ಹಾಸನ: 2023ರ ವಿಧಾನಸಭಾ ಚುನಾವಣೆಗೆ (Karnataka Election 2023) ಹಾಸನ ಕ್ಷೇತ್ರದ (Hassan Constituency) ಜೆಡಿಎಸ್ ಟಿಕೆಟ್ ಗೊಂದಲಕ್ಕೆ ಮಾಜಿ ಮಂತ್ರಿ ಹೆಚ್.ಡಿ ರೇವಣ್ಣ (HD Revanna) ತೆರೆ ಎಳೆದಿದ್ದಾರೆ. ಕುಮಾರಸ್ವಾಮಿ (HD Kumaraswamy), ದೇವೇಗೌಡ (HD Devegowda), ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಜಿಲ್ಲಾ ಮುಖಂಡರು ಏನು ತೀರ್ಮಾನ ಮಾಡುತ್ತಾರೋ ಅದೇ ಅಂತಿಮ. ನಾನು ಕುಮಾರಸ್ವಾಮಿಯನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಕೆಲವರು ಭವಾನಿ ರೇವಣ್ಣಗೆ (Bhavani Revanna) ಟಿಕೆಟ್ ಕೊಡಿ ಅಂತಾರೆ, ಕೆಲವರು ಇನ್ನೊಬ್ಬರಿಗೆ ಕೊಡಿ ಅಂತಾರೆ. ಆದರೆ, ನಮ್ಮ ಪಕ್ಷ ಕೂತು ತೀರ್ಮಾನ ಮಾಡೋದು ಪಕ್ಷ ಎಂದು ರೇವಣ್ಣ ಹೇಳಿದ್ದಾರೆ.
ನಮ್ಮಿಬ್ಬರನ್ನು ದೂರ ಮಾಡ್ತೀವಿ ಅನ್ನೋದು ಭ್ರಮೆ
ಹಾಸನ ಜಿಲ್ಲೆ ಹೊಳೆನರಸೀಪುರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರೇವಣ್ಣ ಅವರು, ಕುಮಾರಸ್ವಾಮಿ ಹಾಗೂ ರೇವಣ್ಣನನ್ನು ಯಾವುದೇ ಕಾರಣದಿಂದ ಬೇರ್ಪಡಿಸಲು ಆಗಲ್ಲ. ಯಾರಾದರೂ ಬೇರ್ಪಡಿಸುತ್ತೇವೆ ಎಂದು ಕೊಂಡಿದ್ದರೆ ಭ್ರಮನಿರಸನ ಆಗ್ತಾರೆ.
ನಮ್ಮ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರವನ್ನು, ದೇವೇಗೌಡರು, ಕುಮಾರಸ್ವಾಮಿ ಹಾಗೂ ರಾಜ್ಯದ ಜೆಡಿಎಸ್ ಅಧ್ಯಕ್ಷರಾದ ಸಿಎಂ ಇಬ್ರಾಹಿಂ ತೀರ್ಮಾನ ಮಾಡುತ್ತಾರೆ. ಎಲ್ಲರೂ ಕೂತು ಚರ್ಚೆಮಾಡಿ ಜನರ ವಿಶ್ವಾಸ, ಸ್ಥಳೀಯ ಶಾಸಕರ ಅಭಿಪ್ರಾಯ ಪಡೆಯುತ್ತಾರೆ. ನಾನು ಒಬ್ಬನೇ ತೀರ್ಮಾನ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ಇದನ್ನೂ ಓದಿ: HD Kumaraswamy: 'ದೇವೇಗೌಡ್ರು ಸಾಯುವ ಮುನ್ನ ಅವ್ರ ಪಕ್ಷ ಉಳಿತು ಅಂತ ಸಾಬೀತು ಮಾಡ್ಬೇಕು'- ಮಾಜಿ ಸಿಎಂ ಹೆಚ್ಡಿಕೆ ಭಾವುಕ
ಕುಮಾರಸ್ವಾಮಿಯನ್ನ ಬಿಟ್ಟು ರಾಜಕೀಯ ಮಾಡುವ ಪ್ರಶ್ನೆ ಇಲ್ಲ
ಕಳೆದ ಹತ್ತು ವರ್ಷದಿಂದ ಹಾಸನ ಜಿಲ್ಲೆ ಅಭಿವೃದ್ಧಿ ಆಗಿಲ್ಲ. ಏರ್ ಪೋರ್ಟ್ ನಿಲ್ಲಿಸಿದ್ದಾರೆ, ಐಐಟಿ ಜಾಗ ಬೇರೆಯದ್ದಕ್ಕೆ ಬಳಸಿದ್ದಾರೆ. ಹಾಸನದ ಅಸ್ಪತ್ರೆ ಕುಮಾರಣ್ಣ ಬಾರದಿದ್ದರೆ ಆಗೋದಾ? ನಾನು ಕುಮಾರಸ್ವಾಮಿ ಅವರನ್ನು ಬಿಟ್ಟು ಮಾಡುವ ಪ್ರಶ್ನೆಯೇ ಇಲ್ಲ.
ಟಿಕೆಟ್ ವಿಚಾರವನ್ನು ನಾನು ಅಥವಾ ಸೂರಜ್, ಪ್ರಜ್ವಲ್ ಆಗಲಿ ಯಾರೂ ತೀರ್ಮಾನ ಮಾಡೋದಿಲ್ಲ. ಪಕ್ಷದ ಹೈ ಕಮಾಂಡ್ ಏನು ಹೇಳುತ್ತೆ ಅದಕ್ಕೆ ಎಲ್ಲರೂ ಬದ್ಧರಾಗಿ ಇರಬೇಕಾಗುತ್ತೆ. ನಮ್ಮದು ಜಿಲ್ಲೆಯ ಅಭಿವೃದ್ಧಿ ಮುಖ್ಯ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಜೊತೆ ಕಾಂಗ್ರೆಸ್ ಪಕ್ಷವನ್ನು ವಿಲೀನ ಮಾಡಿ
ಕಾಂಗ್ರೆಸ್ ಮುಖಂಡರಿಗೆ ಮಾನ ಮರ್ಯಾದೆ ಇದ್ದರೆ ಪಾರ್ಟಿನಾ ಬಿಜೆಪಿ ಜೊತೆ ಮರ್ಜ್ ಮಾಡಿಕೊಳ್ಳುವುದು ಒಳ್ಳೆಯದು. ಹಿಂದೆ ಮುಂದೆ ಅಡ್ಜೆಸ್ಟ್ ಮಾಡಿಕೊಳ್ಳೋ ಬದಲು, ಮರ್ಜ್ ಮಾಡೋದು ಒಳ್ಳೆದು. ಮುನಿಯಪ್ಪ, ದೇವೇಗೌಡರನ್ನು ಸೋಲಿಸಿದ್ದು ಯಾರು? ಕುಮಾರಸ್ವಾಮಿ, ರೇವಣ್ಣ ಹೊಡೆದಾಡುತ್ತಾರೆ ಎಂದು ಯಾರಾದರೂ ಅಂದುಕೊಂಡರೆ ಅದು ಸುಳ್ಳು. ನಮ್ಮ ನಾಯಕ ಕುಮಾರಸ್ವಾಮಿ, ಇದರಲ್ಲಿ ಪ್ರಶ್ನೆಯೇ ಇಲ್ಲ. ಎಲ್ಲವನ್ನೂ ಕುಮಾರಣ್ಣ ನಿರ್ಣಯ ಮಾಡ್ತಾರೆ ಎಂದರು ತಿಳಿಸಿದರು.
ಆರೋಗ್ಯ ಲೆಕ್ಕಿಸದೆ ಕುಮಾರಣ್ಣ ಪಂಚರತ್ನ ಯಾತ್ರೆ ಮಾಡ್ತಿದ್ದಾರೆ
ಎರಡು ರಾಷ್ಟ್ರೀಯ ಪಕ್ಷಗಳು ಕುಟುಂಬ, ಕುಟುಂಬ ಅಂತರೆ. ಆದರೆ ನಾನು, ಕುಮಾರಸ್ವಾಮಿ ಭ್ರಷ್ಟಾಚಾರ ಮಾಡಿದ್ರೆ ಯಾವುದಾದರು ತನಿಖೆ ಮಾಡಲು ಹೇಳಿ. ಕುಟುಂಬ ರಾಜಕಾರಣ ಅಂತ ಕೇಂದ್ರ ಸಚಿವರಿಂದ ಹೇಳಿಸುತ್ತಿದ್ದಾರೆ. ನಮ್ಮ ರೈತರ ಮನೆ ಹಾಳಾಗಿ ಹೋಗ್ತಿದೆ, ಎರಡು ಗಂಟೆ ಕರೆಂಟ್ ಕೊಡಲು ಆಗ್ತಿಲ್ಲ. ಆರೋಗ್ಯ ಲೆಕ್ಕಿಸದೆ ಕುಮಾರಣ್ಣ ಪಂಚರತ್ನ ಯಾತ್ರೆ ಮಾಡುತ್ತಿದ್ದಾರೆ. ಮೋದಿಯವರಿಂದ ಹೇಳಿಸಲಿ, ಒಂದು ಕುಟುಂಬದಿಂದ ಒಬ್ಬರೇ ನಿಲ್ಲಲಿ ಎಂದು ಕಾನೂನು ಮಾಡಿಸಲಿ. ಆಗ ಪ್ರಜ್ವಲ್, ಸೂರಜ್ ಅವರನ್ನು ಮನೆಯಲ್ಲಿ ಇರಿ ಎಂದು ಹೇಳ್ತೀನಿ ಅಂತ ತಿಳಿಸಿದರು.
ಪಾಪ ಭವಾನಿ ಅವರನ್ನು ಕಾರ್ಯಕ್ರಮಕ್ಕೆ ಕರೆಯುತ್ತಾರೆ ಆದ್ದರಿಂದ ಹೋಗಬೇಕು. ಪ್ರಜ್ವಲ್‌ಗೆ ವೋಟ್ ಹಾಕಿದ್ದಾರೆ, ದೇವೇಗೌಡರಿಗೆ ವೋಟ್ ಹಾಕಿದ್ದಾರೆ. ಆದ್ದರಿಂದ ಅವರು ಹೋಗ ಬೇಕಾಗುತ್ತದೆ. ಶಿವಲಿಂಗೇಗೌಡರಿಗೂ ಹೇಳಿದ್ದೀನಿ ಇಲ್ಲೇ ಇರು ಅಲ್ಲಿಗೆ ಹೋಗಿ ಹಾಳಾಗೋದು ಬೇಡ ಅಂತ ಎಂದು ಗೊಂದಲಗಳಿಗೆ ತೆರೆ ಎಳೆಯುವ ಕೆಲಸ ಮಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ