲ್ಲಾ ವಿದ್ಯಾಮಾನ ಗಮನಿಸಿದ ನಂತರ ಈ ಚುನಾವಣೆಯಲ್ಲಿ ಗೆದ್ದರೂ, ಸೋತರೂ ಇಲ್ಲೇ ಇರುವುದಾಗಿ ತಿಳಿಸಿದರು. "ನಾನು ಮೊದಲು ಕಾರ್ಯಕರ್ತ, ಮುಂದೆ ರಾಜಕಾರಣಿ. ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವುದೊಂದೆ ನನ್ನ ದೃಷ್ಟಿ" ಎಂದು ಹೇಳಿದರು. ಈ ಮೂಲಕ ರಾಷ್ಟ್ರೀಯ ಪಕ್ಷವನ್ನು ಸೇರುವುದಿಲ್ಲ ಎಂಬ ಸಂದೇಶವನ್ನು ಸಾರಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ