ಉಡುಪಿ: ವಿಧಾನಸಭಾ ಚುನಾವಣೆಗೆ (Karnataka Election) ಕೆಲವು ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಕೇಂದ್ರ ಬಿಜೆಪಿ (BJP) ನಾಯಕರು ರಾಜ್ಯಕ್ಕೆ ಸತತವಾಗಿ ಭೇಟಿ ನೀಡುತ್ತಿದ್ದಾರೆ. ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಉಡುಪಿ (Udupi), ಚಿಕ್ಕಮಗಳೂರಲ್ಲಿ (Chikkamagaluru) ನಡೆದ ಸಭೆ ಹಾಗೂ ಸಮಾವೇಶದಲ್ಲಿ ಭಾಗಿಯಾಗಿದ್ದರು. ಬಿಜೆಪಿ ಸಮಾವೇಶದಲ್ಲಿ ಉಗ್ರರು, ರಾಮಭಕ್ತರು, ಕುಟುಂಬ ರಾಜಕಾರಣದ ಪದ ಬಳಕೆಗಳೂ ಜೋರಾಗಿತ್ತು. ಮೊದಲು ಉಡುಪಿ ಶ್ರೀಕೃಷ್ಣಮಠಕ್ಕೆ (Sri Krishna Mutt ) ತೆರಳಿ ಶ್ರೀಕೃಷ್ಣನ ದರ್ಶನ ಪಡೆದ ನಡ್ಡಾ ಅವರು, ಸ್ವಾಮೀಜಿಗಳ ಜೊತೆ ಸಭೆ ನಡೆಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಉಡುಪಿ ಶ್ರೀಕೃಷ್ಣ ಮಠಕ್ಕೆ ತೆರಳಿ ಶ್ರೀಕೃಷ್ಣನ ದರ್ಶನ ಪಡೆದರು. ಬಳಿಕ ಉಡುಪಿ ಕೃಷ್ಣಮಠದಲ್ಲಿ ಸ್ವಾಮೀಜಿಗಳ ಜೊತೆ ಸಂವಾದ ನಡೆಸಿದರು. ಕೆಲವೇ ನಿಮಿಷಗಳ ಹಿಂದೆ ಶೃಂಗೇರಿ ಮಠಕ್ಕೂ ನಡ್ಡಾ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಅಂದಹಾಗೆ ಉಡುಪಿ ಮಠದ ಸಭೆಯಲ್ಲಿ ಸ್ವಾಮೀಜಿಗಳು ಪ್ರಮುಖವಾಗಿ 10 ಬೇಡಿಕೆಗಳನ್ನ ನಡ್ಡಾ ಮುಂದೆ ಇಟ್ಟಿದ್ದಾರೆ.
ಜೆಪಿ ನಡ್ಡಾ ಎದುರು ಶ್ರೀಗಳ ಬೇಡಿಕೆಗಳು
1. ಸನಾತನ ಧರ್ಮ ಸಂಸ್ಕೃತಿಗೆ ಮನ್ನಣೆ ನೀಡಬೇಕು
2. ಸಮಾನ ನಾಗರಿಕ ಸಂಹಿತೆ ಜಾರಿಗೆ ಕ್ರಮ ಆಗಬೇಕು
3. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಆದ್ಯತೆ ಆಗಬೇಕು
4. ಕರಾವಳಿಯ ಪ್ರಾಕೃತಿಕ, ಸಾಂಸ್ಕೃತಿಕ ಸಂಪನ್ಮೂಲ ರಕ್ಷಿಸಿ
5. ಕರಾವಳಿ ಯುವಕರ ವಲಸೆಯನ್ನು ತಪ್ಪಿಸಬೇಕು
6. ಸರಕಾರ ತುಳು ಭಾಷೆಗೆ ಸೂಕ್ತ ಮಾನ್ಯತೆ ನೀಡಬೇಕು
7. ಉಗ್ರವಾದ ಮಟ್ಟಹಾಕಲು NIA ವಿಭಾಗ ಆರಂಭಿಸಿ
8. ಗೋಹತ್ಯೆ ಕಾನೂನು ಗಟ್ಟಿಗೊಳಿಸಿ-ಗೋರಕ್ಷಣೆಗೆ ನೆರವು ನೀಡಿ
9. ಭ್ರಷ್ಟಾಚಾರ ಮುಕ್ತ , ಸ್ವಚ್ಛ , ಪಾರದರ್ಶಕ ಆಡಳಿತ ನೀಡಬೇಕು
10. ದೇಗುಲಗಳ ಭೂಮಿ ಅತಿಕ್ರಮಣ ತಡೆಗೆ ಕಠಿಣ ಕ್ರಮ ಆಗಲಿ
ಇನ್ನು, ಎಂಜಿಎಂ ಕಾಲೇಜು ಮೈದಾನದಲ್ಲಿ ಬಿಜೆಪಿ ಬೂತ್ ಕಮಿಟಿಗಳ ಸಮಾವೇಶ, ಬೈಂದೂರು ಸಾರ್ವಜನಿಕರ ಸಮಾವೇಶ ಮುಗಿಸಿ ಚಿಕ್ಕಮಗಳೂರಿನ ಕೊಪ್ಪದಲ್ಲಿ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ನಡ್ಡಾ ಭಾಗಿಯಾಗಿದ್ದರು. ಚಿಕ್ಕಮಗಳೂರಿನ ಕೊಪ್ಪ ಪಟ್ಟಣದಲ್ಲಿ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾಗೆ ಅಡಿಕೆ ಹಾಳೆಯ ಟೋಪಿ ಹಾಕಿ ಗೌರವಿಸಿದ್ದರು.
ಇದನ್ನೂ ಓದಿ: Rohini Sindhuri: 'So Madly Beautiful, 8 ಡಿಲಿಟೆಡ್ ಫೋಟೋ ಸೀಕ್ರೆಟ್' -ರೋಹಿಣಿ ವಿರುದ್ಧ ರೂಪಾ ಮತ್ತೊಂದು ಬಾಂಬ್
ಈ ವೇಳೆ ಮಾತನಾಡಿದ ಶೋಭಾ ಕರಂದ್ಲಾಜೆ, 2012ರಲ್ಲಿ ಅಡಿಕೆಗೆ MIP 75 ರೂಪಾಯಿ ಇತ್ತು. ಮೋದಿ ಸರ್ಕಾರ ಬಂದಾಗ 161 ರೂಪಾಯಿ ಆಗಿತ್ತು. ಈಗ ಅಡಿಕೆಯ MIP 251 ಇದೆ. ಇಂದು ಅಡಿಕೆ ದರ ಜಾಸ್ತಿಯಾಗಿರುವುದಕ್ಕೆ ಬಿಜೆಪಿ ಸರ್ಕಾರದಿಂದ ಅಂತಾ ಶೋಭಾ ಕರಂದ್ಲಾಜೆ ಹೇಳಿದ್ದರು, ಸಮಾವೇಶದಲ್ಲಿ ಸಿ.ಟಿ.ರವಿ ಕಟೀಲ್, ಅರುಣ್ ಸಿಂಗ್ ಸೇರಿ ಸಾವಿರಾರು ಅಡಿಕೆ ಬೆಳೆಗಾರರು ಭಾಗಿಯಾಗಿದ್ದರು.
Addressed the arecanut growers of Karnataka during the Arecanut Growers Convention in Chikkamagaluru today. The BJP has always striven towards the welfare of arecanut growers & maximising the positive impact they have on the state’s economy. pic.twitter.com/SbDIMsyLin
— Jagat Prakash Nadda (@JPNadda) February 20, 2023
ಈ ವೇಳೆ ಮಾತನಾಡಿದ ಜೆಪಿ ನಡ್ಡಾ, ಅಡಿಕೆ ಬಗ್ಗೆ ಚರ್ಚೆಯಾಗಬೇಕಿದೆ. ಕರ್ನಾಟಕ ರಾಜ್ಯಕ್ಕೆ ಅಡಿಕೆಯಿಂದ ದೊಡ್ಡ ಶಕ್ತಿ ಸಿಕ್ಕಿದೆ. ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಬಿ.ಎಸ್.ಯಡಿಯೂರಪ್ಪ 1983 ರಲ್ಲಿ 62 ಕಿ.ಮೀ ಪಾದಯಾತ್ರೆ ಮಾಡಿದ್ದರು. ನಿರಂತರವಾಗಿ ರೈತರ ಪರವಾಗಿ ಸರ್ಕಾರ ಕೆಲಸ ಮಾಡುತ್ತಿದ್ದಾರೆ. ಅಡಿಕೆ ಬೆಳೆಗಾರರ ಬೆನ್ನಿಗೆ ನಿಂತಿರುವುದು ಕೇವಲ ಬಿಜೆಪಿ ಮಾತ್ರ. ಅಡಿಕೆಗೆ ನಾವು ಏನು ಮಾಡಿದ್ದೇವೆ, ವಿರೋಧ ಪಕ್ಷಗಳು ಚರ್ಚೆಗೆ ಬರಲಿ ನಾವು ಸಿದ್ಧರಾಗಿದ್ದೇವೆ. ಕೆಲ ಮುಖಂಡರು ರೈತ, ಕಿಸಾನ್ ಮುಖಂಡರು ಎಂದು ಹೇಳುತ್ತಾರೆ. ಅವರು ಅಡಿಕೆಗೆ ಏನೂ ಮಾಡಿಲ್ಲ. ಕೊಟ್ಟ ಮಾತಿನಂತೆ ನಡೆದುಕೊಂಡ ಮೋದಿ ನಿಜವಾದ ರೈತ ಮುಖಂಡ.
ನಾವು ಅಂಕಿ ಅಂಶಗಳ ಆಧಾರದ ಮೇಲೆ ಮಾತನಾಡುತ್ತೇವೆ
ಅಡಿಕೆ ಬೆಳೆಗಾರರ ಬಗ್ಗೆ ಪಾದಯಾತ್ರೆ ಮಾಡಿದ ಏಕೈಕ ನಾಯಕ ಯಡಿಯೂರಪ್ಪ, 1982 ರಲ್ಲೇ 62 ಕಿ.ಮೀ. ಪಾದಯಾತ್ರೆ ಮಾಡಿದ್ದರು. 2014ರಲ್ಲಿ ನಾವು ಕೇವಲ 2 ಮೆಗಾ ಪಾರ್ಕ್ ಇತ್ತು. ಇಂದು 22 ಮೆಗಾ ಪಾರ್ಕ್ ಗಳಿವೆ. ಕರ್ನಾಟಕದಲ್ಲಿ 2017ರಲ್ಲಿ 2 ಲಕ್ಷದ 79 ಸಾವಿರ ಎಕರೆ ಅಡಿಕೆ ಇತ್ತು. ಇಂದು 5 ಲಕ್ಷ 41 ಸಾವಿರ ಎಕರೆಯಲ್ಲಿ ಅಡಿಕೆ ಬೆಳೆಯುತ್ತಿದ್ದಾರೆ. ಶೇಕಡ 78 ರಷ್ಟು ಅಡಿಕೆ ಬೆಳೆಗಾರರ ಸಂಖ್ಯೆ ಹೆಚ್ಚಾಗಿದೆ. ನಾವು ಏನೇ ಮಾತನಾಡಿದರು ಅಂಕಿ ಅಂಶಗಳ ಆಧಾರದ ಮೇಲೆ ಮಾತನಾಡುತ್ತೇವೆ.
ನಮ್ಮ ದೇಶದಲ್ಲಿ ಕಳ್ಳಅಡಿಕೆ ಮಾರಾಟಕ್ಕೆ ಅವಕಾಶವಿಲ್ಲ, ಏಕೆಂದರೆ ಶೇಕಡಾ 3 ತೆರಿಗೆ ಜಾಸ್ತಿ ಮಾಡಿದ್ದೇವೆ. ಎಲೆ ಚುಕ್ಕಿ, ಹಳದಿ ರೋಗಕ್ಕೆ ಲ್ಯಾಬ್ ಓಪನ್ ಮಾಡುವ ಪ್ರಕ್ರಿಯೇ ಚಾಲ್ತಿಯಲ್ಲಿದೆ. ಎಲೆಚುಕ್ಕಿ ರೋಗದ ನಿಯಂತ್ರಣಕ್ಕೆ ಬಜೆಟ್ ನಲ್ಲಿ 25 ಕೋಟಿ ತೆಗೆದಿಟ್ಟು, ಸಂಶೋಧನೆ ಆರಂಭಿಸದ್ದೇವೆ. ತೀರ್ಥಹಳ್ಳಿ-ಶೃಂಗೇರಿಗೆ 10 ಕೋಟಿ ರೂಪಾಯಿ ಹಣ ನೀಡಿ ರೋಗದ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿದ್ದೇವೆ. ಎಲ್ಲಾ ಸಮಯದಲ್ಲೂ ಅಡಿಕೆ ಹಾಗೂ ನಿಮ್ಮ ರಕ್ಷಣೆಗೆ ಸದಾ ನಿಮ್ಮ ಜೊತೆ ಇರುತ್ತವೆ ಎಂದು ಆಶ್ವಾಸನೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ